ಚರ್ಚೆಯೇ ಇಲ್ಲದೆ ಬಜೆಟ್‍ಗೆ ಅನುಮೋದನೆ
ಮೈಸೂರು

ಚರ್ಚೆಯೇ ಇಲ್ಲದೆ ಬಜೆಟ್‍ಗೆ ಅನುಮೋದನೆ

February 15, 2019

ಬೆಂಗಳೂರು: ಆಪರೇಷನ್ ಕಮಲ ಧ್ವನಿ ಸುರುಳಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸರ್ಕಾರಕ್ಕೆ ಜೀವ ನೀಡಿದ್ದಲ್ಲದೆ, 2019-20ನೇ ಸಾಲಿನ ಮುಂಗಡ ಪತ್ರಕ್ಕೂ ನಿರಾಯಾಸವಾಗಿ ವಿಧಾನಮಂಡಲದ ಅಂಗೀಕಾರವೂ ದೊರೆಯಿತು.

ಇತ್ತೀಚಿನ ವರ್ಷಗಳಲ್ಲೇ ಬೃಹತ್ ಎನ್ನಲಾದ 2.34 ಲಕ್ಷ ಕೋಟಿ ರೂ. ಅಂದಾಜು ಮೊತ್ತದ ಮುಂಗಡಪತ್ರಕ್ಕೆ ಸಂಬಂಧಿಸಿದಂತೆ ಉಭಯ ಸದನಗಳಲ್ಲಿ ಪರ-ವಿರೋಧ, ಸಾಧಕ-ಬಾಧಕ ಗಳ ಬಗ್ಗೆ ಲವಲೇಶದಷ್ಟೂ ಚರ್ಚೆಯಾಗದೆ ಹಣಕಾಸು ಇಲಾಖೆ ಹೊಂದಿರುವ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಪ್ರತಿಪಕ್ಷ ಬಿಜೆಪಿ ಧರಣಿ ನಡುವೆಯೇ ಬಜೆಟ್‍ಗೆ ಅನುಮೋದನೆ ಪಡೆದರು. ಬಜೆಟ್ ಅಂಗೀಕಾರ ಆಗುತ್ತಿದ್ದಂತೆ ಉಭಯ ಸದನಗಳ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು. ಅಧಿವೇಶನದ 4ನೇ ದಿನವಾದ ಇಂದೂ ಕೂಡ ಬಿಜೆಪಿ ಕಲಾಪ ನಡೆಯಲು ಅವಕಾಶ ನೀಡದೆ, ಧರಣಿ ಮುಂದುವರೆಸಿತು. ಇದರ ಮಧ್ಯೆಯೇ ವಿಧಾನ ಸಭಾಧ್ಯಕ್ಷ ರಮೇಶ್ ಕುಮಾರ್ ಕೆಲವು ಮಸೂದೆಗಳಿಗೆ ಅಂಗೀಕಾರ ಪಡೆದು ಬಜೆಟ್ ಅನ್ನು ಮತಯಾಚನೆಗೆ ಮಂಡಿಸುವಂತೆ ಮುಖ್ಯಮಂತ್ರಿ ಅವರಿಗೆ ಸೂಚಿಸಿದರು.

