ನೇಣು ಬಿಗಿದ ಸ್ಥಿತಿಯಲ್ಲಿ ಬ್ಯೂಟೀಷಿಯನ್: ಅನುಮಾನಾಸ್ಪದ ಸಾವು
ಮೈಸೂರು

ನೇಣು ಬಿಗಿದ ಸ್ಥಿತಿಯಲ್ಲಿ ಬ್ಯೂಟೀಷಿಯನ್: ಅನುಮಾನಾಸ್ಪದ ಸಾವು

June 27, 2018
  • ಸ್ನೇಹಿತನೇ ಕೊಲೆಗೈದಿದ್ದಾನೆಂದು ಆಕೆ ತಾಯಿ ಪೊಲೀಸರಿಗೆ ದೂರು
  • ಅದರಂತೆ ಕೊಲೆ ಪ್ರಕರಣ ದಾಖಲಿಸಿರುವ ಆಲನಹಳ್ಳಿ ಠಾಣೆ ಪೊಲೀಸರು

ಮೈಸೂರು: ನೇಣು ಬಿಗಿದ ಸ್ಥಿತಿಯಲ್ಲಿ ಬ್ಯೂಟೀಷಿಯನ್‍ವೊಬ್ಬರು ಸಂಶಯಾಸ್ಪದ ರೀತಿ ಸಾವನ್ನಪ್ಪಿರುವ ಘಟನೆ ಮೈಸೂರಿನ ಆಲನಹಳ್ಳಿಯ ದಾಮೋದರ ಬಡಾವಣೆಯಲ್ಲಿ ಸೋಮವಾರ ಸಂಜೆ ಸಂಭವಿಸಿದೆ. ಆನಂದ್ ಎಂಬುವರ ಪತ್ನಿ ಶ್ರೀಮತಿ ರಮ್ಯ(26) ಅನುಮಾನಾಸ್ಪದ ರೀತಿ ಸಾವನ್ನಪ್ಪಿದವರಾಗಿದ್ದು, ತನ್ನ ಮಗಳನ್ನು ಆಕೆಯ ಸ್ನೇಹಿತ ಸುನಿಲ್ ಕುಮಾರ್ ಕೊಲೆ ಮಾಡಿದ್ದಾನೆ ಎಂದು ರಮ್ಯ ತಾಯಿ, ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲೂಕು, ಜನಿ ವಾರ ಗ್ರಾಮದ ಲಕ್ಷ್ಮಮ್ಮ ಅವರು ಮೈಸೂ ರಿನ ಆಲನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನನ್ವಯ ಐಪಿಸಿ ಸೆಕ್ಷನ್ 302 ಪ್ರಕಾರ ಸುನಿಲ್ ಕುಮಾರ್ ಎಂಬುವರ ವಿರುದ್ಧ ಪೊಲೀಸರು ಹತ್ಯೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು, ಆರೋಪಿ ಪತ್ತೆಗೆ ಶೋಧ ನಡೆಸುತ್ತಿದ್ದಾರೆ.

ಘಟನೆಯ ವಿವರ: ಜನಿವಾರ ಗ್ರಾಮದ ರಾಮಚಂದ್ರನಾಯಕ ಮತ್ತು ಲಕ್ಷ್ಮಮ್ಮ ದಂಪತಿಯ ಹಿರಿಯ ಪುತ್ರಿಯಾದ ರಮ್ಯಳನ್ನು ನಾಲ್ಕು ವರ್ಷಗಳ ಹಿಂದೆ ಶ್ರೀರಂಗಪಟ್ಟಣ ತಾಲೂಕು, ಶಾಂತಿಕೊಪ್ಪಲು ಗ್ರಾಮದ ಆನಂದ ಎಂಬುವರಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ಒಂದು ಗಂಡು ಮಗು ವಿನ ತಾಯಿಯಾದ ರಮ್ಯ, ಮೈಸೂರಿನ ಖಾಸಗಿ ಹೋಟೆಲ್‍ವೊಂದರಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಪರಿಚಯವಾದ ಸುನಿಲ್, ತಾನು ಹಣಕಾಸು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಬ್ಯೂಟಿ ಪಾರ್ಲರ್ ತೆರೆಯಲು ಹಣ ಕೊಡಿಸುತ್ತೇನೆಂದು ಪುಸ ಲಾಯಿಸಿ ಆಲನಹಳ್ಳಿಯಲ್ಲಿ ಮನೆಯೊಂದನ್ನು ಬಾಡಿಗೆಗೆ ಕೊಡಿಸಿ, ಆಕೆಯನ್ನು ಅಲ್ಲಿ ಇರಿ ಸಿದ್ದ ಎಂದು ಅವರ ತಾಯಿ ಲಕ್ಷ್ಮಮ್ಮ, ದೂರಿನಲ್ಲಿ ತಿಳಿಸಿದ್ದಾರೆ.

