ಅಂಬಾರಿ ಹೊರುವ ಜವಾಬ್ದಾರಿ `ಕೂಂಬಿಂಗ್ ಸ್ಪೆಷಲಿಸ್ಟ್’ ಅಭಿಮನ್ಯು ಹೆಗಲಿಗೆ ಶಿಫ್ಟ್…?
ಮೈಸೂರು

ಅಂಬಾರಿ ಹೊರುವ ಜವಾಬ್ದಾರಿ `ಕೂಂಬಿಂಗ್ ಸ್ಪೆಷಲಿಸ್ಟ್’ ಅಭಿಮನ್ಯು ಹೆಗಲಿಗೆ ಶಿಫ್ಟ್…?

September 7, 2020

ಮೈಸೂರು, ಸೆ.6(ಎಂಟಿವೈ)-ಕೊರೊನಾ ಹಾವಳಿಯ ನಡುವೆಯೂ ನಾಡಹಬ್ಬ ದಸರಾ ಆಚರಣೆ ಮಾಡುವ ಇಂಗಿತ ವ್ಯಕ್ತವಾಗುತ್ತಿದ್ದು, ಈ ಬಾರಿ ಅಂಬಾರಿ ಹೊರುವ ಜವಾಬ್ದಾರಿ ಅರ್ಜುನ ನಿಂದ ಅಭಿಮನ್ಯುವಿಗೆ ವರ್ಗವಾಗು ವುದು ಖಚಿತವಾದಂತಾಗಿದೆ.

60 ವರ್ಷ ದಾಟಿದ ಆನೆಗೆ ಹೆಚ್ಚು ಭಾರ ಹೊರಿಸದಂತೆ ಕಳೆದ 8 ವರ್ಷದ ಹಿಂದೆ ನ್ಯಾಯಾಲಯ ಆದೇಶ ಹೊರ ಡಿಸಿದ್ದು, ಆ ಆದೇಶವನ್ನು ಅರಣ್ಯ ಇಲಾಖೆ ಕಟ್ಟುನಿಟ್ಟಾಗಿ ಪಾಲಿಸುತ್ತಾ ಬಂದಿದೆ. ಅದ ರಂತೆ 2012ರ ದಸರಾ ಮಹೋತ್ಸವದ ವೇಳೆ ಬಲರಾಮನಿಂದ ಅಂಬಾರಿ ಹೊರುವ ಜವಾಬ್ದಾರಿಯನ್ನು ಅರ್ಜುನ ನಿಗೆ ವರ್ಗಾಯಿಸಲಾಗಿತ್ತು. ಸತತ 8 ವರ್ಷ ಅಂಬಾರಿ ಹೊತ್ತಿದ್ದ ಅರ್ಜುನ ಇದೀಗ 60 ವರ್ಷ ಪೂರೈಸಿರುವುದರಿಂದ ಆತನಿಗೆ ಭಾರ ಹೊರುವ ಜವಾಬ್ದಾರಿ ಯಿಂದ ವಿನಾಯಿತಿ ನೀಡಲು ಅರಣ್ಯ ಇಲಾಖೆ ಚಿಂತನೆ ನಡೆಸಿದೆ.

1968ರಲ್ಲಿ ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ಖೆಡ್ಡಾ ವಿಧಾನದಲ್ಲಿ ಸೆರೆ ಸಿಕ್ಕ ಅರ್ಜುನ, ಇದುವರೆಗೂ 20 ವರ್ಷ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿರುವ ಕೀರ್ತಿ ಹೊಂದಿದ್ದಾನೆ. 2020ಕ್ಕೆ 60 ವರ್ಷ ಪೂರೈ ಸಿರುವ ಅರ್ಜುನ, 2.95 ಮೀ. ಎತ್ತರ, 3.75 ಮೀ. ಉದ್ದ, 5,650ರಿಂದ 5,870 ಕೆ.ಜಿ. ತೂಕ ಹೊಂದಿದ್ದಾನೆ. 1990ರ ದಶಕದಲ್ಲಿ ಒಂದು ಬಾರಿ ಅಂಬಾರಿ ಹೊತ್ತಿದ್ದ ಅರ್ಜುನ, ಬಳಿಕ ಕಾರಂಜಿ ಕೆರೆಯಲ್ಲಿ ಸ್ನಾನ ಮಾಡಿ ಸಲು ಕರೆದೊಯ್ದಿದ್ದ ವೇಳೆÀ ಆಕಸ್ಮಿಕವಾಗಿ ನಡೆದ ಘಟನೆಯೊಂದರಿಂದ ಅರ್ಜುನ ಕೆಲವು ವರ್ಷ ದಸರಾ ಮಹೋತ್ಸವದಿಂದ ದೂರ ಉಳಿದಿತ್ತು. 2012ರಲ್ಲಿ ಬಲರಾಮ ಅಂಬಾರಿ ಹೊರುವ ಕಾಯಕದಿಂದ ಬಿಡುಗಡೆ ಹೊಂದಿದ ನಂತರ ಈವರೆಗೆ ಅರ್ಜುನ ಯಶಸ್ವಿಯಾಗಿ ಅಂಬಾರಿ ಹೊರುವ ಕೆಲಸ ನಿರ್ವಹಿಸಿದ್ದಾನೆ.

