ಮರಳು ಸುಲಭ ಲಭ್ಯ
ಮೈಸೂರು

ಮರಳು ಸುಲಭ ಲಭ್ಯ

September 25, 2019

ಬೆಂಗಳೂರು, ಸೆ.24(ಕೆಎಂಶಿ)- ಮರಳು ನೀತಿ ಸಡಿಲಗೊಳಿಸಲು ರಾಜ್ಯ ಸರ್ಕಾರ ಮುಂದಾ ಗಿದ್ದು, ಮುಂದಿನ ಎರಡು ಮೂರು ತಿಂಗಳಲ್ಲಿ ಎಲ್ಲೆಡೆ ಮರಳು ಸುಲಭವಾಗಿ ದೊರೆ ಯಲಿದೆ. ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ.ಸಿ. ಪಾಟೀಲ್, ಇಲಾಖಾ ವತಿಯಿಂದ ವಾರ್ಷಿಕ ಆದಾಯವನ್ನು 3200 ರಿಂದ 3700 ಕೋಟಿ ರೂ.ಗೆ ಹೆಚ್ಚಿಸುವ ಉದ್ದೇಶ ದಿಂದ ಮರಳು ಮತ್ತು ಗ್ರಾನೈಟ್ ಮೇಲಿನ ಬಿಗಿ ಕಾನೂನನ್ನು ಸಡಿಲಗೊಳಿಸಲಾಗುತ್ತಿದೆ.

ಮರಳು ದಂಧೆಗೆ ಕಡಿವಾಣ ಹಾಕಿ ಗ್ರಾಹಕರಿಗೆ ಕಡಿಮೆ ದರದಲ್ಲಿ ಮರಳು ದೊರೆಯಬೇಕು ಮತ್ತು ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಹೆಚ್ಚಿನ ಆದಾಯ ತರುವುದನ್ನು ಗಮನದಲ್ಲಿಟ್ಟುಕೊಂಡು ಹೊಸ ಕಾನೂನು ಜಾರಿಗೊಳಿಸುತ್ತಿದ್ದೇವೆ. ಕಾವೇರಿ-ಕೃಷ್ಣ ಕೊಳ್ಳದಲ್ಲಿ ಇತ್ತೀಚೆಗೆ ಭಾರೀ ಮಳೆ ಮತ್ತು ನೆರೆಯಿಂದ ನದಿ ಪಾತ್ರದಲ್ಲಿ ಮರಳು ಉಕ್ಕಿ ಬಂದಿದೆ. ಇಲಾಖಾಧಿಕಾರಿಗಳ ಅಂದಾ ಜಿನ ಪ್ರಕಾರ ಎರಡರಿಂದ ನಾಲ್ಕು ಮಿಲಿಯನ್ ಮೆಟ್ರಿಕ್ ಟನ್ ಮರಳು ಶೇಖರಣೆಗೊಂಡಿದೆ.

ಇದು ನದಿ ದಡದ ಪಾತ್ರವಲ್ಲದೆ, ರೈತರ ಪಟ್ಟ ಭೂಮಿಯಲ್ಲೂ ದೊಡ್ಡ ಪ್ರಮಾಣ ದಲ್ಲಿ ಸಂಗ್ರಹಗೊಂಡಿದೆ. ಈ ಮರಳನ್ನು ವ್ಯಾಪಾರಿಗಳು ಕದ್ದು ಮಾರಾಟ ಮಾಡು ತ್ತಿದ್ದಾರೆ. ಈ ದಂಧೆಗೆ ಕಡಿವಾಣ ಹಾಕಿ, ಸರ್ಕಾರಕ್ಕೆ ರಾಯಲ್ಟಿ ಕಟ್ಟಿ ಇಂತಹ ಮರ ಳನ್ನು ಎಲ್ಲಿಯಾದರೂ ತುಂಬಿಕೊಳ್ಳಲು ಇಂದಿನಿಂದಲೇ ಅವಕಾಶ ಮಾಡಿಕೊಡ ಲಾಗಿದೆ. ಪಟ್ಟ ಭೂಮಿಯಲ್ಲಿರುವ ಮರಳನ್ನು ಸರ್ಕಾರಕ್ಕೆ ರಾಜಸ್ವ ಪಾವತಿಸಿ ಅವರೂ ಮಾರಿಕೊಳ್ಳಬಹುದು. ಒಂದು ವೇಳೆ ತಮ್ಮ ಸ್ವಂತಕ್ಕಾಗಿ ಬಳಕೆ ಮಾಡಿಕೊಳ್ಳಲು ಯಾವುದೇ ಹಣ ಪಾವತಿಸಬೇಕಾಗಿಲ್ಲ. ಅಷ್ಟೇ ಅಲ್ಲ, ಲೋಕೋಪಯೋಗಿ ಕಾಮಗಾರಿಗಳಿಗೂ ಉಚಿತವಾಗಿ ಮರಳು ಸಾಗಾಣಿಕೆ ಮಾಡಿಕೊಳ್ಳಬಹುದು. ದುಬೈನಿಂದ ಮೂಟೆಗಟ್ಟಲೇ ಚಿನ್ನ ತರಬಹುದು. ಆದರೆ ಮರಳು ತರಲು ಸಾಧ್ಯವಾಗುತ್ತಿಲ್ಲ ಎಂದು ಸರ್ಕಾರದ ಬಳಿ ಸಾಕಷ್ಟು ದೂರುಗಳು ಬಂದಿವೆ. ಗ್ರಾಹಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಆಂಧ್ರ ಮಾದರಿ ಮರಳು ನೀತಿಯನ್ನು ಜಾರಿಗೆ ತರಲು ಚಿಂತನೆ ನಡೆದಿದೆ. ಇದಕ್ಕಾಗಿ ಅಧಿಕಾರಿಗಳ ತಂಡವೊಂದನ್ನು ಕಳುಹಿಸಿ, ಅಧ್ಯಯನ ನಡೆಸಿ, ನಂತರ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಹಾಗೂ ಸುಲಭವಾಗಿ ಮರಳು ದೊರೆಯುವ ನೀತಿ ಜಾರಿಗೊಳಿಸಲಾಗುವುದು ಎಂದರು.

