ಮೈಸೂರು ಜೆಎಸ್‍ಎಸ್ ಆಸ್ಪತ್ರೆಯಲ್ಲಿ  ಯಶಸ್ವಿ ಅಪರೂಪದ ಲಿವರ್ ಕಸಿ ಶಸ್ತ್ರಚಿಕಿತ್ಸೆ
ಮೈಸೂರು

ಮೈಸೂರು ಜೆಎಸ್‍ಎಸ್ ಆಸ್ಪತ್ರೆಯಲ್ಲಿ ಯಶಸ್ವಿ ಅಪರೂಪದ ಲಿವರ್ ಕಸಿ ಶಸ್ತ್ರಚಿಕಿತ್ಸೆ

January 26, 2022

ಮೈಸೂರು, ಜ.25(ಆರ್‍ಕೆಬಿ)- ರಾಜ್ಯದ ವೈದ್ಯಕೀಯ ಕಾಲೇಜುಗಳಲ್ಲಿ ಇದೇ ಮೊದಲ ಬಾರಿಗೆ ಮೈಸೂರಿನ ಜೆಎಸ್‍ಎಸ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಜೀವಂತ ದಾನಿಯಿಂದ ಯಕೃತ್ತಿನ (ಲಿವರ್) ಒಂದು ಭಾಗ ಪಡೆದು ಕಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ಕಾಲೇಜಿನ ವ್ಯವಸ್ಥಾಪಕ ನಿರ್ದೇಶಕ ಕರ್ನಲ್ ಡಾ.ಎಂ.ದಯಾನಂದ ಇಂದಿಲ್ಲಿ ತಿಳಿಸಿದರು.

ಯಕೃತ್ತಿನ (ಲಿವರ್) ಸಿರೋಸಿಸ್‍ನಿಂದ ಬಳಲುತ್ತಿದ್ದ 22 ವರ್ಷದ ಯುವಕನಿಗೆ ಜೀವಂತ ದಾನಿಯ ಲಿವರ್ ಕಸಿ ಮಾಡುವ ಮೂಲಕ ಜೆಎಸ್‍ಎಸ್ ಕಾಲೇಜು ಮತ್ತು ಆಸ್ಪತ್ರೆ ಹೊಸ ಮೈಲಿಗಲ್ಲು ಸಾಧಿಸಿದೆ ಎಂದು ಅವರು ಮಂಗಳವಾರ ಮೈಸೂರು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಯಕೃತ್ತಿನ ಕಸಿ ಮಾಡುವಿಕೆಯಲ್ಲಿ ಎರಡು ವಿಧಗಳಿವೆ. ಜೀವಂತ, ಆರೋಗ್ಯಕರ ದಾನಿಯಿಂದ ಯಕೃತ್ತಿನ ಒಂದು ಭಾಗವನ್ನು ತೆಗೆದುಕೊಳ್ಳಲಾಗುತ್ತದೆ. ಅದನ್ನು ಅಂತಿಮ ಹಂತದ ಯಕೃತ್ತಿನ ಕಾಯಿಲೆ ಇರುವ ವ್ಯಕ್ತಿಗೆ ಕಸಿ ಮಾಡ ಲಾಗುತ್ತದೆ. ಮತ್ತೊಂದು, ಮೆದುಳು ನಿಷ್ಕ್ರಿಯಗೊಂಡ ದಾನಿಗಳಿಂದ ಯಕೃತ್ತನ್ನು ತೆಗೆದುಕೊಂಡು, ನಂತರ ರೋಗಿಗೆ ಯಕೃತ್ತು ಕಸಿ ಮಾಡಲಾಗುತ್ತದೆ. ಈ ಪೈಕಿ ಜೀವಂತ ದಾನಿಯಿಂದ ಯಕೃತ್ತಿನ ಒಂದು ಭಾಗವನ್ನು ತೆಗೆದುಕೊಂಡು, ಅದನ್ನು ರೋಗಿಗೆ ಯಶಸ್ವಿಯಾಗಿ ಕಸಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ಹೇಳಿದರು.

ಈ ಪ್ರಕರಣದಲ್ಲಿ 22 ವರ್ಷದ ಯುವಕ ಯಕೃತ್ತಿನ (ಲಿವರ್) ಸಿರೋಸಿಸ್‍ನಿಂದ ಬಳಲುತ್ತಿದ್ದು (ಹೊಟ್ಟೆಯಲ್ಲಿ ನೀರು ತುಂಬಿರುವುದು) ಚಿಕಿತ್ಸೆಗಾಗಿ ಜೆಎಸ್‍ಎಸ್ ಆಸ್ಪತ್ರೆಗೆ ಬಂದಿದ್ದ. ಈ ವೇಳೆ ಆತನನ್ನು ಕೂಲಂಕುಶವಾಗಿ ಪರೀ ಕ್ಷೆಗೆ ಒಳಪಡಿಸಿದಾಗ ಅವರ ಯಕೃತ್‍ಗೆ ತೀವ್ರ ಹಾನಿ ಯಾಗಿರುವುದು ಪತ್ತೆಯಾಯಿತು. ನಂತರ ಅವರ ಪೋಷಕರಿಗೆ ರೋಗಿಯ ಆರೋಗ್ಯದ ಸ್ಥಿತಿಗತಿಗಳ ಬಗ್ಗೆ ಮತ್ತು ಮುಂದೆ ನೀಡಬಹುದಾದ ಚಿಕಿತ್ಸೆ ಮತ್ತು ಯಕೃತ್ ಕಸಿ ಶಸ್ತ್ರಚಿಕಿತ್ಸೆಯ ಬಗ್ಗೆ, ಅದರ ಸಾಧ್ಯತೆಗಳೂ ಮತ್ತು ಪರಿಣಾಮಗಳನ್ನು ವಿವರಿಸಲಾಯಿತು. 38 ವರ್ಷ ವಯೋಮಾನದ ರೋಗಿಯ ತಾಯಿಯೇ ತನ್ನ ಮಗನ ಚಿಕಿತ್ಸೆಗಾಗಿ ತನ್ನ ಯಕೃತ್ತಿನ ಒಂದು ಭಾಗವನ್ನು ದಾನ ಮಾಡಲು ಮುಂದೆ ಬಂದರು.