ಕೂಂಬಿಂಗ್ ಸ್ಪೆಷಲಿಸ್ಟ್ ಅಭಿಮನ್ಯು ಹೆಗಲಿಗೆ: ಜಂಬೂ ಸವಾರಿಯಲ್ಲಿ ಕರ್ನಾ ಟಕ ವಾದ್ಯಗೋಷ್ಠಿ ತಂಡ ಇರುತ್ತಿದ್ದ ಆನೆ ಗಾಡಿಯನ್ನು ಸರಾಗವಾಗಿ ಎಳೆದೊಯ್ದು ತನ್ನ ಭುಜಬಲದಿಂದಲೇ ಗಮನ ಸೆಳೆ ದಿದ್ದ 53 ವರ್ಷದ ಅಭಿಮನ್ಯುವಿಗೆ ಇದೀಗ ಅಂಬಾರಿ ಹೊರುವ ಜವಾಬ್ದಾರಿ ನೀಡಲು ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಜಂಬೂ ಸವಾರಿ
ಮೆರವಣಿಗೆಯಲ್ಲಿ 2015ರಿಂದ ನೌಪತ್ ಆನೆಯಾಗಿ ಹೆಜ್ಜೆ ಹಾಕುತ್ತಿದ್ದಾನೆ. ಅಭಿಮನ್ಯುವಿನ ದೇಹ ಬೆಳೆದಂತೆ ಆನೆಗಾಡಿಯ ನೊಗದ ವಿಸ್ತಾರ ಕ್ಷೀಣಿಸಿದ್ದರಿಂದ 2015ರಲ್ಲಿ ಆನೆಗಾಡಿ ಎಳೆಯುವುದರಿಂದ ವಿನಾಯಿತಿ ನೀಡಲಾಗಿತ್ತು. ಇದೀಗ ಅಂಬಾರಿ ಹೊರುವ ಮಹತ್ತರ ಜವಾಬ್ದಾರಿಯನ್ನು ತನ್ನ ಹೆಗಲಿಗೆ ಹಾಕಿಕೊಳ್ಳಲು ಅಭಿಮನ್ಯು ಸನ್ನದ್ಧನಾಗಿದ್ದಾನೆ.

1977ರಲ್ಲಿ ಕೊಡಗು ಹೆಬ್ಬಳ್ಳ ಅರಣ್ಯ ಪ್ರದೇಶದಲ್ಲಿ `ಕಪ್ಪು’ (ಕಂದಕ ತೋಡಿ ಆನೆ ಕೆಡುವುವುದು) ವಿಧಾನದಲ್ಲಿ ಸೆರೆ ಹಿಡಿಯಲಾಗಿತ್ತು. ಕಳೆದ 21 ವರ್ಷದಿಂದ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ಅನುಭವ ಹೊಂದಿದ್ದಾನೆ. 2.68 ಮೀ. ಎತ್ತರ, 3.51 ಮೀ. ಉದ್ದ, 5,290 ಕೆ.ಜಿ. ತೂಕ ಹೊಂದಿರುವ ಅಭಿಮನ್ಯು ಕೂಂಬಿಂಗ್ ಸ್ಪೆಷಲಿಸ್ಟ್ ಎಂದೇ ಹೆಸರು ಗಳಿಸಿದ್ದಾನೆ. ಕಾಡಂಚಿನ ಗ್ರಾಮಗಳಲ್ಲಿ ಉಪಟಳ ನೀಡುವ ಕಾಡಾನೆ, ಹುಲಿ ಕಾರ್ಯಾಚರಣೆಯಲ್ಲಿ ಎದೆಗಾರಿಕೆಯಿಂದ ಮುನ್ನುಗ್ಗುವ ಚಾಕಚಕ್ಯತೆ ಅಭಿಮನ್ಯುವಿನದ್ದಾಗಿದೆ. ಕರ್ನಾಟಕ ಮಾತ್ರವಲ್ಲದೇ ಮಹಾರಾಷ್ಟ್ರ, ಕೇರಳ, ತಮಿಳುನಾಡು ಸೇರಿದಂತೆ ಈಶಾನ್ಯ ರಾಜ್ಯದಲ್ಲೂ ಪುಂಡಾನೆ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿ ಪಾಲ್ಗೊಂಡಿರುವ ಕೀರ್ತಿ ತನ್ನದಾಗಿಸಿಕೊಂಡಿದೆ. ಅಲ್ಲದೇ ಕೇರಳ, ತಮಿಳುನಾಡು ರಾಜ್ಯದ ವಿವಿಧ ಭಾಗಗಳಲ್ಲಿ ಮನುಷ್ಯರ ಮೇಲೆರಗುತ್ತಿದ್ದ ಹುಲಿ ಸೆರೆ ಕಾರ್ಯಾಚರಣೆಯಲ್ಲೂ ಅಭಿಮನ್ಯು ಸೈ ಎನಿಸಿಕೊಂಡಿದ್ದಾನೆ. ಇದುವರೆಗೂ 100ಕ್ಕೂ ಹೆಚ್ಚು ಆನೆ ಹಾಗೂ 12ಕ್ಕೂ ಹೆಚ್ಚು ಹುಲಿ ಸೆರೆ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಿಭಾಯಿಸಿರುವ ಅಭಿಮನ್ಯು ಕರಿಯ ಎಂದೇ ಪ್ರೀತಿಗೆ ಪಾತ್ರನಾಗಿದ್ದಾನೆ. ಶ್ರೀರಂಗಪಟ್ಟಣದ ದಸರೆಯಲ್ಲಿ ಮರದ ಅಂಬಾರಿಯಲ್ಲಿ ನಾಡದೇವಿ ಚಾಮುಂಡೇಶ್ವರಿಯ ವಿಗ್ರಹವನ್ನು ಕಿಕ್ಕಿರಿದ ಜನಸಂದಣಿಯ ನಡುವೆ ಕಳೆದ ಕೆಲವು ವರ್ಷಗಳಿಂದ ಹೊತ್ತೊಯ್ಯುತ್ತಿದ್ದಾನೆ. ಮಾವುತ ವಸಂತ, ಕಾವಾಡಿಯಾಗಿ ರಾಜು ಕೆಲಸ ನಿರ್ವಹಿಸುತ್ತಿದ್ದು, ಕಳೆದ ಐದಾರು ವರ್ಷಗಳಿಂದ ಭಾರ ಹೊರುವ ತಾಲೀಮನ್ನೂ ದಸರೆ ವೇಳೆ ಪಡೆದುಕೊಳ್ಳುತ್ತಿದ್ದಾನೆ.

