ಬಾಲಿವುಡ್ `ಬಿಗ್ ಬಿ’ ಮುಡಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ
ಮೈಸೂರು

ಬಾಲಿವುಡ್ `ಬಿಗ್ ಬಿ’ ಮುಡಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ

September 25, 2019

ಮುಂಬೈ/ನವದೆಹಲಿ, ಸೆ.24-ಬಾಲಿವುಡ್ ದಿಗ್ಗಜ ಬಿಗ್ ಬಿ ಅಮಿತಾಭ್ ಬಚ್ಚನ್ ಅವರು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ ಅವರು ಕೇಂದ್ರ ಸರ್ಕಾರ ನೀಡುವ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಆಯ್ಕೆ ಆಗಿರುವುದಾಗಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಅವರು ಟ್ವೀಟ್ ಮೂಲಕ ಮಾಹಿತಿ ಖಚಿತಪಡಿಸಿದ್ದಾರೆ. ಸಿನಿರಂಗದಲ್ಲಿ ಎರಡು ತಲೆ ಮಾರು ರಂಜಿಸಿ, ಸಾಕಷ್ಟು ಮಂದಿಗೆ ಸ್ಫೂರ್ತಿಯಾ ಗಿರುವ ಅಮಿತಾಭ್ ಬಚ್ಚನ್ ಅವರು ಸರ್ವಾನು ಮತದಿಂದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಇಡೀ ದೇಶ ಹಾಗೂ ಅಂತಾರಾಷ್ಟ್ರೀಯ ಸಮುದಾಯ ಈ ಆಯ್ಕೆಯಿಂದ ಸಂತಸಗೊಂಡಿದೆ. ಅಮಿತಾಭ್ ಅವರಿಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು ಎಂದು ಪ್ರಕಾಶ್ ಜಾವಡೇಕರ್ ಟ್ವೀಟ್ ಮಾಡಿದ್ದಾರೆ.

ಸಿನಿಮಾ ಕ್ಷೇತ್ರದ ಸಾಧನೆಗೆ ನೀಡುವ ಅತ್ಯುನ್ನತ ಪ್ರಶಸ್ತಿ ಇದಾಗಿದ್ದು, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾದ ಮೇರುನಟ ಎಂಬ ಖ್ಯಾತಿಗೆ ಬಿಗ್ ಬಿ ಪಾತ್ರರಾಗಿದ್ದಾರೆ. ಭಾರತೀಯ ಚಿತ್ರರಂಗದ ಪಿತಾಮಹ ದಾದಾಸಾಹೇಬ್ ಫಾಲ್ಕೆ ಹೆಸರಿನಲ್ಲಿ ಈ ಪುರಸ್ಕಾರ ನೀಡಲಾಗುತ್ತದೆ. ಕನ್ನಡದ ವರನಟ ಡಾ. ರಾಜ್‍ಕುಮಾರ್ ಸೇರಿ ಬಾಲಿವುಡ್ ದಿಗ್ಗಜರಾದ ವಿನೋದ್ ಖನ್ನಾ, ಮನೋಜ್ ಕುಮಾರ್, ಶಶಿ ಕಪೂರ್,ಮನ್ನಾ ಡೇ ಇನ್ನೂ ಹಲವರು ಈ ಪ್ರತಿಷ್ಠಿತ ಪುರಸ್ಕಾರಕ್ಕೆ ಭಾಜನರಾಗಿರುವುದನ್ನು ಇಲ್ಲಿ ಸ್ಮರಿಸಬಹುದು. ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಭಾರತೀಯ ಚಿತ್ರರಂಗದಲ್ಲಿನ ಜೀವಮಾನದ ಸಾಧನೆಗಾಗಿ ಭಾರತ ಸರ್ಕಾರ ನೀಡುವ ವಾರ್ಷಿಕ ಪ್ರಶಸ್ತಿಯಾಗಿದೆ. ಭಾರತೀಯ ಚಿತ್ರರಂಗದ ಪಿತಾಮಹರೆಂದೇ ಹೆಸರಾದ ದಾದಾಸಾಹೇಬ್ ಫಾಲ್ಕೆ, (ದುಂಡಿರಾಜ್ ಗೋವಿಂದ ಫಾಲ್ಕೆ) ಯವರ, ಜನ್ಮ ಶತಾಬ್ದಿಯ ವರ್ಷವಾದ 1969ರಲ್ಲಿ ಈ ಪ್ರಶಸ್ತಿಯನ್ನು ನೀಡುವ ಪರಂಪರೆ ಆರಂಭವಾಯಿತು. ಪ್ರತಿ ವರ್ಷದ ಪ್ರಶಸ್ತಿಯನ್ನು ಅದರ ಮುಂದಿನ ವರ್ಷದ ಕೊನೆಯಲ್ಲಿ ನಡೆಯುವ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಂದರ್ಭದಲ್ಲಿ ನೀಡಲಾಗುತ್ತದೆ.

Translate »