ಪ್ರವಾಹದಿಂದ ಮೈಸೂರು ಜಿಲ್ಲೆಯಲ್ಲಿ 1800 ಎಕರೆ ಬೆಳೆ ನಷ್ಟ
ಮೈಸೂರು

ಪ್ರವಾಹದಿಂದ ಮೈಸೂರು ಜಿಲ್ಲೆಯಲ್ಲಿ 1800 ಎಕರೆ ಬೆಳೆ ನಷ್ಟ

August 27, 2018

ಮೈಸೂರು: ಅತಿವೃಷ್ಟಿಯಿಂದುಂಟಾದ ಪ್ರವಾಹದಿಂದಾಗಿ ಮೈಸೂರು ಜಿಲ್ಲೆಯಲ್ಲಿ ಸುಮಾರು 1,800 ಎಕರೆ ಪ್ರದೇಶದ ಬೆಳೆ ನಷ್ಟವಾಗಿದೆ ಎಂದು ಅಂದಾಜು ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯೂ ಆದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಂ.ಲಕ್ಷ್ಮೀನಾರಾಯಣ ತಿಳಿಸಿದ್ದಾರೆ.

ಪ್ರಕೃತಿ ವಿಕೋಪ ನಿರ್ವಹಣೆ ಸಂಬಂಧ ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ನೆರೆ ಹಾವಳಿಯಿಂದ ಉಂಟಾಗಿರುವ ನಷ್ಟ ಭರಿಸುವುದು, ನಿರಾಶ್ರಿತರಿಗೆ ಪುನರ್ವಸತಿ, ಹಾನಿಯಾಗಿರುವ ರಸ್ತೆ ಸೇತುವೆ, ಸರ್ಕಾರಿ ಮತ್ತು ಖಾಸಗಿ ಕಟ್ಟಡ, ವಿದ್ಯುತ್ ಕಂಬ ಸೇರಿದಂತೆ ಇನ್ನಿತರ ಪುನರ್ ನಿರ್ಮಾಣ ಕಾಮಗಾರಿಗಳಿಗೆ ಡಿಪಿಆರ್ ತಯಾರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚನೆ ನೀಡಿದರು.

ಸಭೆಯ ನಂತರ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಲಕ್ಷ್ಮೀನಾರಾಯಣ ಅವರು, ಮಳೆಯಿಂದಾಗಿ ನಂಜನಗೂಡು, ಪಿರಿಯಾಪಟ್ಟಣ ಸೇರಿದಂತೆ ಜಿಲ್ಲೆಯಾದ್ಯಂತ ಕಪಿಲಾ ಮತ್ತು ಕಾವೇರಿ ನದಿ ಪಾತ್ರದ ಸುಮಾರು 1,800 ಎಕರೆ ಪ್ರದೇಶದ ಬತ್ತದ ಬೆಳೆ ನಷ್ಟವಾಗಿದೆ ಎಂಬ ಮಾಹಿತಿ ಇದೆ. ನಷ್ಟ ಅಂದಾಜು ಕಾರ್ಯ ಪೂರ್ಣಗೊಂಡ ನಂತರ ಬೆಳೆ ನಷ್ಟದ ನಿಖರ ಮಾಹಿತಿ ತಿಳಿಯಲಿದೆ ಎಂದರು.

ಪಿರಿಯಾಪಟ್ಟಣ ಮತ್ತು ಹೆಚ್.ಡಿ.ಕೋಟೆಯ ಅಂತರಸಂತೆ ಹೋಬಳಿ ಸೇರಿದಂತೆ ಜಿಲ್ಲೆಯಾದ್ಯಂತ ಪ್ರಕೃತಿ ವಿಕೋಪಕ್ಕೆ ರಸ್ತೆ, ಸೇತುವೆ,ವಿದ್ಯುತ್ ಕಂಬಗಳು, ಸರ್ಕಾರಿ ಶಾಲೆ ಅಂಗನವಾಡಿ ಹಾಸ್ಟೆಲ್ ಕಟ್ಟಡಗಳು ಜಖಂಗೊಂಡಿವೆ. ಮನೆಗಳು ಉರುಳಿದ್ದು, ಸಾರ್ವಜನಿಕ ಮೂಲಭೂತ ಸೌಲಭ್ಯಗಳು, ಹಾನಿಗೊಳಗಾಗಿರುವ ಬಗ್ಗೆ ಜಿಲ್ಲಾಡಳಿತ ಸಮೀಕ್ಷೆ ನಡೆಸಿ ವರದಿ ನೀಡಿದೆ.
ತಕ್ಷಣಕ್ಕೆ ಪ್ರಕೃತಿ ವಿಕೋಪ ನಿರ್ವಹಣೆಯನ್ನು ಜಿಲ್ಲಾಧಿಕಾರಿಗಳ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಜನರಿಗೆ ತೊಂದರೆಯಾಗದಂತೆ ನೋಡಿಕೊಂಡಿದ್ದು, ಅದಕ್ಕೆ ಜಿಲ್ಲಾಧಿಕಾರಿಗಳ ಬಳಿ ವಿಪತ್ತು ನಿರ್ವಹಣಾ ಅನುದಾನ ಸಾಕಷ್ಟಿದೆ. ಮುಂದೆಯೂ ಸಾರ್ವಜನಿಕರಿಗೆ ತುರ್ತು ಕೆಲಸ ಕೈಗೊಳ್ಳಲು ಹಣದ ಕೊರತೆ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ತಿಳಿಸಿದರು.

