ಮೈಸೂರು ಅರಮನೆಗೆ ಅರುಣ್ ಸಿಂಗ್ ಭೇಟಿ
ಮೈಸೂರು

ಮೈಸೂರು ಅರಮನೆಗೆ ಅರುಣ್ ಸಿಂಗ್ ಭೇಟಿ

September 1, 2021

ಮೈಸೂರು, ಆ.31(ಎಂಟಿವೈ)- ಪಕ್ಷ ಸಂಘಟನೆಯ ನಿಟ್ಟಿನಲ್ಲಿ ಮೈಸೂರು ಪ್ರವಾಸ ಕೈಗೊಂಡಿರುವ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಮಂಗಳವಾರ ಮೈಸೂರು ಅರಮನೆಗೆ ಭೇಟಿ ನೀಡಿ, ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ತ್ರಿಷಿಕಾ ಕುಮಾರಿ ಒಡೆಯರ್ ದಂಪತಿಯ ಕುಶಲೋಪರಿ ವಿಚಾರಿಸಿದರು.

ಚಾಮುಂಡಿಬೆಟ್ಟಕ್ಕೆ ತೆರಳಿ ನಾಡದೇವಿಯ ದರ್ಶನ ಪಡೆದ ಬಳಿಕ ಚಾಮರಾಜಪುರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳ ಸಭೆ ನಡೆಸಿದರು. ನಂತರ ಸಚಿವ ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪ ಸಿಂಹ ಹಾಗೂ ಪಕ್ಷದ ಮುಖಂಡರೊಂದಿಗೆ ಅರಮನೆಗೆ ತೆರಳಿದರು.

ಅರಮನೆಯ ಆವರಣದಲ್ಲಿರುವ ಒಡೆಯರ್ ಅವರ ಖಾಸಗಿ ನಿವಾಸದಲ್ಲಿ ಅರುಣ್ ಸಿಂಗ್ ಅವರನ್ನು ಯದುವೀರ್ ಕೃಷ್ಣದತ್ತ ಒಡೆಯರ್ ಆತ್ಮೀಯವಾಗಿ ಬರಮಾಡಿಕೊಂಡು ಕೆಲ ಕಾಲ ಚರ್ಚಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯ ದರ್ಶಿ ಸಿದ್ದರಾಜು, ನಗರಾಧ್ಯಕ್ಷ ಶ್ರೀವತ್ಸ, ಶಾಸಕರಾದ ನಿರಂಜನ್ ಕುಮಾರ್, ನಾಗೇಂದ್ರ, ಎನ್.ಮಹೇಶ್, ವಿಧಾನಪರಿಷತ್ ಸದಸ್ಯ ತುಳಸಿ ಮುನಿರಾಜುಗೌಡ ಇನ್ನಿತರರು ಉಪಸ್ಥಿತರಿದ್ದರು.

Translate »