ಗೌರವಧನ ಹೆಚ್ಚಳಕ್ಕೆ ಆಗ್ರಹಿಸಿ ಜು.10ರಿಂದ   ಆಶಾ ಕಾರ್ಯಕರ್ತೆಯರ ಪ್ರತಿಭಟನೆ
ಮೈಸೂರು

ಗೌರವಧನ ಹೆಚ್ಚಳಕ್ಕೆ ಆಗ್ರಹಿಸಿ ಜು.10ರಿಂದ  ಆಶಾ ಕಾರ್ಯಕರ್ತೆಯರ ಪ್ರತಿಭಟನೆ

July 7, 2020

ಮೈಸೂರು, ಜು.6(ಎಸ್‍ಪಿಎನ್)-ಮಾಸಿಕ 12 ಸಾವಿರ ರೂ. ಗೌರವ ಧನ ಖಾತರಿ ಪಡಿಸಬೇಕು. ಕೊರೊನಾ ಪೀಡಿತ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುವ ಸಂದರ್ಭದಲ್ಲಿ ಅಗತ್ಯ ರಕ್ಷಣಾ ಸಾಮಗ್ರಿಗಳನ್ನು ನೀಡುವಂತೆ ಒತ್ತಾಯಿಸಿ ಜು.10ರಂದು ರಾಜ್ಯದ ಎಲ್ಲಾ ಆಶಾ ಕಾರ್ಯಕರ್ತೆಯರು ಕರ್ತವ್ಯ ಸ್ಥಗಿತಗೊಳಿಸಿ ಆಯಾಯ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಿದ್ದಾರೆ ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಕಾರ್ಯದರ್ಶಿ ಮಂಜುಳಾ ತಿಳಿಸಿದ್ದಾರೆ.

ರಾಜ್ಯ ವ್ಯಾಪ್ತಿ ಕಳೆದೊಂದು ವಾರದಿಂದ ಆಶಾ ಕಾರ್ಯಕರ್ತೆಯರು, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಪ್ರತಿಭಟನೆ  ನಡೆಸಿ, ರಾಜ್ಯ ಸರ್ಕಾರದ ಗಮನ ಸೆಳೆದಿದ್ದರೂ ಬೇಡಿಕೆಗಳ ಈಡೇರಿಸುವ ಲಕ್ಷಣ ಕಾಣುತ್ತಿಲ್ಲ.  ಅಲ್ಲದೆ, ಕಳೆದ ಜನವರಿ ತಿಂಗಳಲ್ಲಿ ಈ ಸಂಬಂಧ ರಾಜ್ಯ ಸರ್ಕಾರಕ್ಕೆ 10 ಮನವಿಗಳನ್ನು ಸಲ್ಲಿಸಲಾಗಿದೆ. ಆದರೂ  ನಮ್ಮ ಮನವಿಗೆ ರಾಜ್ಯ ಸರ್ಕಾರ ಸ್ಪಂದಿಸಿಲ್ಲ ಎಂದು ಅವರು ದೂರಿದ್ದಾರೆ.

ರಾಜ್ಯಾದ್ಯಂತ 1.59 ಕೋಟಿ ಮನೆಗಳ ಸಮೀಕ್ಷೆ ನಡೆಸಿ, ವಿವಿಧ ಆರೋಗ್ಯ ಸಮಸ್ಯೆ ಗಳಿಂದ ಬಳಲುತ್ತಿದ್ದ ರೋಗಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದೇವೆ. ಫೀವರ್ ಕ್ಲಿನಿಕ್, ಸ್ವ್ಯಾಬ್ ಸಂಗ್ರಹ ಕೇಂದ್ರಗಳು ಹಾಗೂ ರಾಜ್ಯ ಚೆಕ್‍ಪೋಸ್ಟ್‍ಗಳಲ್ಲಿ ಕರ್ತವ್ಯ ನಿರ್ವಹಿಸಿ ಕೊರೊನಾ ಸೋಂಕು ತಡೆಗಟ್ಟಲು ಸಹಕರಿಸಿದ್ದೇವೆ ಎಂದು ತಿಳಿಸಿದ್ದಾರೆ.

ಇಷ್ಟಾದರೂ ನಮ್ಮತ್ತ ಸರ್ಕಾರ ಕಾಳಜಿ ವಹಿಸಿಲ್ಲ. ನಮ್ಮ ಬೇಡಿಕೆಗಳನ್ನು ಈಡೇರಿಸು ವಂತೆ ಒತ್ತಾಯಿಸಿ ಜು.10ರಿಂದ ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆರ ಸಂಘ ಹಾಗೂ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ) ಸಂಯುಕ್ತಾಶ್ರಯ ದಲ್ಲಿ ಪ್ರತಿಭಟನೆ ನಡೆಸಿ, ಆರೋಗ್ಯಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಬೇಡಿಕೆ ಮನವಿ ಸಲ್ಲಿಸಲಾಗುವುದು ಎಂದು ಪತ್ರಿಕಾ ಹೇಳಿಕೆಯಲ್ಲಿ ಮಂಜುಳಾ ತಿಳಿಸಿದ್ದಾರೆ.

 

 

 

Translate »