ಏಷ್ಯಾಕಪ್ ಟಿ20 ಪಂದ್ಯಾವಳಿ ಇಂದು ಇಂಡೋ-ಪಾಕ್ ಹೈವೋಲ್ಟೆಜ್ ಪಂದ್ಯ
News

ಏಷ್ಯಾಕಪ್ ಟಿ20 ಪಂದ್ಯಾವಳಿ ಇಂದು ಇಂಡೋ-ಪಾಕ್ ಹೈವೋಲ್ಟೆಜ್ ಪಂದ್ಯ

August 28, 2022

ದುಬೈ, ಆ.27- ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕಿಸ್ತಾನ ನಡುವಿನ ಹೈವೋಲ್ಟೆಜ್ ಪಂದ್ಯ ನಾಳೆ(ಆ.28) ಸಂಜೆ 7.30ಕ್ಕೆ ದುಬೈ ಇಂಟರ್‍ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಇಂಡೋ-ಪಾಕ್ ಪಂದ್ಯವೆಂದರೆ ಅಲ್ಲೊಂದು ರೋಚಕತೆ, ಕಾತರ, ಕಳವಳ ಎಲ್ಲವೂ ಇರುತ್ತದೆ. ಹೀಗಾಗಿ ಏಷ್ಯಾಕಪ್ ಟಿ20 ಪಂದ್ಯಾವಳಿಯಲ್ಲಿ ರೋಹಿತ್ ಶರ್ಮಾ ಹಾಗೂ ಬಾಬರ್ ಅಜಂ ನೇತೃತ್ವದ ತಂಡಗಳು ಮತ್ತೊಮ್ಮೆ ಮುಖಾ ಮುಖಿಯಾಗುತ್ತಿವೆ.
ಕೇವಲ ಐಸಿಸಿ, ಏಷ್ಯಾ ಸೇರಿದಂತೆ ಪ್ರಮುಖ ಟೂರ್ನಿಗಳಲ್ಲಿ ಮಾತ್ರ ಈ ಎರಡೂ ತಂಡಗಳು ಸೆಣಸುವ ಹಿನ್ನೆಲೆಯಲ್ಲಿ ಈ ಪಂದ್ಯ ತೀವ್ರ ಕುತೂಹಲ ಕೆರಳಿಸಿದೆ. ಮತ್ತೊಂದೆಡೆ ಈ ಪಂದ್ಯವನ್ನು ಕಣ್ತುಂಬಿಸಿಕೊಳ್ಳಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಭಾರತವೇ ಫೇವರೇಟ್: ಪಾಕ್ ವಿರುದ್ಧದ ಪಂದ್ಯದ ಮೂಲಕ ತನ್ನ ಅಭಿಯಾನ ಆರಂಭಿಸುವ ಟೀಂ ಇಂಡಿಯಾ ಏಷ್ಯಾ ಕಪ್ ಗೆಲ್ಲುವ ಹಾಗೂ ಪಾಕ್ ವಿರುದ್ಧದ ಪಂದ್ಯ ಗೆಲ್ಲುವ ನೆಚ್ಚಿನ ತಂಡವಾಗಿದೆ. ಕಳೆದ ಟಿ20 ವಿಶ್ವಕಪ್‍ನಲ್ಲಿ ಪಾಕಿಸ್ತಾನದ ವಿರುದ್ಧ 10 ವಿಕೆಟ್‍ಗಳಿಂದ ಸೋಲು ಅನುಭವಿಸಿದ್ದ ಭಾರತಕ್ಕೆ ಸಾಂಪ್ರದಾಯಿಕ ಎದುರಾಳಿ ವಿರುದ್ಧ ಸೇಡು ತೀರಿಸಿಕೊಳ್ಳಲು ಇದೀಗ ಅವಕಾಶ ಲಭಿಸಿದೆ.

ಏಷ್ಯಾ ಕಪ್‍ನಲ್ಲಿ ಭಾರತ ಹಾಗೂ ಪಾಕಿಸ್ತಾನ ಒಟ್ಟು 15 ಬಾರಿ ಕಾದಾಟ ನಡೆಸಿವೆ. ಇದರಲ್ಲಿ ಭಾರತ 8ರಲ್ಲಿ ಗೆಲುವು ಪಡೆದಿದ್ದರೆ, ಪಾಕಿಸ್ತಾನ 5ರಲ್ಲಿ ಜಯಿಸಿದೆ. ಇನ್ನುಳಿದ ಎರಡು ಪಂದ್ಯಗಳು ಫಲಿತಾಂಶವಿಲ್ಲದೆ ರದ್ದಾಗಿವೆ. ಈ ಅಂಶಗಳನ್ನು ನೋಡುವುದಾದರೆ ಭಾರತ ಮುನ್ನಡೆ ಸಾಧಿಸಿರುವುದು ಮನವರಿಕೆಯಾಗುತ್ತದೆ.

ಪಾಕಿಸ್ತಾನ ವಿರುದ್ಧ ಕೆ.ಎಲ್ ರಾಹುಲ್ ಹಾಗೂ ರೋಹಿತ್ ಶರ್ಮಾ ಇನಿಂಗ್ಸ್ ಆರಂಭಿಸುವುದು ಬಹುತೇಕ ಖಚಿತವಾಗಿದೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ನಿರೀಕ್ಷೆಯಂತೆ ವಿರಾಟ್ ಕೊಹ್ಲಿ, ರಿಷಭ್ ಪಂತ್ ಹಾಗೂ ಸೂರ್ಯಕುಮಾರ್ ಯಾದವ್ ಆಡಬಹುದು. ಆಲ್ ರೌಂಡರ್‍ಗಳಾಗಿ ಹಾರ್ದಿಕ್ ಪಾಂಡ್ಯ ಹಾಗೂ ರವೀಂದ್ರ ಜಡೇಜಾ ಆಡಲಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಮೂವರು ವೇಗಿಗಳು ಹಾಗೂ ಏಕೈಕ ಸ್ಪಿನ್ನರ್ ಅನ್ನು ಕಣಕ್ಕೆ ಇಳಿಸುವ ಸಾಧ್ಯತೆ ಇದೆ. ವೇಗದ ಬೌಲಿಂಗ್‍ನಲ್ಲಿ ಭುವನೇಶ್ವರ್ ಕುಮಾರ್ ಹಾಗೂ ಅರ್ಷದೀಪ್ ಸಿಂಗ್ ಕಣಕ್ಕೆ ಇಳಿಯಲಿದ್ದಾರೆ. ಇನ್ನು ಪಂದ್ಯದ ಪರಿಸ್ಥಿತಿಗಳನ್ನು ನೋಡಿ ಕೊಂಡು, ಆವೇಶ್ ಖಾನ್ ಅಥವಾ ಆರ್ ಅಶ್ವಿನ್ ಅವರಲ್ಲಿ ಒಬ್ಬರನ್ನು ಆಡಿಸುವ ಸಾಧ್ಯತೆ ಇದೆ. ಸ್ಪಿನ್ ವಿಭಾಗದಲ್ಲಿ ಯುಜ್ವೇಂದ್ರ ಚಹಲ್ ಕಣಕ್ಕೆ ಇಳಿಯುವುದು ಬಹುತೇಕ ಖಚಿತ.

Translate »