ಬಿಜೆಪಿ ಸದಸ್ಯರ ಕೂಗಾಟ, ಗದ್ದಲದ ನಡುವೆ ಬೃಹತ್ ಮೊತ್ತದ ಮುಂಗಡಪತ್ರಕ್ಕೆ ಅನುಮೋದನೆ ದೊರೆಯಿತು. ಇದಕ್ಕೂ ಮುನ್ನ ಮುಖ್ಯಮಂತ್ರಿ ಅವರು, ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೂ ಸದನದ ಧ್ವನಿಮತದ ಅಂಗೀಕಾರ ಪಡೆದು ಕೊಂಡರು. ಬಜೆಟ್ ಅಧಿವೇಶನ ಸಂದರ್ಭದಲ್ಲೇ ಕುಮಾರ ಸ್ವಾಮಿ ಸರ್ಕಾರವನ್ನು ಪತನಗೊಳಿಸಲು ರಾಜ್ಯ ಬಿಜೆಪಿ ನಾಯಕರು ಪೂರ್ವ ಸಿದ್ಧತೆ ಮಾಡಿಕೊಂಡಿದ್ದರು. ಅವರ ಈ ಯತ್ನಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್‍ನ ಕೆಲವು ಶಾಸಕರು, ರಾಜ್ಯಪಾಲರ ಭಾಷಣದ ವೇಳೆಯಲ್ಲೇ ಗೈರುಹಾಜರಾದದ್ದು, ಪುಷ್ಟಿ ನೀಡಿತ್ತು. ಬಜೆಟ್ ಮಂಡನೆಯ ಮುನ್ನಾ ದಿನ ಆಪರೇಷನ್ ಕಮಲದ ರೂವಾರಿ, ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಅವರ ಪಕ್ಷದ ಕೆಲವು ಶಾಸಕರು ಕೊಪ್ಪಳದಲ್ಲಿ ಜೆಡಿಎಸ್ ಶಾಸಕರೊಬ್ಬರಿಂದ ರಾಜೀನಾಮೆ ಕೊಡಿಸುವ ಬಗ್ಗೆ ಚರ್ಚಿಸಿದ್ದರು. ಅದರ ವಿವರವನ್ನು ಬಜೆಟ್ ಮಂಡನೆಗೂ ಮುನ್ನ ಮುಖ್ಯಮಂತ್ರಿ ಹಾಗೂ ಉಪಮುಖ್ಯ ಮಂತ್ರಿ ಡಾ.ಜಿ.ಪರಮೇಶ್ವರ್ ಬಹಿರಂಗಪಡಿಸಿದ್ದರು. ಮುಖ್ಯಮಂತ್ರಿ ಅವರು ಬಿಡುಗಡೆ ಮಾಡಿದ ಧ್ವನಿ ಸುರುಳಿ ರಾಜ್ಯದಲ್ಲಷ್ಟೇ ಅಲ್ಲದೆ ರಾಷ್ಟ್ರಮಟ್ಟದಲ್ಲೂ ಕೋಲಾಹಲ ಉಂಟು ಮಾಡಿತು. ಇದರಿಂದ ಕಂಗೆಟ್ಟ ರಾಜ್ಯ ಬಿಜೆಪಿ ನಾಯಕರು ಸರ್ಕಾರ ಉರುಳಿಸುವುದಿರಲಿ, ತಾವು ಬಚಾವಾದರೆ ಸಾಕು ಎಂಬ ನಿರ್ಧಾರಕ್ಕೆ ಬಂದಿದ್ದಲ್ಲದೆ, ಮುಂಬೈ ನಲ್ಲಿದ್ದ ಆಡಳಿತ ಪಕ್ಷಗಳ ಭಿನ್ನಮತೀಯ ಶಾಸಕರನ್ನು ಹಿಂದಕ್ಕೆ ಕರೆಸಿಕೊಂಡರು. ಫೆ.8ರಂದು ಬಜೆಟ್ ಮಂಡನೆ ನಂತರ ಸೋಮವಾರದಿಂದ ರಾಜ್ಯಪಾಲರ ಭಾಷಣ ಹಾಗೂ ಬಜೆಟ್ ಮೇಲೆ ಚರ್ಚೆ ನಡೆಯಬೇಕಿತ್ತಾದರೂ ಆಡಿಯೋ ಬಾಂಬ್ ಪ್ರಕರಣವೇ ವಿಧಾನಮಂಡಲದಲ್ಲಿ ಚರ್ಚೆಯ ಕೇಂದ್ರ ಬಿಂದುವಾಗಿ ಪರಿಣಮಿಸಿತು.

