ಭಜರಂಗದಳ ಕಾರ್ಯಕರ್ತನ ಹತ್ಯೆ ಶಿವಮೊಗ್ಗ ಉದ್ವಿಗ್ನ
News

ಭಜರಂಗದಳ ಕಾರ್ಯಕರ್ತನ ಹತ್ಯೆ ಶಿವಮೊಗ್ಗ ಉದ್ವಿಗ್ನ

February 22, 2022

ಶಿವಮೊಗ್ಗ, ಫೆ.21- ಭಜರಂಗದಳದ ಕಾರ್ಯಕರ್ತ ನೊಬ್ಬನನ್ನು ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಶಿವಮೊಗ್ಗದ ಎನ್.ಟಿ. ರಸ್ತೆಯ ಕಾಮತ್ ಪೆಟ್ರೋಲ್ ಬಂಕ್ ಸಮೀಪದ ಭಾರತಿ ಕಾಲೋನಿಯಲ್ಲಿ ಭಾನುವಾರ ರಾತ್ರಿ ನಡೆದಿದೆ.


ಭಜರಂಗದಳ ಕಾರ್ಯಕರ್ತ ಹರ್ಷ ಅಲಿಯಾಸ್ ಹರ್ಷ ಹಿಂದೂ (22) ಹತ್ಯೆಗೀಡಾದವನಾಗಿದ್ದು, ಭಾನುವಾರ ರಾತ್ರಿ ಭಾರತೀ ಕಾಲೋನಿಯ ಕ್ಯಾಂಟಿನ್‍ವೊಂದರ ಮುಂದೆ ಸ್ನೇಹಿತರೊಂದಿಗೆ ಟೀ ಸೇವಿಸುತ್ತ ನಿಂತಿದ್ದ ಹರ್ಷನ ಮೇಲೆ ಕಾರು ಹಾಗೂ ಆಟೋದಲ್ಲಿ ಬಂದಿದ್ದ ನಾಲ್ಕರಿಂದ ಆರು ಮಂದಿ ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದರು. ತೀವ್ರವಾಗಿ ಗಾಯಗೊಂಡಿದ್ದ ಆತನನ್ನು ಸ್ನೇಹಿತರು ಮೆಗ್ಗಾನ್ ಆಸ್ಪತ್ರೆಗೆ ಕೊಂಡೊಯ್ದರಾದರೂ ಚಿಕಿತ್ಸೆ ಫಲಕಾರಿಯಾಗದೆ ಆತ ಕೊನೆಯುಸಿರೆಳೆದಿದ್ದಾನೆ. ಈ ಹತ್ಯೆಯಿಂದಾಗಿ ಶಿವಮೊಗ್ಗ ನಗರದಲ್ಲಿ ಉದ್ವಿಗ್ನ ವಾತಾ ವರಣ ನಿರ್ಮಾಣವಾಗಿದ್ದು, ಭಾನುವಾರ ರಾತ್ರಿಯಿಂದಲೇ ಅಲ್ಲಲ್ಲಿ ಕಲ್ಲು ತೂರಾಟ ನಡೆದಿದೆ. ಇಂದು ಕೂಡ ಘರ್ಷಣೆಗಳು ನಡೆದಿದ್ದು, ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಪೊಲೀಸರು ಲಾಠಿ ಚಾರ್ಜ್ ಮಾಡಿ, ಅಶ್ರುವಾಯು ಸಿಡಿಸಿ ಪರಿಸ್ಥಿತಿ ತಹಬದಿಗೆ ತರಲು ಪ್ರಯತ್ನಿಸಿದರು. ಶಿವಮೊಗ್ಗ ನಗರದ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ಕಫ್ರ್ಯೂ ವಿಧಿಸಲಾಗಿದೆ. ನಾಳೆ (ಫೆ.22) ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಸೆಲ್ವಮಣಿ ಆದೇಶ ಹೊರಡಿಸಿದ್ದಾರೆ. ಮೃತನ ಅಂತಿಮಯಾತ್ರೆಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ, ಸಂಸದ ಬಿ.ವೈ. ರಾಘವೇಂದ್ರ ಸೇರಿದಂತೆ ಸಾವಿರಾರು ಕಾರ್ಯ ಕರ್ತರು ಭಾಗವಹಿಸಿದ್ದರು. ಹರ್ಷನ ಮನೆಯಲ್ಲಿ ಪೂಜೆ ಸಲ್ಲಿಸಿದ ನಂತರ ಅಲಂಕೃತ ವಾಹನದಲ್ಲಿ ಮೆರವಣಿಗೆ ಹೊರಡುತ್ತಿದ್ದಂತೆಯೇ ಕಲ್ಲು ತೂರಾಟ ನಡೆಯಿತು. ಹಲವೆಡೆ ವಾಹನಗಳಿಗೆ ಬೆಂಕಿ ಹಚ್ಚಲಾಯಿತು. ಕಲ್ಲು ತೂರಾಟದಿಂದ ಹಣ್ಣಿನ ಅಂಗಡಿ, ಶೋರೂಂ, ಬಟ್ಟೆ ಅಂಗಡಿ ಸೇರಿದಂತೆ ಹೊಳೆ ಬಸ್‍ನಿಲ್ದಾಣ ಹಾಗೂ ಬಿ.ಹೆಚ್. ರಸ್ತೆಯಲ್ಲಿ ಹಲವು ಅಂಗಡಿಗಳಿಗೆ ಹಾನಿಯಾಗಿದೆ. ಪರಿಸ್ಥಿತಿ ನಿಭಾಯಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಕೊನೆಗೆ ಲಾಠಿಚಾರ್ಜ್ ಮಾಡಿದ ನಂತರ ಅಶ್ರುವಾಯು ಸಿಡಿಸಿ ಪರಿಸ್ಥಿತಿಯನ್ನು ತಹಬದಿಗೆ ತಂದರಾದರೂ ಅಂತ್ಯಕ್ರಿಯೆಯ ನಂತರ ಅಲ್ಲಲ್ಲಿ ಘರ್ಷಣೆಗಳು ನಡೆದ ಹಿನ್ನೆಲೆಯಲ್ಲಿ ಕಫ್ರ್ಯೂ ವಿಧಿಸಲಾಗಿದೆ. ಇಂದು ಸಂಜೆ ಶಿವಮೊಗ್ಗದ ರೋಟರಿ ಚಿತಾಗಾರದಲ್ಲಿ ಕಾಳಿ ಸ್ವಾಮೀಜಿ ನೇತೃತ್ವದಲ್ಲಿ ಮರಾಠಿ ಭಾವಸಾರ್ ಸಂಪ್ರದಾಯದಂತೆ ಹರ್ಷನ ಅಂತ್ಯಕ್ರಿಯೆ ನೆರವೇರಿತು. ಆತನ ತಂದೆ ನಾಗರಾಜ್ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.

