ಮೈಸೂರು: ಕೃಷಿಯಲ್ಲಿ ಕ್ರೀಯಾಶೀಲವಾಗಿ ತೊಡಗಿಸಿಕೊಂಡರೆ, ಸರ್ಕಾರಕ್ಕೆ ರೈತ ಸಮುದಾಯವೇ ಸಾಲ ನೀಡಬಹುದು ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕøತ ಪ್ರಗತಿಪರ ಕೃಷಿಕರಾದ ಕವಿತಾ ಮಿಶ್ರಾ ಅಭಿಪ್ರಾಯಪಟ್ಟರು.
ಮೈಸೂರಿನ ಖಾಸಗಿ ಹೋಟೆಲ್‍ನಲ್ಲಿ ರೈತಮಿತ್ರ ಫಾರ್ಮರ್ಸ್ ಪೆÇ್ರಡ್ಯೂಸರ್ ಕಂಪನಿ ಲಿಮಿಟೆಡ್ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಕೃಷಿ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈತರು ಒಂಟಿ ಬೆಳೆ ಪದ್ಧತಿಗಿಂತ ಬಹುಬೆಳೆ ಪದ್ಧತಿಗೆ ಆದ್ಯತೆ ನೀಡಿದರೆ, ಉತ್ತಮ ಆದಾಯ ಗಳಿಸಬಹುದು ಎಂದು ತಿಳಿಸಿದರು.
ಪ್ರಸ್ತುತ ಗ್ರಾಮೀಣ ಪ್ರದೇಶದ ನಮ್ಮ ಯುವ ಜನರು ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿದ್ದು, ಕೇವಲ 10ರಿಂದ 20 ಸಾವಿರ ರೂ.ಗಳಿಗೆ ಒತ್ತಡದಲ್ಲಿ ದುಡಿಯುತ್ತಿದ್ದಾರೆ. ಇದಕ್ಕೆ ಬದಲಾಗಿ ಜಮೀನಿನಲ್ಲಿ 3 ವರ್ಷ ಶ್ರಮ ವಹಿಸಿದರೆ ಬಂಗಾರದ ಬದುಕು ನಮ್ಮದಾಗಲಿದೆ. ಶ್ರೀಗಂಧ ಬೆಳೆಯುವ ಮೂಲಕ ರೈತರು ಕೋಟ್ಯಾಧಿಪತಿ ಆಗಲು ಸಾಧ್ಯವಿದೆ. ಕರ್ನಾಟಕದ ಶ್ರೀಗಂಧದಲ್ಲಿ ಹೆಚ್ಚಿನ ಎಣ್ಣೆ ಅಂಶ ಇರುವ ಕಾರಣಕ್ಕೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇದೆ. ರೈತರು ಬೆಳೆದ ಶ್ರೀಗಂಧವನ್ನು ಅರಣ್ಯ ಇಲಾಖೆಗೆ ಮಾರಾಟ ಮಾಡಬಹುದಾಗಿದೆ. ಆ ಮೂಲಕ ಶ್ರೀಗಂಧ ಬೆಳೆಯುವ ರೈತ ಕೋಟಿ ಎಣಿಸಿ ಶ್ರೀಮಂತಿಕೆ ಕಾಣಬಹುದು ಎಂದು ಹೇಳಿದರು.
