ಸ್ಥಳೀಯ ಸಂಸ್ಥೆ ಚುನಾವಣೆ: ವಿವಿಧೆಡೆ ಸಚಿವರು, ಶಾಸಕರ ಬಿರುಸಿನ ಪ್ರಚಾರ
ಹಾಸನ

ಸ್ಥಳೀಯ ಸಂಸ್ಥೆ ಚುನಾವಣೆ: ವಿವಿಧೆಡೆ ಸಚಿವರು, ಶಾಸಕರ ಬಿರುಸಿನ ಪ್ರಚಾರ

August 27, 2018

ಹಾಸನ: ಇದೇ ತಿಂಗಳು 31ರಂದು ನಡೆಯಲಿರುವ ಸ್ಥಳೀಯ ಸಂಸ್ಥೆ ಚುನಾವಣೆ ಹಿನ್ನೆಲೆ ಪಕ್ಷದ ಅಭ್ಯರ್ಥಿಗಳ ಪರ ಸಚಿವರು, ಶಾಸಕರು ನಗರದ ವಿವಿಧೆಡೆ ಬಿರುಸಿನ ಪ್ರಚಾರ ನಡೆಸಿದರು.

ಸಚಿವ ಹೆಚ್.ಡಿ.ರೇವಣ್ಣ ಪ್ರಚಾರ: ನಗರಸಭೆ ಚುನಾವಣೆಯ ಜೆಡಿಎಸ್ ಅಭ್ಯರ್ಥಿ ಪರ ನಗರದ ವಿವಿಧೆಡೆ ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ಬಿರುಸಿನ ಪ್ರಚಾರ ನಡೆಸಿದರು. ಮೊದಲು ನಗರದ ಸಮೀಪ ಆಡುವಳ್ಳಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ನಂತರ ಕಾರ್ಯಕರ್ತರ ಜೊತೆ ಕೆಲ ಸಮಯ ಚರ್ಚಿಸಿದರು.

ಬಳಿಕ ತೆರೆದ ವಾಹನದಲ್ಲಿ ಸಂಚರಿಸಿ ಪಕ್ಷದ ಅಭ್ಯರ್ಥಿ ಪರ ಮತ ಯಾಚಿಸಿದರು. ಅಭ್ಯರ್ಥಿಗಳಾದ 3ನೇ ವಾರ್ಡ್‍ನ ರವಿ ಶಂಕರ್, 4ನೇ ವಾರ್ಡ್‍ನ ವಾಸುದೇವ್, 5ನೇ ವಾರ್ಡ್‍ನ ಹೇಮಲತಾ, 8ನೇ ವಾರ್ಡ್‍ನ ಹೆಚ್.ಸಿ.ಗಿರೀಶ್ ಸೇರಿದಂತೆ ನಗರಸಭೆಯ ಇತರೆ ವಾರ್ಡ್ ಅಭ್ಯರ್ಥಿಗಳ ಪರ ಮತ ಯಾಚಿಸಿದರು. ಈ ವೇಳೆ ನೂರಾರು ಜೆಡಿಎಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಈ ವೇಳೆ ಮಾತನಾಡಿದ ಸಚಿವ ರೇವಣ್ಣ, ನಗರಕ್ಕೆ ಅವಶ್ಯಕವಾಗಿರುವ ಅಭಿವೃದ್ಧಿ ಕೆಲಸಗಳಿಗೆ ಹೆಚ್ಚಿನ ಒತ್ತು ನೀಡಲಾಗುವುದು. ಈಗಾಗಲೇ ನಗರದ ಚನ್ನಪಟ್ಟಣ ಕೆರೆ ಅಭಿವೃದ್ಧಿಗೆ 35 ಕೋಟಿ ರೂ. ಬಿಡುಗಡೆಯಾಗಿದ್ದು, ಹಾಳಾಗಿರುವ ರಸ್ತೆ ದುರಸ್ತಿ ಪಡಿಸಲಾಗುವುದು. ಕುಡಿಯುವ ನೀರು ಪೂರೈಕೆ ಕಾಮಗಾರಿ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ನಗರದಲ್ಲಿನ ವಾರ್ಡ್‍ಗಳ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು.

ಸಚಿವ ಜಮೀರ್ ಮತಯಾಚನೆ: ನಗರದಲ್ಲಿಂದು ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಜಮೀರ್ ಅಹಮದ್ ಬಿರುಸಿನ ಪ್ರಚಾರ ಕೈಗೊಂಡರು. ಅಜಾದ್ ರಸ್ತೆ, ಶ್ರೀನಗರ, ಹುಣಸಿನಕೆರೆ, ಶಾದಿ ಮಹಲ್, ವಲ್ಲಭಬಾಯಿ ರಸ್ತೆ, ಪೆನ್ಷನ್ ಮೊಹಲ್ಲಾ ದಲ್ಲಿ ರೋಡ್ ಶೋ ಸೇರಿದಂತೆ ನಗರದ ಪ್ರಮುಖ ವಾರ್ಡ್‍ಗಳಲ್ಲಿ ಸಂಚರಿಸಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದರು. ಮಸೀದಿಗೂ ತೆರಳಿ ಪಕ್ಷದ ಅಭ್ಯರ್ಥಿ ಗಳ ಗೆಲುವಿಗೆ ಮನವಿ ಮಾಡಿದರಲ್ಲದೆ, ಮನೆ ಮನೆಗಳಿಗೆ ತೆರಳಿ ಮತ ಯಾಚಿಸಿದರು. ತಮ್ಮ ಆಡಳಿತಾವ ಧಿಯಲ್ಲಿ ಕೈಗೊಂಡ ಜನಪ್ರಿಯ ಕಾರ್ಯಕ್ರಮಗಳನ್ನು ಇದೇ ವೇಳೆ ಮತದಾರರಿಗೆ ಮನವರಿಕೆ ಮಾಡಿದರು.

ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಈ ಬಾರಿ ಹೆಚ್ಚಿನ ಸ್ಥಾನಗಳಲ್ಲಿ ಗೆಲ್ಲಿಸಿ ಉತ್ತಮ ಕೆಲಸಕ್ಕೆ ಅವಕಾಶ ಕಲ್ಪಿಸುವಂತೆ ಮನವಿ ಮಾಡಿದರಲ್ಲದೆ, ನಗರಕ್ಕೆ ಅವಶ್ಯಕ ಮೂಲ ಸೌಕರ್ಯ ಕಲ್ಪಿಸುವ ಭರವಸೆ ನೀಡಿದರು. ಇದೇ ವೇಳೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಾವಗಲ್ ಮಂಜುನಾಥ್, ಜಿಪಂ ಅಧ್ಯಕ್ಷೆ ಶ್ವೇತಾ ದೇವರಾಜು, ಅಭ್ಯರ್ಥಿಗಳಾದ ಹೆಚ್.ಎಂ. ಯಶವಂತ್, ಸತೀಶ್ ಪಟೇಲ್, ರೋಹಿತ್ ತಾಜ್, ಸಮಿವುಲ್ಲಾ ಖಾನ್ ಸೇರಿದಂತೆ ಕೆಪಿಸಿಸಿ ಸದಸ್ಯ ಎಚ್.ಕೆ. ಮಹೇಶ್, ಮುಖಂಡ ಹೆಚ್.ಕೆ. ಜವರೇಗೌಡ, ಮಧುಸೂದನ್ ಇತರರಿದ್ದರು.

ಪ್ರೀತಂ ಜೆ.ಗೌಡ ಪ್ರಚಾರ ಬಿರುಸು: ಬಿಜೆಪಿ ಅಭ್ಯರ್ಥಿಗಳ ಪರವಾಗಿ ಶಾಸಕ ಪ್ರೀತಂ ಜೆ.ಗೌಡ ನರಸದಲ್ಲಿಂದು ವಿವಿಧ ವಾರ್ಡ್‍ಗಳಲ್ಲಿ ಬಿರುಸಿನ ಪ್ರಚಾರ ನಡೆಸಿದರು.

ನಗರದ 1ನೇ ವಾರ್ಡ್ ಆದ ರಾಜಘಟ್ಟ, ಹೊಸ ಕೊಪ್ಪಲು ಬಡಾವಣೆಗಳಲ್ಲಿ ಚುನಾವಣಾ ಪ್ರಚಾರವನ್ನು ನಡೆಸಿದರು. ನಂತರ ಮಧ್ಯಾಹ್ನ 14ನೇ ವಾರ್ಡ್‍ನ ಬಿ.ಪಿ.ಶಿಲ್ಪಾ, 15ನೇ ವಾರ್ಡ್‍ನ ಸರಸ್ವತಿ ಹಾಗೂ 20ನೇ ವಾರ್ಡ್‍ಗೆ ಸುಮಾ ಗಣೇಶ್ ಸೇರಿದಂತೆ ಪಕ್ಷದ ಅಭ್ಯರ್ಥಿಗಳ ಪರ ಬಿರುಸಿನ ಪ್ರಚಾರ ನಡೆಸಿ ಗೆಲ್ಲಿಸುವಂತೆ ಜನತೆಯಲ್ಲಿ ಮನವಿಮಾಡಿದರು. ನಗರದಲ್ಲಿ ಪ್ರಮುಖ ಸಮಸ್ಯೆಗಳ ಬಗ್ಗೆ ಹೆಚ್ಚಿನ ಗಮನ ನೀಡಲಾಗುವುದು. ಈ ಬಾರಿ 20ಕ್ಕೂ ಹೆಚ್ಚಿನ ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವುದರ ಮೂಲಕ ನಗರಸಭೆಯಲ್ಲಿ ಅಧಿಕಾರಕ್ಕೆ ಬರಲು ಅವಕಾಶ ನೀಡಬೇಕೆಂದು ಮನವಿ ಮಾಡಿದರು. ಇದೇ ವೇಳೆ ಬಿಜೆಪಿ ಮುಖಂಡರು ಹಾಗೂ ನೂರಾರು ಕಾರ್ಯಕರ್ತರು ಹಾಜರಿದ್ದರು.

Translate »