ಕಳೆದ 5 ವರ್ಷದಿಂದ ಭಜರಂಗದಳದ ಕಾರ್ಯಕರ್ತನಾಗಿದ್ದ ಹರ್ಷ, ಹಿಂದೂ ಪರ ಕೆಲಸ ಕಾರ್ಯಗಳಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದ. ಗೋವುಗಳ ಕಳ್ಳ ಸಾಗಾಣಿಕೆ ವಿರುದ್ಧ ಕಾರ್ಯಾಚರಣೆ ನಡೆಸಿದ್ದ ಭಜರಂಗದಳ ತಂಡದಲ್ಲಿ ಈತನೂ ಇದ್ದ ಎಂದು ಹೇಳಲಾಗಿದೆ. ಕೆಲ ವರ್ಷಗಳ ಹಿಂದೆ ಸಾಮಾಜಿಕ ಜಾಲತಾಣ ದಲ್ಲಿ ಶಾಂತಿ ಕದಡುವಂತಹ ಅಂಶಗಳುಳ್ಳ ಪೋಸ್ಟ್ ಮಾಡಿದ ಆರೋಪದ ಮೇರೆಗೆ ಈತನನ್ನು ಪೊಲೀಸರು ಬಂಧಿಸಿದ್ದರು. ಘರ್ಷಣೆಗಳಿಗೆ ಸಂಬಂಧಿಸಿದಂತೆ ಕೆಲ ಪ್ರಕರಣಗಳೂ ಕೂಡ ಹರ್ಷನ ಮೇಲೆ ದಾಖಲಾಗಿದ್ದವು ಎಂದು ಹೇಳಲಾಗಿದೆ.

