ಪ್ರಧಾನಿ ಮೋದಿ ಆಶಯದಂತೆ  ಪ್ರತಿ ಮನೆಗೆ ಕೊಳಾಯಿ ನೀರು
News

ಪ್ರಧಾನಿ ಮೋದಿ ಆಶಯದಂತೆ ಪ್ರತಿ ಮನೆಗೆ ಕೊಳಾಯಿ ನೀರು

July 14, 2021

ಬೆಂಗಳೂರು, ಜು.13(ಕೆಎಂಶಿ)- ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನಂತೆ ಗ್ರಾಮೀಣ ಭಾಗದ ಎಲ್ಲ ಮನೆ ಗಳಿಗೂ ಕೊಳಾಯಿ ನೀರು ದೊರಕಿಸುವುದಾಗಿ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದಿಲ್ಲಿ ತಿಳಿಸಿದ್ದಾರೆ.

ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಇಂದು ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿ ಗಳೊಂದಿಗೆ ಸಭೆ ನಡೆಸಿ, ಜಲಜೀವನ್ ಮಿಷನ್ ಯೋಜನೆಯ ಪ್ರಗತಿ ಪರಿಶೀಲಿಸಿದ ನಂತರ ಸುದ್ದಿ ಗಾರರೊಂದಿಗೆ ಮಾತನಾಡಿದ ಅವರು, ಮೊದಲ ಹಂತ ದಲ್ಲಿ 25 ಲಕ್ಷ ಮನೆಗಳಿಗೆ ಈ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಜಲಾನಯನ ಪ್ರದೇಶಗಳಿಂದ ಸಮೀಪದ ಗ್ರಾಮ ಗಳಿಗೆ ನೇರವಾಗಿ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗುವುದು. ಕರ್ನಾಟಕದ ಜಲಜೀವನ್ ಮಿಷನ್ ಕಾರ್ಯಕ್ರಮವನ್ನು ನಿಗದಿತ ಅವಧಿಯೊಳಗೇ ಪೂರ್ಣ ಗೊಳಿಸುವಂತೆ ಕೇಂದ್ರ ಸಚಿವರು ಸಲಹೆ ನೀಡಿದ್ದಾರೆ.

ಜಲಜೀವನ್ ಮಿಷನ್ ಯೋಜನೆ ಮೂಲಕ 2024ರ ವೇಳೆಗೆ ದೇಶದ 18.93 ಕೋಟಿ ಗ್ರಾಮೀಣ ಮನೆಗಳಲ್ಲಿ 15.70 ಕೋಟಿ ಮನೆಗಳಿಗೆ ಕ್ರಿಯಾತ್ಮಕ ನಳ ಸಂಪರ್ಕ ನೀಡುವ ಗುರಿ ಹೊಂದಲಾಗಿದೆ. ಈ ಯೋಜನೆಯಡಿ ಕೇವಲ ಸೌಲಭ್ಯ ಕಲ್ಪಿಸುವುದು ಮಾತ್ರವಲ್ಲ, ನಿರಂತರವಾಗಿ ಕುಡಿಯುವ ನೀರು ಒದಗಿಸುವುದು ಸರ್ಕಾರದ ಆದ್ಯತೆ. ಅಂತೆಯೇ ರಾಜ್ಯದಲ್ಲಿ ಆದ್ಯತಾ ಜಿಲ್ಲೆಗಳಾದ ರಾಯ ಚೂರು ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಕ್ರಿಯಾತ್ಮಕ ನಳ ಸಂಪರ್ಕಗಳಿಗೆ ಆದ್ಯತೆ ಎಂದರು. ನಳ ಸಂಪರ್ಕ ನೀಡುವುದರೊಂದಿಗೆ ಪೂರೈಸುವ ನೀರಿನ ಗುಣಮಟ್ಟ ವನ್ನೂ ಖಾತರಿಪಡಿಸುವಂತೆ ಸಚಿವರು ಸಲಹೆ ನೀಡಿದ್ದಾರೆ.

ರಾಜ್ಯದ 91.19 ಲಕ್ಷ ಗ್ರಾಮೀಣ ಕುಟುಂಬಗಳಿಗೆ ತಲಾ 55 ಎಲ್‍ಪಿಸಿಡಿ ಶುದ್ಧ ನೀರು ಒದಗಿಸುವ ಗುರಿ ಇದೆ. ಈ ಯೋಜನೆಯಡಿ 2021-22ನೇ ಆರ್ಥಿಕ ವರ್ಷದಲ್ಲಿ 25.17 ಲಕ್ಷ ಮನೆಗಳಿಗೆ ಕ್ರಿಯಾತ್ಮಕ ನಳ ಸಂಪರ್ಕ ಒದಗಿಸಲು ಉದ್ದೇಶಿಸಲಾಗಿದೆ. 2022-23ರಲ್ಲಿ 27.15 ಲಕ್ಷ ಹಾಗೂ 2023 ಡಿಸೆಂಬರ್ ಅಂತ್ಯದ ವೇಳೆಗೆ 10.72 ಲಕ್ಷ ಮನೆಗಳಿಗೆ ಕ್ರಿಯಾತ್ಮಕ ನಳ ಸಂಪರ್ಕ ಒದಗಿಸುವ ಗುರಿ ಹೊಂದಲಾಗಿದೆ ಎಂದು ವಿವರಿಸಿದರು. ಆದ್ಯತಾ ಜಿಲ್ಲೆಗಳಾದ ರಾಯಚೂರು ಜಿಲ್ಲೆಗೆ 2000 ಕೋಟಿ ವೆಚ್ಚದಲ್ಲಿ ಬಹುಗ್ರಾಮ ಯೋಜನೆ ರೂಪಿಸಲಾಗಿದ್ದು ಸಚಿವ ಸಂಪುಟ ಅನುಮೋದನೆ ನೀಡಲಾಗಿದೆ.

Translate »