ಮಾಜಿ ಸಿಎಂಗಳಾದ ಕುಮಾರಸ್ವಾಮಿ-ಸಿದ್ದರಾಮಯ್ಯ ಪರಸ್ಪರ ವಾಕ್ಸಮರ:ಹದ್ದು-ಗಿಣಿ ಹೆಸರಲ್ಲಿ ಕುಕ್ಕಾಟ!
ಮೈಸೂರು

ಮಾಜಿ ಸಿಎಂಗಳಾದ ಕುಮಾರಸ್ವಾಮಿ-ಸಿದ್ದರಾಮಯ್ಯ ಪರಸ್ಪರ ವಾಕ್ಸಮರ:ಹದ್ದು-ಗಿಣಿ ಹೆಸರಲ್ಲಿ ಕುಕ್ಕಾಟ!

September 25, 2019

ಬೆಂಗಳೂರು, ಸೆ.24(ಕೆಎಂಶಿ)- ಒಂದೆಡೆ ಉಪ ಚುನಾವಣೆ ಸಮರ ಕಾವೇರುತ್ತಿದ್ದರೆ, ಮತ್ತೊಂದೆಡೆ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ. ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ನಡುವೆ ವಾಕ್ಸಮರ ತಾರಕಕ್ಕೇರುತ್ತಿದೆ.

ಎರಡು ದಿನಗಳ ಹಿಂದೆ ಬೆಂಗಳೂರಿನಲ್ಲಿ ನಡೆದ `ಸಿದ್ದರಾಮಯ್ಯ ಆಡಳಿತ ಅಂತರಂಗ-ಬಹಿರಂಗ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಆಡಿದ ಮಾತೊಂದು ಮಾಜಿ ಸಿಎಂಗಳ  ಜಂಗಿ ಕುಸ್ತಿಗೆ ಕಾರಣವಾಗಿದೆ. `ಚಾಮುಂಡೇಶ್ವರಿ ಸೋಲು ಒಂದು ಆಕಸ್ಮಿಕ ಗಾಯ. ಅದನ್ನು ಒಂದು ಕೆಟ್ಟ ಕನಸ್ಸೆಂದು ಮರೆಯಿರಿ’ ಎಂದು ಸಿದ್ದರಾಮಯ್ಯ ನವರಿಗೆ ಸಮಾಧಾನ ಹೇಳಿದ್ದ ರಮೇಶ್‍ಕುಮಾರ್,  ಕೋಲಾರದಲ್ಲಿ ಸ್ಪರ್ಧಿಸುವಂತೆ ಒತ್ತಾಯಿಸಿದರೂ ಹಠ ಹಿಡಿದು ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿ ಸಿದ್ದರು. ಅವರೇ ಸಾಕಿದ ಗಿಳಿಗಳು ಹದ್ದಾಗಿ ಕುಕ್ಕಿ ದವು. ಕಪ್ಪು ಕನ್ನಡಕ ಹಾಕಿರುವುದರಿಂದ ಗಾಯ ಗಳು ಕಾಣುತ್ತಿಲ್ಲ. ಅವರನ್ನು ಸೋಲಿನ ನೋವಿ ನಿಂದ ಹೊರತರಬೇಕಿದೆ’ ಎಂದಿದ್ದರು. ರಮೇಶ್ ಕುಮಾರ್ ಭಾಷಣದಲ್ಲಿ ಬಳಸಿದ `ನೀನೇ ಸಾಕಿದ ಗಿಣಿ, ನಿನ್ನ ಮುದ್ದಿನ ಗಿಣಿ, ಹದ್ದಾಗಿ ಕುಕ್ಕಿತ್ತಲ್ಲೋ…’ ಸಾಲನ್ನು ಬಳಸಿಕೊಂಡು ಮಾಜಿ ಸಿಎಂಗಳು ಪರಸ್ಪರ ವಾಕ್ಸಮರ ಮುಂದುವರೆಸಿದ್ದಾರೆ. ಕುಮಾರಸ್ವಾಮಿ ಅವರು, ನಿನ್ನೆ ಸಿದ್ದರಾಮಯ್ಯ ವಿರುದ್ಧ ನೀಡಿದ್ದ ಹೇಳಿಕೆಗೆ ಇಂದು ತಿರುಗೇಟು ನೀಡಿರುವ ಅವರು, ಹೌದು ನನಗೆ ನಂಬಿಕಸ್ಥರಿಂದಲೇ ಮೋಸವಾಗಿದೆ ಎಂಬುದನ್ನು ಒಪ್ಪಿಕೊಳ್ಳುವುದರ ಜೊತೆಗೆ ಕುಮಾರಸ್ವಾಮಿಯವರಿಗೂ ತಿರುಗೇಟು ನೀಡಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ, ತುಮಕೂರಿನಲ್ಲಿ ಜೆಡಿಎಸ್ ಸೋಲಿಗೆ ಹಾಗೂ ಕೋಲಾರದಲ್ಲಿ ಕಾಂಗ್ರೆಸ್ ಸೋಲಿಗೆ ಸಿದ್ದರಾಮಯ್ಯ ಸಾಕಿದ ಗಿಣಿಗಳೇ ಕಾರಣ ಎಂದು ಹೇಳುವ ಮೂಲಕ ಕುಮಾರಸ್ವಾಮಿ `ಹದ್ದು-ಗಿಣಿ’ ಕತೆಯನ್ನು ಪುನರಾರಂಭಿಸಿದ್ದರು. ಈ ಆರೋಪಕ್ಕೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, `ನಾನೇ ನಂಬಿದ ಗಿಣಿಗಳು ಹದ್ದಾಗಿ ಕಾಡಿದ್ದು ನಿಜ. ನನ್ನದೇ ತಪ್ಪು, ನಾಲ್ಕು ದಶಕಗಳ ರಾಜಕೀಯ ಒಡನಾಟದ ಅನುಭವದ ನಂತರವೂ ಹದ್ದನ್ನು ಗಿಣಿಯೆಂದು ಭ್ರಮಿಸಿ ಮೈತ್ರಿ ಮಾಡಿಕೊಂಡೆವು. ಕುಕ್ಕದೇ ಬಿಡುತ್ತಾ, ಅನುಭವಕ್ಕಿಂತ ದೊಡ್ಡ ಪಾಠ ಏನಿದೆ ಹೇಳಿ?’ ಎಂದು ಪ್ರಶ್ನೆ ಮಾಡಿ, ಚಾಟಿ ಬೀಸಿದ್ದಾರೆ.

