ರಣರಂಗದಲ್ಲಿ ಹಾಲಿ, ಮಾಜಿ ಸದಸ್ಯರ ಜಿದ್ದಾಜಿದ್ದಿ
ಮಂಡ್ಯ

ರಣರಂಗದಲ್ಲಿ ಹಾಲಿ, ಮಾಜಿ ಸದಸ್ಯರ ಜಿದ್ದಾಜಿದ್ದಿ

August 27, 2018

ಮಂಡ್ಯ:  ಈ ಹಿಂದಿಗಿಂತಲೂ ಈ ಬಾರಿಯ ಲೋಕಲ್ ಎಲೆಕ್ಷನ್ ಫೈಟ್ ಜೋರಾಗಿಯೇ ಇದೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ, ಜೆಡಿಎಸ್, ಬಿಎಸ್‍ಪಿ ಸೇರಿದಂತೆ ಇತರೆ ಪ್ರಾದೇಶಿಕ ಪಕ್ಷ ಗಳಿಗೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ.

ಹೇಳಿ ಕೇಳಿ ಕಾಂಗ್ರೆಸ್ ಮತ್ತು ಜೆಡಿಎಸ್ ಭದ್ರಕೋಟೆಯಾಗಿ ರುವ ಮಂಡ್ಯ ನಗರಸಭೆಯಲ್ಲಿ ಈ ಬಾರಿ ಬಿಜೆಪಿಯೂ ಸಹ ಪ್ರಬಲ ಪೈಪೋಟಿ ನೀಡುವ ಮುನ್ಸೂಚನೆ ನೀಡಿದೆ. ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಎಲ್ಲ ಪಕ್ಷಗಳ ಅಭ್ಯರ್ಥಿಗಳು ಮತ್ತು ಪಕ್ಷೇತರರೂ ಮತದಾರರನ್ನು ಸೆಳೆಯಲು ಇನ್ನಿಲ್ಲದ ಕಸರತ್ತು ಆರಂಭಿಸಿದ್ದಾರೆ.

ಘಟಾನುಘಟಿಗಳ ರಂಗ ಪ್ರವೇಶ: ಎಲ್ಲಾ ಪಕ್ಷಗಳಿಗೂ ಚುನಾ ವಣೆ ಪ್ರತಿಷ್ಠೆಯಾಗಿ ಪರಿಣಮಿಸಿರುವುದರಿಂದ ಕಾಂಗ್ರೆಸ್, ಜೆಡಿಎಸ್, ಬಿಜೆಪಿಯ ಘಟನಾನುಘಟಿ ನಾಯಕರೇ ರಂಗ ಪ್ರವೇಶ ಮಾಡಿದ್ದು, ಚುನಾವಣೆ ರಂಗೇರುವಂತೆ ಮಾಡಿದೆ. ಜೆಡಿಎಸ್ ಅಭ್ಯರ್ಥಿಗಳ ಪರ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು, ಶಾಸಕ ಎಂ.ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಡಾ.ಕೃಷ್ಣ, ಕಾಂಗ್ರೆಸ್ ಅಭ್ಯರ್ಥಿ ಗಳ ಪರ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಚಿವರಾದ ಎಂ.ಎಸ್.ಆತ್ಮಾನಂದ, ಪಿ.ಎಂ.ನರೇಂದ್ರಸ್ವಾಮಿ, ಎನ್.ಚಲುವರಾಯಸ್ವಾಮಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ. ಗಂಗಾಧರ್, ಅಮರಾವತಿ ಚಂದ್ರಶೇಖರ್, ರವಿಕುಮಾರ್ ಗಣಿಗ, ಮಹಿಳಾ ಘಟಕದ ಅಧ್ಯಕ್ಷೆ ಅಂಜನಾ, ಮುಖಂಡ ರಾದ ಸಿದ್ದರಾಮೇಗೌಡ, ಸಿ.ಎಂ.ದ್ಯಾವಪ್ಪ, ಬೇಲೂರು ಸೋಮ ಶೇಖರ್, ಎಂ.ಎಸ್.ಚಿದಂಬರ್ ಮತಯಾಚಿಸುತ್ತಿದ್ದರೆ, ಬಿಜೆಪಿ ಅಭ್ಯರ್ಥಿಗಳ ಪರ ವಿಧಾನ ಪರಿಷತ್ ಮಾಜಿ ಸದಸ್ಯ ಅಶ್ವತ್ ನಾರಾಯಣ, ಜಿಪಂ ಸದಸ್ಯ ಚಂದಗಾಲು ಶಿವಣ್ಣ, ಜಿಲ್ಲಾಧ್ಯಕ್ಷ ನಾಗಣ್ಣಗೌಡ, ನಗರಾಧ್ಯಕ್ಷ ಎಚ್.ಕೆ. ಅರವಿಂದ್ ಸೇರಿ ಹಲವರು ಪ್ರಚಾರಕ್ಕಿಳಿದಿದ್ದಾರೆ.