ಕಾನೂನು ತಜ್ಞರ ಅಭಿಪ್ರಾಯ: ಈ ಬಾರಿ ಅರ್ಜುನನಿಗೆ ಅಂಬಾರಿ ಹೊರುವ ಜವಾಬ್ದಾರಿ ನೀಡಬೇಕೋ ಅಥವಾ ವಿಶ್ರಾಂತಿ ನೀಡಬೇಕೋ ಎಂಬುದರ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯ ಪಡೆಯಲು ಅರಣ್ಯ ಇಲಾಖೆಯ ಅಧಿಕಾರಿಗಳು ಮುಂದಾಗಿದ್ದಾರೆ. ಈಗಾಗಲೇ ಇಲಾಖೆಯ ವಕೀಲರಿಂದ ಮಾಹಿತಿ ಪಡೆದಿರುವ ಅಧಿಕಾರಿಗಳು, 60 ವರ್ಷ ಪೂರೈಸಿರುವುದರಿಂದ ನ್ಯಾಯಾಲಯದ ಆದೇಶಕ್ಕೆ ಅನುಗುಣವಾಗಿ ಅಂಬಾರಿ ಹೊರಿಸಿದರೆ ನ್ಯಾಯಾಂಗ ನಿಂದನೆ ಆಗುತ್ತದೆ ಎಂಬ ಅಭಿಪ್ರಾಯವನ್ನು ಕಾನೂನು ತಜ್ಞರು ನೀಡಿದ್ದಾರೆ. ಒಂದು ವೇಳೆ ಅರ್ಜುನನಿಗೆ ಈ ಬಾರಿ ಅಂಬಾರಿ ಹೊರಿಸಿದರೆ ಅದನ್ನು ಸಂಘ-ಸಂಸ್ಥೆಗಳು ಪ್ರಶ್ನೆ ಮಾಡಿ ದೂರು ದಾಖಲಿಸಬಹುದೆಂಬ ಆತಂಕ ಇಲಾಖೆಯ ಅಧಿಕಾರಿಗಳ ಮುಂದಿದೆ. ಇದಲ್ಲದೇ ಅರ್ಜುನ ಆಶ್ರಯ ಪಡೆದಿರುವ ಬಳ್ಳೆ ಶಿಬಿರದಲ್ಲಿ ಅರ್ಜುನನ ದಾಖಲೆಗಳಿದ್ದು, ಅದರಲ್ಲಿರುವ ಮಾಹಿತಿಯಂತೆ ಅರ್ಜುನನಿಗೆ 60 ವರ್ಷ ದಾಟಿರುವುದು ಖಚಿತವಾಗಿರುವುದರಿಂದ ಸಮಸ್ಯೆಯನ್ನು ಮೇಲೆಳೆದು ಕೊಳ್ಳುವುದು ಸರಿಯಲ್ಲ ಎಂಬ ಅಭಿಪ್ರಾಯ ಇಲಾಖೆಯ ಮುಂದಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಅಂಬಾರಿ ಹೊರುವ ಹೊಣೆಗಾರಿಕೆ ಅರ್ಜುನನಿಂದ ಅಭಿಮನ್ಯುವಿಗೆ ವರ್ಗಾವಣೆ ಆಗುವುದು ಖಚಿತ ಎಂದು ಮೂಲಗಳು ಸ್ಪಷ್ಟಪಡಿಸಿವೆ.

Translate »