ಬಿಇ ವಿದ್ಯಾರ್ಹತೆ ಹೊಂದಿರುವ ನಾನು ಧಾರವಾಡದವಳು. ನನ್ನನ್ನು ರಾಯಚೂರಿನ ಗ್ರಾಮವೊಂದಕ್ಕೆ ಮದುವೆ ಮಾಡಿಕೊಡಲಾಯಿತು. ಬಳಿಕ ಮನೆಯಲ್ಲಿ ಕೆಲಸಕ್ಕೆ ಕಳುಹಿಸಲು ಒಪ್ಪಲಿಲ್ಲ. ಆಗ ಕೃಷಿಯತ್ತ ನನ್ನ ಚುಟುವಟಿಕೆಗಳು ಸಾಗಿದವು. ಜಮೀನಿನಲ್ಲಿ 12 ಬೋರ್‍ವೆಲ್‍ಗಳು ವಿಫಲಗೊಂಡ ಬಳಿಕ 13ನೇ ಬೋರ್‍ವೆಲ್‍ನಲ್ಲಿ ಒಂದೂವರೆ ಇಂಚು ನೀರು ಸಿಕ್ಕಿತು. ದಾಳಿಂಬೆ ಬೆಳೆ ಮೊದಲ ಎರಡು ವರ್ಷ ಕೈ ಹಿಡಿದರೂ ಬಳಿಕ ರೋಗ ಬಂದು ಮನೋಧೈರ್ಯ ಕುಸಿಯುವಂತೆ ಮಾಡಿತು. ಇಂತಹ ಸಂದರ್ಭದಲ್ಲಿ ಶ್ರೀಗಂಧದ ಬೆಳೆ ಬಗ್ಗೆ ತಿಳಿದುಕೊಂಡು ಅದರ ಬೇಸಾಯದಲ್ಲಿ ತೊಡಗಿದೆ. ಅಲ್ಲಿಂದ ಕೃಷಿ ಬದುಕು ಸುಧಾರಿಸಿತು ಎಂದು ತಮ್ಮ ಯಶೋಗಾಥೆ ವಿವರಿಸಿದರು.
ರೈತರ ಕೃಷಿ ವಿಧಾನ ಬದಲಾಗಬೇಕಾದ ಅಗತ್ಯವಿದೆ. ಹೆಚ್ಚು ರಸಾಯನಿಕ ಗೊಬ್ಬರ ಬಳಕೆ ಮಾಡಿದರೆ ಮುಂದಿನ ಜನಾಂಗಕ್ಕೆ ಬಂಜರು ಭೂಮಿಯೇ ಗತಿಯಾಗಲಿದೆ. ಶೂನ್ಯ ಬಂಡವಾಳ ಕೃಷಿ, ಸಾವಯವ ಕೃಷಿ, ಸ್ವಾಭಾವಿಕ ಕೃಷಿಗೆ ರೈತರು ಗಮನ ನೀಡಬೇಕಿದೆ ಎಂದು ಸಲಹೆ ನೀಡಿದರು.
ರಾಜ್ಯ ಕಬ್ಬು ಬೆಳೆಗಾರರ ಸಂಘ ಹಾಗೂ ರೈತಮಿತ್ರ ಫಾರ್ಮರ್ಸ್ ಪೆÇ್ರಡ್ಯೂಸರ್ ಕಂಪನಿ ಲಿಮಿಟೆಡ್ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ರೈತರು ಒಗ್ಗಟ್ಟಿನಿಂದ ಇದ್ದರೆ ಇಡೀ ರೈತ ಸಮುದಾಯ ಪ್ರಗತಿ ಕಾಣಲು ಸಾಧ್ಯವಿದೆ. ನಮ್ಮ ಕಂಪನಿಯಿಂದ ಕೇರಳದ ನೆರೆ ಸಂತ್ರಸ್ತರಿಗೆ 5 ಲಕ್ಷ ರೂ., ಕೊಡಗಿನ ನೆರೆ ಸಂತ್ರಸ್ತರಿಗೆ 2 ಲಕ್ಷ ರೂ. ಆರ್ಥಿಕ ನೆರವು ನೀಡಲಾಗುತ್ತಿದೆ ಎಂದು ಪ್ರಕಟಿಸಿದರು. ಇದೇ ವೇಳೆ `ಕೃಷಿ ತ್ಯಾಜ್ಯ ನಿರ್ವಹಣೆ’ ಕೃತಿ ಬಿಡುಗಡೆ ಮಾಡಲಾಯಿತು. ಕೃಷಿ ವಿಜ್ಞಾನಿ ಡಾ.ವಸಂತ ಕುಮಾರ್, ನಿವೃತ್ತ ವಿಜ್ಞಾನಿ ರೇಣು ಅಗರ್‍ವಾಲ್, ರೈತಮಿತ್ರ ಉಪಾಧ್ಯಕ್ಷ ಟಿ.ಬಿ.ಗೋಪಿನಾಥ್, ರಾಜ್ಯ ಕಬ್ಬು ಬೆಳೆಗಾರರ ಸಂಘದ ಖಜಾಂಚಿ ಎಂ.ಬಿ.ಚೇತನ್ ಮತ್ತಿತರರು ಹಾಜರಿದ್ದರು.