ಕಣದಲ್ಲಿರುವ ಪ್ರಮುಖರ್ಯಾರ್ಯಾರು?: ನಗರಸಭೆ 4ನೇ ವಾರ್ಡ್ ನಿಂದ ಕಾಂಗ್ರೆಸ್‍ನಿಂದ ಮಾಜಿ ಸದಸ್ಯ ಜಡೇಜಾ ರವಿ ಪತ್ನಿ ಎಂ.ಎಸ್.ಪೂರ್ಣಿಮಾ, 6ನೇ ವಾರ್ಡ್‍ನಿಂದ ಒಮ್ಮೆ ಪಕ್ಷೇ ತರ, ಒಮ್ಮೆ ಜೆಡಿಎಸ್ ಸದಸ್ಯರಾಗಿ ನಂತರ ಕಾಂಗ್ರೆಸ್‍ನಲ್ಲಿದ್ದ ಕೆ.ಎಲ್. ನಾಗೇಂದ್ರ ಹಾಗೂ 5ನೇ ವಾರ್ಡ್‍ನ ಜೆಡಿಎಸ್ ಸದಸ್ಯೆ ಶಿವರತ್ನ ಈ ಬಾರಿ 7ನೇ ವಾರ್ಡ್‍ನಿಂದ ಬಿಜೆಪಿ ಅಭ್ಯರ್ಥಿ ಗಳಾಗಿದ್ದಾರೆ. 11ನೇ ವಾರ್ಡ್‍ನಲ್ಲಿ ಇಬ್ಬರು ಹಾಲಿ ಸದಸ್ಯರು ಕಣದಲ್ಲಿದ್ದಾರೆ. ಮೊದಲ ಅವಧಿಯಲ್ಲಿ ಜೆಡಿಎಸ್‍ನಿಂದ ಗೆದ್ದು ಅಧ್ಯಕ್ಷರಾಗಿದ್ದ ಹಾಲಿ ಪಕ್ಷೇತರ ಸದಸ್ಯ ಅರುಣ್ ಕುಮಾರ್ ಈಗ ಬಿಜೆಪಿ ಅಭ್ಯರ್ಥಿ. 19ನೇ ವಾರ್ಡ್‍ನಿಂದ ಬಿಜೆಪಿ ಅಭ್ಯರ್ಥಿಯಾಗಿ ಗೆದ್ದಿದ್ದ ಶಿವಪ್ರಕಾಶ್ ಬಾಬು ಕೂಡ ಇಲ್ಲಿ ಪಕ್ಷೇತರವಾಗಿ ಕಣಕ್ಕಿಳಿದಿದ್ದಾರೆ.

12ನೇ ವಾರ್ಡ್‍ನಲ್ಲಿ ಮಾಜಿ ಸದಸ್ಯೆ ಅಶ್ವಿನಿ ಪತಿ ಭಾರ ತೀಶ್ (ಜೆಡಿಎಸ್), 14ನೇ ವಾರ್ಡ್‍ನಲ್ಲಿ ನಾಮ ನಿರ್ದೇಶಿತ ಸದಸ್ಯ ಡಿ. ಮಂಜುನಾಥ್ (ಕಾಂಗ್ರೆಸ್), 15ನೇ ವಾರ್ಡ್‍ನಲ್ಲಿ ಮಾಜಿ ಉಪಾಧ್ಯಕ್ಷೆ ಇಂದಿರಾ(ಬಿಜೆಪಿ), 17ನೇ ವಾರ್ಡ್‍ನಲ್ಲಿ ಹಾಲಿ ಉಪಾಧ್ಯಕ್ಷೆ (ಕಾಂಗ್ರೆಸ್) ಸುಜಾತಮಣಿ ಈಗ ಜೆಡಿಎಸ್ ಅಭ್ಯರ್ಥಿಯಾಗಿದ್ದರೆ, ನಾಮ ನಿರ್ದೇಶಿತ ಸದಸ್ಯ ಬಿ.ಪಿ. ಪ್ರಕಾಶ್ ಪತ್ನಿ ಶಶಿಕಲಾ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಯಾಗಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