ಒಬ್ಬಳೇ ವಾಸಿಸುತ್ತಿದ್ದ ತನ್ನ ಮಗಳ ಮನೆಗೆ ಆಗಾಗ್ಗೆ ಬರುತ್ತಿದ್ದ. ಆತನೇ ಬಾಡಿಗೆ ಸಹ ಕಟ್ಟುತ್ತಿದ್ದು, ಅದನ್ನು ಸಂಬಳದಲ್ಲಿ ಕೊಡು ಎಂದು ಕೇಳುತ್ತಿದ್ದ. ನಂತರ ಅವನು ಅದೇ ಮನೆಯಲ್ಲಿ ವಾಸ ಮಾಡಲಾರಂಭಿಸಿ ಕಡೆಗೆ ಆಕೆಯ ಸಂಬಳದ ಹಣವನ್ನು ಕಿತ್ತುಕೊಳ್ಳುತ್ತಿದ್ದ ಎಂಬುದು ನಮಗೆ ತಿಳಿದಿತ್ತು ಎಂದು ಅವರು ಆರೋಪಿಸಿದ್ದಾರೆ.

ಕಾಲಕ್ರಮೇಣ ನನ್ನ ಮಗಳ ಹೆಸರಲ್ಲಿ ಫೈನಾನ್ಸ್‍ನಲ್ಲಿ ಚೀಟಿ ಹಾಕಿಸಿ 8 ಲಕ್ಷ ರೂ.ಗಳ ಸಾಲ ಪಡೆದುಕೊಂಡಿದ್ದ ಸುನಿಲ್, ಪುಸಲಾಯಿಸಿ 200 ಗ್ರಾಂ ಚಿನ್ನಾಭರಣವನ್ನೂ ಕಿತ್ತುಕೊಂಡು ಪದೇ ಪದೆ ನಿನ್ನ ತಂದೆ ಮನೆಯಿಂದ ಹಣ ತೆಗೆದುಕೊಂಡು ಬಾ ಎಂದು ಪೀಡಿಸುತ್ತಿದ್ದ ಎಂದು ಲಕ್ಷ್ಮಮ್ಮ ದೂರಿದ್ದಾರೆ.

ಈ ಸಂಬಂಧ ನಾವು ಸುನಿಲ್‍ಗೆ ಫೋನ್ ಮಾಡಿ ಎಚ್ಚರಿಕೆ ನೀಡಿದ್ದೆವು. ಜೂನ್ 25ರಂದು ಬೆಳಿಗ್ಗೆ ರಮ್ಯ ನಮಗೆ ಫೋನ್ ಮಾಡಿ, ಸುನಿಲ್ ಹಣಕ್ಕೆ ಒತ್ತಾಯಿಸುತ್ತಿದ್ದಾನೆ. ಕೊಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದಿದ್ದಳು. ಮತ್ತೆ ಮಧ್ಯಾಹ್ನ ಕರೆ ಮಾಡಿ, ಈಗ ಬರುತ್ತಾನಂತೆ ನನ್ನನ್ನು ಸಾಯಿಸುತ್ತಾನಂತೆ, ಬೇಗ ಬಾರಮ್ಮ ಎಂದಿದ್ದಳು. ಮಧ್ಯಾಹ್ನ 3.30 ಗಂಟೆ ವೇಳೆಗೆ ಯಾರೋ ಫೋನ್ ಮಾಡಿ ರಮ್ಯ ಸಾವನ್ನಪ್ಪಿದ್ದಾಳೆ ಎಂದು ತಿಳಿಸಿದರು. ಸುನಿಲನೇ ನನ್ನ ಪುತ್ರಿಯನ್ನು ಕೊಲೆ ಮಾಡಿದ್ದಾನೆ ಎಂದೂ ಅವರು ದೂರಿನಲ್ಲಿ ಆಪಾದಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಆಲನಹಳ್ಳಿ ಠಾಣೆ ಪೊಲೀಸರು ಮಹಜರು ನಡೆಸಿ ಮೃತ ದೇಹವನ್ನು ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಶವಾಗಾರಕ್ಕೆ ಸ್ಥಳಾಂತರಿಸಿ ಇಂದು ಬೆಳಿಗ್ಗೆ ಮರಣೋತ್ತರ ಪರೀಕ್ಷೆ ನಡೆಸಿ, ದೇಹವನ್ನು ವಾರಸುದಾರರಿಗೆ ಒಪ್ಪಿಸಿದ್ದಾರೆ.

Translate »