ಸಿದ್ದರಾಮಯ್ಯ ಟ್ವಿಟರ್‍ಗೆ ರಾಮನಗರದದಲ್ಲಿ ಖಾರವಾಗಿ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, `ನಾನು ಅವರು ಸಾಕಿದ ಗಿಣಿ ಅಲ್ಲ, ರಾಮನಗರ ಜಿಲ್ಲೆಯ ಜನ ನನ್ನನ್ನು ಬೆಳೆಸಿದ್ದಾರೆ. ಸಿದ್ದರಾಮಯ್ಯನವರಿಂದ ನಾನೇನು ಬೆಳೆದಿಲ್ಲ. ದೇವೇಗೌಡರು, ಸಿದ್ದರಾಮಯ್ಯನವರಂತಹ ಗಿಣಿಗಳನ್ನು ಸಾಕಷ್ಟು ಬೆಳೆಸಿದ್ದಾರೆ, ಆದರೆ ಅವುಗಳೇ ಹೇಗೆ ಕುಕ್ಕಿದ್ದವು ಎಂದು ನನಗೆ ಗೊತ್ತಿದೆ’ ಎಂದಿದ್ದಾರೆ. ಇದಕ್ಕೆ ಮತ್ತೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, `ಬೇರೆ ಪಕ್ಷಗಳ ಹೆಗಲ ಮೇಲೆ ಕೂತು ಮುಖ್ಯಮಂತ್ರಿಯಾದ ಎಚ್.ಡಿ ಕುಮಾರಸ್ವಾಮಿ, ನೀವು ಸ್ವಂತ ಬಲದಿಂದ ಸಿಎಂ ಆಗಲು ಎಂದಾದರೂ ಸಾಧ್ಯವೇ?’ ಎಂದು ಸವಾಲು ಹಾಕಿದ್ದಾರೆ.

