ಸೋಮಣ್ಣನವರಿಗಂತೂ ಸಹಕಾರ ಕೊಡಲಿಲ್ಲ, ಕನಿಷ್ಠ ಸೋಮಶೇಖರ್ ಅವರ ಜೊತೆಗಾದರೂ ಕೈಜೋಡಿಸಿ…
ಮೈಸೂರು

ಸೋಮಣ್ಣನವರಿಗಂತೂ ಸಹಕಾರ ಕೊಡಲಿಲ್ಲ, ಕನಿಷ್ಠ ಸೋಮಶೇಖರ್ ಅವರ ಜೊತೆಗಾದರೂ ಕೈಜೋಡಿಸಿ…

May 12, 2020

ಮೈಸೂರು, ಮೇ 11(ಎಸ್‍ಬಿಡಿ)- ವಿ. ಸೋಮಣ್ಣರಂತೆ ಮೈಸೂರಿನ ಅಭಿವೃದ್ಧಿ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಎಸ್.ಟಿ.ಸೋಮಶೇಖರ್ ಅವರಿಗಾದರೂ ಕನಿಷ್ಠ ಸಹಕಾರ ನೀಡಿ ಎಂದು ಸಂಸದ ಪ್ರತಾಪ್ ಸಿಂಹ, ಶಾಸಕ ಎಸ್.ಎ.ರಾಮ ದಾಸ್ ಅವರನ್ನು ಕೋರಿ ಕೊಂಡಿದ್ದಾರೆ. ಮೈಸೂರಿನ ಸೀವೆಜ್ ಫಾರ್ಮ್‍ಗೆ ಸಂಬಂ ಧಿಸಿದ ಯೋಜನೆ ವಿಚಾರವಾಗಿ ಸಂಸದ ಪ್ರತಾಪ್‍ಸಿಂಹ ಹಾಗೂ ಶಾಸಕ ಎಸ್.ಎ. ರಾಮದಾಸ್ ನಡುವೆ ಚರ್ಚೆ ಮುಂದು ವರೆದಿದ್ದು, `ನಾನು ಲಭ್ಯವಿಲ್ಲದ ದಿನ ಗಳಲ್ಲೇ ಏಕೆ ಸಭೆ ಮಾಡಿದರೋ ನನಗೆ ಗೊತ್ತಿಲ್ಲ’ ಎಂದಿರುವ ರಾಮದಾಸ್ ಅವರಿಗೆ ಪ್ರತಾಪ್‍ಸಿಂಹ ಹೀಗೆ ಪ್ರತಿಕ್ರಿಯೆ ನೀಡಿದ್ದಾರೆ. `ಮಾನ್ಯ ರಾಮದಾಸ್ ಅವರೇ, ನನಗೆ ವೃಥಾ ಚರ್ಚೆಯಲ್ಲಿ ಆಸಕ್ತಿ ಯಿಲ್ಲ. ಹಾಗಾಗಿ ಸ್ಪಷ್ಟೀ ಕರಣ ಕೊಟ್ಟು ನಿನ್ನೆಯೇ ಮುಕ್ತಾಯಗೊಳಿಸಬೇಕೆಂದಿದ್ದೆ. ಆದರೆ `ನಾನು ಲಭ್ಯವಿಲ್ಲದ ದಿನಗಳಲ್ಲೇ ಏಕೆ ಸಭೆ ಮಾಡಿದರೋ ನನಗೆ ಗೊತ್ತಿಲ್ಲ’ ಎಂಬ ನಿಮ್ಮ ಹೇಳಿಕೆ `ಮೈಸೂರು ಮಿತ್ರ’ದಲ್ಲಿ ಪ್ರಕಟ ವಾಗಿದೆ. ಈ ಮೂಲಕ ಆಗಿನ ಉಸ್ತುವಾರಿ ಸಚಿವರಾಗಿದ್ದ ವಿ.ಸೋಮಣ್ಣನವರು ನಿಮ್ಮನ್ನು ಕಡೆಗಣಿಸಿದರು ಎಂಬ ಅರ್ಥ ಬರು ವಂತೆ ಮಾತನಾಡಿದ್ದೀರಿ. ಆದ ಕಾರಣ ನಿಜಕ್ಕೂ ನಡೆದಿದ್ದೇನು ಎಂಬುದನ್ನು ಜನಕ್ಕೆ ಹೇಳದಿದ್ದರೆ ತಪ್ಪಾಗುತ್ತದೆ’ ಎಂದಿದ್ದಾರೆ.

