ಬಂಗಾರದೊಡ್ಡಿ ನಾಲೆಗೆ ನೀರು ಹರಿಸಲು ಚಾಲನೆ
ಮಂಡ್ಯ

ಬಂಗಾರದೊಡ್ಡಿ ನಾಲೆಗೆ ನೀರು ಹರಿಸಲು ಚಾಲನೆ

August 13, 2021

ಶ್ರೀರಂಗಪಟ್ಟಣ, ಆ.12(ವಿನಯ್‍ಕಾರೇಕುರ)- ಪಟ್ಟಣದ ಸಮೀಪ ಆಧುನೀಕರಣಗೊಂಡಿ ರುವ ಐತಿಹಾಸಿಕ ಬಂಗಾರದೊಡ್ಡಿ ನಾಲೆಗೆ ನೀರು ಹರಿಸುವ ಮೂಲಕ ಶಾಸಕ ರವೀಂದ್ರ ಶ್ರೀಕಂಠಯ್ಯ ಚಾಲನೆ ನೀಡಿದರು.

ಪಟ್ಟಣ ಸಮೀಪದ ಕಾವೇರಿ ನದಿಗೆ ಹೊಂದಿಕೊಂಡಂತೆ ಇದ್ದ ಬಂಗಾರದೊಡ್ಡಿ ನಾಲೆಯನ್ನು 14 ಕೋಟಿ ರೂ. ವೆಚ್ಚದಲ್ಲಿ ಆಧುನೀ ಕರಣಗೊಳಿಸಿದ್ದು, ಕಾವೇರಿ ನದಿಗೆ ಪೂಜೆ ಸಲ್ಲಿಸಿ ಗೇಟ್ ತೆರೆದು ನದಿಯಿಂದ ಬಂಗಾರ ದೊಡ್ಡಿ ನಾಲೆಗೆ ನೀರು ಹರಿಸಲಾಯಿತು.

ನೂರಾರು ವರ್ಷಗಳಷ್ಟು ಹಳೆಯದಾದ ಕಂಠೀರವ ನರಸರಾಜ ಒಡೆಯರ್ ಅವರು ನಿರ್ಮಿಸಿದ್ದ ಸುಮಾರು 8 ಕಿಮೀ. ಉದ್ದದ ಈ ನಾಲೆ ಶಿಥಿಲಾವಸ್ಥೆ ತಲುಪಿ ನಾಲೆಯ ಉದ್ದಕ್ಕೂ ನೀರು ಸೋರಿಕೆಯಾಗುತ್ತಿತ್ತು ಹಾಗೂ ನಾಲೆಯ ಕಡೆಯ ಭಾಗಕ್ಕೆ ನೀರು ತಲು ಪದೆ ರೈತರಿಗೆ ತೀವ್ರ ತೊಂದರೆಯಾಗುತ್ತಿತ್ತು.

ಈ ವೇಳೆ ಮಾತನಾಡಿದ ಶಾಸಕ ರವೀಂದ್ರ ಶ್ರೀಕಂಠಯ್ಯ, ಬಂಗಾರದೊಡ್ಡಿ ನಾಲೆಯು ತೀರ ಶಿಥಿಲಾವಸ್ಥೆ ತಲುಪಿದ್ದರಿಂದ ದುರಸ್ತಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಕಳೆದ ಬೇಸಿಗೆಯ ಆರಂಭದಲ್ಲಿ ನಾಲೆಯ ಆಧುನೀಕರಣವನ್ನು ಕೈಗೆತ್ತಿಕೊಳ್ಳಲಾಗಿತ್ತು. ಸುಮಾರು 1 ಸಾವಿರ ಎಕರೆ ಪ್ರದೇಶದ ಕೃಷಿ ಭೂಮಿಗೆ ಈ ನಾಲೆಯಿಂದ ನೀರುಣಿಸ ಲಾಗುವುದು. ನಾಲೆಯ ಆಧುನೀಕರಣ ಮುಗಿದಿದ್ದು, ಮುಂಗಾರು ಹಂಗಾಮಿಗೆ ರೈತರು ಕೃಷಿ ಮಾಡಲು ಅನುವು ಮಾಡಿ ಕೊಡಲೆಂದು ಇಂದು ಸಾಂಕೇತಿಕವಾಗಿ ಪೂಜೆ ಸಲ್ಲಿಸಿ ನಾಲೆಗೆ ನದಿಯಿಂದ ನೀರು ಹರಿಸಲಾಗಿದೆ ಎಂದರು.
ಕಡಿಮೆ ಅವಧಿಯಲ್ಲಿ ಕಾವೇರಿ ನೀರಾವರಿ ನಿಗಮದ ಎಇಇ ತಮ್ಮೇಗೌಡ ಹಾಗೂ ಸಿಬ್ಬಂದಿ ತುಂಬಾ ಅಚ್ಚುಕಟ್ಟಾಗಿ ಹಾಗೂ ಗುಣ ಮಟ್ಟದ ಕಾಮಗಾರಿಯನ್ನು ನಡೆಸಿದ್ದಾರೆ. ಮುಂದಿನ ಕೆಲ ದಿನಗಳಲ್ಲಿ ಸಂಪೂರ್ಣ ಕಾಮಗಾರಿಯನ್ನು ಮುಗಿಸಿ ನಾಲೆಯ ಕಡೆಯ ಭಾಗದ ರೈತರವರೆಗೂ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗದಂತೆ ನೀರುಣಿಸಲಾಗುವುದು ಎಂದರು.

ಈ ವೇಳೆ ಪಟ್ಟಣದ ಅರ್ಚಕರಾದ ಲಕ್ಷ್ಮೀಶ್ ಶರ್ಮಾ ಹಾಗೂ ತಂಡದವರಿಂದ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು.
ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ತಮ್ಮೇಗೌಡ, ಪುರಸಭೆ ಅಧ್ಯಕ್ಷೆ ನಿರ್ಮಲಾ, ಉಪಾಧ್ಯಕ್ಷ ಎಸ್.ಪ್ರಕಾಶ್, ಸದಸ್ಯರಾದ ಕೃಷ್ಣಪ್ಪ, ಗಂಜಾಂ ಶಿವು, ಪೂರ್ಣಿಮಾ ಹಾಗೂ ಚೈತ್ರ ಸೇರಿದಂತೆ ಇತರರು ಇದ್ದರು.

Translate »