ಆಶಾ ಕಾರ್ಯಕರ್ತೆಯರಿಗೆ 3 ಸಾವಿರ ರೂ. ಪ್ರೋತ್ಸಾಹ ಧನ ಯೋಜನೆಗೆ ಚಾಲನೆ
ಮೈಸೂರು

ಆಶಾ ಕಾರ್ಯಕರ್ತೆಯರಿಗೆ 3 ಸಾವಿರ ರೂ. ಪ್ರೋತ್ಸಾಹ ಧನ ಯೋಜನೆಗೆ ಚಾಲನೆ

May 17, 2020

ಮೈಸೂರು, ಮೇ 16(ಪಿಎಂ)- ಕೊರೊನಾ ವಿರುದ್ಧ ಹೋರಾಟದಲ್ಲಿ ಫ್ರಂಟ್‍ಲೈನ್ ವಾರಿಯರ್ಸ್ ಎಂದೇ ಹೆಸರಾದ ಆಶಾ ಕಾರ್ಯಕರ್ತೆಯರಿಗೆ ಮೈಸೂರಿನ ಕಲಾಮಂದಿರದಲ್ಲಿ ಶನಿವಾರ ಹೂ ಮಳೆಗರೆದು ಸನ್ಮಾನಿಸಿ, 3 ಸಾವಿರ ರೂ.ಗಳ ಪ್ರೋತ್ಸಾಹ ಧನದ ಚೆಕ್ ವಿತರಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಉಪಸ್ಥಿತಿಯಲ್ಲಿ ನಡೆದ ಸಮಾರಂಭದಲ್ಲಿ ಸಾಂಕೇತಿಕ ವಾಗಿ ಜಿಲ್ಲೆಯ 180 ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನದ ಚೆಕ್ ವಿತರಿಸಲಾಯಿತು.

ರಾಜ್ಯದ 40,500 ಆಶಾ ಕಾರ್ಯಕರ್ತೆಯರಿಗೆ ಸಹಕಾರ ಇಲಾಖೆಯಿಂದ (ಸಹಕಾರ ಸಂಘ-ಸಂಸ್ಥೆ ಗಳ ದೇಣಿಗೆ) 12.37 ಕೋಟಿ ರೂ. ಪ್ರೋತ್ಸಾಹಧನ ನೀಡಲಾಗುತ್ತಿದೆ. ಮೈಸೂರು-ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್(ಎಂಸಿಡಿಸಿಸಿ) ಮತ್ತು ಮೈಸೂರು ಜಿಲ್ಲಾ ಸಹಕಾರ ಹಾಲು ಒಕ್ಕೂಟದಿಂದ (ಮೈಮುಲ್) ಜಿಲ್ಲೆಯ 1,824 ಆಶಾ ಕಾರ್ಯಕರ್ತೆ ಯರಿಗೆ ತಲಾ 3 ಸಾವಿರ ರೂ.ನಂತೆ ಒಟ್ಟು 54.72 ಲಕ್ಷ ರೂ. ಪ್ರೋತ್ಸಾಹಧನ ನೀಡುವ ಯೋಜನೆಗೆ ಸಚಿವ ಸೋಮಶೇಖರ್ ಚಾಲನೆ ನೀಡಿದರು. ಇದೇ ವೇಳೆ ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಹರೀಶ್‍ಗೌಡ ಅವರ ಕಡೆಯಿಂದ 10 ಕೆಜಿ ಅಕ್ಕಿ, 1 ಕೆಜಿ ಬೇಳೆ, ಗೋಧಿ, ಉಪ್ಪು, ಸಕ್ಕರೆ, 1 ಲೀ. ಅಡುಗೆ ಎಣ್ಣೆ ಒಳಗೊಂಡ ದಿನಸಿ ಕಿಟ್‍ಗಳನ್ನು ಆಶಾ ಕಾರ್ಯಕರ್ತೆಯರಿಗೆ ವಿತರಿಸಲಾ ಯಿತು. ಆಯುಷ್ ಇಲಾಖೆಯಿಂದ ರೋಗನಿರೋ ಧಕ ಶಕ್ತಿವೃದ್ಧಿಸುವ ಚ್ಯವನ್‍ಪ್ರಾಶ್ ನೀಡಲಾಯಿತು.

ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಮಾತನಾಡಿ, ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಶೂನ್ಯಕ್ಕೆ ಬರಲು ವೈದ್ಯರು, ವಿವಿಧ ಇಲಾಖೆಗಳ ಅಧಿಕಾರಿ ಹಾಗೂ ನೌಕರರು, ಆಶಾ ಕಾರ್ಯಕರ್ತೆಯರು ಸೇರಿ ಹಲವರ ಶ್ರಮವಿದೆ. ಎಲ್ಲರೂ ಸಮನ್ವಯದಿಂದ ಕೆಲಸ ಮಾಡಿ ದ್ದಾರೆ. ಅಗತ್ಯ ಸಾಮಗ್ರಿಗಳ ಪೂರೈಕೆಗೆ ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳು ಸಹಾಯಹಸ್ತ ಚಾಚಿದ್ದರಿಂದ ಎಲ್ಲೂ ಲಾಕ್‍ಡೌನ್ ವಿರುದ್ಧ ಕೂಗು ಕೇಳಿಬರಲಿಲ್ಲ. ಸೋಂಕಿತರ 3-4 ಪ್ರಕರಣಗಳಲ್ಲಿ ಸಾವಿನ ಆತಂಕವಿತ್ತು. ವೈದ್ಯಲೋಕದವರ ಪರಿಶ್ರಮದಿಂದಾಗಿ ಆ ಅಪಾಯದಿಂದ ಪಾರಾಗಲು ಸಾಧ್ಯವಾಯಿತು ಎಂದು ನೆನಪಿಸಿಕೊಂಡರು.

 

ನಿಭಾಯಿಸುತ್ತೇವೆ: 90 ಕೊರೊನಾ ಪಾಸಿಟಿವ್ ಪ್ರಕರಣಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದೇವೆ. ಮುಂದೆಯೂ ನಿಭಾಯಿಸುವ ಶಕ್ತಿಯಿದೆ. ಜನರೂ ಉತ್ತಮ ಸಹಕಾರ ನೀಡಿದ್ದಾರೆ. ಈಗ ಲಾಕ್‍ಡೌನ್ ಸಡಿಲ ವೇಳೆ ಜನರು ಜಾಗರೂಕತೆಯಿಂದ ಇದ್ದು ಸಹಕರಿಸಬೇಕು. ಮಾಸ್ಕ್ ಧರಿಸುವುದು, ಆಗಾಗ್ಗೆ ಕೈ ತೊಳೆಯುವ ಕ್ರಮ ಮುಂದುವರಿ ಯಲಿ. ಗರ್ಭಿಣಿ, ಬಾಣಂತಿಯರನ್ನು ಪ್ರತ್ಯೇಕವಾಗಿರಿಸಿ. ಮಕ್ಕಳು, ಹಿರಿಯರು ಅನಗತ್ಯವಾಗಿ ಮನೆಯಿಂದ ಹೊರಬರದಂತೆ ಸ್ವಯಂನಿಯಂತ್ರಣ ಹಾಕಿಕೊಳ್ಳುವುದು ಒಳ್ಳೆಯದು ಎಂದು ಜಿಲ್ಲಾಧಿಕಾರಿ ಸಲಹೆ ನೀಡಿದರು. ಸಂಸದ ಪ್ರತಾಪ್ ಸಿಂಹ ಮಾತನಾಡಿ, 40 ಸಾವಿರ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ನೀಡಲು ಸಹಕಾರ ಇಲಾಖೆಯಿಂದಲೇ 12.37 ಕೋಟಿ ರೂ. ಭರಿಸುವುದಾಗಿ ಹೇಳಿದ ಸಹಕಾರ ಸಚಿವರು, ಅದನ್ನೇ ಜಾರಿಗೆ ತಂದಿದ್ದಾರೆ. ಮೈಸೂರು ಮೃಗಾಲಯದ ಮೂಕಪ್ರಾಣಿಗಳ ನಿರ್ವಹಣೆಗಾಗಿ 2.51 ಕೋಟಿ ರೂ. ದೇಣಿಗೆ ಸಂಗ್ರಹಿಸಿ ಕೊಟ್ಟು ಮಾನವೀಯತೆ ಮೆರೆದಿದ್ದಾರೆ. ಅದಕ್ಕಾಗಿ ಅವರಿಗೆ ಧನ್ಯವಾದ ಅರ್ಪಿಸುವೆ ಎಂದು ಹೇಳಿದರು.

