ಮೈಸೂರು,ಸೆ.24(ಎಂಟಿವೈ)- ದಸರಾ ಮಹೋತ್ಸವ ವೇಳೆ ಅರಮನೆಯಲ್ಲಿ ನಡೆಯುವ ಪ್ರಮುಖ ಧಾರ್ಮಿಕ ಆಚರಣೆ ಯಲ್ಲಿ ಖಾಸಗಿ ದರ್ಬಾರ್ ಒಂದಾಗಿದ್ದು, ಮಂಗಳವಾರ ಶಸ್ತ್ರಸಜ್ಜಿತ ಪೊಲೀಸರ ಕಣ್ಗಾವಲಿನಲ್ಲಿ ಸ್ಟ್ರಾಂಗ್ ರೂಮ್‍ನಿಂದ `ರತ್ನ ಖಚಿತ ಸಿಂಹಾಸನ’ದ ಬಿಡಿಭಾಗಗಳನ್ನು ಹೊರತಂದು ದರ್ಬಾರ್ ಹಾಲ್ ನಲ್ಲಿ ಹಾಗೂ ಕನ್ನಡಿ ತೊಟ್ಟಿಯಲ್ಲಿ `ಭದ್ರಾಸನ’ ಜೋಡಿಸಲಾಯಿತು.
ಖಾಸಗಿ ದರ್ಬಾರ್ ರಾಜಮನೆತನದ ಪ್ರಮುಖ ಧಾರ್ಮಿಕ ಕಾರ್ಯವಾಗಿದ್ದು, ದರ್ಬಾರ್ ಹಾಲ್‍ನಲ್ಲಿ ರತ್ನ ಖಚಿತ ಸಿಂಹಾ ಸನದ ಮೇಲೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮ ರಾಜ ಒಡೆಯರ್ ಆಸೀನರಾಗಿ ಖಾಸಗಿ ದರ್ಬಾರ್ ನಡೆಸ ಲಿದ್ದಾರೆ. ಸೆ.29ರಿಂದ ಅ.8ರವರೆಗೆ ಅರಮನೆಯಲ್ಲಿ ವಿವಿಧ ಧಾರ್ಮಿಕ ಕಾರ್ಯ ಜರುಗಲಿದ್ದು, ಅ.6ರವರೆಗೆ ಪ್ರತಿದಿನ ಸಂಜೆ ಖಾಸಗಿ ದರ್ಬಾರ್ ನಡೆಯಲಿದೆ. ಈ ಹಿನ್ನೆಲೆಯಲ್ಲಿ ದಸರಾ ಮಹೋತ್ಸವದ ಆರಂಭಕ್ಕೆ ಕೇವಲ ನಾಲ್ಕು ದಿನಗಳಷ್ಟೇ ಬಾಕಿ ಇರುವುದರಿಂದ ಇಂದು ಶಾಸ್ತ್ರೋಕ್ತವಾಗಿ ವಿಧಿ ವಿಧಾನದಂತೆ ಸಿಂಹಾಸನ ಜೋಡಿಸಿ ದರ್ಬಾರ್‍ಗೆ ಸಿದ್ಧತೆ ಮಾಡಲಾಯಿತು.
ಪೂಜಾ ಕಾರ್ಯ: ಸಿಂಹಾಸನ ಹಾಗೂ ಭದ್ರಾಸನ ಜೋಡಣೆ ಹಿನ್ನೆಲೆಯಲ್ಲಿ ಅರಮನೆಯಲ್ಲಿ ಇಂದು ಮುಂಜಾನೆಯಿಂದಲೇ ವಿವಿಧ ಪೂಜಾ ಕೈಂಕರ್ಯ ಜರುಗಿದವು. ಅರಮನೆ ಪುರೋ ಹಿತರಾದ ಹರಿ ಅವರ ನೇತೃತ್ವದಲ್ಲಿ ಬೆಳಿಗ್ಗೆ 8.10ರಿಂದ ಅರಮನೆ ಯಲ್ಲಿ ನವಗ್ರಹ ಹೋಮ, ಗಣಪತಿ ಹೋಮ, ಶ್ರೀ ಚಾಮುಂಡಿ ಪೂಜೆ ನೆರವೇರಿಸಲಾಯಿತು. ಅಂತಿಮವಾಗಿ ಶಾಂತಿ ಪೂಜೆ ಮಾಡಲಾಯಿತು. ಈ ವರ್ಷದ ದಸರಾ ಮಹೋತ್ಸವದ ಮೊಟ್ಟ ಮೊದಲ ಧಾರ್ಮಿಕ ಕಾರ್ಯ ಇದಾಗಿದ್ದು, ಅರಮನೆ ಅಂಗಳ ದಲ್ಲಿ ವೇದ ಘೋಷ ಮೊಳಗಿತು. ಅಲ್ಲದೆ ಪಟ್ಟದ ಆನೆ, ಪಟ್ಟದ ಕುದುರೆ ಹಾಗೂ ಪಟ್ಟದ ಹಸುವನ್ನು ಬರಮಾಡಿಕೊಳ್ಳಲಾಯಿತು.
