ಸಿಎ ನಿವೇಶನ ಮಂಜೂರಾತಿ ರದ್ದಾಗಿದ್ದ ಸಂಘ-ಸಂಸ್ಥೆಗಳೂ  ಮತ್ತೆ ಅರ್ಜಿ ಸಲ್ಲಿಸಬಹುದು
ಮೈಸೂರು

ಸಿಎ ನಿವೇಶನ ಮಂಜೂರಾತಿ ರದ್ದಾಗಿದ್ದ ಸಂಘ-ಸಂಸ್ಥೆಗಳೂ ಮತ್ತೆ ಅರ್ಜಿ ಸಲ್ಲಿಸಬಹುದು

September 23, 2021

ಮೈಸೂರು, ಸೆ.22 (ಆರ್‍ಕೆ)- ಈ ಹಿಂದೆ ಸಿಎ ನಿವೇಶನ ಮಂಜೂರಾಗಿ, ನಾನಾ ಕಾರಣಕ್ಕೆ ರದ್ದಾಗಿದ್ದರೆ ಅಂತಹ ಸಂಘ-ಸಂಸ್ಥೆಗಳು ಹಾಲಿ ನಿಯಮಾವಳಿಗಳಿಗೆ ಬದ್ಧರಾಗಿ ಮತ್ತೆ ಸಿಎ ನಿವೇಶನ ಕೋರಿ ಅರ್ಜಿ ಸಲ್ಲಿಸಬಹುದೆಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ಅಧ್ಯಕ್ಷ ಹೆಚ್.ವಿ.ರಾಜೀವ್ ತಿಳಿಸಿದ್ದಾರೆ.

ಈ ಕುರಿತು ಇಂದು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪ್ರಾಧಿಕಾರದಿಂದ ಈ ಹಿಂದೆ ವಿವಿಧ ಸಾರ್ವಜನಿಕ ಉದ್ದೇಶಗಳಿ ಗಾಗಿ ಹಲವು ಸಂಘ-ಸಂಸ್ಥೆ, ಟ್ರಸ್ಟ್‍ಗಳಿಗೆ ನಾಗರಿಕ ಸೌಕರ್ಯ ನಿವೇಶನಗಳನ್ನು ಮಂಜೂರು ಮಾಡಲಾಗಿದ್ದು, ಆ ಸಂಸ್ಥೆಯವರು ನಿಯಮಾವ ಳಿಯನ್ವಯ ನಿಗದಿತ ಸಮಯದಲ್ಲಿ ಕಟ್ಟಡ ನಿರ್ಮಿಸದೇ ಮಂಜೂರಾದ ಉದ್ದೇಶಕ್ಕೂ ಬಳಸದೆ, ನಿಯಮ ಉಲ್ಲಂಘಿಸಿರುವುದರಿಂದ ಅಂತಹ ಹಲವು ಸಿಎ ನಿವೇಶನಗಳನ್ನು ರದ್ದುಪಡಿಸಿ ಪ್ರಾಧಿಕಾರದ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಇದೀಗ ಪ್ರಾಧಿಕಾರವು ಮೈಸೂರಿನ ವಿವಿಧ ಬಡಾವಣೆಗಳಲ್ಲಿ ಲಭ್ಯವಾಗಿರುವ 301 ನಾಗರಿಕ ಸೌಲಭ್ಯ ನಿವೇಶನಗಳ ಹಂಚಿಕೆಗೆ ಅರ್ಜಿ ಆಹ್ವಾನಿಸಿ ನಾಳೆ (ಸೆ.23) ಅಧಿಸೂಚನೆ ಹೊರಡಿಸುತ್ತಿರುವುದರಿಂದ ಈ ಹಿಂದೆ ರದ್ದಾಗಿರುವ ಸಿಎ ನಿವೇಶನಗಳ ಸಂಘ-ಸಂಸ್ಥೆಗಳೂ ಸಹ ಸಿಎ ನಿವೇಶನ ಕೋರಿ ಮತ್ತೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಹೊಸದಾಗಿ ರೂಪಿಸಿರುವ ನಿಯಮಾವಳಿಗಳಿಗೆ ಬದ್ಧರಾಗಿ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಹ ಸಂಘ-ಸಂಸ್ಥೆ, ಟ್ರಸ್ಟ್‍ಗಳ ಹಿನ್ನೆಲೆ, ಉದ್ದೇಶಗಳನ್ನು ಪರಿಗಣಿಸಿ ನಿಯಮಾನುಸಾರ ಸಿಎ ನಿವೇಶನಗಳನ್ನು ಮಂಜೂರು ಮಾಡ ಲಾಗುವುದು ಎಂದು ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ತಿಳಿಸಿದ್ದಾರೆ.

Translate »