ಆಡಿಯೋ ಸಂಭಾಷಣೆಯಲ್ಲಿ ಜೆಡಿಎಸ್ ಶಾಸಕ ನಾಗನಗೌಡ ಕಂದಕೂರು ಅವರ ಪುತ್ರನ ಜತೆ ನಡೆಸಿದ ಮಾತುಕತೆ ಸಂದರ್ಭದಲ್ಲಿ ಸಭಾಧ್ಯಕ್ಷ ರಮೇಶ್‍ಕುಮಾರ್ ಅವರಿಗೂ 50 ಕೋಟಿ ರೂ. ನೀಡಿ ಬುಕ್ ಮಾಡಲಾಗಿದೆ ಎಂಬ ವಿಷಯ ಬಹಿರಂಗ ಗೊಂಡಿತ್ತು.

ಸದನದಲ್ಲಿ ಸಭಾಧ್ಯಕ್ಷ ರಮೇಶ್‍ಕುಮಾರ್ ಸ್ವತಃ ವಿಷಯ ಪ್ರಸ್ತಾಪಿಸಿ, ಆಡಿಯೋ ವಿವಾದ ತನಿಖೆಗೆ ಎಸ್‍ಐಟಿ ರಚಿಸುವಂತೆ ರೂಲಿಂಗ್ ನೀಡಿದ್ದರು. ಅಲ್ಲದೆ ಮುಖ್ಯಮಂತ್ರಿ ಸಹ ಎಸ್.ಐ.ಟಿ ತನಿಖೆ ಘೋಷಣೆ ಮಾಡಿದರು. ಎಸ್‍ಐಟಿ ತನಿಖೆಗೆ ತಕರಾರು ಎತ್ತಿದ ಬಿಜೆಪಿ ಸದನ ಸಮಿತಿ ಅಥವಾ ನ್ಯಾಯಾಂಗ ತನಿಖೆಗೆ ಪಟ್ಟು ಹಿಡಿದ ಪರಿಣಾಮ ಮೂರು ದಿನವೂ ಯಾವುದೇ ಕಲಾಪ ನಡೆಯಲಿಲ್ಲ. ಬಿಜೆಪಿ ಶಾಸಕ ಪ್ರೀತಂಗೌಡ ಅವರು ಆಪರೇಷನ್ ಕಮಲ ಆಡಿಯೋದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ಹಗುರವಾಗಿ ಮಾತನಾಡಿದರು ಎಂಬ ಕಾರಣಕ್ಕಾಗಿ ಹಾಸನ ಜಿಲ್ಲೆಯ ಜೆಡಿಎಸ್ ಕಾರ್ಯಕರ್ತರು ಅವರ ಮನೆಯ ಮೇಲೆ ಕಲ್ಲೆಸೆದು, ಶಾಸಕರÀ ಬೆಂಬಲಿಗನ ಗಾಯ ಗೊಳಿಸಿದ ಪ್ರಕರಣ ಇಂದು ವಿಧಾನಮಂಡಲದಲ್ಲಿ ಪ್ರತಿಧ್ವನಿಸಿ, ಪ್ರತಿಪಕ್ಷದ ಸದಸ್ಯರು ಧರಣಿ ಮುಂದುವರೆಸಿದರು.

ಸದಸ್ಯರಿಗೆ ಸಮಯಾವಕಾಶ ನೀಡಿದ್ದ ಸಭಾಧ್ಯಕ್ಷರು, ಕೊನೆಗೆ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ ಹಾಗೂ ನಂತರ ಪ್ರತ್ಯೇಕವಾಗಿ ಬಜೆಟ್ ಅನ್ನು ಧ್ವನಿಮತಕ್ಕೆ ಹಾಕುವ ಮೂಲಕ ಅಂಗೀಕಾರ ಪಡೆದರು. ಇದರಿಂದ ಮುಖ್ಯಮಂತ್ರಿ ಮಂಡಿಸಿದ 4 ತಿಂಗಳ ಲೇಖಾನುದಾನ ಕೋರಿದ ಧನ ವಿನಿಯೋಗ ಮಸೂದೆಯನ್ನೂ ಧ್ವನಿಮತದ ಮೂಲಕ ಅಂಗೀಕರಿಸಲಾಯಿತು.

Translate »