ಅರೇಹಳ್ಳಿ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ
ಹಾಸನ

ಅರೇಹಳ್ಳಿ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ

August 27, 2018

ಬೇಲೂರು: ತಾಲೂಕಿನ ಅರೇಹಳ್ಳಿ ಗ್ರಾಪಂ ಅನ್ನು ಪಟ್ಟಣ ಪಂಚಾಯಿತಿ ಯನ್ನಾಗಿ ಮೇಲ್ದರ್ಜಗೆರಿಸಲು ಶಿಫಾರಸು ಮಾಡಲಾಗುವುದು ಎಂದು ಶಾಸಕ ಕೆ.ಎಸ್.ಲಿಂಗೇಶ್ ಭರವಸೆ ನೀಡಿದರು.

ಅರೇಹಳ್ಳಿಯ ಗಾಪಂ ಡಾ.ಅಂಬೇಡ್ಕರ್ ಸಭಾಂಗಣದಲ್ಲಿ ನಡೆದ ಗ್ರಾಮಸಭೆ ಉದ್ಘಾ ಟಿಸಿ ಮಾತನಾಡಿದ ಅವರು, ಅರೇಹಳ್ಳಿಯಲ್ಲಿ 2011 ಜನ ಗಣತಿಯಂತೆ 8,500 ಜನ ಸಂಖ್ಯೆಯಿದೆ. ನಂತರದ 7 ವರ್ಷದಲ್ಲಿ ಜನಸಂಖ್ಯೆ ಹೆಚ್ಚಳವಾಗಿದೆ. ಇದರೊಂದಿಗೆ ಅರೇಹಳ್ಳಿ ಸಮೀಪದ ಕಡೆಗರ್ಜೆ ಗ್ರಾಮವನ್ನು ಅರೇಹಳ್ಳಿ ಗ್ರಾಪಂಗೆ ಸೇರಿಸಿಕೊಂಡರೆ 10 ಸಾವಿರ ಜನಸಂಖ್ಯೆ ದಾಟಲಿದೆ. ನಂತರ ಅರೇ ಹಳ್ಳಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜಗೆ ಏರಿಸ ಬಹುದು ಎಂದರು.
ಅಕ್ರಮಕ್ಕೆ ಅವಕಾಶವಿಲ್ಲ: ಹೇಮಾವತಿ ಮತ್ತು ಯಗಚಿ ಜಲಾಶಯ ಯೋಜನೆಗೆ ಭೂಮಿ ಕಳೆದುಕೊಂಡ ರೈತರಿಗೆ ನೀಡಲಾದ ಭೂಮಿಯ ಹಕ್ಕುಪತ್ರವನ್ನು ಆರ್ಥಿಕವಾಗಿ ಸದೃಢ ಉಳ್ಳವರು ಖರೀದಿಸಿ ಭೂಮಿಯನ್ನು ತಮ್ಮ ಹೆಸರಿಗೆ ಮಾಡಿಕೊಳ್ಳುತ್ತಿರುವ ಪ್ರಕ ರಣಗಳ ಬಗ್ಗೆ ದೂರುಗಳು ಬರುತ್ತಿದೆ. ಈ ಬಗ್ಗೆ ತಹಶೀಲ್ದಾರ್ ಜೊತೆ ಚರ್ಚಿ ಸುತ್ತೇನೆ. ಈ ರೀತಿ ಮುಳುಗಡೆ ರೈತರ ಭೂಮಿಯ ಹಕ್ಕುಪತ್ರ ಯಾರ ಹೆಸರಿನಲ್ಲಿ ಇರುತ್ತದೊ ಅವರ ಹೆಸರಿಗೆ ಖಾತೆ ಮಾಡು ವಂತೆ ಸೂಚಿಸುತ್ತೇನೆ. ಇಂತಹ ಪ್ರಕರಣ ಗಳ ಬಗ್ಗೆ ಎಚ್ಚರದಿಂದ ಇರುವಂತೆಯೂ ಸೂಚಿಸುತ್ತೇನೆಂದು ತಿಳಿಸಿದರು.

