ಮೈಸೂರಲ್ಲಿ ಗಾಂಜಾ ಸಾಗಿಸುತ್ತಿದ್ದ ಮಂಗಳೂರಿನ ಇಬ್ಬರ ಸೆರೆ
ಮೈಸೂರು

ಮೈಸೂರಲ್ಲಿ ಗಾಂಜಾ ಸಾಗಿಸುತ್ತಿದ್ದ ಮಂಗಳೂರಿನ ಇಬ್ಬರ ಸೆರೆ

July 20, 2018

ಮೈಸೂರು: ಗಾಂಜಾ ಸಾಗಿಸುತ್ತಿದ್ದ ಮಂಗಳೂರಿನ ಇಬ್ಬರನ್ನು ಮೈಸೂರಿನ ಆಲನಹಳ್ಳಿ ಠಾಣೆ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಪ್ರವೀಣ್ ಪೂಜಾರಿ ಮತ್ತು ಗಿರೀಶ್ ಬಂಧಿತ ಆರೋಪಿಗಳಾಗಿದ್ದು, ಅವರಿಂದ 700 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಬುಧವಾರ ಬೆಳಿಗ್ಗೆ 8 ಗಂಟೆಗೆ ರೆನಾಲ್ಟ್ ಡಸ್ಟರ್ (ಕೆಎ19, ಎಂಸಿ 7183) ಕಾರಿನಲ್ಲಿ ಮಂಗಳೂರಿನಿಂದ ಮೈಸೂರಿಗೆ ಬಂದಿದ್ದ ಪ್ರವೀಣ್ ಪೂಜಾರಿ, ಗಿರೀಶ್ ಹಾಗೂ ರೋಹಿತ್ ಎಂಬುವರು, ಮೈಸೂರಿನಲ್ಲಿ ವ್ಯಕ್ತಿಯೊಬ್ಬರಿಂದ 12,000 ರೂ. ಕೊಟ್ಟು 700 ಗ್ರಾಂ ಗಾಂಜಾ ಖರೀದಿಸಿದ್ದರು.

ಖಚಿತ ಮಾಹಿತಿ ಆಧರಿಸಿ ಮಫ್ತಿಯಲ್ಲಿ ಬೈಕ್‍ಗಳ ಮೂಲಕ ಕಾರ್ಯಾಚರಣೆ ನಡೆಸಿದ ಆಲನಹಳ್ಳಿ ಠಾಣೆ ಇನ್ಸ್‍ಪೆಕ್ಟರ್ ಕೆ.ಎಂ.ಮಂಜು ಹಾಗೂ ಸಿಬ್ಬಂದಿ, ಬುಧವಾರ ಲಲಿತ ಮಹಲ್ ಪ್ಯಾಲೇಸ್ ಹೋಟೆಲ್ ಹಿಂಭಾಗದ ಇಂದಿರಾ ಕ್ಯಾಂಟಿನ್ ಬಳಿ ಪೂಜಾರಿ ಮತ್ತು ಗಿರೀಶ್‍ನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ರೋಹಿತ್ ಕಾರು ಸಮೇತ ಪರಾರಿಯಾಗಿದ್ದಾನೆ.
ಮಂಗಳೂರಿನಲ್ಲಿ ತಾವು ಪೇಂಟಿಂಗ್ ಕೆಲಸ ಮಾಡಿಕೊಂಡಿದ್ದು, ಗಾಂಜಾ ಖರೀದಿಸಲೆಂದು ಮೈಸೂರಿಗೆ ಬಂದು ಅಪರಿಚಿತನಿಂದ 12,000 ರೂ. ಕೊಟ್ಟು 700 ಗ್ರಾಂ ಗಾಂಜಾ ಖರೀದಿಸಿ, ವಾಪಸ್ಸಾಗಲು ಸಿದ್ಧರಾಗಿದ್ದೆವು ಎಂದು ಬಂಧಿತರು ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಆಲನಹಳ್ಳಿ ಪೊಲೀಸರು ಗಾಂಜಾ ವಶಪಡಿಸಿಕೊಂಡಿದ್ದು, ಪರಾರಿಯಾಗಿರುವ ರೋಹಿತ್ ಹಾಗೂ ಗಾಂಜಾ ಮಾರಾಟ ಮಾಡಿದ ವ್ಯಕ್ತಿಯ ಪತ್ತೆಗೆ ವ್ಯಾಪಕ ಶೋಧ ನಡೆಸುತ್ತಿದ್ದಾರೆ.

ಬಂಧಿತ ಆರೋಪಿಗಳನ್ನು ಇಂದು ಬೆಳಿಗ್ಗೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು ಎಂದು ಇನ್ಸ್‍ಪೆಕ್ಟರ್ ಮಂಜು ತಿಳಿಸಿದ್ದಾರೆ. ಪತ್ತೆ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಶಿವಪ್ರಸಾದ್, ಚೌಡಪ್ಪ, ಮಲ್ಲಿಕಾರ್ಜುನ, ಜಿಯಾ ಉಲ್ಲಾ ಹಾಗೂ ಸ್ವಾಮಿ ಪಾಲ್ಗೊಂಡಿದ್ದರು.

Translate »