ಕೊರೊನಾ ಸೋಂಕು ನಿಯಂತ್ರಣದಲ್ಲಿ ಆಶಾ, ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಮಹತ್ತರ
ಮೈಸೂರು

ಕೊರೊನಾ ಸೋಂಕು ನಿಯಂತ್ರಣದಲ್ಲಿ ಆಶಾ, ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಮಹತ್ತರ

September 30, 2020

ಮೈಸೂರು, ಸೆ.29(ಪಿಎಂ)- ಇಡೀ ಪ್ರಪಂಚವನ್ನೇ ಕಾಡುತ್ತಿರುವ ಕೊರೊನಾ ಸೋಂಕು ತೊಡೆಯುವಲ್ಲಿ ವೈದ್ಯಕೀಯ ಕ್ಷೇತ್ರದೊಂದಿಗೆ ಆಶಾ ಹಾಗೂ ಅಂಗನ ವಾಡಿ ಕಾರ್ಯಕರ್ತೆಯರು ಮಹತ್ತರ ಪಾತ್ರ ನಿರ್ವಹಿಸುತ್ತಿದ್ದಾರೆ ಎಂದು ಮಾಜಿ ಸಚಿವರೂ ಆದ ಶಾಸಕ ಜಿ.ಟಿ.ದೇವೇಗೌಡ ಹೇಳಿದರು.

ಮೈಸೂರಿನ ವಿಜಯನಗರದ 2ನೇ ಹಂತ ದಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿ ವೃದ್ಧಿ ಇಲಾಖೆಯ ಸ್ತ್ರೀಶಕ್ತಿ ಭವನದಲ್ಲಿ ಸಮರ್ಥನಂ ಅಂಗವಿಕಲರ ಸಂಸ್ಥೆ ವತಿ ಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕೊರೊನಾ ನಿಯಂತ್ರಣ ದಲ್ಲಿ ಮುಂಚೂಣಿಯಲ್ಲಿ ದುಡಿಯುತ್ತಿರುವ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆ ಯರಿಗೆ ವೈದ್ಯಕೀಯ ರಕ್ಷಣಾ ಸಲಕರಣೆ ಕಿಟ್ ಗಳನ್ನು ವಿತರಿಸಿ ಅವರು ಮಾತನಾಡಿದರು.

ಕೊರೊನಾಗೆ ಚಿಕಿತ್ಸೆ ಕಂಡುಕೊಳ್ಳಲಾಗದ ಈ ಸಂದರ್ಭದಲ್ಲಿ ಸೋಂಕಿತರಿಗೆ ಧೈರ್ಯವೇ ಮದ್ದು. ವೈದ್ಯರು ಸೋಂಕಿಗೆ ಅನುಗುಣ ವಾಗಿ ಚಿಕಿತ್ಸೆ ನೀಡಿದರೆ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಸೋಂಕು ಬಾರದಂತೆ ಜಾಗೃತಿ ಮೂಡಿಸುವ ಜೊತೆಗೆ ಸೋಂಕಿತರಿಗೆ ಧೈರ್ಯ ತುಂಬುವ ಮಹ ತ್ತರ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ ಇಂದು ಆಶಾ ಕಾರ್ಯಕರ್ತೆಯರೇ ದೇವರಾಗಿದ್ದಾರೆ ಎಂದು ಪ್ರಶಂಸಿಸಿದರು.

ರಾಜ್ಯದ ಸಹಕಾರ ಸಂಸ್ಥೆಯಿಂದಲೇ ಆಶಾ ಕಾರ್ಯಕರ್ತೆಯರಿಗೆ ತಲಾ 3 ಸಾವಿರ ರೂ. ಪ್ರೋತ್ಸಾಹ ಧನ ಕೊಡಬೇಕೆಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಸಹ ಕಾರ ಸಚಿವರಲ್ಲಿ ಮನವಿ ಮಾಡಿದ್ದೆ. ಅದ ರಂತೆ ಸಹಕಾರ ಸಚಿವರು ತೀರ್ಮಾನ ಕೈಗೊಂಡು ಮೈಸೂರು ಸೇರಿದಂತೆ ರಾಜ್ಯದ ಹಲವು ಕಡೆಗಳಿಗೆ ಖುದ್ದಾಗಿ ತೆರಳಿ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ನೀಡಿ, ಆತ್ಮಸ್ಥೈರ್ಯ ತುಂಬುವ ಪ್ರಾಮಾ ಣಿಕ ಕೆಲಸ ಮಾಡಿದ್ದಾರೆ ಎಂದರು.

