ಚಾಮುಂಡೇಶ್ವರಿ ಉತ್ಸವಮೂರ್ತಿಗೆ ಅಲಂಕರಿಸುವ ಸೀರೆ ರಾಜಕೀಯಕ್ಕೆ ತೆರೆ!
ಮೈಸೂರು

ಚಾಮುಂಡೇಶ್ವರಿ ಉತ್ಸವಮೂರ್ತಿಗೆ ಅಲಂಕರಿಸುವ ಸೀರೆ ರಾಜಕೀಯಕ್ಕೆ ತೆರೆ!

September 25, 2019

ಮೈಸೂರು, ಸೆ.24(ಆರ್‍ಕೆಬಿ)- ಮೈಸೂರು ದಸರಾ ಜಂಬೂಸವಾರಿ ವೇಳೆ ಚಿನ್ನದ ಅಂಬಾರಿಯಲ್ಲಿ ಆಸೀನ ರಾಗುವ ತಾಯಿ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಅಲಂಕರಿಸುವ ಸೀರೆಯನ್ನು ಇನ್ನು ಮುಂದೆ ರಾಜ್ಯ ಸರ್ಕಾರ ಯಾರಿಂದಲೂ ದಾನ ಪಡೆಯದಿರಲು ನಿರ್ಧರಿಸಿದೆ. ಈ ಮೂಲಕ ದೇವರಿಗೆ ಅಲಂಕರಿಸುವ ಸೀರೆ ವಿಚಾರದಲ್ಲಿ ನಡೆಯುತ್ತಿದ್ದ ರಾಜಕೀಯ ಮೇಲಾಟಕ್ಕೆ ಸರ್ಕಾರ ತೆರೆ ಎಳೆದಿದೆ.

ಈ ವಿಚಾರವನ್ನು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಮಂಗಳವಾರ ಸ್ಪಷ್ಪಪಡಿಸಿದರು. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸಭಾಂಗಣದಲ್ಲಿ ಸುದ್ದಿಗೋಷ್ಠಿ ಯಲ್ಲಿ ದಸರಾ ಕವಿಗೋಷ್ಠಿಯ ಪೋಸ್ಟರ್ ಬಿಡುಗಡೆ ಸಂದರ್ಭದಲ್ಲಿ ಸರ್ಕಾರದ ಈ ನಿರ್ಧಾರವನ್ನು ಪ್ರಕಟಿಸಿದರು.

