ಅರಮನೆ ದರ್ಬಾರ್ ಹಾಲ್‍ನಲ್ಲಿ ಇಂದು ಸಿಂಹಾಸನ ಜೋಡಣೆ ಬೆಳಗ್ಗೆ 8ರಿಂದ ಮಧ್ಯಾಹ್ನ 3 ಗಂಟೆವರೆಗೆ
ಮೈಸೂರು

ಅರಮನೆ ದರ್ಬಾರ್ ಹಾಲ್‍ನಲ್ಲಿ ಇಂದು ಸಿಂಹಾಸನ ಜೋಡಣೆ ಬೆಳಗ್ಗೆ 8ರಿಂದ ಮಧ್ಯಾಹ್ನ 3 ಗಂಟೆವರೆಗೆ

October 1, 2021

ಮೈಸೂರು,ಸೆ.30(ಎಂಟಿವೈ)- ದಸರಾ ಮಹೋತ್ಸವದಲ್ಲಿ ರಾಜಮನೆತನ ನಡೆಸುವ ಖಾಸಗಿ ದರ್ಬಾರ್‍ಗಾಗಿ ಭಾದ್ರ ಪದ ಮಾಸ ಕೃಷ್ಣ ಪಕ್ಷ ದಶಮಿ ದಿನವಾದ ಶುಕ್ರವಾರ(ಅ.1) ಬೆಳಗ್ಗೆ 9.30ರೊಳಗೆ ಸಲ್ಲುವ ತುಲಾ ಲಗ್ನದಲ್ಲಿ ದರ್ಬಾರ್‍ಹಾಲ್ ನಲ್ಲಿ ಚಿನ್ನದ ಸಿಂಹಾಸನ ಹಾಗೂ ಕನ್ನಡಿ ತೊಟ್ಟಿಯಲ್ಲಿ ಬೆಳ್ಳಿಯ ಭದ್ರಾಸನ ಜೋಡಣಾ ಕಾರ್ಯ ನಡೆಯಲಿದ್ದು, ಬೆಳಗ್ಗೆಯಿಂದ ಮಧ್ಯಾಹ್ನ 3ಗಂಟೆವರೆಗೆ ಅರಮನೆಗೆ ಸಾರ್ವ ಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ.

ಈ ಸಾಲಿನ ದಸರಾ ಮಹೋತ್ಸವ ಅ.7ರಿಂದ 15ರವರೆಗೆ ನಡೆಯಲಿದ್ದು, ಅರ ಮನೆಯಲ್ಲಿ ಅ.7ರಂದು ಖಾಸಗಿ ದರ್ಬಾರ್ ನಡೆಯಲಿದೆ. ಇದಕ್ಕಾಗಿ ನಾಳೆ ಬೆಳಗ್ಗೆ ಅರಮನೆ ಸಿಬ್ಬಂದಿ ಬಿಗಿ ಭದ್ರತೆಯಲ್ಲಿ ಅರಮನೆಯ ಸ್ಟ್ರಾಂಗ್‍ರೂಮ್‍ನಲ್ಲಿ ಬಿಡಿಭಾಗಗಳಾಗಿ ವಿಂಗಡಿಸಿ ಸುರಕ್ಷಿತವಾಗಿ ಇಟ್ಟಿರುವ ಸಿಂಹಾಸನವನ್ನು ದರ್ಬಾರ್ ಹಾಲ್‍ಗೆ ತಂದು ಜೋಡಣೆ ಮಾಡಲಿದ್ದಾರೆ. ಬೆಳಗ್ಗೆ 9.30ರೊಳಗೆ ಸಲ್ಲುವ ತುಲಾಲಗ್ನದಲ್ಲಿ ದರ್ಬಾರ್ ಹಾಲ್‍ನಲ್ಲಿ ಚಿನ್ನದ ಸಿಂಹಾಸನ ಹಾಗೂ ಕನ್ನಡಿ ತೊಟ್ಟಿಯಲ್ಲಿ ಬೆಳ್ಳಿಯ ಭದ್ರಾಸನ ಜೋಡಿಸಲಾಗುತ್ತದೆ. ಸಿಂಹಾಸನ ಜೋಡಣೆ ಹಿನ್ನೆಲೆಯಲ್ಲಿ ಬೆಳಗ್ಗೆ 7.20ಕ್ಕೆ ದರ್ಬಾರ್ ಹಾಲ್‍ನಲ್ಲಿ ರಾಜಪುರೋಹಿತರ ಸಮ್ಮುಖದಲ್ಲಿ ನವಗ್ರಹ ಪುರಸ್ಸರ ಶಾಂತಿಹೋಮ ಸೇರಿದಂತೆ ಇನ್ನಿತರ ಪೂಜಾ ಕೈಂಕರ್ಯ ಜರುಗಲಿದೆ. ಈ ಹಿನ್ನೆಲೆಯಲ್ಲಿ ಅರಮನೆಗೆ ಪ್ರವಾಸಿಗರು, ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ.

Translate »