ಅನರ್ಹ ಶಾಸಕರ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಯ ಸಂಪೂರ್ಣ ಹೊಣೆಗಾರಿಕೆ ಯಡಿಯೂರಪ್ಪ ಹೆಗಲಿಗೆ ಕಟ್ಟಿದ ಬಿಜೆಪಿ ವರಿಷ್ಠರು
ಮೈಸೂರು

ಅನರ್ಹ ಶಾಸಕರ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಯ ಸಂಪೂರ್ಣ ಹೊಣೆಗಾರಿಕೆ ಯಡಿಯೂರಪ್ಪ ಹೆಗಲಿಗೆ ಕಟ್ಟಿದ ಬಿಜೆಪಿ ವರಿಷ್ಠರು

September 24, 2019

ಬೆಂಗಳೂರು, ಸೆ. 23(ಕೆಎಂಶಿ)- ಅನರ್ಹ ಶಾಸಕರ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಯ ಸಂಪೂರ್ಣ ಜವಾಬ್ದಾರಿಯನ್ನು ಬಿಜೆಪಿ ವರಿಷ್ಠರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಹೆಗಲ ಮೇಲೆ ಹಾಕಿದ್ದಾರೆ. ಅನರ್ಹಗೊಂಡ ಹದಿನೇಳು ಶಾಸಕರ ಕ್ಷೇತ್ರಗಳ ಪೈಕಿ ಹದಿನೈದು ಕ್ಷೇತ್ರಗಳಿಗೆ ಅಕ್ಟೋಬರ್ 21 ರಂದು ಉಪಚುನಾವಣೆ ನಡೆಯಲಿದೆ. ಈ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ, ಅವರಿಗೆ ಬಿ ಫಾರಂ ನೀಡುವ ಅಧಿಕಾರವನ್ನು ಯಡಿಯೂರಪ್ಪನವರಿಗೆ ನೀಡಲಾಗುತ್ತಿದೆ. ಈ ವಿಷಯದಲ್ಲಿ ರಾಜ್ಯ ಬಿಜೆಪಿಯಾಗಲೀ, ಪಕ್ಷದ ವರಿಷ್ಠರಾಗಲೀ ಇಲ್ಲವೆ ಸಂಘ ಹಸ್ತಕ್ಷೇಪ ಮಾಡುವುದಿಲ್ಲ. ರಾಜ್ಯದಲ್ಲಿ ಅಧಿಕಾರ ಹಿಡಿಯಬೇಕೆಂಬ ಉದ್ದೇಶದಿಂದ ಯಡಿಯೂರಪ್ಪ ಜೆಡಿಎಸ್- ಕಾಂಗ್ರೆಸ್‍ನ 17 ಶಾಸಕರ ರಾಜೀನಾಮೆ ಕೊಡಿಸಿದ್ದರು. ಇದೀಗ ಅದರ ಸಂಪೂರ್ಣ ಹೊಣೆ ಯಡಿಯೂರಪ್ಪನವರ ಮೇಲೆ ಬಿದ್ದಿದೆ. ಅನರ್ಹಗೊಂಡಿರುವ ಶಾಸಕರ ಬಗ್ಗೆ ನ್ಯಾಯಾಲಯ ತೀರ್ಮಾನ ತೆಗೆದುಕೊಂಡು ಚುನಾವಣಾ ಕಣಕ್ಕಿಳಿಯಲು ಅವಕಾಶ ನೀಡಿದರೂ, ಟಿಕೆಟ್ ನೀಡುವ ವಿಚಾರ ಇವರಿಗೆ ಸೇರಿದ್ದು. ಒಂದು ವೇಳೆ ಅನರ್ಹರ ಸ್ಪರ್ಧೆಗೆ ಅವಕಾಶ ದೊರೆಯದಿದ್ದರೆ, ಯಾರಿಗೆ ಟಿಕೆಟ್ ನೀಡಬೇಕೆಂಬ ವಿಚಾರದಲ್ಲೂ ಪಕ್ಷ ಮೂಗು ತೂರಿಸುವುದಿಲ್ಲ. ಅಷ್ಟೇ ಅಲ್ಲ ಉಪಚುನಾವಣೆ ಪೂರ್ಣ ಹೊಣೆಗಾರಿಕೆ ಮುಖ್ಯಮಂತ್ರಿಯವರ ಮೇಲೆ ಬಿದ್ದಿದೆ. ಅವರೇ ಹೋರಾಟ ನಡೆಸಿ, ವಿಧಾನಸಭೆಯಲ್ಲಿ ಅಗತ್ಯ ಮ್ಯಾಜಿಕ್ ಸಂಖ್ಯೆ ಪಡೆಯಲು ಅಗತ್ಯವಿರುವ ಸದಸ್ಯರನ್ನು ಗೆಲ್ಲಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ.