ಮೊದಲನೆಯದಾಗಿ, 2019ರ ನವೆಂ ಬರ್ 2ರಂದು ಅಂದಿನ ಉಸ್ತುವಾರಿ ಸಚಿವ ಸೋಮಣ್ಣ ಅವರ, ಸೀವೆಜ್ ಫಾರ್ಮ್ ಭೇಟಿ ಸಂಬಂಧ ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು ನೋಟಿಸ್ ನೀಡಲು ಬಂದಾಗ ನೀವು ಅದನ್ನು ಸ್ವೀಕರಿಸಲಿಲ್ಲ. ಸೋಮಣ್ಣನವರು ಖುದ್ದಾಗಿ ನಿಮಗೆ ಕರೆ ಮಾಡಿದಾಗ, `ನನ್ನನ್ನು ಕೇಳದೆ ಕ್ಷೇತ್ರಕ್ಕೆ ಬರಬಾರದು’ ಎಂದಿದ್ದನ್ನು ನೆನಪು ಮಾಡಿಕೊಳ್ಳಿ. ಜೊತೆಗೆ ಸೋಮಣ್ಣ ನವರು ಉಸ್ತುವಾರಿ ಸಚಿವರಾಗಿ ಬಂದ ನಂತರ ಅವರು ಕರೆದ ಎಷ್ಟು ಸಭೆಯಲ್ಲಿ ನೀವು ಭಾಗಿಯಾಗಿದ್ದೀರಿ? ಅವರು ಮಾಡಿದ ಜನಪರ ಕಾರ್ಯಗಳಿಗೆ ಎಷ್ಟು ಸಹಕಾರ ಕೊಟ್ಟಿದ್ದೀರಿ ಹೇಳಿ? ನಿಮ್ಮ ಕ್ಷೇತ್ರದಲ್ಲೇ ಇರುವ ಮಹಾರಾಣಿ ಪ್ರಮೋದಾ ದೇವಿಯವರು ಹಾಗೂ ಸಾರಸ್ವತ ಲೋಕದ ದಿಗ್ಗಜ ಎಸ್.ಎಲ್.ಭೈರಪ್ಪನವರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಲು ಕರೆದಾಗಲೂ ನೀವು ಬರಲಿಲ್ಲ. ಶೋಭಾ ಕರಂದ್ಲಾಜೆಯವರು ಉಸ್ತುವಾರಿ ಸಚಿವೆಯಾಗಿ ಬಂದಾಗ ಯಾವ ರೀತಿ ನಡೆದುಕೊಂಡಿರೋ ಅದೇ ರೀತಿ ಸೋಮಣ್ಣ ನವರ ವಿಚಾರದಲ್ಲೂ ನಡೆದುಕೊಂಡಿರಿ ಎಂದು ಪ್ರತಾಪ್‍ಸಿಂಹ ತಿಳಿಸಿದ್ದಾರೆ.

ಕೆಡಿಪಿ ಸಭೆ ಕರೆದಿದ್ದಾಗ ಮೋದಿಯವರನ್ನು ಬರಮಾಡಿಕೊಳ್ಳಲು ಹೋಗಿದ್ದೇ ಎಂದಿದ್ದೀರಿ. ಮೋದಿಯವರು ಬೆಂಗಳೂರಿಗೆ ಬಂದಾಗ ಒಬ್ಬ ಕ್ಯಾಬಿನೆಟ್ ಸಚಿವರಾಗಿ, ಅದರಲ್ಲೂ ಬೆಂಗಳೂರಿನ ಶಾಸಕರಾಗಿ ಸೋಮಣ್ಣನವರು ಮೈಸೂರಿನಲ್ಲಿ ಇರಲು ಸಾಧ್ಯವೆ? ರಾಜ ಶೇಖರಮೂರ್ತಿಯವರು 1992ರಲ್ಲಿ ಮೈಸೂರಿನ ಉಸ್ತುವಾರಿ ಸಚಿವರಾಗಿದ್ದರು. 28 ವರ್ಷದ ನಂತರ ಆ ಸಮಾಜಕ್ಕೆ ಸೇರಿದ ವಿ.ಸೋಮಣ್ಣವರು ಉಸ್ತುವಾರಿ ವಹಿಸಿಕೊಂಡು ಬಂದಾಗಲಂತೂ ಸಹಕಾರ ಕೊಡಲಿಲ್ಲ. ಚಾಮುಂಡಿ ಬೆಟ್ಟವನ್ನು ಸ್ವಚ್ಛಗೊಳಿಸಿದ, ದಸರಾವನ್ನು ಅದ್ಭುತವಾಗಿ ನಡೆಸಿ ಕೊಟ್ಟಾಗಲೂ ಒಂದು ಮೆಚ್ಚುಗೆಯ ಮಾತನಾಡಲಿಲ್ಲ. ಸೋಮಣ್ಣ ನವರಂತೆಯೇ ಮೈಸೂರಿನ ಅಭಿವೃದ್ಧಿ ಬಗ್ಗೆ ವಿಶೇಷ ಕಾಳಜಿ ತೋರುತ್ತಿರುವ ಎಸ್.ಟಿ. ಸೋಮಶೇಖರ್ ಅವರಿಗಾದರೂ ಕನಿಷ್ಠ ಸಹಕಾರ ಕೊಡಿ. ಎಲ್ಲರೂ ಕೈಜೋಡಿಸಿ ಮೈಸೂರಿಗರ ಋಣ ತೀರಿಸೋಣ ಎಂದು ಪ್ರತಾಪಸಿಂಹ ಅವರು ಮನವಿ ಮಾಡಿದ್ದಾರೆ.

Translate »