ಪಿಂಚಣಿ ನವೀಕರಣಕ್ಕೆ ತಾಲೂಕು ಕಚೇರಿಗೆ ಮುಗಿಬಿದ್ದ ಜನ
ಮೈಸೂರು

ಪಿಂಚಣಿ ನವೀಕರಣಕ್ಕೆ ತಾಲೂಕು ಕಚೇರಿಗೆ ಮುಗಿಬಿದ್ದ ಜನ

July 14, 2021

ಮೈಸೂರು, ಜು.13(ಎಂಟಿವೈ)- ಸಾಮಾಜಿಕ ಭದ್ರತೆ ಯೋಜನೆಯಲ್ಲಿ ನೀಡಲಾಗುತ್ತಿದ್ದ ವಿವಿಧ ಪಿಂಚಣಿ ಸೌಲಭ್ಯಗಳು ದುರುಪಯೋಗ ಆಗುತ್ತಿ ರುವುದನ್ನು ಕಂಡುಕೊಂಡ ಸರ್ಕಾರ, ಸೌಲಭ್ಯ ದುರ್ಬಳಕೆ ತಡೆ ನಿಟ್ಟಿನಲ್ಲಿ ಆಧಾರ್ ಕಾರ್ಡ್ ಸಂಖ್ಯೆ ನೋಂದಣಿ ಮಾಡಿಸಿ, ಕೆಲವು ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಿ ಪಿಂಚಣಿ ಖಾತೆ ನವೀಕರಿಸಿಕೊಳ್ಳುವಂತೆ ಸೂಚನೆ ಹೊರಡಿ ಸಿದೆ. ಈ ಹಿನ್ನೆಲೆಯಲ್ಲಿ ನೂರಾರು ಪಿಂಚಣಿ ದಾರರು ಇಂದು ಮೈಸೂರಿನ ನಜರ್‍ಬಾದ್‍ನಲ್ಲಿ ರುವ ಮಿನಿ ವಿಧಾನಸೌಧ ಕಟ್ಟಡದಲ್ಲಿರುವ ತಾಲೂಕು ಕಚೇರಿಗೆ ಮುಗಿಬಿದ್ದಿದ್ದರು. ಅಧಿಕೃತ ದಾಖಲೆ ಗಳನ್ನು ಸಲ್ಲಿಸಿ ನವೀಕರಿಸಿಕೊಳ್ಳದ ಕೆಲವು ಪಿಂಚಣಿ ದಾರರ ಖಾತೆ ಸ್ಥಗಿತಗೊಂಡಿರುವುದನ್ನು ತಿಳಿದು ಆತಂಕಿತರಾದ ನೂರಾರು ಮಂದಿ ಸಾಮಾಜಿಕ ಭದ್ರತಾ ಯೋಜನೆಯ ಪಿಂಚಣಿ ಫಲಾನುಭವಿ ಗಳು, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‍ಬುಕ್ ನಕಲು ಪ್ರತಿ ಹಿಡಿದುಕೊಂಡು ತಾಲೂಕು ಕಚೇರಿ ಎದುರು ಸಾಲುಗಟ್ಟಿದ್ದಾರೆ.

ಮೈಸೂರು ಸೇರಿದಂತೆ ರಾಜ್ಯಾದ್ಯಂತ ಸಾಮಾ ಜಿಕ ಭದ್ರತಾ ಯೋಜನೆಯಡಿ ಹಲವು ಅನರ್ಹರೂ ಪಿಂಚಣಿ ಪಡೆಯುತ್ತಿದ್ದಾರೆ. ಇದು ಸರ್ಕಾರಕ್ಕೆ ಆರ್ಥಿಕ ವಾಗಿ ಹೊರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪಿಂಚಣಿ ದಾರರು ನವೀಕರಣ ವೇಳೆ ಆಧಾರ್ ಸಂಖ್ಯೆ ನಮೂದಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಅಲ್ಲದೆ ಹೆಸರು, ಆಧಾರ್ ಸಂಖ್ಯೆ, ವಿಳಾಸ ಹೊಂದಾ ಣಿಕೆಯಾಗದವರ ಪಿಂಚಣಿ ಸೌಲಭ್ಯವನ್ನೂ ತಾತ್ಕಾಲಿಕ ವಾಗಿ ಸ್ಥಗಿತಗೊಳಿಸಲಾಗಿದೆ. ಅಗತ್ಯ ದಾಖಲೆ ಸಲ್ಲಿಸಿ ನವೀಕರಿಸಿಕೊಳ್ಳಲು ಕಾಲಾವಕಾಶ ನೀಡಲಾಗಿದೆ. ಮೃತಪಟ್ಟವರ ಹೆಸರಲ್ಲಿ ಪಿಂಚಣಿ ಸೌಲಭ್ಯ ದುರುಪ ಯೋಗ ಆಗುತ್ತಿರುವುದಕ್ಕೆ ಕಡಿವಾಣ ಹಾಕಲೂ ಕ್ರಮ ಕೈಗೊಳ್ಳಲಾಗಿದೆ.