ಸಿದ್ದರಾಮಯ್ಯ ಅವರ ಈ ಟ್ವಿಟ್‍ಗೆ ನಗರದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ನಾನು ಮುಖ್ಯಮಂತ್ರಿಯಾಗಿದ್ದು, ಎಲ್ಲರಿಗೂ ಗೊತ್ತಿದೆ. ಒಂದು ಬಾರಿ ಬಿಜೆಪಿ, ಮತ್ತೊಂದು ಬಾರಿ ಕಾಂಗ್ರೆಸ್ ವರಿಷ್ಠರಿಂದ. ನನ್ನ ಸ್ವಂತ ಬಲದಿಂದ ಮುಖ್ಯಮಂತ್ರಿಯಾಗಿದ್ದೇನೆ ಎಂದು ಎಲ್ಲಿಯೂ ಹೇಳಿಕೊಂಡಿಲ್ಲ. ಸಿದ್ದರಾಮಯ್ಯ ಬೆಂಬಲದಿಂದ ನಾನು ಮುಖ್ಯಮಂತ್ರಿ ಆಗಲಿಲ್ಲ. ಕಾಂಗ್ರೆಸ್ ವರಿಷ್ಠರು ನನಗೆ ನಾಯಕತ್ವ ಕೊಟ್ಟರು. ಅದನ್ನು ಸಹಿಸಲಾಗದೆ, ಈ ಸರ್ಕಾರವನ್ನು ಕೆಡವಲು ಅವರೇ ಮುಂದಾದರು. ನಾವಾದರೂ, ರಾಜ್ಯದಲ್ಲಿ ಒಂದು ಪ್ರಾದೇಶಿಕ ಪಕ್ಷ ಕಟ್ಟಿ ಬೆಳೆಸಿದ್ದೇವೆ. ಇವರು ಕಾಂಗ್ರೆಸ್ ಪಕ್ಷಕ್ಕೆ ಹೋಗಿ, ಅಲ್ಲಿನ ಶಕ್ತಿಯನ್ನು ಧಾರೆ ಎರೆಸಿಕೊಂಡು ಬೆಳೆದವರು. ಸಿದ್ದರಾಮಯ್ಯನವರಿಗೆ ತಾಕತ್ತಿದ್ದರೆ, ಕಾಂಗ್ರೆಸ್ ಬಿಟ್ಟು ಒಂದು ಪ್ರಾದೇಶಿಕ ಪಕ್ಷ ಕಟ್ಟಲಿ ನೋಡೋಣ ಎಂದು ಸವಾಲು ಹಾಕಿದರು.