ಅವೈಜ್ಞಾನಿಕ ಸೇರ್ಪಡೆ: ಲಕ್ಕುಂದ ಗ್ರಾಪಂ ಸದಸ್ಯ ವಿಜಯರಾಜ್ ಮನವಿಗೆ ಪ್ರತಿಕ್ರಿಯಿಸಿದ ಶಾಸಕರು, ಈ ಹಿಂದೆ ಮಂಡಲ ಪಂಚಾಯಿತಿ ವ್ಯವಸ್ಥೆ ಇದ್ದ ಸಂದರ್ಭ ಕಡೆಗರ್ಜೆ ಅರೇಹಳ್ಳಿ ಮಂಡಲ ಪಂಚಾ ಯಿತಿ ವ್ಯಾಪ್ತಿಯಲ್ಲಿತ್ತು. ಆ ನಂತರ ಗ್ರಾಪಂ ಆದ ನಂತರ ಕಡೆಗರ್ಜೆ ಲಕ್ಕುಂದ ಪಂಚಾ ಯಿತಿಗೆ ಸೇರ್ಪಡೆಗೊಂಡಿತು. ಆದರೆ ಅರೇ ಹಳ್ಳಿಯಿಂದ ಕೇವಲ 2 ಕಿ.ಮೀ. ದೂರದಲ್ಲಿರುವ ಕಡೆಗರ್ಜೆಯನ್ನು 8 ಕಿ.ಮೀ. ದೂರದಲ್ಲಿ ರುವ ಲಕ್ಕುಂದ ಗ್ರಾಪಂಗೆ ಸೇರ್ಪಡೆ ಮಾಡಿರು ವುದು ಅವೈಜ್ಞಾನಿಕ. ಇದೇ ಕಾರಣಕ್ಕೆ ಕಡೆಗರ್ಜೆ ಯನ್ನು ಅರೇ ಹಳ್ಳಿ ಗ್ರಾಪಂಗೆ ಸೇರಿಸ ಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ಒತ್ತುವರಿ ತೆರವು: ಸಹಕಾರ ಸಂಘದ ಅಧ್ಯಕ್ಷ ತಮ್ಮಣ್ಣ ಆಚಾರ್ ಮಾತನಾಡಿ, ಅರೇಹಳ್ಳಿ ಹೋಬಳಿ ಕೇಂದ್ರವಾಗಿದ್ದರೂ ಕ್ರೀಡಾಂಗಣವಿಲ್ಲ. ಇಲ್ಲಿ 10 ಶಾಲಾ ಕಾಲೇಜುಗಳಿವೆ. ಆದರೂ ಕ್ರೀಡಾಂಗಣ ವಿಲ್ಲ. ಇದಕ್ಕಾಗಿ ಅರೇಹಳ್ಳಿ ಗ್ರಾಮದ ಸುತ್ತ ಇರುವ ಸರ್ವೇ ನಂ.163, 158 ಹಾಗೂ 167 ಭೂಮಿಯಲ್ಲಿ 18 ಎಕರೆ ಜಾಗ ಇದ್ದು, ಇದರಲ್ಲಿ ಸಾಕಷ್ಟು ಒತ್ತುವರಿಯಾಗಿದೆ. ಇದನ್ನು ಸರ್ವೇ ಮಾಡಿ ವಶಕ್ಕೆ ಪಡೆಯ ಬೇಕು ಎಂದರು.

ಈ ವೇಳೆ ಪ್ರತಿಕ್ರಿಯಿಸಿದ ಶಾಸಕರು, ಅರೇ ಹಳ್ಳಿ ಸುತ್ತಲಿನಲ್ಲಿ ಗ್ರಾಮ ಠಾಣಾ ಮತ್ತು ಗೋಮಾಳ ಎಲ್ಲೆಲ್ಲಿ ಇದೆ ಎಂಬುದನ್ನು ಪತ್ತೆಹಚ್ಚಿ ಸರ್ವೆ ಮಾಡಿಸಿ ವಶಕ್ಕೆ ಪಡೆದು ಕೊಳ್ಳುವಂತೆ ಶಾಸಕ ಕೆ.ಎಸ್.ಲಿಂಗೇಶ್ ಪಿಡಿಓ ಸಂತೋಷ್‍ಗೆ ಸೂಚಿಸಿದರು.
ಹಕ್ಕುಪತ್ರದಲ್ಲಿ ಅಕ್ರಮ: ಗ್ರಾಪಂ ಸದಸ್ಯ ಮುಸ್ತಾಫ ಮಾತನಾಡಿ, ಗ್ರಾಮ ಠಾಣಾ ಹಾಗೂ ಗೋಮಾಳದಲ್ಲಿ ಅಕ್ರಮವಾಗಿ ನಿರ್ಮಿಸಿರುವ ಮನೆ ಹಾಗೂ ನಿವೇಶನ ಗಳಿಗೆ ನೀಡಬೇಕಾದ ಹಕ್ಕುಪತ್ರ ಸಮರ್ಪಕ ವಾಗಿ ನೀಡಿಲ್ಲ. ಉಳ್ಳವರಿಗೆ ಮಾತ್ರವೇ ಹಕ್ಕುಪತ್ರ ದೊರೆಯುತ್ತಿದೆ. ಎಂದು ಆರೋಪಿಸಿದರು.

