ಏಖS ಸುತ್ತಮುತ್ತ `ಟ್ರಯಲ್ ಬ್ಲಾಸ್ಟ್’  ವಿರುದ್ಧ ಪ್ರತಿಭಟನೆ
ಮೈಸೂರು

ಏಖS ಸುತ್ತಮುತ್ತ `ಟ್ರಯಲ್ ಬ್ಲಾಸ್ಟ್’ ವಿರುದ್ಧ ಪ್ರತಿಭಟನೆ

July 27, 2022

ಮೈಸೂರು, ಜು.26(ಪಿಎಂ)- ಕೃಷ್ಣರಾಜಸಾಗರ ಅಣೆಕಟ್ಟೆ ಸುತ್ತಮುತ್ತ ಗಣಿಗಾರಿಕೆಯ ಸಾಧಕ-ಬಾಧಕಗಳ ಕುರಿತು ಪರಾಮರ್ಶಿಸಲು ನಡೆಸಲು ಉದ್ದೇಶಿಸಿರುವ ಪ್ರಯೋಗಾರ್ಥ ಸ್ಫೋಟ (ಟ್ರಯಲ್ ಬ್ಲಾಸ್ಟ್) ಕೈಬಿಡ ಬೇಕು ಹಾಗೂ ಅಣೆಕಟ್ಟೆ ಸುತ್ತಮುತ್ತಲ ಪ್ರದೇಶದಲ್ಲಿ ಶಾಶ್ವತವಾಗಿ ಗಣಿಗಾರಿಕೆ ನಿಷೇಧಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಜಂಟಿ ಆಶ್ರಯದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾ ಕಾರರು, ಟ್ರಯಲ್ ಬ್ಲಾಸ್ಟ್ ತಂಡಕ್ಕೆ ಧಿಕ್ಕಾರ…, ಕೆಆರ್‍ಎಸ್ ಉಳಿಸಿ ಗಣಿ ಗಾರಿಕೆ ನಿಲ್ಲಿಸಿ…, ಗಣಿಧಣಿಗಳ ಕುತಂತ್ರಕ್ಕೆ ಮಣಿದ ಮಂಡ್ಯ ಜಿಲ್ಲಾಧಿ ಕಾರಿಗೆ ಧಿಕ್ಕಾರ…, ಅಣೆಕಟ್ಟೆ ಸುತ್ತಮುತ್ತ ಗಣಿಗಾರಿಕೆ ನಿಷೇಧಿಸಬೇಕು… ಎಂಬಿತ್ಯಾದಿ ಘೋಷವಾಕ್ಯಗಳ ಫಲಕಗಳನ್ನಿಡಿದು ಮಂಡ್ಯ ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸುಮಾರು 8 ಕೋಟಿ ಜನತೆಯ ಜೀವನಾಡಿಯಾದ ಕೆಆರ್‍ಎಸ್ ಅಣೆಕಟ್ಟೆಯ ಸುತ್ತಮುತ್ತ ಗಣಿ ಗಾರಿಕೆ ನಡೆಸುತ್ತಿರುವ ಕಾರಣ ಅಣೆಕಟ್ಟೆಗೆ ಅಪಾಯ ಇದೆ ಎಂದು 2018ರಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಮಂಡಳಿ ವರದಿ ನೀಡಿದೆ. ಅಲ್ಲದೆ, ಹಲವಾರು ತಜ್ಞರು ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಅಣೆಕಟ್ಟೆ ಸುತ್ತಮುತ್ತ ಗಣಿಗಾರಿಕೆಯನ್ನು ಶಾಶ್ವತವಾಗಿ ನಿಷೇಧಿಸಬೇಕು ಎಂದು ಒತ್ತಾಯಿಸಿದರು. ಗಣಿಗಾರಿಕೆ ನಿಷೇಧಿಸು ವಂತೆ ಆಗ್ರಹಿಸಿ ರೈತ-ದಲಿತ-ಪ್ರಗತಿಪರ ಸಂಘಟನೆಗಳು ನಡೆಸಿದ ಹೋರಾಟದ ಫಲವಾಗಿ ಸದ್ಯ ಗಣಿಗಾರಿಕೆಗೆ ತಾತ್ಕಾಲಿಕ ತಡೆಯೊಡ್ಡಲಾಗಿದೆ.