ಕುಸಿದಿರುವ ರಸ್ತೆ ಮರು ನಿರ್ಮಾಣಕ್ಕೆ 13.33 ಕೋಟಿ, ಸೇತುವೆಗಳಿಗೆ 4.5 ಕೋಟಿ, ಸಣ್ಣ ನೀರಾವರಿ ಕೆಲಸಕ್ಕೆ 1.8 ಕೋಟಿ, ವಿದ್ಯುತ್ ಕಂಬಗಳಿಗೆ 2.83 ಕೋಟಿ, ಶಾಲಾ ಕಟ್ಟಡಗಳಿಗೆ 4 ಕೋಟಿ ಹಾಗೂ ಅಂಗನವಾಡಿ ಕಟ್ಟಡಗಳಿಗೆ 7.4 ಕೋಟಿ ಸೇರಿ ಒಟ್ಟು 34.9 ಕೋಟಿ ರೂ.ಗಳ ಅನುದಾನ ಬೇಕಾಗಿದೆ ಎಂದು ಜಿಲ್ಲಾಧಿಕಾರಿಗಳು ವರದಿ ನೀಡಿದ್ದಾರೆ ಎಂದ ಲಕ್ಷ್ಮೀ ನಾರಾಯಣ, ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿ ತುರ್ತಾಗಿ ಕಾಮಗಾರಿ ಕೈಗೊಳ್ಳಬೇಕಾಗಿರುವುದರಿಂದ ಅನುದಾನ ಮಂಜೂರಾತಿಗೆ ತಾವು ಪ್ರಯತ್ನಿಸುವುದಾಗಿ ತಿಳಿಸಿದರು.

ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ನರೇಗಾ ಯೋಜನೆಯಡಿ ಕೆಲ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳೂ ಸಿವಿಲ್ ಕೆಲಸಗಳಿಗೆ ಚಾಲನೆ ನೀಡಿ ಅಗತ್ಯ ಸೌಲಭ್ಯ ಕಲ್ಪಿಸಬೇಕೆಂದು ತಾವು ಸೂಚನೆ ನೀಡಿರುವುದಾಗಿಯೂ ಹೇಳಿದರು.

ಈ ಬಾರಿ ಸಾಕಷ್ಟು ಮಳೆಯಾಗಿರುವುದರಿಂದ ಬಿತ್ತನೆ ಕೆಲಸ ಆರಂಭವಾಗಿದೆ. ಅಗತ್ಯ ರಾಸಾಯನಿಕ ಗೊಬ್ಬರ ನೀಡಲು ಸಾಕಷ್ಟು ಹಣ ಇದೆ, ಸ್ಥಳೀಯ ಸಂಪನ್ಮೂಲ ಬಳಸಿಕೊಂಡು ಕೃಷಿ ಚಟುವಟಿಕೆಗೆ ರೈತರಿಗೆ ನೆರವು ನೀಡಬೇಕೆಂದು ತಿಳಿಸಿದ್ದೇನೆಂದೂ ಇದೇ ವೇಳೆ ನುಡಿದರು.

ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್, ಅಡಿಷನಲ್ ಡಿಸಿ ಟಿ.ಯೋಗೇಶ್, ಜಿಲ್ಲಾ ಪಂಚಾಯ್ತಿ ಸಿಇಓ ಜ್ಯೋತಿ, ಕಾರ್ಪೊರೇಷನ್ ಕಮೀಷ್ನರ್ ಕೆಹೆಚ್. ಜಗದೀಶ್, ಮುಡಾ ಕಮೀಷ್ನರ್ ಪಿಎಸ್.ಕಾಂತರಾಜು, ಸೂಪರಿಂಟೆಂಡಿಂಗ್ ಇಂಜಿನಿಯರ್ ಬಿ.ಕೆ.ಸುರೇಶ್‍ಬಾಬು, ಉಪವಿಭಾಗಾಧಿಕಾರಿ ಶಿವೇಗೌಡ ಹಾಗೂ ಇತರ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Translate »