ಕೆಪಿಎಲ್: ಹುಬ್ಬಳ್ಳಿ ಟೈಗರ್ಸ್, ಬಿಜಾಪುರ್ ಬುಲ್ಸ್‍ಗೆ ಜಯ
ಮೈಸೂರು

ಕೆಪಿಎಲ್: ಹುಬ್ಬಳ್ಳಿ ಟೈಗರ್ಸ್, ಬಿಜಾಪುರ್ ಬುಲ್ಸ್‍ಗೆ ಜಯ

August 27, 2018

ಮೈಸೂರು:  ಪಂದ್ಯದ ಕೊನೆವರೆಗೂ ತೀವ್ರ ಕುತೂಹಲ ಮೂಡಿಸಿದ್ದ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ ಮೈಸೂರು ವಾರಿಯರ್ಸ್ ವಿರುದ್ಧ 3 ರನ್‍ಗಳ ರೋಚಕ ಜಯ ಸಾಧಿಸಿದೆ. ಮಾನಸ ಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣ ದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಹುಬ್ಬಳ್ಳಿ ಟೈಗರ್ಸ್ ನಿಗದಿತ 20 ಓವರ್‍ಗಳಲ್ಲಿ 6 ವಿಕೆಟ್ ನಷ್ಟಕ್ಕೆ 182 ರನ್‍ಗಳ ಬೃಹತ್ ಮೊತ್ತ ದಾಖಲಿಸಿತು.

ಹುಬ್ಬಳ್ಳಿ ಪರ ಇನ್ನಿಂಗ್ಸ್ ಆರಂಭಿಸಿದ ಮೊಹಮ್ಮದ್ ತಾಹ ಹಾಗೂ ಕ್ರಾಂತಿ ಕುಮಾರ್ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟರು. ಈ ವೇಳೆ ತಂಡದ ಮೊತ್ತ 28ರನ್ ಆಗಿದ್ದ ವೇಳೆ ಕ್ರಾಂತಿ ಕುಮಾರ್ 5 ರನ್ ಗಳಿಸಿ ಔಟಾದರು. ನಂತರ ಕ್ರೀಸ್‍ಗೆ ಆಗಮಿಸಿದ ಅಭಿಷೇಕ್ ರೆಡ್ಡಿ ತಾಹಗೆ ಉತ್ತಮ ಸಾಥ್ ನೀಡಿದರು. 60ರನ್‍ಗಳ ಜೊತೆಯಾಟವಾಡಿದ ಈ ಜೋಡಿ ತಂಡದ ಮೊತ್ತ 88 ರನ್ ಆಗಿದ್ದಾಗ ಬೇರ್ಪಟ್ಟಿತ್ತು. ಬಿರುಸಿನ ಬ್ಯಾಟಿಂಗ್ ಮೂಲಕ 47 ಎಸೆತಗಳಲ್ಲಿ 14 ಬೌಂಡರಿ ಒಳಗೊಂಡ 68 ರನ್ ಗಳಿಸಿದ್ದ ಮೊಹಮ್ಮದ್ ತಾಹ ಪೆವಿಲಿಯನ್ ಸೇರಿಕೊಂಡರು. ಇದಾದ ಕೆಲ ಹೊತ್ತಿಗೆ ಈ ವೇಳೆ 12ರನ್ ಗಳಿಸಿದ್ದ ಅಭಿಷೇಕ್ ರೆಡ್ಡಿ ಕೂಡ ವಿಕೆಟ್ ಒಪ್ಪಿಸಿದರು. ನಂತರ ಬಂದ ಸುಜೀತ್ ಗೌಡ 31 ಹಾಗೂ ನಾಯಕ ವಿನಯ್ ಕುಮಾರ್ 30 ರನ್ ಗಳಿಸಿ ತಂಡ ಬೃಹತ್ ಮೊತ್ತ ಗಳಿಸಲು ನೆರವಾದರು. ಮೈಸೂರು ವಾರಿಯರ್ಸ್ ಪರ ಬೌಲಿಂಗ್‍ನಲ್ಲಿ ವೈಶಾಖ್ ವಿಜಯ್ ಕುಮಾರ್ 3, ಭರೆತ್ 2, ಜೆ.ಸುಚಿತ್ 1 ವಿಕೆಟ್ ಪಡೆದರು.

