ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಆರೋಗ್ಯ ಸಚಿವರ ದಿಢೀರ್ ಭೇಟಿ: ರೋಗಿಗಳ ಕುಂದು-ಕೊರತೆ ವಿಚಾರಣೆ, ನಂತರ ವಾರ್ಡ್‍ನಲ್ಲೇ ವಾಸ್ತವ್ಯ
ಚಾಮರಾಜನಗರ

ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಆರೋಗ್ಯ ಸಚಿವರ ದಿಢೀರ್ ಭೇಟಿ: ರೋಗಿಗಳ ಕುಂದು-ಕೊರತೆ ವಿಚಾರಣೆ, ನಂತರ ವಾರ್ಡ್‍ನಲ್ಲೇ ವಾಸ್ತವ್ಯ

September 25, 2019

ಚಾಮರಾಜನಗರ, ಸೆ.24(ಎಸ್‍ಎಸ್)- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ರಾದ ಬಿ.ಶ್ರೀರಾಮುಲು ಅವರು ಇಂದು ದಿಢೀರ್ ನಗರದ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ, ಅಲ್ಲಿಯೇ ವಾಸ್ತವ್ಯ ಹೂಡುವ ಮೂಲಕ ರೋಗಿಗಳ ಹಾಗೂ ಸಾರ್ವಜನಿಕರ ಕುಂದುಕೊರತೆ ಆಲಿಸಿದರು.

ಜಿಲ್ಲಾ ಆಸ್ಪತ್ರೆಗೆ ರಾತ್ರಿ 9ರ ವೇಳೆಗೆ ಆಗಮಿಸಿದ ಸಚಿವರು, ಮೊದಲು ಕಣ್ಣಿನ ಚಿಕಿತ್ಸೆಗೆ ದಾಖ ಲಾಗಿರುವ ರೋಗಿಗಳ ವಾರ್ಡಿಗೆ ಭೇಟಿ ನೀಡಿ ರೋಗಿಗಳ ಕುಂದು-ಕೊರತೆ ವಿಚಾರಿಸಿದರು. ರೋಗಿಗಳ ಹಾಸಿಗೆಯಲ್ಲಿಯೇ ಕುಳಿತು ಆಸ್ಪತ್ರೆಯಲ್ಲಿ ನೀಡಲಾಗುತ್ತಿರುವ ಚಿಕಿತ್ಸೆ, ಔಷಧೋಪಚಾರಗಳ ಬಗ್ಗೆ ರೋಗಿಗಳಿಂದಲೇ ಮಾಹಿತಿ ಪಡೆದರು. ನಂತರ ಮಕ್ಕಳ ವಿಭಾಗಕ್ಕೆ ಭೇಟಿಕೊಟ್ಟು ಅಲ್ಲಿ ನೀಡ ಲಾಗುತ್ತಿರುವ ಚಿಕಿತ್ಸೆ ವಿಧಾನಗಳ ಬಗ್ಗೆ ವಿವರ ಪಡೆದರು. ಆಸ್ಪತ್ರೆಯಲ್ಲಿ ಅಗತ್ಯ ಸೌಲಭ್ಯ ಸಿಗುತ್ತಿ ವೆಯೇ ಎಂಬ ಬಗ್ಗೆ ಪ್ರಶ್ನಿಸಿದರು. ರೋಗಿಗಳ ಯೋಗ ಕ್ಷೇಮ ವಿಚಾರಿಸಿದರು.

ತುರ್ತು ಚಿಕಿತ್ಸಾ ಘಟಕಕ್ಕೆ ಭೇಟಿ ನೀಡಿ ಅಲ್ಲಿರುವ ವ್ಯವಸ್ಥೆಗಳನ್ನು ವೀಕ್ಷಿಸಿದರು. ಅಲ್ಲಿಯೂ ಚಿಕಿತ್ಸೆಗಾಗಿ ಬಂದಿದ್ದ ಸಾರ್ವಜನಿಕರೊಂದಿಗೆ ಮಾತನಾಡಿ ಚಿಕಿತ್ಸಾ ಸೌಲಭ್ಯಗಳ ಕುರಿತು ಮಾಹಿತಿ ಪಡೆದುಕೊಂಡರು. ಗ್ರಾಮೀಣ ಭಾಗದಿಂದ ಬಂದಿದ್ದ, ತೀವ್ರ ತರದ ಅನಾರೋಗ್ಯಕ್ಕೆ ತುತ್ತಾಗಿದ್ದ ಓರ್ವರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕಳುಹಿಸಲು ಶಿಫಾರಸ್ಸು ಮಾಡುವಂತೆ ಸೂಚಿಸಿದರು. ಆಸ್ಪತ್ರೆಗಳಿಗೆ ಬರುವ ರೋಗಿಗಳಿಗೆ ಯಾವುದೇ ತೊಂದರೆಯಾಗದಂತೆ ಚಿಕಿತ್ಸೆ ನೀಡಬೇಕು. ಸರ್ಕಾರದ ಆರೋಗ್ಯ ಯೋಜನೆಗಳನ್ನು ಸಮರ್ಪಕವಾಗಿ ತಲುಪಿಸಬೇಕು. ಔಷಧಿ, ಉಪಚಾರಗಳಿಗೆ ಯಾವುದೇ ದೂರು ಬಾರದಂತೆ ಪಾರದರ್ಶಕವಾಗಿ ಕರ್ತವ್ಯ ನಿರ್ವಹಿಸಬೇಕೆಂದು ಸೂಚನೆ ನೀಡಿದರು.