30 ಕಾರಣಗಳಿಂದ ಪಿಂಚಣಿ ಸ್ಥಗಿತ: ಸಾಮಾಜಿಕ ಭದ್ರತಾ ಯೋಜನೆಗಳಲ್ಲಿ ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ ವೇತನ, ವಿಧವಾ ವೇತನ, ವಿಕಲಚೇತನರ ಪಿಂಚಣಿ, ಮೈತ್ರಿ ಪಿಂಚಣಿ, ಮನಸ್ವಿನಿ ಮತ್ತಿತರೆ ಪಿಂಚಣಿ ಸೌಲಭ್ಯಗಳು ಸೇರಿವೆ. ಮೈಸೂರು ನಗರ ಹಾಗೂ ತಾಲೂಕಲ್ಲಿ 1.25 ಲಕ್ಷ ಮಂದಿ, ಜಿಲ್ಲಾದ್ಯಂತ 4 ಲಕ್ಷ ಮಂದಿಗೆ ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ಸೌಲಭ್ಯ ದೊರೆಯುತ್ತಿದೆ. ಎಲ್ಲಾ ಸರಿಯಾದ ದಾಖಲೆಗಳನ್ನು ಸಲ್ಲಿಸಿದ ಅರ್ಹ ಫಲಾನುಭವಿಗೆ ಮಾತ್ರ ಪಿಂಚಣಿ ಸೌಲಭ್ಯ ಮುಂದುವರೆಸಲಾಗಿದೆ. ಆದರೆ, ದಾಖಲೆಗಳಲ್ಲಿ ನ್ಯೂನತೆ, ಬ್ಯಾಂಕ್ ಖಾತೆಯಲ್ಲಿ 1 ಲಕ್ಷ ರೂ.ಗಿಂತ ಹೆಚ್ಚು ವಹಿವಾಟು ನಡೆಸಿದ್ದರೆ, ಎಫ್‍ಡಿ ಇರಿಸಿದ್ದರೆ, ವಿಳಾಸ ಬದಲಾಯಿಸಿದ್ದರೆ, 3 ತಿಂಗಳಿಂದ ಬ್ಯಾಂಕ್ ಖಾತೆಯಲ್ಲಿ ಹಣ ಪಡೆಯದಿರುವುದು ಸೇರಿದಂತೆ 30 ಕಾರಣಗಳಡಿ ಜಿಲ್ಲೆಯಲ್ಲಿ 1 ಲಕ್ಷಕ್ಕೂ ಹೆಚ್ಚು ಮಂದಿ ಪಿಂಚಣಿದಾರರಿಗೆ ಕಳೆದ 6-7 ತಿಂಗಳಿಂದ ಪಿಂಚಣಿ ಸ್ಥಗಿತಗೊಳಿಸಲಾಗಿದೆ. ಅಲ್ಲದೆ ಪಿಂಚಣಿ ಮುಂದುವರೆಸ ಬೇಕಾದರೆ ಆಧಾರ್ ಕಾರ್ಡ್, ವಿಳಾಸ ದೃಢೀಕರಣ, ಲೈಫ್ ಸರ್ಟಿಫಿಕೇಟ್ ಮೊದಲಾದ ದಾಖಲೆಗಳ ಜತೆ, ಫಲಾನುಭವಿಯೇ ಸಹಿ ಮಾಡಿದ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅನ್‍ಲಾಕ್ ನಿಯಮ ಜಾರಿಗೊಂಡ ನಂತರ ಜು.6ರಿಂದ ಮೈಸೂರಿನ ನಜರ್‍ಬಾದ್‍ನ ಮಿನಿ ವಿಧಾನಸೌಧದಲ್ಲಿರುವ ತಾಲೂಕು ಕಚೇರಿಗೆ ಪಿಂಚಣಿ ಸೌಲಭ್ಯ ನವೀಕರಿಸಿಕೊಳ್ಳಲು ಪ್ರತಿದಿನ ನೂರಾರು ಮಂದಿ ದೌಡಾಯಿಸುತ್ತಿದ್ದಾರೆ. ಮೈಸೂರು ತಾಲೂಕಲ್ಲಿ 25 ಸಾವಿರಕ್ಕೂ ಹೆಚ್ಚು ಮಂದಿಗೆ ಸಾಮಾಜಿಕ ಭದ್ರತಾ ಯೋಜನೆಯ ಪಿಂಚಣಿ ಸೌಲಭ್ಯ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.