ಸ್ಟ್ರಾಂಗ್ ರೂಮ್‍ನಿಂದ: ಶಾಂತಿ ಮಾಡಿದ ಬಳಿಕ ಬೆಳಿಗ್ಗೆ 10.45ಕ್ಕೆ ಅರಮನೆಯ ನೆಲಮಾಳಿಯಲ್ಲಿರುವ `ಸ್ಟ್ರಾಂಗ್ ರೂಮ್’ ಬಾಗಿಲು ತೆರೆಯಲಾಯಿತು. ಬೆಳಿಗ್ಗೆ 11.23ರೊಳಗೆ ಸಿಂಹಾಸನದ ಜೋಡಣಾ ಕಾರ್ಯ ಆರಂಭಿಸಬೇಕಾದ ಹಿನ್ನೆಲೆಯಲ್ಲಿ ಸ್ಟ್ರಾಂಗ್ ರೂಮ್‍ನಲ್ಲಿ ಇಡಲಾಗಿದ್ದ ಸಿಂಹಾಸನ ಹಾಗೂ ಭದ್ರಾಸನದ ಬಿಡಿ ಭಾಗಗಳನ್ನು ಪ್ರತ್ಯೇಕಿಸಲಾಯಿತು. ಶಸ್ತ್ರಸಜ್ಜಿತ ಪೊಲೀಸರ ಕಣ್ಗಾವಲಿನಲ್ಲಿ ಒಂದೊಂದೇ ಬಿಡಿಭಾಗವನ್ನು ದರ್ಬಾರ್ ಹಾಲ್‍ಗೆ ತರಲಾಯಿತು. ಸುಮಾರು 14 ಬಿಡಿ ಭಾಗಗಳಾಗಿ ವಿಂಗಡಿಸಲಾಗಿದ್ದ ಸಿಂಹಾಸನವನ್ನು ಜೋಡಿಸಿ, ಪರದೆ ಬಿಡಲಾ ಯಿತು. ಇದಾದ ಬಳಿಕ ದರ್ಬಾರ್ ಹಾಲ್ ಸಮೀಪದ ಕನ್ನಡಿ ತೊಟ್ಟಿಯಲ್ಲಿ ಭದ್ರಾಸನ ಜೋಡಿಸಲಾಯಿತು.
ಖಾಸಗಿ ದರ್ಬಾರ್ ಮುಗಿಸಿದ ನಂತರ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕನ್ನಡಿ ತೊಟ್ಟಿಗೆ ತೆರಳಿ ಕೆಲ ಧಾರ್ಮಿಕ ಕಾರ್ಯದಲ್ಲಿ ತೊಡಗಲಿದ್ದಾರೆ. ಇದೇ ಸಂದರ್ಭದಲ್ಲಿ ತ್ರಿಷಿಕಾ ಕುಮಾರಿ ಒಡೆಯರ್ ಅವರು ಪಾದಪೂಜೆ ನೆರವೇರಿಸಲಿದ್ದಾರೆ.
