ಲಾಕ್‍ಡೌನ್: ಬ್ಯೂಟಿಷಿಯನ್ಸ್‍ಗೆ ವಿಶೇಷ ಪ್ಯಾಕೇಜ್  ಮೂಲಕ ತಲಾ 5 ಸಾವಿರ ರೂ. ಪರಿಹಾರ ಕಲ್ಪಿಸಿ
ಮೈಸೂರು

ಲಾಕ್‍ಡೌನ್: ಬ್ಯೂಟಿಷಿಯನ್ಸ್‍ಗೆ ವಿಶೇಷ ಪ್ಯಾಕೇಜ್ ಮೂಲಕ ತಲಾ 5 ಸಾವಿರ ರೂ. ಪರಿಹಾರ ಕಲ್ಪಿಸಿ

July 14, 2021

ಮೈಸೂರು,ಜು.13(ಪಿಎಂ)- ಸೌಂದರ್ಯ ವರ್ಧಕ ವೃತ್ತಿದಾರರನ್ನು `ಸೌಂದರ್ಯ ವರ್ಧಕರು’ ಎಂದು ಪ್ರತ್ಯೇಕ ವರ್ಗವಾಗಿ ಪರಿಗಣಿಸಿ ಸರ್ಕಾರದಿಂದ ಉತ್ತೇಜನ ನೀಡ ಬೇಕು. ಜೊತೆಗೆ ಲಾಕ್‍ಡೌನ್‍ನಿಂದ ವಹಿ ವಾಟು ನಡೆಯದೇ ಬ್ಯೂಟಿಷಿಯನ್ಸ್ (ಸೌಂದರ್ಯ ವರ್ಧಕರು) ಸಂಕಷ್ಟದಲ್ಲಿದ್ದು, ಅವರಿಗೆ ವಿಶೇಷ ಪ್ಯಾಕೇಜ್ ಮೂಲಕ ಕನಿಷ್ಠ ತಲಾ 5 ಸಾವಿರ ರೂ. ಪರಿಹಾರ ನೀಡಬೇಕೆಂದು ಮೈಸೂರು ಬ್ಯೂಟಿಷಿ ಯನ್ಸ್ ವೆಲ್‍ಫೇರ್ ಅಸೋಸಿಯೇಷನ್ ಅಧ್ಯಕ್ಷೆ ಕೆ.ವೇದಾವತಿ ಎನ್.ರೈ ಆಗ್ರಹಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಡೀ ರಾಜ್ಯದ ಬ್ಯೂಟಿಷಿಯನ್‍ಗಳನ್ನು `ಸೌಂದರ್ಯ ವರ್ಧಕರು (ಬ್ಯೂಟಿಷಿಯನ್ಸ್)’ ಎಂಬ ಶೀರ್ಷಿಕೆಯಡಿ ಪ್ರತ್ಯೇಕ ವರ್ಗವಾಗಿ ಪರಿ ಗಣಿಸಿ, ಸರ್ಕಾರ ಈ ವರ್ಗಕ್ಕೆ ಅಗತ್ಯ ಉತ್ತೇ ಜನ ನೀಡಬೇಕು. ಜೊತೆಗೆ ಶೀಘ್ರವೇ ಬ್ಯೂಟಿಷಿಯನ್‍ಗಳಿಗೆ ಪರಿಹಾರ ನೀಡಲು ಕ್ರಮ ವಹಿಸಬೇಕು. ಈ ಸಂಬಂಧ ಅಸೋಸಿ ಯೇಷನ್ ವತಿಯಿಂದ ಜು.6ರಂದು ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಲಾಗಿದೆ. ಪರಿಶೀಲಿಸಿ ಸೂಕ್ತ ಕ್ರಮ ವಹಿಸುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ ಎಂದು ತಿಳಿಸಿದರು.

ಬ್ಯೂಟಿಷಿಯನ್ ಮಹಿಳೆಯರ ವೃತ್ತಿ ಯಾಗಿದ್ದು, ವಿವಿಧ ಜಾತಿ-ಧರ್ಮದವರು ಈ ವಹಿವಾಟು ನಡೆಸುತ್ತಿದ್ದಾರೆ. ಕಳೆದ ವರ್ಷದ ಲಾಕ್‍ಡೌನ್‍ನಲ್ಲೂ ಸರ್ಕಾರದಿಂದ ನಮಗೆ ಯಾವುದೇ ಪರಿಹಾರ ನೀಡಲಿಲ್ಲ. ಈ ವರ್ಷವೂ ಪರಿಹಾರ ಇಲ್ಲದೆ, ಸಾಕಷ್ಟು ಸಂಕಷ್ಟಕ್ಕೆ ಸಿಲುಕಿದ್ದೇವೆ. ನಮ್ಮಲ್ಲಿ ಬಹು ತೇಕರು ಕುಟುಂಬ ನಿರ್ವಹಣೆ ಜವಾಬ್ದಾರಿ ಹೊಂದಿದ್ದಾರೆ. ಅಲ್ಲದೆ, ಸಾಕಷ್ಟು ಮಂದಿ ವಹಿವಾಟಿಗೆ ಸಂಬಂಧಿಸಿದ ಸಾಲದ ಕಂತು ಪಾವತಿ ಮಾಡಬೇಕಿದೆ ಎಂದರು.