ಮೂಲ ಕಾಂಗ್ರೆಸ್ಸಿಗರನ್ನು ತುಳಿದು, ಮೂಲೆಗುಂಪು ಮಾಡಿ, ಅವರು ಹೇಗೆ ನಾಯಕರಾದರು ಎಂಬುದು ನನಗೆ ಗೊತ್ತಿಲ್ಲವೆ?. ನಾನು ಅವರ ನೆರಳಿನಲ್ಲಿ ರಾಜಕೀಯ ಮಾಡಲಿಲ್ಲ. ನನ್ನ ಮನೆ ದುಡ್ಡು ಹಾಕಿ ರಾಜಕೀಯ ಮಾಡಿದ್ದೇನೆ, ಕಾಂಗ್ರೆಸ್‍ನವರು ನನ್ನನ್ನು ಬಳಸಿಕೊಂಡು ಬಿಸಾಕಿದರು. ನನ್ನ ಮನೆ ಬಾಗಿಲಿಗೆ ಅವರು ಬಂದಿದ್ದರೇ ಹೊರತು, ನಾನು ಅವರ ಮನೆ ಬಾಗಿಲಿಗೆ ಹೋಗಿರಲಿಲ್ಲ.  ಅವರಿಗೆ ದೇವೇಗೌಡರ ಒಡನಾಟವಿತ್ತು. ಸಿದ್ದರಾಮಯ್ಯನವರನ್ನು ಒಂದು ಶಕ್ತಿಯಾಗಿ ಬೆಳೆಸಿದರು. ಬೆಂಗಳೂರಿನ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ನಡೆದ ಕಾರ್ಯಕ್ರಮವೊಂದರ ಬ್ಯಾನರ್‍ನಲ್ಲಿ ಫೋಟೋ ಹಾಕಿಲ್ಲ ಎಂಬ ಸಣ್ಣ ಕಾರಣಕ್ಕೆ ಮುನಿಸಿಕೊಂಡು ಮನೆಯಲ್ಲಿ ಕುಳಿತಿದ್ದ ವ್ಯಕ್ತಿಯಿಂದ ನಾನು ಪಾಠ ಕಲಿಯಬೇಕಿಲ್ಲ ಎಂದು ಹೆಚ್‍ಡಿಕೆ, ಸಿದ್ದರಾಮಯ್ಯ ಅವರನ್ನು ಜರಿದಿದ್ದಾರೆ. ಸಿದ್ದರಾಮಯ್ಯ ಟ್ವಿಟರ್‍ನಲ್ಲಿ ಮುಂದುವರೆದು, `ಕುಮಾರಸ್ವಾಮಿ ಅವರೇ, ನನ್ನನ್ನು ಕೂಡಾ ಬೆಳೆಸಿದ್ದು ರಾಜ್ಯದ ಜನತೆ. ನಮ್ಮ ಪಕ್ಷಕ್ಕೆ ಜನ ನೀಡಿದ ಆಶೀರ್ವಾದದ ಬಲದಿಂದ ನಾನು 5 ವರ್ಷ ಮುಖ್ಯಮಂತ್ರಿಯಾಗಿದ್ದೇ ಹೊರತು ಯಾವುದೇ ಹದ್ದು-ಗಿಣಿಗಳ ಹಂಗಿನಿಂದಲ್ಲ. ಅಲ್ಲದೆ ಕುಮಾರಸ್ವಾಮಿಯವರನ್ನು ಸಾಕಿದ್ದೇನೆ ಎಂದು ನಾನು ಎಲ್ಲಿ ಹೇಳಿದ್ದೆ?. ನಿಮ್ಮನ್ನು ಸಾಕಿದ್ದು ದೇವೇಗೌಡರು ಅದಕ್ಕಾಗಿ ಬಳಸಿಕೊಂಡದ್ದು ಮಾತ್ರ ನಮ್ಮಂತಹವರನ್ನು. ಬಳಸಿ ಬಿಸಾಡುವ ಪಾಠವನ್ನು ನೀವೂ ಬಹುಬೇಗ ಕಲಿತುಬಿಟ್ಟಿರಿ. ಈ ಬಗ್ಗೆ ಬಿ.ಎಸ್ ಯಡಿಯೂರಪ್ಪನವರನ್ನು ಕೇಳಿ, ಹೇಳ್ತಾರೆ’ ಎಂದು ಟ್ವೀಟ್ ಮಾಡಿದ್ದರು. ದೋಸ್ತಿಯಾಗಿ ಕಟ್ಟಿದ್ದ ಸರ್ಕಾರ ಮುರಿದು ಬೀಳುತ್ತಿದ್ದಂತೆ ಮುಸುಕಿನ ಗುದ್ದಾಟ ಆರಂಭಿಸಿದ ಮಾಜಿ ಸಿಎಂಗಳು,  ಉಪಚುನಾವಣೆ ಘೋಷಣೆ ಆಗುತ್ತಿದ್ದಂತೆ ಬಹಿರಂಗ ವಾಕ್ಸಮರಕ್ಕೆ ಇಳಿದಿದ್ದಾರೆ.

 

Translate »