ಹಕ್ಕುಪತ್ರ ನೀಡುವಿಕೆಯಲ್ಲಿ ಏನೆಲ್ಲಾ ನಡೆದಿದೆ ಎಂಬುದನ್ನು ಅಧಿಕಾರಿಗಳೊಂದಿಗೆ ಚರ್ಚಿಸಿ ಅಕ್ರಮ ನಡೆಸಿದ್ದರೆ ಶಿಸ್ತುಕ್ರಮ ಜರುಗಿಸಲಾಗುವುದು. ಅರ್ಹರಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗದಂತೆ ಹಕ್ಕುಪತ್ರ ಕೊಡಿಸಲಾಗುವುದು ಎಂದು ಶಾಸಕ ಲಿಂಗೇಶ್ ಭರವಸೆ ನೀಡಿದರು.

ಪಡಿತರ ಸಮಸ್ಯೆ: ಪಡಿತರ ಪಡೆದು ಕೊಳ್ಳಲು ಬಯೋಮೆಟ್ರಿಕ್ ವ್ಯವಸ್ಥೆಯಿಂದ ತುಂಬ ತೊಂದರೆಯಾಗುತ್ತಿದೆ. ವಿದ್ಯುತ್ ಸಮಸ್ಯೆ, ಕಂಪ್ಯೂಟರ್ ದುರಸ್ತಿ ಹಾಗೂ ಹೆಬ್ಬಟ್ಟು ಗುರುತು ಪಡೆದುಕೊಳ್ಳದೆ ತುಂಬಾ ಸಮಸ್ಯೆಯಾಗಿದೆ. ಪಡಿತರ ಪಡೆ ಯಲು ಮಕ್ಕಳು ಶಾಲೆ ಬಿಟ್ಟು ಎರಡು ಮೂರು ದಿನ ಬರಬೇಕಾಗಿದೆ. ಕೂಲಿ ಕೆಲಸ ಮಾಡುವ ನಾವುಗಳು ಎರಡು ದಿನ ಕೆಲಸ ಬಿಟ್ಟು ನ್ಯಾಯ ಬೆಲೆ ಅಂಗಡಿಯ ಮುಂದೆ ನಿಲ್ಲಬೇಕಾದ ಸ್ಥಿತಿ ಉಂಟಾಗಿದೆ ಎಂದು ಕೇಶವನಗರದ ಗಣೇಶ ಅಲವತ್ತುಕೊಂಡರು.

ಇದು ರಾಜ್ಯಮಟ್ಟದ ಸಮಸ್ಯೆ ಮುಖ್ಯ ಮಂತ್ರಿಗಳ ಗಮನಕ್ಕೂ ಬಂದಿದೆ. ಈ ಬಗ್ಗೆ ಏನು ಮಾಡಬೇಕೆಂಬ ಬಗ್ಗೆ ಉನ್ನತ ಮಟ್ಟದಲ್ಲಿ ಚರ್ಚೆ ನಡೆಯುತ್ತಿದ್ದು, ಶೀಘ್ರವೇ ಸಮಸ್ಯೆ ಬಗೆಹರಿಸುತ್ತೇವೆ ಎಂದು ಶಾಸಕ ಲಿಂಗೇಶ್ ತಿಳಿಸಿದರು. ಸಭೆಯಲ್ಲಿ ಇನ್ನಿತೆರ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು. ಇದೇ ವೇಳೆ ವಿಕಲಚೇತನರಿಗೆ ಸಹಾಧನದ ಚಕ್ ವಿತರಿಸಲಾಯಿತು. ಗ್ರಾಪಂ ಅಧ್ಯಕ್ಷೆ ಹುಸ್ಮಾ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯೆ ರತ್ನಮ್ಮ ಐಸಾಮಿಗೌಡ, ತಾಪಂ ಉಪಾಧ್ಯಕ್ಷ ಕಮಲಾ ಚಿಕ್ಕಣ್ಣ, ತಾಪಂ ಸದಸ್ಯರಾದ ಜಮುನಾ ಅಣ್ಣಪ್ಪ, ಸೋಮಯ್ಯ, ಗ್ರಾ.ಪಂ ಉಪಾಧ್ಯಕ್ಷ ಸಿದ್ದೇಶ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳಿದ್ದರು.

Translate »