ಬ್ಯಾಂಕ್ ಖಾತೆಗೆ ಜಮೆ: ಹಿಂದೆ ಪಿಂಚಣಿ, ಮಾಸಾಶನ ಮೊದಲಾದ ಸರ್ಕಾರಿ ಆರ್ಥಿಕ ನೆರವನ್ನು ಫಲಾನುಭವಿಗಳಿಗೆ ಅಂಚೆ ಮೂಲಕ ಕಳುಹಿಸಲಾಗುತ್ತಿತ್ತು. ಇದರಿಂದ ಫಲಾನುಭವಿಗೆ ಪೂರ್ಣ ಪ್ರಮಾಣದ ಹಣ ಕೈ ಸೇರುತ್ತಿರಲಿಲ್ಲ. ಅಲ್ಲದೆ ಮಧ್ಯವರ್ತಿಗಳು ಅಥವಾ ಕುಟುಂಬ ಸದಸ್ಯರು ಹಣ ಪಡೆದು ವಂಚಿಸುತ್ತಿದ್ದರು. ಹಲವು ಬಾರಿ ಅಂಚೆ ಸಿಬ್ಬಂದಿಗಳೂ ಪಿಂಚಣಿ ಹಣ ತಲುಪಿಸದೇ ಇರುವ ಬಗ್ಗೆ ದೂರು ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಕಳೆದ 5 ವರ್ಷಗಳ ಹಿಂದೆಯೇ ಪಿಂಚಣಿ ಹಣ ದುರುಪಯೋಗ ತಡೆಗೆ ಫಲಾನುಭವಿಗಳ ಹೆಸರಲ್ಲಿ ಬ್ಯಾಂಕ್ ಖಾತೆ ತೆರೆದು ಖಾತೆ ಸಂಖ್ಯೆ ವಿವರ ಸಲ್ಲಿಸುವಂತೆ ಇಲಾಖೆ ಸೂಚಿಸಿತ್ತು. ಕೆಲವರು ಮಾತ್ರವೇ ಬ್ಯಾಂಕ್ ಖಾತೆ ಸಂಖ್ಯೆ ಮಾಹಿತಿ ಸಲ್ಲಿಸಿ ನೇರ ತಮ್ಮ ಖಾತೆಗೆ ಪಿಂಚಣಿ ಹಣ ಬರುವಂತೆ ಮಾಡಿಕೊಂಡಿದ್ದರು. ಹಲವರು ಬ್ಯಾಂಕ್ ಖಾತೆ ತೆರೆಯದ ಕಾರಣ ಅವರಿಗೆ ಅಂಚೆ ಮೂಲಕವೇ ಪಿಂಚಣಿ ಹಣ ತಲುಪಿಸಲಾಗುತ್ತಿತ್ತು. ಈಗ ಬ್ಯಾಂಕ್ ಖಾತೆ ಸಂಖ್ಯೆ-ಆಧಾರ್ ಸಂಖ್ಯೆಯನ್ನು ಪಿಂಚಣಿ ಖಾತೆಗೆ ಕಡ್ಡಾಯವಾಗಿ ಲಿಂಕ್ ಮಾಡುವಂತೆ ಸೂಚಿಸಿರುವುದರಿಂದ ಹಲವರಿಗೆ ತೊಂದರೆಯಾಗಿದೆ. ಇದರಿಂದ ಕಳೆದ 6-7 ತಿಂಗಳಿಂದ ಪಿಂಚಣಿ ಮೊತ್ತ ಕೈಸೇರದಂತಾಗಿದೆ. ಈ ಮಧ್ಯೆ, ಕೆಲವು ಬ್ಯಾಂಕುಗಳು ವಿಲೀನಗೊಂಡಿರುವುದರಿಂದ ಐಎಫ್‍ಸಿ ಕೋಡ್ ಬದಲಾಗಿರುವುದು ಸಹ ಪಿಂಚಣಿ ತಾತ್ಕಾಲಿಕ ಸ್ಥಗಿತಕ್ಕೆ ಕಾರಣವಾಗಿದೆ. ಮೈಸೂರು ಜಿಲ್ಲೆಯಲ್ಲಿ ಹಿಂದೆ ಖಜಾನೆ-1ರಲ್ಲಿ ಅಂಚೆ ಮೂಲಕ ಪಿಂಚಣಿ ಹಣ ಒದಗಿಸಲಾಗುತ್ತಿತ್ತು. ಸದ್ಯ, ಖಜಾನೆ-2ರಲ್ಲಿ ಕೆ-2 ತಂತ್ರಾಂಶ ಬಳಸಿ ಡಿಜಿಟಲೈಸ್ ಮಾಡಿರುವುದರಿಂದ ಈ ಖಜಾನೆಯಿಂದ ಪಿಂಚಣಿದಾರರ ಬ್ಯಾಂಕ್ ಖಾತೆಗೆ ನೇರವಾಗಿ ಪಿಂಚಣಿ ವರ್ಗಾವಣೆಯಾಗುತ್ತಿದೆ.