ಈ ಕುರಿತಂತೆ ಹಿರಿಯರಾದ ಪ್ರೊ.ಪಿ.ವಿ.ನಂಜರಾಜ ಅರಸು ಮತ್ತು ಮಾಜಿ ಎಂಎಲ್‍ಸಿ ಡಿ.ಮಾದೇಗೌಡರು ನೀಡಿದ್ದ ಸಲಹೆಯನ್ನು ಪ್ರಸ್ತಾಪಿಸಿದ ಅವರು, ಚಾಮುಂಡೇ ಶ್ವರಿ ಉತ್ಸವ ಮೂರ್ತಿಗೆ ಸೀರೆ ದಾನ ಮಾಡುವ ವಿಚಾರದಲ್ಲಿ ಪ್ರತೀ ವರ್ಷ ನಾ ಮುಂದು, ತಾ ಮುಂದು ಎಂಬ ಗೊಂದಲ ಉಂಟಾಗುತ್ತಿದೆ. ನಾಡಹಬ್ಬದಲ್ಲಿ ಯಾವುದೇ ಗೊಂದಲಕ್ಕೆ ಅವ ಕಾಶ ಆಗಬಾರದು ಎಂಬ ಕಾರಣಕ್ಕೆ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಈ ವರ್ಷದಿಂದ ದೇವಿಯ ಅಲಂಕಾರಕ್ಕೆ ಸೀರೆ ಯನ್ನು ಜಿಲ್ಲಾಡಳಿತವೇ ನೀಡಲಿದೆ. ಹಾಗಾಗಿ ಇನ್ನು ಮುಂದೆ ಯಾರಿಂದಲೂ ಸೀರೆಗಳನ್ನು ಪಡೆಯುವಂತಿಲ್ಲ ಎಂದು ಜಿಲ್ಲಾಧಿ ಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು. ಚಾಮುಂಡೇ ಶ್ವರಿ ದೇವಿಯನ್ನು ಅಲಂಕರಿಸಲು ಸೀರೆ ದಾನ ಮಾಡಲು ಕೆಲವರು ತಮ್ಮದೇ ನಾಯಕರ ಮೂಲಕ ಜಿಲ್ಲಾಡಳಿತದ ಮೇಲೆ ಒತ್ತಡ, ಲಾಬಿಗಳು ನಡೆಯುವುದಕ್ಕೆ ಇನ್ನು ಅವಕಾಶವಿಲ್ಲ. ಅಲ್ಲದೆ ಇದು ಅನಗತ್ಯ ಗೊಂದಲ, ರಾಜಕೀಯ ಬೆರೆಸಲಾಗುತ್ತಿತ್ತು. ಹೀಗಾಗಿ ಅದ್ಧೂರಿ ದಸರಾ ಆಚರಿಸುವ ಸರ್ಕಾರ, ಜಿಲ್ಲಾಡಳಿತ ಚಾಮುಂಡೇಶ್ವರಿ ತಾಯಿಗೆ ಸೀರೆ ನೀಡುವುದೇ ಸೂಕ್ತ ಎಂಬ ನಿರ್ಧಾರಕ್ಕೆ ಬರಲಾಗಿದೆ ಎಂದರು. ಕಳೆದ ವರ್ಷದ ದಸರಾ ಮೆರವಣಿಗೆ ಸಂದರ್ಭದಲ್ಲಿ ದೇವಿಗೆ ಉಡಿಸುವ ಸೀರೆ ವಿಚಾರವೇ ವಿವಾದ ಹುಟ್ಟು ಹಾಕಿತ್ತು. ಒತ್ತಡಕ್ಕೆ ಮಣಿದು ದೇವಾಲಯ ದವರು ಎರಡು ಸೀರೆಯನ್ನು ದೇವಿಗೆ ಉಡಿಸುವಂತಹ ಪರಿಸ್ಥಿತಿ ನಿರ್ಮಾಣ ವಾಗಿತ್ತು. ಹೀಗೆ ನೋಡಿದರೆ 15 ವರ್ಷಗಳಿಂದ ಬೆಂಗಳೂರಿನ ಬಳೆಪೇಟೆಯ ವ್ಯಕ್ತಿಯೊಬ್ಬರು ಸೀರೆಯನ್ನು ನೀಡುತ್ತಾ ಬಂದಿದ್ದರು. ಅದಾದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾಲದಲ್ಲಿ ಅವರ ಪತ್ನಿ ನೀಡಿದ ಸೀರೆಯನ್ನು ದೇವಿಗೆ ಅಲಂಕರಿಸಲಾಗಿತ್ತು. ಇದಾದ ಬಳಿಕ ದೇವಿಗೆ ಸೀರೆ ಕೊಡಲು ಪ್ರಭಾವಿಗಳು ಮುಂದೆ ಬಂದು, ಈ ಸಂಬಂಧ ಶಿಫಾರಸ್ಸು ಮಾಡುವುದು ಹೆಚ್ಚಾಗಿ ಗೊಂದಲಕ್ಕೆ ಕಾರಣವಾಗಿತ್ತು. ಇದೆಲ್ಲವನ್ನು ತಡೆಯುವ ಸಲುವಾಗಿ ಜಿಲ್ಲಾಡಳಿತದಿಂದಲೇ ಸೀರೆಯನ್ನು ಉಡಿಸುವಂತೆ ಇತಿಹಾಸ ತಜ್ಞ ಪೆÇ್ರ. ನಂಜರಾಜ ಅರಸ್, ಮಾಜಿ ಎಂಎಲ್‍ಸಿ ಡಿ.ಮಾದೇಗೌಡರು ಈ ಬಗ್ಗೆ ಸಚಿವ ವಿ.ಸೋಮಣ್ಣ ಅವರಿಗೆ ಸಲಹೆ ನೀಡಿದ್ದರು. ಅವರ ಸಲಹೆಯನ್ನು ಪುರಸ್ಕರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ, ಇನ್ನು ಮುಂದೆ ಸರ್ಕಾರದಿಂದಲೇ ಸೀರೆ ನೀಡಲು ನಿರ್ಧರಿಸಿ, ಮುಂದಿನ ದಿನಗಳಲ್ಲಿ ಸೀರೆ ವಿಚಾರದ ಗೊಂದಲಕ್ಕೆ ತೆರೆ ಎಳೆದಿದ್ದಾರೆ.

Translate »