ಈ ಹಿನ್ನೆಲೆಯಲ್ಲಿ ಪಕ್ಷ ಮಧ್ಯೆ ಪ್ರವೇಶ ಮಾಡಿದರೆ, ಯಡಿಯೂರಪ್ಪನವರಿಗೆ ಮತ್ತು ನಮ್ಮ ನಂಬಿ ಬಂದವರಿಗೆ ಇರಿಸು ಮುರಿಸು ಆಗಬಹುದು. ಮುಂದಿನ ದಿನಗಳಲ್ಲಿ ಪಕ್ಷವನ್ನು ನಂಬಿ ಯಾರೂ ಬರುವುದಿಲ್ಲ. ಈ ಕಾರಣಕ್ಕಾಗಿ ಎಲ್ಲಾ ಹೊಣೆಗಾರಿಕೆ ಮುಖ್ಯಮಂತ್ರಿಯವರ ಹೆಗಲಿಗೆ ಹಾಕಿ ಕೈ ತೊಳೆದುಕೊಂಡಿದೆ. ಅಷ್ಟೇ ಅಲ್ಲ 15 ಕ್ಷೇತ್ರಗಳ ಬಿ ಫಾರಂನ್ನು ಯಡಿಯೂರಪ್ಪನವರಿಗೇ ನೀಡಲು ನಿರ್ಧರಿಸಿದೆ.

ಸಾಮಾನ್ಯವಾಗಿ ಚುನಾವಣೆ ಇಲ್ಲವೆ ಉಪಚುನಾವಣೆಯಲ್ಲಿ ಪಕ್ಷದ ಕೋರ್ ಕಮಿಟಿ ಮತ್ತು ಚುನಾವಣಾ ಸಮಿತಿಯೊಟ್ಟಿಗೆ ಸಮಾಲೋಚಿಸಿ, ಅಭ್ಯರ್ಥಿಗಳ ಆಯ್ಕೆ ನಡೆಯುವುದು ಸಹಜ. ಆದರೆ ಈ ಬಾರಿ ಅದಕ್ಕೆ ವಿರುದ್ಧವಾಗಿ ಯಡಿಯೂರಪ್ಪನವರ ನಾಯಕತ್ವಕ್ಕೆ ಬಿಟ್ಟುಕೊಟ್ಟಿದೆ. ಇದ್ದಕ್ಕಿದ್ದಂತೆ ಪಕ್ಷದ ವರಿಷ್ಠರು ತಳೆದಿರುವ ಈ ಧೋರಣೆ ಯಡಿಯೂರಪ್ಪ ಅವರ ಆಪ್ತರಲ್ಲಿ ಹಲವು ಅನುಮಾನಗಳನ್ನು ಮೂಡಿಸಿದ್ದು, ಇದು ರಾಜ್ಯ ವಿಧಾನಸಭೆಗೆ ಮಧ್ಯಂತರ ಚುನಾವಣೆ ನಡೆಸುವ ಇರಾದೆ ಇರಬಹುದು ಎಂಬ ಶಂಕೆ ಮೂಡುವಂತೆ ಮಾಡಿದೆ. ವರ್ಷಾಂತ್ಯದ ವೇಳೆಗೆ ಇಲ್ಲವೇ ಹೊಸ ವರ್ಷದ ಆರಂಭದ ವೇಳೆಗೆ ನಡೆಯಲಿರುವ ವಿವಿಧ ರಾಜ್ಯದ ವಿಧಾನಸಭಾ ಚುನಾವಣೆಯ ಜತೆಗೆ ಕರ್ನಾಟಕ ವಿಧಾನಸಭೆಗೂ ಮಧ್ಯಂತರ ಚುನಾವಣೆ ನಡೆಸುವ ಪೂರ್ವಭಾವಿ ತಯಾರಿ ಇದು ಎಂದು ಯಡಿಯೂರಪ್ಪ ಬೆಂಬಲಿಗರು ಅನುಮಾನಪಡುತ್ತಿದ್ದಾರೆ. ರಾಜ್ಯ ಅತಿವೃಷ್ಟಿಯಿಂದ ತತ್ತರಿಸಿದರೂ ನೆರವಿಗೆ ಬರದ ಕೇಂದ್ರ ಸರ್ಕಾರದ ಧೋರಣೆ, ನೆರವು ಕೊಡಿ ಎಂದು ಯಡಿಯೂರಪ್ಪ ಅವರು ಪದೇ ಪದೆ ಕೋರಿದರೂ ಅವರನ್ನು ನಿರ್ಲಕ್ಷ್ಯ ಮಾಡುತ್ತಿರುವ ರೀತಿಗಳೂ ಇದಕ್ಕೆ ಪೂರಕವಾಗಿವೆ.

Translate »