ಮತ್ತೆ ಅರ್ಜಿ ಸಲ್ಲಿಸಿ: ಪಿಂಚಣಿ ಖಾತೆ ಮತ್ತೆ ಚಾಲನೆಗೊಳಿಸಿ ಹಣ ಪಡೆಯಲು ಹೊಸದಾಗಿ ಅರ್ಜಿ ಸಲ್ಲಿಸಬೇಕಿದೆ. ಆಧಾರ್, ಬ್ಯಾಂಕ್ ಖಾತೆ ಸಂಖ್ಯೆ ಒಳಗೊಂಡ ದಾಖಲೆ ಪತ್ರಗಳನ್ನು ನೀಡಲು ಬರುತ್ತಿದ್ದ ನೂರಾರು ಮಂದಿ ತಾಲೂಕು ಕಚೇರಿಗೆ ಮುಗಿ ಬೀಳುತ್ತಿದ್ದಾರೆ. ಕೋವಿಡ್-19 ಹಿನ್ನೆಲೆಯಲ್ಲಿ ಸಾಮಾಜಿಕ ಅಂತರವಿಲ್ಲದೆ ಗುಂಪುಗೂಡುತ್ತಿದ್ದಾರೆ. ಈ ಬಗ್ಗೆ ದೂರು ಕೇಳಿಬಂದ ಬಳಿಕ ತಾಲೂಕು ಕಚೇರಿಯಲ್ಲಿ ಅರ್ಜಿದಾರರಿಗೆ ಆಸನ ವ್ಯವಸ್ಥೆ, ಸೇರಿದಂತೆ ಕೆಲವು ಬದಲಾವಣೆ ಮಾಡಲಾಗಿದೆ. ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆ ಶಿರಾಸ್ತೆದಾರ್ ನಿಂಗಪ್ಪ, ಗ್ರೇಡ್-2 ತಹಶಿಲ್ದಾರ್ ಕೆ.ಆರ್.ರತ್ನಾಂಬಿಕ ಪಿಂಚಣಿದಾರರ ಬಳಿಯೇ ತೆರಳಿ ಅರ್ಜಿ ಸ್ವೀಕರಿಸುತ್ತಿದ್ದಾರೆ.

ಅನ್‍ಲಾಕ್ ಬಳಿಕ: ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆ ಶಿರಾಸ್ತೇದಾರ್ ನಿಂಗಪ್ಪ ಮಾತನಾಡಿ, ಲಾಕ್‍ಡೌನ್ ವೇಳೆ ಅರ್ಜಿಗಳ ಸಲ್ಲಿಕೆಗೆ ಯಾರೊಬ್ಬರೂ ಬರುತ್ತಿರಲಿಲ್ಲ. ಜು.5ರಂದು ಅನ್‍ಲಾಕ್ ಆದ ನಂತರ ನಿತ್ಯ 100ಕ್ಕೂ ಹೆಚ್ಚು ಮಂದಿ ಪಿಂಚಣಿ ಖಾತೆ ನವೀಕರಿಸಲು ಅರ್ಜಿ ಸಲ್ಲಿಸಲು ಬರುತ್ತಿದ್ದಾರೆ ಎಂದರು.

Translate »