ಮೈಸೂರು: ಹಲವು ಜನಪ್ರಿಯ ಯೋಜನೆಗಳನ್ನು ಈ ಹಿಂದೆ ನಮ್ಮ ಸರ್ಕಾರ ಅನುಷ್ಟಾನಗೊಳಿಸಿದ್ದರೂ ಬಿಜೆಪಿ ಮಾಡಿದ ಸುಳ್ಳು ಅಪಪ್ರಚಾರದಿಂದ ನಮಗೆ ಹಿನ್ನೆಡೆಯಾಯಿತು. ಆದರೆ ಮೈಸೂರು ನಗರಪಾಲಿಕೆ ಸೇರಿದಂತೆ ವಿವಿಧ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಹೆಚ್ಚಿನ ಸ್ಥಾನ ಲಭಿಸಲಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದಾರೆ.
ಮೈಸೂರಿನ ಖಾಸಗಿ ಹೋಟೆಲ್‍ನಲ್ಲಿ ಭಾನುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಈ ಹಿಂದೆ 5 ವರ್ಷಗಳ ಕಾಲ ಆಡಳಿತ ನಡೆಸಿದ ನನ್ನ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಲವು ಜನಪ್ರಿಯ ಯೋಜನೆಗಳನ್ನು ಅನುಷ್ಟಾನಗೊಳಿಸಿತ್ತು. ಅವುಗಳಲ್ಲಿ ಅನ್ನಭಾಗ್ಯ, ಕ್ಷೀರಭಾಗ್ಯ, ಸಾಲಮನ್ನಾ, ಇಂದಿರಾ ಕ್ಯಾಂಟೀನ್, ಲ್ಯಾಪ್‍ಟಾಪ್ ವಿತರಣೆ ಸೇರಿದಂತೆ ಇನ್ನಿತರ ಯೋಜನೆಗಳು ಭಾರಿ ಜನ ಮನ್ನಣೆ ಗಳಿಸಿವೆ. ಆದರೆ ಕಳೆದ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ ನಾಯಕರು ಸುಳ್ಳು ಹೇಳುವ ಮೂಲಕ ಹಾಗೂ ಸರ್ಕಾರ ವಿರುದ್ಧ ಅಪಪ್ರಚಾರ ಮಾಡುವ ಮೂಲಕ ಮೇಲುಗೈ ಸಾಧಿಸಿದರು. ಕೆಲವು ವೇಳೆ ಅಪಪ್ರಚಾರವೇ ಮೇಲುಗೈ ಸಾಧಿಸಿದರೆ ಅಭಿವೃದ್ಧಿ ವಿಷಯಗಳು ಹಿನ್ನಡೆಯಾಗುತ್ತವೆ. ಇದರಿಂದಾಗಿ ಉತ್ತಮ ಯೋಜನೆಗಳನ್ನು ಕೊಡುಗೆಯಾಗಿ ನೀಡಿದ್ದರೂ, ಕಾಂಗ್ರೆಸ್‍ಗೆ ಹಿನ್ನೆಡೆಯಾಯಿತು ಎಂದು ವಿಷಾಧಿಸಿದರು.
ಮೈಸೂರು ನಗರಪಾಲಿಕೆಯ ಚುನಾವಣೆಯಲ್ಲಿ ಈ ಬಾರಿ ಕಾಂಗ್ರೆಸ್ 65 ವಾರ್ಡ್‍ಗಳಲ್ಲಿಯೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್ ಸರ್ಕಾರವೇ ಮೈಸೂರಿನಲ್ಲಿ ಜಯದೇವ ಆಸ್ಪತ್ರೆ ನಿರ್ಮಾಣ, ಟ್ರಾಮ ಸೆಂಟರ್, ಅಂಬೇಡ್ಕರ್ ಭವನ, ಜಿಲ್ಲಾಧಿಕಾರಿಗಳ ಸಂಕೀರ್ಣ, ಕಾಂಕ್ರಿಟ್ ರಸ್ತೆ ನಿರ್ಮಾಣ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯ ನಡೆಸಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ನಗರಪಾಲಿಕೆ ಚುನಾವಣೆಯಲ್ಲಿ 40ಕ್ಕೂ ಹೆಚ್ಚು ವಾರ್ಡ್‍ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ. ವಿಧಾನಸಭಾ ಚುನಾವಣೆಯ ನಂತರ ನಾನು ಮೈಸೂರಿನಲ್ಲಿ ಹಲವು ದಿನಗಳಲ್ಲಿ ಸ್ಥಳೀಯರೊಂದಿಗೆ ಬೆರೆತು ಅವರ ಅಭಿಪ್ರಾಯವನ್ನು ಪಡೆದಾಗ ಅವರು ಕಾಂಗ್ರೆಸ್‍ಗೆ ಬೆಂಬಲ ನೀಡದೆ ಇರುವುದಕ್ಕೆ ವಿಷಾಧ ವ್ಯಕ್ತಪಡಿಸಿದರು. ಈ ಹಿನ್ನಲೆಯಲ್ಲಿ ಈ ಬಾರಿ ಕಾಂಗ್ರೆಸ್ ನಗರಪಾಲಿಕೆಯಲ್ಲಿ ಅಧಿಕಾರದ ಗದ್ದುಗೆ ಹಿಡಿಯುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಕಾಂಗ್ರೆಸ್ ಪಕ್ಷ ಯಾವಾಗಲೂ ಅಧಿಕಾರ ವಿಕೇಂದ್ರಿಕರಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಇದಕ್ಕಾಗಿಯೇ ನಗರಪಾಲಿಕೆ ಸೇರಿದಂತೆ ಸ್ಥಳಿಯ ಸಂಸ್ಥೆಗಳಿಗೆ ಹೆಚ್ಚಿನ ಪ್ರಾತಿನಿದ್ಯತೆ ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ ಸಂವಿಧಾನಕ್ಕೆ 73ನೇ ತಿದ್ದುಪಡಿ ಮಾಡಿ ಪಂಚಾಯತ್‍ಗಳಿಗೆ ಅಧಿಕಾರ ನೀಡಲು ಕ್ರಮ ಕೈಗೊಂಡರು. ಅಲ್ಲದೆ 74ನೇ ತಿದ್ದುಪಡಿ ಮಾಡಿ ಪಾಲಿಕೆ ಸೇರಿದಂತೆ ಸ್ಥಳೀಯ ಸಂಸ್ಥೆಗಳಿಗೆ ಅಧಿಕಾರ ನೀಡುವ ಮೂಲಕ ಬಲಪಡಿಸಿದರು. ಅಲ್ಲದೆ ಮಹಿಳೆಯರಿಗೆ ಹಿಂದುಳಿದ ವರ್ಗ ಎಸ್ಸಿ ಎಸ್ಟಿಗಳಿಗೆ ಕಾಂಗ್ರೆಸ್ ಮೀಸಲಾತಿ ಕಲ್ಪಿಸುವ ಮೂಲಕ ಅಧಿಕಾರದ ಗದ್ದುಗೆ ಶೋಷಿತ ಸಮುದಾಯಕ್ಕೂ ಸಿಗುವಂತೆ ಕಾಂಗ್ರೆಸ್ ಮಾಡಿದೆ. ಆದರೆ ಬಿಜೆಪಿ ಈ ಹಿಂದಿನಿಂದಲೂ ಮೀಸಲಾತಿಯನ್ನು ವಿರೋಧಿಸುತ್ತಾ ಬಂದಿದೆ. ಮೀಸಲಾತಿ ವಿರೋಧಿಸಿದ್ದ ಪರಿಣಾಮ ರಮಾ ಜ್ಯೋಯಿಸ್ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಿ ಬಿಜೆಪಿ ಪುರಸ್ಕರಿಸಿರುವುದನ್ನು ಮರೆಯುವುದಿಲ್ಲ ಎಂದು ಆರೋಪಿಸಿದರು.
ವರ್ತನೆ ಸರಿಯಿಲ್ಲ: ಮಡಿಕೇರಿಗೆ ಭೇಟಿ ನೀಡಿದ್ದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಸಚಿವೆಯ ಹುದ್ದೆಗೆ ಅನುಗುಣವಾಗಿ ವರ್ತಿಸಿಲ್ಲ. ಸಭೆಯಲ್ಲಿ ಸಚಿವ ಸಾ.ರಾ.ಮಹೇಶ್ ವಿರುದ್ಧ ರೇಗಾಡಿದ್ದಾರೆ. ಸಭೆಯಲ್ಲಿಯೇ ಕೇಂದ್ರ ಸಚಿವರು ಅತಿರೇಕದ ವರ್ತನೆ ಪ್ರದರ್ಶಿಸಿರುವುದು ಸರಿಯಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ರಾಫೆಲ್ ಹಗರಣ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರಾಫೆಲ್ ಖರೀದಿಯಲ್ಲಿ ಬಾರಿ ಹಗರಣ ನಡೆಸಿದೆ. ರಕ್ಷಣಾ ವ್ಯವಸ್ಥೆಯಲ್ಲಿಯೇ ಹಿಂದೆಂದೂ ಕಂಡರಿಯದಂತಹ 40 ಸಾವಿರ ಕೋಟಿ ರೂ.ಗಳ ಹಗರಣ ನಡೆಸಲಾಗಿದೆ. ವಿಮಾನ ಖರೀದಿಯಲ್ಲಿ ನಡೆದಿರುವ ಈ ಹಗರಣವನ್ನು ದೇಶದಾದ್ಯಂತ ಜನರಿಗೆ ಕಾಂಗ್ರೆಸ್ ಪಕ್ಷದ ವತಿಯಿಂದ ತಿಳಿಸಿ ಬೀದಿಗಿಳಿದು ಹೋರಾಟ ಮಾಡುವುದಕ್ಕೆ ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಕೇಂದ್ರದ ಮಾಜಿ ಸಚಿವ ಪಲ್ಲಂರಾಜು, ವಿಧಾನಪರಿಷತ್ ಸದಸ್ಯ ಆರ್.ಧರ್ಮಸೇನಾ, ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಜೆ.ವಿಜಯ್‍ಕುಮಾರ್, ಮುಖಂಡರಾದ ಶಿವಮಲ್ಲು, ಪ್ರಕಾಶ್, ಮಂಜುಳ ಮಾನಸ, ಸುಧಾ ಮಹದೇವಯ್ಯ, ಐಶ್ವರ್ಯ, ಮಂಚನಹಳ್ಳಿ ಮಹದೇವು ಹಾಗೂ ಇನ್ನಿತರರು ಇದ್ದರು.