ಮೈಸೂರು, ಸೆ.19(ಆರ್‍ಕೆ)- ಮಹಿಳೆಯಿಂದ ಸರ ಕಿತ್ತುಕೊಂಡು ಪರಾರಿಯಾಗಿದ್ದ ಇಬ್ಬರು ಖದೀಮರನ್ನು ಬಂಧಿಸಿರುವ ಜಯಪುರ ಠಾಣೆ ಪೊಲೀಸರು, 5 ಚಿನ್ನದ ಸರ ಹಾಗೂ ಒಂದು ಬೈಕ್ ಅನ್ನು ವಶಪಡಿಸಿಕೊಂಡಿದ್ದಾರೆ.
ಮೈಸೂರಿನ ಆರ್.ಎಸ್ ನಾಯ್ಡುನಗರ 3ನೇ ಕ್ರಾಸ್, 3ನೇ ಮೇನ್ ನಿವಾಸಿ ಡೇವಿಡ್ ರಾಜಶೇಖರ್ ಅವರ ಮಗ ಸನ್ನಿ ಡೊನಾಲ್ಡ್(28) ಹಾಗೂ ಹಿನಕಲ್ ಗ್ರಾಮದ ಬೈರವೇಶ್ವರ ದೇವಸ್ಥಾನ ಬಳಿಯ ನಿವಾಸಿ ಲೇಟ್ ಪ್ರಕಾಶ್ ಅವರ ಮಗ ಕಿರಣ್ ಅಲಿಯಾಸ್ ಬಾಂಡ್(22) ಬಂಧಿತ ಆರೋಪಿಗಳು. ಸೆಪ್ಟೆಂಬರ್ 17ರಂದು ಬೆಳಿಗ್ಗೆ 8 ಗಂಟೆಯ ವೇಳೆಗೆ ಮಂಡಿಮೊಹಲ್ಲಾದ ಬಳಿ ಅನುಮಾನಾಸ್ಪದ ವಾಗಿ ಓಡಾಡುತ್ತಿದ್ದ ಯುವಕರನ್ನು ವಶಕ್ಕೆ ಪಡೆದ ಪೊಲೀಸರು ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ಸೆಪ್ಟೆಂಬರ್ 20ರಂದು ಸಂಜೆ ಮೈಸೂರು ತಾಲೂಕು ಸೋಮನಾಥನಗರದಲ್ಲಿ ವಾಕಿಂಗ್ ಮಾಡುತ್ತಿದ್ದ ಗೋಪಿನಾಥ್ ಅವರ ಪತ್ನಿ ಶ್ರೀಮತಿ ಶಾಂತರತ್ನ ಎಂಬ 74 ವರ್ಷದ ವೃದ್ಧೆಯಿಂದ ಚಿನ್ನದ ಸರ ಕಿತ್ತುಕೊಂಡು ಪಲ್ಸರ್ ಬೈಕ್‍ನಲ್ಲಿ ಪರಾರಿಯಾಗಿದ್ದರು ಎಂಬ ವಿಷಯ ಬೆಳಕಿಗೆ ಬಂದಿತು.
ಈ ಕುರಿತಂತೆ ಪ್ರಕರಣ ದಾಖಲಿಸಿಕೊಂಡಿದ್ದ ಜಯಪುರ ಠಾಣೆ ಪೊಲೀಸರು ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆ ನಡೆಸುತ್ತಿದ್ದರು. ಮೈಸೂರು ದಕ್ಷಿಣ ಗ್ರಾಮಾಂತರ ಠಾಣೆಯ ವ್ಯಾಪ್ತಿಯಲ್ಲಿ 2, ಜಯಪುರ ಪೊಲೀಸ್ ಠಾಣೆ ವ್ಯಾಪ್ತಿ ಯಲ್ಲಿ 2 ಹಾಗೂ ವರುಣಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 1 ಸೇರಿದಂತೆ ಈ ಇಬ್ಬರು ದುಷ್ಕರ್ಮಿಗಳು ಒಟ್ಟು 5 ಚಿನ್ನದ ಸರ ಅಪಹರಣದ ಪ್ರಕರಣದಲ್ಲಿ ಭಾಗಿ ಯಾಗಿದ್ದಾರೆ ಎಂಬುದು ವಿಚಾರಣೆಯಿಂದ ತಿಳಿದುಬಂದಿತು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸ ಲಾಯಿತು. ಮೈಸೂರು ದಕ್ಷಿಣ ಗ್ರಾಮಾಂತರ ಠಾಣೆ ಸಬ್‍ಇನ್‍ಸ್ಪೆಕ್ಟರ್ ವಿ.ಸಿ. ವನರಾಜು, ಕೆ.ಸಿ.ಮೋಹನ್‍ಕುಮಾರ್, ಪ್ರೊಬೆಷನರಿ ಸಬ್‍ಇನ್ಸ್‍ಸ್ಪೆಕ್ಟರ್ ಸದಾಶಿವ ತಿಪ್ಪಾರೆಡ್ಡಿ, ಸಿಬ್ಬಂದಿಗಳಾದ ಸಿ.ಜಗದೀಶ್, ಹೆಚ್.ಸಿ.ರವಿ, ಪ್ರಸನ್ನಕುಮಾರ್, ಪಿ.ವಿ. ಮೋಹನ್, ಎನ್.ಎ.ಅಶೋಕ್, ಎಸ್.ಗಿರೀಶ್, ಕೃಷ್ಣ, ಎನ್.ಎಸ್.ಗಿರೀಶ್, ನಂಜುಂಡಸ್ವಾಮಿ, ಸತೀಶ್, ತಿಮ್ಮಯ್ಯ, ಅರುಣೇಶ್, ರಾಘವೇಂದ್ರ, ಸದಾಶಿವ ಅವರು ಚಿನ್ನದ ಸರಗಳ್ಳರ ಪತ್ತೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.