ಕಳೆದ 2 ವರ್ಷದ ಹಿಂದೆ ಹರ್ಷನನ್ನು ಹತ್ಯೆ ಮಾಡಿದವರಿಗೆ 10 ಲಕ್ಷ ರೂ. ಬಹುಮಾನ ನೀಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹರಡಿತ್ತು ಎಂದು ಈತನ ತಂದೆ ನಾಗರಾಜ್ ತಿಳಿಸಿದ್ದಾರೆ. ಪೊಲೀಸರಿಂದ ಬಂಧನಕ್ಕೊಳಗಾದ ನಂತರ ಯಾವುದೇ ಗಲಾಟೆ-ಘರ್ಷಣೆಗಳಿಗೆ ಹೋಗದಂತೆ ತಾವು ಬುದ್ಧಿವಾದ ಹೇಳಿದ್ದು, ನಂತರ ಆತ ಯಾವುದೇ ತಂಟೆ-ತಕರಾರಿಗೆ ಹೋಗದೆ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡಿದ್ದ. ಆದರೆ, ಹಿಂದೂ ಧರ್ಮ ಹಾಗೂ ದೇಶದ ಮೇಲೆ ವಿಶೇಷ ಅಭಿಮಾನ ಹೊಂದಿದ್ದ ನನ್ನ ಮಗ ಹಿಂದೂಪರ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದ ಎಂದು ಅವರು ತಿಳಿಸಿದ್ದಾರೆ. ಗೃಹ ಸಚಿವ ಅರಗ ಜ್ಞಾನೇಂದ್ರ ಹರ್ಷನ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಪರಿಸ್ಥಿತಿ ಬಿಗುವಿನಿಂದ ಕೂಡಿರುವುದರಿಂದ ಎಡಿಜಿಪಿ ಮುರುಗನ್ ಶಿವಮೊಗ್ಗದಲ್ಲೇ ಮೊಕ್ಕಾಂ ಹೂಡಿ ಪರಿಸ್ಥಿತಿ ನಿಯಂತ್ರಣಕ್ಕೆ ಮಾರ್ಗದರ್ಶನ ನೀಡುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆಯ 1200 ಪೊಲೀಸ್ ಸಿಬ್ಬಂದಿ ಜೊತೆಗೆ ವಿವಿಧ ಜಿಲ್ಲೆಗಳಿಂದ ಹೆಚ್ಚಿನ ಪೊಲೀಸ್ ಪಡೆಗಳನ್ನು ಶಿವಮೊಗ್ಗಕ್ಕೆ ರವಾನಿಸಲಾಗಿದೆ.

ಆಘಾತದಿಂದ ಸೋದರತ್ತೆ ಸಾವು: ಭಾನುವಾರ ರಾತ್ರಿ ಹರ್ಷ ಹತ್ಯೆಗೀಡಾದ ಸುದ್ದಿ ತಿಳಿದು, ಆತನ ಸೋದರತ್ತೆ ಶಿವಮೊಗ್ಗದ ಶರಾವತಿನಗರದಲ್ಲಿ ವಾಸವಿದ್ದ ಜಲಜಾಕ್ಷಿ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇಂದು ಸಂಜೆ ಹರ್ಷ ಅಂತ್ಯಕ್ರಿಯೆ ನೆರವೇರಿಸಿದ ನಂತರ ಆತನ ಸೋದರತ್ತೆ ಅಂತ್ಯಕ್ರಿಯೆ ಯನ್ನು ಕುಟುಂಬಸ್ಥರು ನೆರವೇರಿಸಿದರು ಎಂದು ಮೂಲಗಳಿಂದ ತಿಳಿದು ಬಂದಿದೆ.

Translate »