ಕಟ್ಟುನಿಟ್ಟಿನ ಕ್ರಮ: ಸಿಂಹಾಸನ ಜೋಡಣಾ ಕಾರ್ಯದ ಹಿನ್ನೆಲೆಯಲ್ಲಿ ಇಂದು ಬೆಳಗಿನಿಂದ ಮಧ್ಯಾಹ್ನ 1 ಗಂಟೆವರೆಗೆ ಅರಮನೆಗೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸ ಲಾಗಿತ್ತು. ಪ್ರವಾಸಿಗರು ಮಾತ್ರವಲ್ಲದೆ, ಅರಮನೆ ಆವರಣದಲ್ಲಿರುವ ದೇವಾಲಯಕ್ಕೆ ಬರುವವರು, ಮಾವುತ ಹಾಗೂ ಕಾವಾಡಿಗಳನ್ನು ನೋಡಲು ಬರುವ ಸಂಬಂಧಿಗಳಿಗೂ ಅರಮನೆ ಆವರಣಕ್ಕೆ ಪ್ರವೇಶ ನಿರಾಕರಿಸಲಾಗಿತ್ತು. ಜಯರಾಮ, ಬಲರಾಮ, ಜಯಮಾರ್ತಾಂಡ, ವರಾಹ, ಕರಿಕಲ್ಲು ತೊಟ್ಟಿ ಸೇರಿದಂತೆ ಎಲ್ಲಾ ಗೇಟ್‍ಗಳಲ್ಲೂ ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಧಾರ್ಮಿಕ ಕಾರ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅರಮನೆಗೆ ಮಧ್ಯಾಹ್ನ 1 ಗಂಟೆವರೆಗೆ ಪ್ರವೇಶ ನಿಷೇಧಿಸಲಾಗಿದೆ ಎಂದು ಬ್ಯಾನರ್ ಹಾಕಲಾಗಿತ್ತು. ಸಿಂಹಾಸನ ಜೋಡಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಸಿಬ್ಬಂದಿಗಳಿಗೆ ಮೊಬೈಲ್ ತೆಗೆದುಕೊಂಡು ಬಾರದಂತೆ ಸೂಚನೆ ನೀಡಲಾಗಿದ್ದು, ಸಿಸಿ ಕ್ಯಾಮರಾಗಳಿಗೂ ಪರದೆ ಹಾಕಲಾಗಿತ್ತು.
15ಕ್ಕೂ ಹೆಚ್ಚು ಮಂದಿ ಭಾಗಿ: ಸಿಂಹಾಸನ ಜೋಡಣೆ ಕಾರ್ಯದಲ್ಲಿ 15ಕ್ಕೂ ಮಂದಿ ಹೆಚ್ಚು ಪಾಲ್ಗೊಂಡಿದ್ದರು. ಈ ಹಿಂದೆ ಮೈಸೂರು ತಾಲೂಕಿನ ಗೆಜ್ಜಗಳ್ಳಿ ನಿವಾಸಿಗಳು ಬಂದು ಸಿಂಹಾಸನ ಜೋಡಣೆ ಮಾಡುವ ಹಾಗೂ ಬಿಚ್ಚುವ ಕೆಲಸ ಮಾಡುವ ಸಂಪ್ರದಾಯ ಹೊಂದಿದ್ದರು. ಇದಕ್ಕಾಗಿ ಅರಮನೆ ವತಿಯಿಂದ ಗೆಜ್ಜಗಳ್ಳಿಗೆ ಹೋಗಿ ವಿಳ್ಳೆದೆಲೆ ನೀಡಿ ಸಿಂಹಾಸನ ಜೋಡಣೆಗೆ ಬರುವಂತೆ ಆಹ್ವಾನಿಸುವ ಪದ್ದತಿ ಚಾಲ್ತಿಯಲ್ಲಿತ್ತು. ಆದರೆ ಕೆಲವು ವರ್ಷಗಳಿಂದ ಈ ಪದ್ದತಿಗೆ ತಿಲಾಂಜಲಿ ನೀಡಲಾಗಿದೆ. ಗೆಜ್ಜಗಳ್ಳಿಯ ನಾಲ್ಕೈದು ಮಂದಿ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರ ನಿವಾಸದಲ್ಲಿಯೇ ಕೆಲಸ ಮಾಡಿಕೊಂಡಿದ್ದು, ಅವರೇ ಸಿಂಹಾಸನ ಜೋಡಣಾ ಕಾರ್ಯವನ್ನು ನೆರವೇರಿಸುತ್ತಿದ್ದಾರೆ. ಅರಮನೆ ಸಿಬ್ಬಂದಿಗಳಾದ ಮಹದೇವು. ವಿಜಿ, ಪ್ರಕಾಶ್, ಮಾದನಾಯ್ಕ, ಪರಮೇಶ ಇನ್ನಿತರರು ಸಿಂಹಾಸನ ಜೋಡಣೆ ಕಾರ್ಯನಿರ್ವಹಿಸಿದರು.