ಈಗಾಗಲೇ ಜಿಲ್ಲಾಡಳಿತಗಳಿಗೆ ಸೂಚನೆ ನೀಡಿದ್ದು, ಎಲ್ಲಿ ಗಣಿಗಾರಿಕೆ ನಡೆಸಬಹುದೋ ಅಲ್ಲಿ ಅವಕಾಶ ಕಲ್ಪಿಸಿ, ಸರ್ಕಾರಕ್ಕೆ ರಾಜಸ್ವ ನೀಡದೇ ಕಳ್ಳ ಸಾಗಾಣಿಕೆ ಮಾಡುವುದನ್ನು ತಡೆಗಟ್ಟಲು ಪೊಲೀಸರನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವಂತೆ ಸಲಹೆ ಮಾಡಲಾಗಿದೆ. ಪೊಲೀಸರ ವಿಶ್ವಾಸ ಪಡೆಯುವ ಉದ್ದೇಶದಿಂದ ಚಳಿಗಾಲದ ಅಧಿವೇಶನಕ್ಕೂ ಮುನ್ನ ಜಿಲ್ಲಾ ವರಿಷ್ಠಾಧಿಕಾರಿಗಳ ಸಭೆ ಕರೆದು, ಮರಳು ಮಾಫಿಯಾ ತಡೆಯುವುದು ಮತ್ತು ಸುಲಭ ದರದಲ್ಲಿ ಗ್ರಾಹಕರಿಗೆ ಮರಳು ದೊರೆಯುವಂತೆ ಮಾಡಲು ಅವರಿಗೆ ಕೆಲವು ಸಲಹೆ ಸೂಚನೆಗಳನ್ನು ಅಂದಿನ ಸಭೆಯಲ್ಲಿ ನೀಡಲಾಗುವುದು.

ಅಲ್ಲದೆ, ನೆರೆಯ ಆಂಧ್ರ ಮತ್ತು ಕೇರಳಕ್ಕೆ ನಮ್ಮ ರಾಜ್ಯದ ಮರಳು ದೊಡ್ಡ ಪ್ರಮಾಣದಲ್ಲಿ ಸಾಗಾಣಿಕೆಯಾಗುತ್ತಿದೆ. ಇದನ್ನು ತಡೆಯಲು ಬಿಗಿ ಕ್ರಮ ಕೈಗೊಳ್ಳಿ ಎಂದು ಆದೇಶ ಮಾಡಲಾಗುವುದು ಎಂದರು. ಅಕ್ರಮ ಗ್ರಾನೈಟ್ ದಂಧೆಗೂ ಕಡಿವಾಣ ಹಾಕುವ ನಿರ್ಧಾರ ಕೈಗೊಂಡಿದ್ದು, ಇನ್ನು ಮುಂದೆ ರಾಯಲ್ಟಿ ಪಾವತಿಸದೇ ಸಿದ್ಧಪಡಿಸಿದ ಗ್ರಾನೈಟ್ ಮಾರಾಟ ಮಾಡಿದರೆ, ಅಂತಹವರಿಗೆ ದೊಡ್ಡ ಪ್ರಮಾಣದಲ್ಲಿ ದಂಡ ವಿಧಿಸಲಾಗುವುದು. ಗ್ರಾನೈಟ್ ಸಿದ್ಧಪಡಿಸುವ ಕಾರ್ಖಾನೆಗಳು, ತಮಗೆ ಬರುವ ಕಲ್ಲಿಗೆ ರಾಜಸ್ವ ಪಾವತಿಯಾಗಿದೆಯೇ ಇಲ್ಲವೆ ಎಂಬುದನ್ನು ಪರಿಶೀಲನೆ ಮಾಡಬೇಕು. ಅವರು ಪರಿಶೀಲನೆ ಮಾಡದೆ, ಕಲ್ಲುಗಳನ್ನು ಸಿದ್ಧಪಡಿಸಿಕೊಟ್ಟರೆ, ಅಂತಹ ಕಂಪನಿಗಳೇ ದಂಡ ತೆರಬೇಕಾಗುತ್ತದೆ ಎಂದು ಎಚ್ಚರಿಸಿದರು. ಕೇಂದ್ರದ ನಿಯಮಾವಳಿ ಅನುಸಾರ ಕಬ್ಬಿಣದ ಅದಿರು ತೆಗೆಯಲು ಸಿ-ಕೆಟಗರಿಯ 18 ಕಂಪನಿಗಳಿಗೆ ಅನುಮತಿ ನೀಡಲಾಗಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

Translate »