ಶಾಸಕ ಎಸ್.ಎ.ರಾಮದಾಸ್ ಮಾತನಾಡಿ, ಮೈಸೂರು ಕೊರೊನಾ ಮುಕ್ತ ಮಾಡುವಲ್ಲಿ ಕೊರೊನಾ ವಾರಿಯರ್ಸ್ ದೊಡ್ಡ ಕೆಲಸ ಮಾಡಿದ್ದಾರೆ. ಕೊರೊನಾ ಶೂನ್ಯಕ್ಕೆ ಬಂದಿದ್ದರೂ ನಾಳೆ ಏನಾಗುವುದೋ ಎಂಬ ಆತಂಕ ಇದ್ದೇ ಇದೆ. ವಿಶ್ವಸಂಸ್ಥೆ ಪ್ರಕಟಣೆ ಅವಲೋಕಿಸಿ ದರೆ ಕೊರೊನಾ ನಡುವೆ ಬದುಕುವ ಕೌಶಲ ರೂಢಿಸಿಕೊಳ್ಳುವುದು ಅನಿವಾರ್ಯ. ಮುಂದೆಯೂ ಆಶಾ ಕಾರ್ಯಕರ್ತೆಯರ ಜವಾಬ್ದಾರಿ ಹೆಚ್ಚಿರಲಿದೆ. ಈವರೆಗಿನದೇ ಒಂದು ಹಂತವಾದರೆ, ಇಂದಿನಿಂದ 2ನೇ ಹಂತ ಪ್ರಾರಂಭವಾಗಿದೆ ಎಂದು ಎಚ್ಚರಿಸಿದರು.

ಶಾಸಕ ಎಲ್.ನಾಗೇಂದ್ರ ಮಾತನಾಡಿ, 50 ದಿನ ನಿರಂತರವಾಗಿ ಕೊರೊನಾ ವಿರುದ್ಧ ಹೋರಾಡಲಾಗಿದೆ. ಉಸ್ತುವಾರಿ ಸಚಿವರು ಮೈಸೂರಿಗೆ ಒಳ್ಳೆಯದಾಗುವಂತೆ ಚಾಮುಂಡೇ ಶ್ವರಿಯಲ್ಲಿ ಪ್ರಾರ್ಥಿಸಿದ್ದಾರೆ. ಕೊರೊನಾ ನಿವಾರಿಸುವಲ್ಲಿ ಆಶಾ ಕಾರ್ಯಕರ್ತೆಯರ ಕಾರ್ಯ ಚಟುವಟಿಕೆ ಮರೆಯಲಾಗದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಪಂ ಉಪಾಧ್ಯಕ್ಷೆ ಗೌರಮ್ಮ, ಎಂಸಿಡಿಡಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್‍ಗೌಡ, ಉಪಾಧ್ಯಕ್ಷ ಸದಾನಂದ, ಮೈಮುಲ್ ಅಧ್ಯಕ್ಷ ಮಾವಿನಹಳ್ಳಿ ಸಿದ್ದೇಗೌಡ ಮತ್ತಿತರರಿದ್ದರು.

Translate »