ಅಂಗನವಾಡಿ ಕಾರ್ಯಕರ್ತೆಯರಿಂದ ಕೊಡಗಿನ ನಿರಾಶ್ರಿತರಿಗೆ ನೆರವು
ಮೈಸೂರು

ಅಂಗನವಾಡಿ ಕಾರ್ಯಕರ್ತೆಯರಿಂದ ಕೊಡಗಿನ ನಿರಾಶ್ರಿತರಿಗೆ ನೆರವು

August 27, 2018

ಮೈಸೂರು:  ಕೊಡಗಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಬದುಕನ್ನೇ ಕಳೆದುಕೊಂಡಿರುವ ಸಂತ್ರಸ್ತರ ನೆರವಿಗೆ ಬಡವ-ಬಲ್ಲಿದ ಎನ್ನದೆ ಎಲ್ಲರೂ ಕೈಜೋಡಿಸುತ್ತಿದ್ದಾರೆ.

ಮೈಸೂರಿನ ಪುರಭವನದಲ್ಲಿ ಜಿಲ್ಲಾಡಳಿತದ ವತಿಯಿಂದ ತೆರೆಯಲಾಗಿರುವ ನೆರವು ಸಂಗ್ರಹ ಕೇಂದ್ರಕ್ಕೂ ಸಹೃದಯಿಗಳು ಅಗತ್ಯ ವಸ್ತುಗಳನ್ನು ತಂದು ನೀಡುತ್ತಿದ್ದಾರೆ. ಹಾಗೆಯೇ ಪಿರಿಯಾಪಟ್ಟಣ ತಾಲೂಕಿನ ಅನೇಕ ಅಂಗನವಾಡಿ ಕಾರ್ಯಕರ್ತರು ಹಾಗೂ ಸ್ತ್ರೀಶಕ್ತಿ ಸ್ವ-ಸಹಾಯ ಸಂಘಗಳ ಸದಸ್ಯರು ಸುಮಾರು 20 ಸಾವಿರ ರೂ.ಗಳನ್ನು ಒಟ್ಟುಗೂಡಿಸಿ, ಅದರಲ್ಲಿ 40 ಬ್ಲಾಂಕೆಟ್‍ಗಳನ್ನು ಖರೀದಿಸಿ, ನೆರವು ಸಂಗ್ರಹ ಕೇಂದ್ರಕ್ಕೆ ನೀಡಿದ್ದಾರೆ. ತಮ್ಮ ಅತ್ಯಲ್ಪ ವೇತನದಲ್ಲಿ ಕುಟುಂಬ ನಿರ್ವಹಿಸುವುದೇ ಕಷ್ಟ. ಆದರೂ ಕಷ್ಟದಲ್ಲಿರುವವರ ಸಹಾಯಕ್ಕೆ ಧಾವಿಸಿದ ಇವರ ಬಗ್ಗೆ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರು ಮೆಚ್ಚುಗೆ ವ್ಯಕ್ತಪಡಿಸಿ, ಅಭಿನಂದನೆ ತಿಳಿಸಿದ್ದಾರೆ.

ನೆರೆ ಹಾವಳಿಯಿಂದ ನೆಲೆ ಕಳೆದುಕೊಂಡು ನಿರಾಶ್ರಿತರಾದವರು ಇದೀಗ ಹೊಸ ಜೀವನಕ್ಕೆ ಅಡಿಯಿಡಬೇಕಿದೆ. ಎಲ್ಲವನ್ನೂ ಕಳೆದುಕೊಂಡಿರುವ ಸಾವಿರಾರು ಮಂದಿ, ಶೂನ್ಯದಿಂದ ಬದುಕು ಕಟ್ಟಿಕೊಳ್ಳಬೇಕಿದೆ. ಈಗಾಗಲೇ ರಾಜ್ಯದ ವಿವಿಧ ಮೂಲೆಗಳಿಂದ ಆಹಾರ ಪದಾರ್ಥಗಳ ನೆರವು ಸಿಕ್ಕಿದೆ. ಆದರೆ ಮಳೆಗಾಲದ ನಂತರ ಕೊರೆಯುವ ಚಳಿಯನ್ನು ಎದುರಿಸುವುದು ನಿರಾಶ್ರಿತರಿಗೆ ಸವಾಲಾಗುತ್ತದೆ. ಸಾಲ ಸೋಲ ಮಾಡಿ ಕಟ್ಟಿದ ಬೆಚ್ಚನೆ ಮನೆ, ನೆರೆಯಲ್ಲಿ ಕೊಚ್ಚಿ ಹೋಗಿವೆ. ತುರ್ತಾಗಿ ತಾತ್ಕಾಲಿಕ ಶೆಡ್‍ಗಳನ್ನು ನಿರ್ಮಿಸಿಕೊಟ್ಟರೂ ಅದರಲ್ಲಿ ಚಳಿಗಾಲ ಕಳೆಯುವುದು ಸುಲಭದ ಮಾತಲ್ಲ. ಅವರಿಗೆ ಚಳಿ ಸಹಿಸಲು ಬೇಕಾದ ಅಗತ್ಯ ವಸ್ತುಗಳು ಹೆಚ್ಚಾಗಿ ಬೇಕಿವೆ.

Translate »