ಅನರ್ಹಗೊಂಡಿರುವ 17 ಶಾಸಕರ ಅರ್ಜಿ ವಿಚಾರಣೆ: ನಾಳೆಗೆ ವಿಚಾರಣೆ ಮುಂದೂಡಿಕೆ
ಮೈಸೂರು

ಅನರ್ಹಗೊಂಡಿರುವ 17 ಶಾಸಕರ ಅರ್ಜಿ ವಿಚಾರಣೆ: ನಾಳೆಗೆ ವಿಚಾರಣೆ ಮುಂದೂಡಿಕೆ

September 24, 2019

ನವದೆಹಲಿ, ಸೆ. 23-ಅನರ್ಹಗೊಂಡಿ ರುವ 17 ಶಾಸಕರ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್‍ನ ತ್ರಿಸದಸ್ಯ ಪೀಠ ಬುಧವಾರಕ್ಕೆ ಮುಂದೂಡಿದೆ. ನ್ಯಾಯ ಮೂರ್ತಿ ಎಸ್.ವಿ. ರಮಣ ಅವರನ್ನೊಳ ಗೊಂಡ ತ್ರಿಸದಸ್ಯ ಪೀಠ ಇಂದು ವಿಚಾರಣೆ ಯನ್ನು ಕೈಗೆತ್ತಿಕೊಂಡು ವಾದ ಪ್ರತಿವಾದ ಆಲಿಸಿ, ಈ ಬಗ್ಗೆ ಸುದೀರ್ಘ ಚರ್ಚೆ ಅವಶ್ಯವಿದೆ ಎಂದು ಸೆ. 25ಕ್ಕೆ ವಿಚಾರಣೆ ಯನ್ನು ಮುಂದೂಡಿದರು.

ಇದಕ್ಕೂ ಮುನ್ನ ಅನರ್ಹ ಶಾಸಕರ ಪರ ವಾಗಿ ಮುಕುಲ್ ರೋಹಟಗಿ ವಾದ ಮಂಡಿ ಸಿದರೆ, ಕಾಂಗ್ರೆಸ್ ಪರ ಹಿರಿಯ ವಕೀಲ ಕಪಿಲ್ ಸಿಬಲ್, ವಿಧಾನಸಭಾ ಅಧ್ಯಕ್ಷರ ಪರ ತುಷಾರ್ ಮೆಹ್ತಾ ವಾದ ಮಂಡಿಸಿದರು. ಅನರ್ಹ ಶಾಸಕರ ಪರ ತಮಗೆ ಸಿಕ್ಕ ಸಮ ಯದಲ್ಲೇ ವಾದ ಮಂಡಿಸಿದ ಮುಕುಲ್ ರೋಹಟಗಿ ಅನರ್ಹ ಶಾಸಕರ ಕ್ಷೇತ್ರಗಳಿಗೆ ಅಕ್ಟೋಬರ್ 21 ರಂದು ನಿಗದಿಯಾಗಿರುವ ಉಪಚುನಾವಣೆಯನ್ನು ಮುಂದೂಡು ವಂತೆ ಕೋರಿದರು. ರಾಜೀನಾಮೆ ಸಲ್ಲಿ ಸಿದ್ದ ಶಾಸಕರಿಗೆ ಯಾವುದೇ ನೋಟಿಸು ಜಾರಿ ಮಾಡದೆ ಸಭಾಧ್ಯಕ್ಷರು ಅನರ್ಹ ಗೊಳಿಸಿದ್ದಾರೆ. ಒಂದು ವಾರ ಮೊದಲೇ ನೋಟಿಸ್ ನೀಡಿ ವಿಚಾರಣೆ ನಡೆಸಬೇಕು ಎಂಬ ನಿಯಮ ಇದ್ದರೂ ಈ ಶಾಸಕರ ವಿಚಾರದಲ್ಲಿ ಅದನ್ನು ಪಾಲಿಸಿಲ್ಲ. ಯಾವುದೇ ಶಾಸಕನ ರಾಜೀನಾಮೆ ವೈಯಕ್ತಿಕ ಮತ್ತು ಸ್ವಯಂಪ್ರೇರಿತವಾಗಿದ್ದಲ್ಲಿ ಅದನ್ನು ಸಭಾಧ್ಯಕ್ಷರು ಅಂಗೀಕರಿಸಬೇಕು, ಆದರೂ ಇಲ್ಲಿ ಯಾವುದೇ ವಿಚಾರಣೆ ನಡೆಸದೇ ಶಾಸಕ ರನ್ನು ಸದಸ್ಯತ್ವದಿಂದ ಅನರ್ಹಗೊಳಿಸ ಲಾಗಿದೆ. ಇದೀಗ ಈ ಅನರ್ಹ ಶಾಸಕರ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆ ಆಗಿದ್ದು, ಸಭಾಧ್ಯಕ್ಷರ ಆದೇಶದಂತೆ ಈ ವಿಧಾನಸಭೆ ವಿಸರ್ಜನೆ ಆಗುವವರೆಗೆ ಇವರು ಸ್ಪರ್ಧೆ ಮಾಡುವಂತಿಲ್ಲ ಎಂಬ ಆದೇಶ ಇರು ವುದರಿಂದ ಈ ಉಪಚುನಾವಣೆಗಳಲ್ಲಿ ಸ್ಪರ್ಧೆ ಮಾಡದಂತಾಗಿದೆ. ಇದರ ಮಧ್ಯೆ ಚುನಾವಣಾ ಆಯೋಗದ ಪರ ವಕೀಲ ರಾಕೇಶ್ ದ್ವಿವೇದಿ, ಅನರ್ಹರ ಸ್ಪರ್ಧೆಯ ಅವಕಾಶದ ಬಗ್ಗೆ ಸುಳಿವು ನೀಡಿದ್ದು, ಇವರು ಉಪ ಚುನಾವಣೆಯಲ್ಲಿ ಕಣಕ್ಕಿಯುವ ಆಶಾಭಾವನೆ ವ್ಯಕ್ತ ಗೊಂಡಿತು. ಹಾಗಾಗಿ ಒಂದೋ ಅನರ್ಹ ಶಾಸಕರ ಸ್ಪರ್ಧೆಗೆ ಅವಕಾಶ ನೀಡಿ ಇಲ್ಲವೇ ಉಪಚುನಾ ವಣೆಗೆ ತಡೆ ನೀಡಿ ಎಂದು ರೋಹಟಗಿ ಅವರು ತ್ರಿಸದಸ್ಯ ಪೀಠಕ್ಕೆ ಮನವಿ ಮಾಡಿಕೊಂಡರು.