ಆಸ್ಪತ್ರೆಯ ಹೊರಭಾಗದಲ್ಲಿ ಜಮಾವಣೆಗೊಂಡಿದ್ದ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಆರೋಗ್ಯ ಸÀಚಿವರು ಸರ್ಕಾರ ಬಡವರಿಗಾಗಿ 5 ಲಕ್ಷ ರೂ.ವರೆಗಿನ ಚಿಕಿತ್ಸಾ ವೆಚ್ಚವನ್ನು ಭರಿಸುತ್ತಿದೆ. ಈ ಸೌಲಭ್ಯವನ್ನು ಪಡೆದುಕೊಳ್ಳಬೇಕು. ವಿವಿಧ ಆರೋಗ್ಯ ಯೋಜನೆಗಳ ಸದುಪಯೋಗ ಮಾಡಿಕೊಳ್ಳಬೇಕು ಎಂದು ಸಚಿವರು ತಿಳಿಸಿದರು. ಸಾರ್ವಜನಿಕರ ಆರೋಗ್ಯ ಸೌಕರ್ಯ, ಕೊರತೆಗಳನ್ನು ತಿಳಿದು ಕ್ರಮ ವಹಿಸುವ ಸಲುವಾಗಿ ಆಸ್ಪ್ಪತ್ರೆಗಳಿಗೆ ಭೇಟಿ ಕೊಡುತ್ತಿದ್ದೇನೆ. ಸರ್ಕಾರಿ ಆಸ್ಪತ್ರೆಗಳಲ್ಲಿ ವಾಸ್ತವ್ಯ ಹೂಡುವ ಮೂಲಕ ಆರೋಗ್ಯ ಸೌಲಭ್ಯಗಳಿಗೆ ಸಂಬಂಧಿಸಿದ ಕುಂದುಕೊರತೆಗಳನ್ನು ಅಲಿಸುತ್ತಿದ್ದೇನೆ ಎಂದು ಸಚಿವರು ನುಡಿದರು.

ಜಿಲ್ಲಾ ಆಸ್ಪತ್ರೆಯ 2ನೇ ಮಹಡಿಯಲ್ಲಿರುವ ಪ್ರಯೋಗಾಲಯ ವಿಭಾಗದಲ್ಲಿರುವ ಡೆಮಾನ್‍ಸ್ಟ್ರೇಶನ್ ಕೊಠಡಿಯಲ್ಲಿ ಸಚಿವರು ವಾಸ್ತವ್ಯ ಹೂಡಿದ್ದಾರೆ. ಪರಿಶೀಲನೆ ಹಾಗೂ ಭೇಟಿಯ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಹರ್ಷಲ್ ಬೋಯರ್ ನಾರಾಯಣರಾವ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಚ್.ಡಿ. ಆನಂದ್‍ಕುಮಾರ್, ಜಿಲ್ಲಾ ಪಂಚಾಯತ್ ಸದಸ್ಯರಾದ ಸಿ.ಎನ್. ಬಾಲರಾಜು, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಂ.ಸಿ. ರವಿ, ಜಿಲ್ಲಾ ಸರ್ಜನ್ ರಾಜೇಂದ್ರ, ವೈದ್ಯಾಧಿಕಾರಿಗಳಾದ ಡಾ. ಮಹೇಶ್ ಸೇರಿದಂತೆ ಇತರರು ಹಾಜರಿದ್ದರು. ನಗರ ಭೇಟಿಗೂ ಮೊದಲು ಯಳಂದೂರು ಸರ್ಕಾರಿ ಆಸ್ಪತ್ರೆಗೆ ಸಚಿವರು ಬೇಟಿ ನೀಡಿ ಅಲ್ಲಿಯೂ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಇದೇ ವೇಳೆ ಸಾರ್ವಜನಿಕರಿಂದ ಆಸ್ಪತ್ರೆಯ ಸಂಬಂಧ ಕುಂದುಕೊರತೆಗಳನ್ನು ವಿಚಾರಿಸಿದರು.

Translate »