ಈ ನಡುವೆ ಟ್ರಯಲ್ ಬ್ಲಾಸ್ಟ್‍ಗೆ ಜಿಲ್ಲಾಡಳಿತ ಅವಕಾಶ ಕಲ್ಪಿಸಿರುವುದು ಸರಿಯಲ್ಲ. ಒತ್ತಡಕ್ಕೆ ಮಣಿದು ಟ್ರಯಲ್ ಬ್ಲಾಸ್ಟ್ ಪ್ರಕ್ರಿಯೆ ನಡೆಸಲು ಮುಂದಾಗಿರುವ ಅನುಮಾನ ಎದ್ದು ಕಾಣುತ್ತಿದೆ. ಟ್ರಯಲ್ ಬ್ಲಾಸ್ಟ್ ಪ್ರಕ್ರಿಯೆ ಕೈಬಿಟ್ಟು, ಅಣೆಕಟ್ಟೆ ಸುತ್ತಮುತ್ತಲು ಸುಮಾರು 20 ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ಕೆಆರ್‍ಎಸ್ ಸುತ್ತಮುತ್ತ ಗಣಿಗಾರಿಕೆ ನಿಷೇಧಿಸುವಂತೆ 2007ರಿಂದಲೂ ಹೋರಾಟ ಮಾಡಲಾಗುತ್ತಿದೆ. ಹೋರಾಟದ ಹಿನ್ನೆಲೆಯಲ್ಲಿ ಕಳೆದ 2 ವರ್ಷಗಳಿಂದ ಗಣಿಗಾರಿಕೆ ನಿಷೇಧಿಸ ಲಾಗಿದೆ. ಈ ನಿಷೇಧ ಶಾಶ್ವತವಾಗಿ ಮುಂದುವರೆಯ ಬೇಕು. ಈ ಸಂಬಂಧ ಸರ್ಕಾರ ಮತ್ತು ಜಿಲ್ಲಾಡಳಿತ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು. ಇಂದು ನಡೆಯಬೇಕಿದ್ದ ಟ್ರಯಲ್ ಬ್ಲಾಸ್ಟ್ ಮುಂದೂಡಿರುವ ಬಗ್ಗೆ ಪ್ರತಿಕ್ರಿಯಿಸಿ, ನಮಗೆ ಬಂದ ಮಾಹಿತಿ ಪ್ರಕಾರ ಇಂದು ಬೆಳಗ್ಗೆಯೂ ಬ್ಲಾಸ್ಟ್ ಪ್ರಕ್ರಿಯೆ ನಡೆಸುವ ಪ್ರಯತ್ನ ನಡೆದಿದೆ. ಇದು ಅಧಿಕಾರಿ ವರ್ಗದ ತಂತ್ರಗಾರಿಕೆ. ಮಂಡ್ಯ ಜಿಲ್ಲಾಡಳಿತ ಹೇಳುವ ಪ್ರಕಾರ ಕೆಆರ್‍ಎಸ್ ಬಳಿಯ 1,600 ಎಕರೆ ಪ್ರದೇಶವು ಅಮೃತ ಕಾವಲು ಭೂಮಿ ಯಾಗಿದೆ. ಇದು ಅರಣ್ಯ ಇಲಾಖೆ, ಕಂದಾಯ ಇಲಾಖೆ ಅಥವಾ ಮೈಸೂರು ರಾಜವಂಶಸ್ಥರಿಗೆ ಸೇರಬೇಕಾ? ಎಂಬ ವಿಚಾರ ಕೋರ್ಟ್ ಮುಂದೆ ಇದೆ. ಇನ್ನೂ ಯಾರಿಗೆ ಸೇರಬೇಕು ಎಂದು ತೀರ್ಮಾನವಾಗಿಲ್ಲ. ಹೀಗಿದ್ದರೂ ಕಾನೂನುಬಾಹಿರ ವಾಗಿ ಅಲ್ಲಿ ಬ್ಲಾಸ್ಟ್‍ಗೆ ಅನುಮತಿ ನೀಡಲಾಗಿದೆ. ಇದು ಖಂಡನೀಯ ಎಂದು ಕಿಡಿಕಾರಿದರು. ಸಂಘಟನೆಗಳ ಮುಖಂಡರಾದ ಅಶ್ವತ್ಥ್ ನಾರಾ ಯಣ ರಾಜೇ ಅರಸ್, ಪಿ.ಮರಂಕಯ್ಯ, ಆನಂದೂರು ಪ್ರಭಾಕರ್, ಶಿರಮಳ್ಳಿ ಸಿದ್ದಪ್ಪ, ಅತ್ತಳ್ಳಿ ಶಿವನಂಜು, ಮಂಡಕಳ್ಳಿ ಮಹೇಶ್, ಹೆಜ್ಜಿಗೆ ಪ್ರಕಾಶ್, ನಾಗನಹಳ್ಳಿ ವಿಜೇಂದ್ರ, ಬಸಪ್ಪನಾಯಕ, ಕನ್ನಡಪರ ಹೋರಾಟ ಗಾರರಾದ ಮೋಹನ್‍ಕುಮಾರ್‍ಗೌಡ, ಬಾಲಕೃಷ್ಣ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »