ಮೈಸೂರು, ಸೆ.6(ಎಂಟಿವೈ)-ಕೊರೊನಾ ಕರಿನೆರಳಿನಲ್ಲಿ ವಿಶ್ವ ವಿಖ್ಯಾತ ಮೈಸೂರು ದಸರಾ ಹೇಗೆ ನಡೆಸಬೇಕು ಎಂಬು ದರ ಬಗ್ಗೆ ಸೆ.8ರಂದು ಮುಖ್ಯಮಂತ್ರಿಗಳು ದಸರಾ ಹೈಪವರ್ ಕಮಿಟಿ ಸಭೆ ನಡೆಸಲಿರುವ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮೈಸೂರಿನಲ್ಲಿ ಸ್ಥಳೀಯ ಶಾಸಕರು ಹಾಗೂ ಅಧಿ ಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿದರು.
ದಸರಾವನ್ನು ಸರಳವಾಗಿ ನಡೆಸಿದರೂ ಕೂಡ ಜಂಬೂ ಸವಾರಿ ಗಾಗಿ ಗಜಪಡೆಯನ್ನು ಕರೆತರಲೇಬೇಕಾಗುತ್ತದೆ. ಅರಮನೆ ಸುತ್ತ ಮಾತ್ರ ಮೆರವಣಿಗೆ ನಡೆಸಿದರೂ, ಕನಿಷ್ಠ 6 ಆನೆಗಳನ್ನಾದರೂ ಕರೆತರಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳು ತಮ್ಮ ಸಲಹೆಗಳನ್ನು ನೀಡಿದರಲ್ಲದೆ, ಗಜಪಡೆ ಜೊತೆ ಬರುವ ಮಾವುತರು ಹಾಗೂ ಕಾವಾಡಿಗಳ ಆರೋಗ್ಯ ಸುರಕ್ಷತೆ ಹಿನ್ನೆಲೆ ಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ವಿವರಿಸಿದರು.
ಮೈಸೂರಿನ ಸಿದ್ಧಾರ್ಥನಗರದಲ್ಲಿರುವ ಜಿಲ್ಲಾಧಿಕಾರಿಗಳ ಹೊಸ ಕಚೇರಿ ಸಭಾಂಗಣದಲ್ಲಿ ನಡೆದ ಈ ಸಭೆಯಲ್ಲಿ ಮಾತನಾಡಿದ ಅರಣ್ಯ ಇಲಾಖೆ ಅಧಿಕಾರಿಗಳು, ಪ್ರತೀ ವರ್ಷ 12 ಆನೆಗಳನ್ನು ಕರೆ ತರಲಾಗುತ್ತಿತ್ತು. ಅವುಗಳ ಜೊತೆ ಮಾವುತರು, ಕಾವಾಡಿಗಳು ಹಾಗೂ ಅವರ ಕುಟುಂಬದವರು ಸೇರಿ ಸುಮಾರು 250 ಮಂದಿಗೂ ಹೆಚ್ಚು ಮಂದಿ ಬರುತ್ತಿದ್ದರು. ಅರಮನೆ ಅಂಗಳದಲ್ಲೇ 50 ಶೆಡ್‍ಗಳನ್ನು ನಿರ್ಮಿಸಿ ಅವರಿಗೆ ವಾಸ್ತವ್ಯ ಕಲ್ಪಿಸಲಾಗುತ್ತಿತ್ತು. ಪ್ರಸ್ತುತ ಕೊರೊನಾ ಹಾವಳಿ ಹೆಚ್ಚಾಗಿರುವುದರಿಂದ ಮಾವುತರು, ಕಾವಾಡಿಗಳು ಹಾಗೂ ಅವರ ಕುಟುಂಬದವರಿಗೆ ಸೋಂಕಿನಿಂದ ರಕ್ಷಣೆ ನೀಡುವುದೇ ದೊಡ್ಡ ಸವಾಲಾಗಿದೆ ಎಂದು ವಿವರಿಸಿದರು.
ಕೇವಲ ಸಾಂಪ್ರದಾಯಿಕ ದಸರಾ ಆಚರಿಸಿದರೂ, 6 ಆನೆಗಳ ನ್ನಾದರೂ ಕರೆತರಬೇಕಾಗುತ್ತದೆ. ಈ ಗಜಪಡೆಯೊಂದಿಗೆ ಬರುವ ಮಾವುತರು, ಕಾವಾಡಿಗಳ ಕುಟುಂಬ ಸದಸ್ಯರು ಪ್ರತೀ ದಿನ ಸಂಜೆ ದೇವರಾಜ ಮಾರುಕಟ್ಟೆ ಸೇರಿದಂತೆ ವಿವಿಧೆಡೆ ಹೋಗಿ ಬರುವುದು ವಾಡಿಕೆ. ಅಲ್ಲದೇ ಕೊರೊನಾ ಹಾವಳಿ ಆನೆಗಳ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುವ ಸಾಧ್ಯತೆ ಇರುವು ದರಿಂದ ಶಿಬಿರಗಳಿಂದ ಗಜಪಡೆಯನ್ನು ಕರೆತರುವ ದಿನದಿಂದಲೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಆನೆಗಳನ್ನು ಅರಮನೆಗೆ ಕರೆತಂದರೆ, ಅದರ ಬಳಿ ಮಾವುತ, ಕಾವಾಡಿ ಹೊರತುಪಡಿಸಿ ಬೇರೆ ಯಾರೂ ಸುಳಿಯದಂತೆ ಕಟ್ಟೆಚ್ಚರ ವಹಿಸಲಾಗುತ್ತದೆ. ತಾಲೀಮಿನ ವೇಳೆ ಆನೆಗಳಿಗೆ ಸಾರ್ವಜನಿಕರು ಹಣ್ಣು, ಕಬ್ಬು, ಬೆಲ್ಲ, ತೆಂಗಿನಕಾಯಿ ಸೇರಿದಂತೆ ಯಾವುದೇ ವಸ್ತುಗಳನ್ನು ನೀಡದಂತೆ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ಸಚಿವರಿಗೆ ವಿವರಿಸಿದರು.
ಅಧಿಕಾರಿಗಳು ನೀಡಿದ ಅಭಿಪ್ರಾಯಕ್ಕೆ ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ಸಹಮತ ವ್ಯಕ್ತಪಡಿಸಿ ದಸರಾ ಆನೆಗಳು, ಮಾವುತರು ಹಾಗೂ ಅವರ ಕುಟುಂಬ ಸದಸ್ಯರ ಆರೋಗ್ಯ ಕಾಪಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಅನಿವಾರ್ಯತೆ ಇದೆ. ಸಾರ್ವಜನಿಕರು ಆನೆಗಳ ಬಳಿ ಸುಳಿಯದಂತೆ ಕಟ್ಟೆಚ್ಚರ ವಹಿಸಲು ಹೆಚ್ಚುವರಿ ಸಿಬ್ಬಂದಿ ನಿಯೋಜಿ ಸಬೇಕೆಂದು ಸಲಹೆ ನೀಡಿದರು. ಶಾಸಕ ಎಸ್.ಎ.ರಾಮದಾಸ್ ಮಾತನಾಡಿ, ಕೊರೊನಾ ಭಯ ಮಾವುತರು, ಕಾವಾಡಿಗಳನ್ನು ಕಾಡುವುದು ಸಹಜ. ಈಗಾಗಲೇ ಕೊರೊನಾ ನಿಯಂತ್ರಣಕ್ಕೆ ಹಲವಾರು ಕ್ರಮಗಳನ್ನು ಕೈಗೊಂಡಿರುವಂತೆ ದಸರಾ ಗಜಪಡೆ, ಮಾವುತರು, ಕಾವಾಡಿಗಳ ರಕ್ಷಣೆಗೂ ಕ್ರಮ ಕೈಗೊಳ್ಳಬೇಕಾಗುತ್ತದೆ. ಅಲ್ಲದೇ ಅವರಿಗೆ ಅರಿವು ಮೂಡಿಸುವುದರ ಜೊತೆಗೆ ರೋಗ ನಿರೋಧಕ ಶಕ್ತಿ ವೃದ್ಧಿಸುವ ಆಹಾರ ಪದಾರ್ಥ ಹಾಗೂ ಆಯುರ್ವೇದ ಪದಾರ್ಥಗಳನ್ನು ಪೂರೈಸಲು ಕ್ರಮ ಕೈಗೊಳ್ಳುವುದು ಸೂಕ್ತ ಎಂದು ತಿಳಿಸಿದರು. ಸಭೆಯಲ್ಲಿ ಶಾಸಕ ಎಲ್.ನಾಗೇಂದ್ರ, ಜಿಲ್ಲಾಧಿಕಾರಿ ಬಿ.ಶರತ್, ಡಿಸಿಎಫ್ ಅಲೆಗ್ಸಾಂಡರ್, ಜಿಪಂ ಅಧ್ಯಕ್ಷ ಪರಿಮಳಾ ಶ್ಯಾಂ ಸೇರಿದಂತೆ ಹಲವು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.