18ನೇ ವಾರ್ಡ್‍ನಲ್ಲಿ ಮಾಜಿ ಅಧ್ಯಕ್ಷ, ದಿ.ಹೊಸಹಳ್ಳಿ ಬೋರೇ ಗೌಡರ ಪತ್ನಿ ಎಚ್.ಎಸ್.ಪವಿತ್ರಾ (ಕಾಂಗ್ರೆಸ್), ಹಾಲಿ ಸದಸ್ಯ ಎಂ.ಜೆ.ಚಿಕ್ಕಣ್ಣ ಪತ್ನಿ ಪದ್ಮಿನಿ, 22ನೇ ವಾರ್ಡ್‍ನಲ್ಲಿ ಹಾಲಿ ಸದಸ್ಯೆ (ಕಾಂಗ್ರೆಸ್) ಗುರುವಮ್ಮ ಪುತ್ರ ಡಿ.ವಿ.ನಾರಾಯಣ ಜೆಡಿಎಸ್ ಅಭ್ಯರ್ಥಿ, 23ನೇ ವಾರ್ಡ್‍ನಲ್ಲಿ ಹಾಲಿ ಪಕ್ಷೇತರ ಸದಸ್ಯ ನಯಾಜ್ ಪತ್ನಿ ಮುಜಿಬಾ ಬಾನು, 27ನೇ ವಾರ್ಡ್‍ನಲ್ಲಿ ಹಾಲಿ ಸದಸ್ಯ ಟಿ.ಕೆ.ರಾಮಲಿಂಗಯ್ಯ ಕಾಂಗ್ರೆಸ್ ಅಭ್ಯರ್ಥಿಗಳು.

28ನೇ ವಾರ್ಡ್‍ನಲ್ಲಿ ಮಾಜಿ ಸದಸ್ಯ ಪಾಪಣ್ಣ ಅವರ ಅತ್ತಿಗೆ ಸುನಂದ, 29ನೇ ವಾರ್ಡ್‍ನಲ್ಲಿ 30ನೇ ವಾರ್ಡ್‍ನ ಸದಸ್ಯ ಅನಿಲ್ ಕುಮಾರ್ ಪತ್ನಿ ಎಚ್.ಆರ್. ರಮ್ಯಾ ಕಾಂಗ್ರೆಸ್ ನಿಂದ, ಪ್ರತಿಸ್ಪರ್ಧಿಯಾಗಿ ಮಾಜಿ ಸದಸ್ಯ ನಾಗರಾಜು (ಅನಿಲ್ ಕುಮಾರ್ ಸೋದರಮಾವ) ಪತ್ನಿ ವಿಶಾಲಾಕ್ಷಿ ಜೆಡಿಎಸ್ ಅಭ್ಯರ್ಥಿಯಾಗಿದ್ದು ಮತ್ತೊಮ್ಮೆ ದಾಯಾದಿಗಳ ನಡುವೆ ಫೈಟ್ ನಡೆಯುತ್ತಿದೆ. 31ನೇ ವಾರ್ಡ್‍ನಲ್ಲಿ ಸದಸ್ಯೆ ಶಲ್ಮಾತಾಜ್ ಪತಿ ಉಸ್ಮಾನ್ ಘನಿಖಾನ್ ಪಕ್ಷೇತರ, 34ನೇ ವಾರ್ಡ್‍ನ ಹಾಲಿ ಸದಸ್ಯೆ ಚಿಕ್ಕತಾಯಮ್ಮ ಪುತ್ರ ಸಿ.ಸುಂದರ (ಕಾಂಗ್ರೆಸ್), ಕಾಂಗ್ರೆಸ್ ಟಿಕೆಟ್ ಬಯಸಿದ್ದ ನಗರಸಭೆ ಮಾಜಿ ಅಧ್ಯಕ್ಷೆ ನಿರ್ಮಲಾ ಚಿಕ್ಕೇಗೌಡರ ಪುತ್ರ ಪೂರ್ಣಾನಂದ ಅವರು ಪಕ್ಷೇತರ ಅಭ್ಯರ್ಥಿಯಾಗಿ ಅದೃಷ್ಠ ಪರೀಕ್ಷೆಗಳಿದಿದ್ದಾರೆ.

ಈ ಬಾರಿ ಹಾಲಿ, ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪತ್ನಿಯರು, ಮಕ್ಕಳು ಸೇರಿದಂತೆ ಸಹೋದರ ಸಂಬಂಧಿ ಗಳ ನಡುವೆಯೇ ಹೋರಾಟ ಏರ್ಪಟ್ಟಿರುವುದರಿಂದ ಚುನಾವಣೆ ಎಲ್ಲರ ಗಮನ ಸೆಳೆದಿದ್ದು, ಮತದಾರ ಪ್ರಭು ಯಾರ್ಯಾರನ್ನು ನಗರ ಸಭೆಗೆ ಕಳುಹಿಸಲಿದ್ದಾನೆ ಎಂಬುದನ್ನು ಕಾದು ನೋಡಬೇಕಿದೆ.

Translate »