ಹುಬ್ಬಳ್ಳಿ ಟೈಗರ್ಸ್ ನೀಡಿದ 183ರನ್‍ಗಳ ಬೃಹತ್ ಮೊತ್ತ ಬೆನ್ನತ್ತಿದ ಮೈಸೂರು ವಾರಿಯರ್ಸ್‍ಗೆ ಅರ್ಜುನ್ ಹೊಯ್ಸಳ ಹಾಗೂ ರಾಜು ಭಟ್ಕಳ್ ಅರ್ಧ ಶತಕದ ಜೊತೆಯಾಟವಾಡುವ ಮೂಲಕ ಉತ್ತಮ ಆರಂಭವನ್ನೇ ಒದಗಿಸಿದರು. ಅರ್ಜುನ್ ಹೊಯ್ಸಳ 3 ಸಿಕ್ಸರ್ 2 ಬೌಂಡರಿ ಒಳಗೊಂಡ 31ರನ್ ಗಳಿಸಿದರೇ, ರಾಜು ಭಟ್ಕಳ್ 22ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನಂತರ ಬಂದ ಅಮಿತ್ ವರ್ಮಾ 24ರನ್ ಗಳಿಸಿ ಪೆವಿಲಿಯನ್ ಸೇರಿ ಕೊಂಡರು. ಆದರೆ ಪಂದ್ಯ ಗೆಲ್ಲಲ್ಲು ಕೊನೆವರೆಗೂ ಏಕಾಂಗಿಯಾಗಿ ಹೋರಾಡಿದ ಎಸ್.ಮ್ಯಾನೇಜರ್‍ಗೆ ಉಳಿದ ಬ್ಯಾಟ್ಸ್‍ಮನ್‍ಗಳಿಂದ ಉತ್ತಮ ಬೆಂಬಲ ಸಿಗಲಿಲ್ಲ. ಒಂದೆಡೆ ನಿಗದಿತವಾಗಿ ವಿಕೆಟ್ ಬೀಳುತ್ತಿದ್ದರೂ, ಮತ್ತೊಂ ದೆಡೆ 31 ಎಸೆತಗಳಲ್ಲಿ ತಲಾ 4 ಬೌಂಡರಿ ಹಾಗೂ ಸಿಕ್ಸರ್ ಒಳಗೊಂಡ ಅರ್ಧ ಶತಕ ಸಿಡಿದ ಸಂಭ್ರಮಿಸಿದ ಎಸ್. ಮ್ಯಾನೇಜರ್ 58ರನ್ ಗಳಿಸಿ ಔಟಾದರು. ಅಂತಿಮವಾಗಿ ಮೈಸೂರು ವಾರಿಯರ್ಸ್ ನಿಗದಿತ 20 ಓವರ್‍ಗಳಲ್ಲಿ 9 ವಿಕೆಟ್ ಕಳೆದುಕೊಂಡು 179 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ 3 ರನ್‍ಗಳ ಸೋಲು ಅನುಭವಿಸಿತು. ಹುಬ್ಬಳ್ಳಿ ಟೈಗರ್ಸ್ ಪರ ಬೌಲಿಂಗ್‍ನಲ್ಲಿ ಶೇಷಾದ್ರಿ 3, ಮಹೇಶ್ ಪಟೇಲ್ 2, ದರ್ಶನ್, ಕ್ರಾಂತಿ ಕುಮಾರ್ ಹಾಗೂ ದುಬೆ ಒಂದೊಂದು ವಿಕೆಟ್ ಪಡೆದರು. ಹುಬ್ಬಳ್ಳಿ ಟೈಗರ್ಸ್ ಪರ ಮೊಹ ಮ್ಮದ್ ತಾಹ ಪಂದ್ಯ ಪುರುಷ ಪ್ರಶಸ್ತಿ ಪಡೆದರು.

ಬಿಜಾಪುರ ಬಲ್ಸ್‍ಗೆ ಜಯ: ಇಲ್ಲಿನ ಮೈದಾನದಲ್ಲಿ ನಡೆದ ಮತ್ತೊಂದು ಪಂದ್ಯದಲ್ಲಿ ಕೆ.ಎನ್.ಭರತ್ ಅವರ ಅರ್ಧ ಶತಕದ ನೆರವಿನಿಂದ ಬಿಜಾಪುರ್ ಬುಲ್ಸ್ ಬಳ್ಳಾರಿ ಟಸ್ಕರ್ಸ್ ವಿರುದ್ಧ 2 ವಿಕೆಟ್‍ಗಳ ಜಯ ಸಾಧಿಸಿದೆ.

ಬಳ್ಳಾರಿ ಟಸ್ಕರ್ಸ್ ನೀಡಿದ 153ರನ್‍ಗಳ ಗೆಲುವಿನ ಗುರಿ ಬೆನ್ನತ್ತಿದ ಬಿಜಾಪುರ್ ಬುಲ್ಸ್ 19.5 ಓವರ್‍ಗಳಲ್ಲಿ 8 ವಿಕೆಟ್ ನಷ್ಟಕ್ಕೆ 154ರನ್ ಗಳಿಸುವ ಮೂಲಕ ಗೆಲುವು ಸಾಧಿಸಿತು. ತಂಡದ ಪರ ಭರತ್ 72, ಭವಾನೆ 31, ಭರತ್ ಚಿಪ್ಲಿ 27ರನ್ ಗಳಿಸಿದರು. ಬಳ್ಳಾರಿ ಟಸ್ಕರ್ಸ್ ಪರ ಬೌಲಿಂಗ್‍ನಲ್ಲಿ ಅಕ್ಷಯ್ 3, ಆರ್.ಭಟ್ಕಲ್ 2, ಖಾಜಿ, ಟಿ.ಪ್ರದೀಪ್ ತಲಾ 1 ವಿಕೆಟ್ ಉರುಳಿಸಿದರು.

ಇದಕ್ಕೂ ಮುನ್ನಾ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬಳ್ಳಾರಿ ಟಸ್ಕರ್ಸ್ ನಿಗದಿತ 20 ಓವರ್‍ಗಳಲ್ಲಿ 9ವಿಕೆಟ್ ನಷ್ಟಕ್ಕೆ 152ರನ್ ಗಳಿಸಿತು. ತಂಡದ ಪರ ಬ್ಯಾಟಿಂಗ್‍ನಲ್ಲಿ ಕದಮ್ 52, ಕಾರ್ತಿಕ್ 45, ಪಡಿಕಲ್ 22 ರನ್ ಗಳಿಸಿದರು. ಬಿಜಾಪುರ್ ಬುಲ್ಸ್ ಬೌಲಿಂಗ್‍ನಲ್ಲಿ ಚರಿಯಪ್ಪ 3, ಅಪ್ಪಣ್ಣ, ಫರೂಕಿ ತಲಾ 2, ಮೋರೆ 1 ವಿಕೆಟ್ ಪಡೆದರು. ಬಿಜಾಪುರ್ ಬುಲ್ಸ್‍ನ ಭರತ್ ಪಂದ್ಯಪುರುಷ ಪ್ರಶಸ್ತಿ ಪಡೆದರು.

Translate »