ಕೊರೊನಾ ನಿಯಂತ್ರಿಸಲು ಸೆಣಸುತ್ತಿರುವ ನಿಮಗೆ (ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು) ಎಷ್ಟು ಪ್ರಶಂಸೆ ಸಲ್ಲಿಸಿ ದರೂ ಸಾಲದು. ಮಹತ್ತರ ಕೆಲಸ ನಿರ್ವಹಿ ಸುತ್ತಿರುವ ತಮಗೆ ತಾಯಿ ಚಾಮುಂಡೇ ಶ್ವರಿ ಆಶೀರ್ವಾದ ಸದಾ ಇರಲಿ. ನೀವು ಹಾಗೂ ನಿಮ್ಮ ಕುಟುಂಬಕ್ಕೆ ಆರೋಗ್ಯ, ಆಯಸ್ಸು, ಸುಖ, ಸಂತಸ ಲಭಿಸಲೆಂದು ದೇವರಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಕೆ.ಪದ್ಮ ಮಾತ ನಾಡಿ, ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಂಗವಾಗಿ ನಡೆದ ಜಿಲ್ಲಾ ಮಟ್ಟದ ಪೋಷಣಾ ಮಾಸಾಚರಣೆ ನಾಳೆ ಕೊನೆ ಗೊಳ್ಳಲಿದೆ. ಮಕ್ಕಳ ಅಪೌಷ್ಟಿಕತೆ ನಿವಾರಿ ಸಲು ಜಾಗೃತಿ ಮೂಡಿಸುವುದರ ಜೊತೆಗೆ ಪೌಷ್ಟಿಕಾಂಶಕ್ಕೆ ಪೂರಕವಾಗಿ ಕೈತೋಟಕ್ಕೆ ಉತ್ತೇಜನ ನೀಡುವುದು ಈ ಕಾರ್ಯ ಕ್ರಮದ ಭಾಗವಾಗಿದೆ ಎಂದರು.

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ಹಾಗೂ ಮೈಸೂರು ನಗರದ 36 ಆಶಾ ಕಾರ್ಯಕರ್ತೆಯರಿಗೆ ಸಮವಸ್ತ್ರದ ಸೀರೆ, 200 ಎಂಎಲ್ ಸ್ಯಾನಿಟೈಸರ್, ಮೂರು ರಿಜಿಸ್ಟಾರ್ ನೋಟ್ ಪುಸ್ತಕಗಳು, ಒಂದು ಎನ್-95 ಮಾಸ್ಕ್ ಒಳಗೊಂಡ ಕಿಟ್ ಗಳನ್ನು ವಿತರಣೆ ಮಾಡಲಾಯಿತು.

ಅದೇ ರೀತಿ 20 ಅಂಗನವಾಡಿ ಕಾರ್ಯ ಕರ್ತೆಯರಿಗೆ 200 ಎಂಎಲ್ ಸ್ಯಾನಿಟೈಸರ್, 50 ಕೈಗವಸು, 10 ಮಾಸ್ಕ್ ಒಳಗೊಂಡ ಕಿಟ್ ಗಳನ್ನು ವಿತರಣೆ ಮಾಡಲಾಯಿತು. ಅಲ್ಲದೆ, ಒಟ್ಟು 214 ಅಂಗನವಾಡಿ ಕಾರ್ಯಕರ್ತೆ ಯರಿಗೆ ಈ ರೀತಿಯ ಕಿಟ್ ವಿತರಣೆ ಮಾಡಲು ಸಂಸ್ಥೆ ಉದ್ದೇಶಿಸಿದೆ. ಮೈಸೂರು ತಾಲೂಕು ಪ್ರಭಾರ ಆರೋಗ್ಯ ಅಧಿಕಾರಿ ಡಾ.ದೇವಿ ಆನಂದ್, ಮಕ್ಕಳ ಅಭಿವೃದ್ಧಿ ಯೋಜ ನಾಧಿಕಾರಿ ಮಧುಸೂದನ್, ಸಂಸ್ಥೆಯ ಕಾರ್ಯಕ್ರಮಗಳ ಮುಖ್ಯಸ್ಥ ಶಿವರಾಮ್ ದೇಶಪಾಂಡೆ ಮತ್ತಿತರರು ಹಾಜರಿದ್ದರು.

Translate »