ಜೆಎಸ್‍ಎಸ್ ಆಸ್ಪತ್ರೆಯ ನುರಿತ ವೈದ್ಯರಾದ ಮೆಡಿಕಲ್ ಗ್ಯಾಸ್ಟ್ರೋ ಎಂಟಾರಲಜಿ ಮುಖ್ಯಸ್ಥ ಡಾ. ಎಚ್.ಪಿ. ನಂದೀಶ್, ಸರ್ಜಿಕಲ್ ಗ್ಯಾಸ್ಟ್ರೋ ಎಂಟಾರಲಜಿ ಮುಖ್ಯಸ್ಥ ಡಾ.ಮಹೇಶ್ ಎಸ್ ಶೆಟ್ಟಿ ಅವರ ತಂಡವು ತಕ್ಷಣ ಕಾರ್ಯೋನ್ಮುಖರಾಗಿ ಆಸ್ಪತ್ರೆಯ ಮುಖ್ಯಸ್ಥ ರೊಂದಿಗೆ ಚರ್ಚಿಸಿ, ಬೆಂಗಳೂರಿನ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ.ಮಹೇಶ್ ಗೋಪಶೆಟ್ಟಿ, ಡಾ.ಸುನಿಲ್ ಶೆನ್ವಿ, ಡಾ.ಆಶಿಶ್ ಶೆಟ್ಟಿ, ಡಾ.ಅರುಣ ಸಹ ಕಾರದೊಂದಿಗೆ ಯಕೃತ್ ಕಸಿ ಶಸ್ತ್ರ ಚಿಕಿತ್ಸೆಗೆ ಬೇಕಾಗುವ ಎಲ್ಲಾ ವ್ಯವಸ್ಥೆಗಳನ್ನು ತ್ವರಿತವಾಗಿ ಮಾಡಿ, ಜ.17ರಂದು ಅಂಗಾಂಗ ಕಸಿ ತಂಡವು ಜೀವಂತ ದಾನಿಯ ಯಕೃತ್ತಿನ ಕಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಯಿತು.

ರೋಗಿ ಮತ್ತು ಯಕೃತ್ ದಾನ ಮಾಡಿದ ಆತನ ತಾಯಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಎಂದು ಡಾ.ಎಚ್.ಪಿ.ನಂದೀಶ್, ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಬಸವನ ಗೌಡಪ್ಪ ಸುದ್ದಿಗೋಷ್ಠಿಯಲ್ಲಿ ಸಂತಸ ಹಂಚಿಕೊಂಡರು.

ಯಕೃತ್ತಿನ ಶಸ್ತ್ರಚಿಕಿತ್ಸೆಗೆ ಅಂದಾಜು 20ರಿಂದ 23 ಲಕ್ಷ ರೂ. ವೆಚ್ಚವಾಗಲಿದೆ. ತಮಿಳುನಾಡು ಸರ್ಕಾರ ಇಂತಹ ಶಸ್ತ್ರಚಿಕಿತ್ಸೆಗಳಿಗೆ ನೆರವು ನೀಡುತ್ತದೆ. 20 ಲಕ್ಷ ರೂ.ವರೆಗೆ ವಿಮೆ ಮಾಡಿಸಿದವರಿಗೆ ಇದು ಅನುಕೂಲ ವಾಗಲಿದೆ. ಆದರೆ, ಕರ್ನಾಟಕ ರಾಜ್ಯ ಸರ್ಕಾರದಿಂದ ಯಾವುದೇ ನೆರವು ಸಿಗುತ್ತಿಲ್ಲ ಎಂದು ತಿಳಿಸಿದರು.
ಎಲ್ಲರೂ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿ ಕೊಳ್ಳಬೇಕು. ಒಂದು ಕಿಡ್ನಿ ದಾನ ಮಾಡಿದರೆ, ಮತ್ತೊಂದು ಕಿಡ್ನಿಯಿಂದ ಜೀವಿಸಬಹುದು.

ಹಾಗೆಯೇ ಲಿವರ್ ನಲ್ಲೂ ಸ್ವಲ್ಪ ಭಾಗವನ್ನು ದಾನ ಮಾಡುವುದರಿಂದ ಅದು ಮತ್ತೊಂದು ಜೀವಕ್ಕೆ ಆಧಾರವಾಗುತ್ತದೆ. ದಾನ ಮಾಡಿದವರಿಗೆ ಯಾವುದೇ ಆರೋಗ್ಯ ಸಮಸ್ಯೆ ಕಂಡು ಬರುವುದಿಲ್ಲ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ತಜ್ಞ ವೈದ್ಯ ಡಾ.ಮಹೇಶ್ ಎಸ್.ಶೆಟ್ಟಿ, ಡಾ.ಮಹೇಶ್ ಗೋಪಶೆಟ್ಟಿ ಇನ್ನಿತರರು ಉಪಸ್ಥಿತರಿದ್ದರು.

Translate »