ಸೆ.29ರಂದು `ಸಿಂಹ’ ಜೋಡಣೆ: ನವರಾತ್ರಿ ಮೊದಲ ದಿನವಾದ ಸೆ.29ರಂದು ಮುಂಜಾನೆ 5.10ರಿಂದ 5.30ರೊಳಗೆ ದರ್ಬಾರ್ ಹಾಲ್‍ನಲ್ಲಿ ಜೋಡಿಸಲಾಗಿರುವ ಸಿಂಹಾಸನಕ್ಕೆ `ಸಿಂಹ’ ಜೋಡಣಾ ಕಾರ್ಯ ನಡೆಯಲಿದೆ. ಬೆಳಿಗ್ಗೆ 8.05ರಿಂದ 8.55ರವರೆಗೆ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಚಾಮುಂಡಿತೊಟ್ಟಿಯಲ್ಲಿ ಕಂಕಣ ಧಾರಣೆ ಮಾಡಲಾಗುತ್ತದೆ. ಬಳಿಕ ಚಾಮುಂಡಿ ತೊಟ್ಟಿಯಿಂದ ವಾಣಿವಿಲಾಸ ದೇವರ ಮನೆಗೆ ಕಂಕಣವನ್ನು ತಂದು ತ್ರಿಷಿಕಾ ಕುಮಾರಿ ಒಡೆಯರ್ ಅವರಿಗೆ ಕಂಕಣ ಧಾರಣೆ ಮಾಡಲಾಗುತ್ತದೆ. 9.30ಕ್ಕೆ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು ಸವಾರಿ ತೊಟ್ಟಿಗೆ ಆಗಮಿಸಲಿದೆ. 9.50ರಿಂದ 10.35ರೊಳಗೆ ಕಳಸ ಪೂಜೆ ಹಾಗೂ ಸಿಂಹಾರೋಹಣ ನೆರವೇರಲಿದೆ. ಬಳಿಕ ಖಾಸಗಿ ದರ್ಬಾರ್ ಜರುಗಲಿದೆ. ದರ್ಬಾರ್ ಮುಗಿದ ಬಳಿಕ ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ. ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯ, ಶ್ರೀರಂಗಪಟ್ಟಣದ ಶ್ರೀರಂಗನಾಥ, ಉತ್ತನಹಳ್ಳಿ ಜ್ವಾಲಾಮುಖಿ ತ್ರಿಪುರ ಸುಂದರಿದೇವಿ, ಅರಮನೆಯ ಆವರಣದಲ್ಲಿರುವ ತ್ರಿನೇಶ್ವರ, ಕೋಡಿ ಸೋಮೇಶ್ವರ, ಕೋಟೆ ಆಂಜನೇಯಸ್ವಾಮಿ, ಗಣೇಶ ದೇವಾಲಯ, ಕೃಷ್ಣನ ದೇವಾಲಯ ಸೇರಿದಂತೆ 33 ದೇವಾಲಯಗಳಿಂದ ಬರುವ ಪ್ರಸಾದ ಹಾಗೂ ತೀರ್ಥ ಸೇವಿಸಿದ ನಂತರ ದರ್ಬಾರ್ ಉತ್ಸವ ಅಂತಿಮಗೊಳ್ಳಲಿದೆ. ಈ ವೇಳೆ ಅರಮನೆಯ ಬ್ಯಾಂಡ್ ವಾದನದ ತಂಡ `ಕಾಯೋ ಶ್ರೀ ಗೌರಿ’ ಗೀತೆಯನ್ನು ನುಡಿಸಲಿದ್ದಾರೆ.
ನಿಷೇಧ: ಸೆ.29ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 2.30ರವರೆಗೆ ಪ್ರವೇಶ ನಿರ್ಬಂಧಿಸಲಾಗಿದೆ. ಆಯುಧ ಪೂಜೆ ದಿನವಾದ ಅ.7ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 2.30ರವರೆಗೆ ಹಾಗೂ ವಿಜಯದಶಮಿ ದಿನವಾದ ಅ.8ರಂದು ದಿನವಿಡೀ ಅರಮನೆಗೆ ಪ್ರವಾಸಿಗರು, ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿದೆ. ಅ.23ರಂದು ಸಿಂಹಾಸನ ಹಾಗೂ ಭ್ರದಾಸನವನ್ನು ಬಿಡಿ ಭಾಗಗಳಾಗಿ ವಿಂಗಡಿಸಲಾಗುತ್ತದೆ. ನಂತರ ಬಿಗಿ ಭದ್ರತೆಯಲ್ಲಿ ಸ್ಟ್ರಾಂಗ್ ರೂಮ್‍ಗೆ ಕೊಂಡೊಯ್ದು ಸುರಕ್ಷಿತವಾಗಿಡಲಾ ಗುತ್ತದೆ. ಈ ಹಿನ್ನೆಲೆಯಲ್ಲಿ ಅಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 1ಗಂಟೆವರೆಗೆ ಪ್ರವಾಸಿಗರು, ಸಾರ್ವಜನಿಕರಿಗೆ ಅರಮನೆ ಪ್ರವೇಶ ನಿಷೇಧಿಸಲಾಗುತ್ತದೆ.