ಕಾರ್ಯದರ್ಶಿ ಎಂ.ಎ.ಸಬೀನಾ ಮಾತ ನಾಡಿ, ಲಾಕ್‍ಡೌನ್‍ನಿಂದ ವಹಿವಾಟು ಇಲ್ಲದೆ, ನಾವು ಸಂಕಷ್ಟಕ್ಕೆ ಸಿಲುಕಿದ್ದೇವೆ. ಆದರೂ ನಮ್ಮ ನೆರವಿಗೆ ಸರ್ಕಾರ ಧಾವಿ ಸಿಲ್ಲ. ಸರ್ಕಾರದ ಸಹಾಯ ಇಲ್ಲವಾದರೆ ನಾವು ಮತ್ತಷ್ಟು ತೊಂದರೆಗೀಡಾಗಲಿದ್ದೇವೆ. ಲಾಕ್‍ಡೌನ್‍ನಿಂದ ನಮ್ಮ ಮಳಿಗೆಗಳು ಮುಚ್ಚಿದ್ದ ಕಾರಣ ನಮ್ಮ ಸಿಬ್ಬಂದಿ ಮನೆ ಕೆಲಸ ಸೇರಿದಂತೆ ಇನ್ನಿತರ ವೃತ್ತಿಯತ್ತ ಮುಖ ಮಾಡಿದ್ದಾರೆ. ನಮ್ಮ ವೃತ್ತಿಬಾಂಧವರಲ್ಲಿಯೂ ಹಲವರು ಅನ್ಯ ವೃತ್ತಿ ಮೂಲಕ ಜೀವನ ಸಾಗಿಸಲು ಪ್ರಯತ್ನಿಸಿ ವಿಫಲವಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ನೆರೆ ಹಾವಳಿ ಸೇರಿದಂತೆ ಇನ್ನಿತರ ಸಂದರ್ಭಗಳಲ್ಲಿ ನಮ್ಮ ಅಸೋಸಿಯೇಷನ್ ವತಿಯಿಂದ ಸಾಕಷ್ಟು ಸೇವಾ ಕಾರ್ಯ ಮಾಡಿದ್ದೇವೆ. ಆದರೆ ಲಾಕ್‍ಡೌನ್‍ನಿಂದ ಸರ್ಕಾರದ ನೆರವಿಗಾಗಿ ನೋಡುವಂತಾ ಗಿದೆ. ನಮ್ಮಲ್ಲಿ ಸಾಕಷ್ಟು ಮಂದಿ ತಮ್ಮ ಮಕ್ಕಳ ಶಾಲಾ ಶುಲ್ಕ ಪಾವತಿಸಲಾಗದ ಪರಿಸ್ಥಿತಿ ಯಲ್ಲಿದ್ದಾರೆ. ಈ ನಡುವೆ ಮಳಿಗೆ ಮಾಲೀ ಕರು ಬಾಡಿಗೆ ಪಾವತಿಸಲು ಒತ್ತಡ ಹಾಕು ತ್ತಿದ್ದಾರೆ. ಜು.5ರಿಂದ ಮಳಿಗೆ ತೆರೆದು ವಹಿ ವಾಟು ನಡೆಸಲು ಅವಕಾಶ ಕಲ್ಪಿಸಿದ್ದರೂ ಸುಧಾರಿಸಿಕೊಳ್ಳಲು ಕನಿಷ್ಠ 6 ತಿಂಗಳಾ ದರೂ ಬೇಕು. ಇಂತಹ ಸಂಕಷ್ಟ ಇದ್ದರೂ ಸರ್ಕಾರ ನೆರವು ನೀಡಿಲ್ಲ. ಕೊನೆಗೆ ಮುಖ್ಯ ಮಂತ್ರಿಗಳನ್ನೇ ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ ಎಂದು ತಿಳಿಸಿದರು. ಅಸೋಸಿ ಯೇಷನ್ ಉಪಾಧ್ಯಕ್ಷೆ ನೂತನ್‍ನಂದಾ, ಜಂಟಿ ಕಾರ್ಯದರ್ಶಿ ಎನ್.ಮಂಜುಳಾ, ಖಜಾಂಚಿ ಪ್ರತಿಭಾ ಶೆಟ್ಟಿ, ಜಂಟಿ ಖಜಾಂಚಿ ಸಪ್ನ ಸುದ್ದಿಗೋಷ್ಠಿಯಲ್ಲಿದ್ದರು.

Translate »