361/ಬಿ ಪ್ರಕಾರ ಅನರ್ಹರಾದವರು ಅವಧಿ ಮುಗಿ ಯುವವರೆಗೂ ಲಾಭದಾಯಕ ಹುದ್ದೆ ಹೊಂದು ವಂತಿಲ್ಲ. ಮರು ಆಯ್ಕೆಯಾಗುವ ವಿಷಯದ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ರಾಜೀನಾಮೆ ಕೊಟ್ಟ ಮೇಲೆ ಪಕ್ಷ ಬದಲಾವಣೆಗೂ ಅಭ್ಯಂತರವಿಲ್ಲ. ಈ ಬಗ್ಗೆ 361/ ಬಿನಲ್ಲಿ ಪಕ್ಷಾಂತರದ ಬಗ್ಗೆ ಉಲ್ಲೇ ಖವಿಲ್ಲ ಎಂದು ಬಲವಾಗಿ ವಾದ ಮಂಡಿಸಿದರು. ಉಪಚುನಾವಣೆಗೆ ತಡೆ ನೀಡಿ, ಈ ಹಿಂದೆ ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಪಕ್ಷಾಂತರ ನಿಷೇಧ ಕಾಯ್ದೆಯಡಿ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಪ್ರಕ್ರಿಯೆಗಾಗಿ ಏಳು ದಿನಗಳ ಬದಲು ಕೇವಲ ಮೂರು ದಿನಗಳ ಕಾಲಾವಕಾಶ ನೀಡಿ, ನೋಟಿಸ್ ನೀಡಲಾಗಿತ್ತು. ಸಭಾಧ್ಯಕ್ಷರು ನೀಡಿರುವ ಆದೇಶ ಸಂಪೂರ್ಣ ಕಾನೂನು ಬಾಹಿರ, ಅವರು ನೋಟಿಸ್ ನೀಡಿರುವುದು ಕಡ್ಡಾಯವಲ್ಲ. 2023 ರವರೆಗೆ ಇವರಿಗೆ ಸ್ಪರ್ಧೆಗೆ ಅವಕಾಶ ನೀಡದಂತಾಗಿದೆ. ಈಗ ಸ್ಪರ್ಧೆಗೆ ಅವಕಾಶ ನೀಡಿ, ಇಲ್ಲವೇ ಚುನಾವಣೆಗೆ ತಡೆ ನೀಡಿ ಎಂದು ರೋಹಟಗಿ ಮನವಿ ಮಾಡಿಕೊಂಡರು.

ಇದರ ನಡುವೆ ಕಾಂಗ್ರೆಸ್-ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್‍ಗೆ ನ್ಯಾಯಾಲಯ ನೋಟಿಸ್ ಜಾರಿಗೊಳಿಸಿತು. ರೋಹಟಗಿ ವಾದವನ್ನು ಕಾಂಗ್ರೆಸ್ ಪರ ವಕೀಲ ಕಪಿಲ್ ಸಿಬಲ್ ತಳ್ಳಿ ಹಾಕಿ, ಪೀಠಕ್ಕೆ ಕೆಲವು ಪ್ರಮಾಣ ಪತ್ರಗಳನ್ನು ಸಲ್ಲಿಸಿದರು. ಇದರಿಂದ ಮತ್ತಷ್ಟು ವಾದ-ಪ್ರತಿವಾದ ನಡೆಯಬೇಕಾದ ಹಿನ್ನೆಲೆಯಲ್ಲಿ ಬುಧವಾರಕ್ಕೆ ವಿಚಾರಣೆಯನ್ನು ನ್ಯಾಯಾಲಯ ಮುಂದೂಡಿತು.

Translate »