ಸಿದ್ದಾರ್ಥನಗರ ಮೋರಿಯಲ್ಲಿ  ಕೊಚ್ಚಿ ಹೋದ ವ್ಯಕ್ತಿ
ಮೈಸೂರು

ಸಿದ್ದಾರ್ಥನಗರ ಮೋರಿಯಲ್ಲಿ ಕೊಚ್ಚಿ ಹೋದ ವ್ಯಕ್ತಿ

October 25, 2021

ಸಿದ್ದಾರ್ಥನಗರ ವಿನಯಮಾರ್ಗ 2ನೇ ಕ್ರಾಸ್ ನಿವಾಸಿ ಎಂ.ಜೆ. ಚಂದ್ರೇಗೌಡ(60) ಎಂಬುವರೇ ಮೋರಿಯಲ್ಲಿ ಕೊಚ್ಚಿಹೋದವ ರಾಗಿದ್ದಾರೆ. ಇಂದು ಸಂಜೆ ಸುಮಾರು 6ಗಂಟೆಗೆ ಆರಂಭವಾದ ಧಾರಾಕಾರ ಮಳೆ ತಡರಾತ್ರಿಯಾದರೂ ಸುರಿಯುತ್ತಿತ್ತು. ಈ ಮಳೆಯಿಂದಾಗಿ ಮೈಸೂರು ನಗರದ ಮೋರಿಗಳಲ್ಲಿ ನದಿಯಂತೆ ನೀರು ಹರಿಯಲಾರಂಭಿಸಿತು. ರಾತ್ರಿ 11 ಗಂಟೆ ಸುಮಾರಿಗೆ ಸಿದ್ದಾರ್ಥ ನಗರದ ವಿನಯಮಾರ್ಗ 2ನೇ ಕ್ರಾಸ್‍ನ 1109ನೇ ಸಂಖ್ಯೆಯ ಮನೆ ಕಾಂಪೌಂಡ್ ಒಳಗೂ ನೀರು ತುಂಬಿತ್ತು. ಇದರಿಂದಾಗಿ ಮನೆಮಂದಿ ನೀರನ್ನು ಹೊರಹಾಕುವ ಪ್ರಯತ್ನ ದಲ್ಲಿದ್ದರು ಎಂದು ಹೇಳಲಾಗಿದೆ. ಈ ವೇಳೆ ಮನೆ ಮುಂದಿರುವ ಸಣ್ಣ ಸೇತುವೆ ಬಳಿ ನಿಂತು ದೊಡ್ಡ ಮೋರಿ ಯಲ್ಲಿ ತುಂಬಿ ಹರಿಯುತ್ತಿದ್ದ ನೀರನ್ನು ನೋಡುತ್ತಿದ್ದ ಚಂದ್ರೇಗೌಡರು ಕಾಲು ಜಾರಿ ಮೋರಿಗೆ ಬಿದ್ದು ಕುಟುಂಬಸ್ಥರೆ ದುರೇ ಕೊಚ್ಚಿಹೋಗಿದ್ದಾರೆ.

ಕುಟುಂಬಸ್ಥರು ದೂರವಾಣಿ ಮೂಲಕ ನೀಡಿದ ಮಾಹಿತಿ ಮೇರೆಗೆ ತಕ್ಷಣವೇ ದೌಡಾಯಿಸಿದ ಸರಸ್ವತಿಪುರಂ ಅಗ್ನಿಶಾಮಕ ದಳದ ಸಿಬ್ಬಂದಿ ಮೋರಿಯಲ್ಲಿ ವ್ಯಕ್ತಿಗಾಗಿ ಹುಡುಕಾಟ ನಡೆಸಿದ್ದಾರೆ. ಈ ಮೋರಿಯು ಕಾರಂಜಿಕೆರೆಗೆ ಸಂಪರ್ಕ ಹೊಂದಿದ್ದು, ಅಗ್ನಿ ಶಾಮಕ ದಳದ ಸಿಬ್ಬಂದಿ ಮಳೆಯ ನಡುವೆಯೂ ಮೋರಿಯುದ್ದಕ್ಕೂ ಕಾರಂಜಿಕೆರೆವರೆಗೆ ಹುಡುಕಾಟ ನಡೆಸುತ್ತಿದ್ದಾರೆ. ಪತ್ರಿಕೆ ಅಚ್ಚಿಗೆ ಹೋಗುವ ವೇಳೆಯಲ್ಲೂ ಮೋರಿಯಲ್ಲಿ ಕೊಚ್ಚಿಹೋದ ವೃದ್ಧ ಪತ್ತೆಯಾಗಿಲ್ಲ. ಇನ್ನು ಮಳೆಯ ಅಬ್ಬರಕ್ಕೆ ಮೈಸೂರು ನಗರದ ವಿವಿಧ ಬಡಾವಣೆಗಳು ಜಲಾವೃತವಾಗಿರುವ ಬಗ್ಗೆ ವರದಿಯಾ ಗಿದೆ. ಸಾತಗಳ್ಳಿ, ಅಜೀಜ್‍ಸೇಠ್‍ನಗರ, ಮಧುವನ, ಜನತಾನಗರ, ದಟ್ಟಗಳ್ಳಿ, ಗುಂಡೂರಾವ್‍ನಗರ,ಬನ್ನಿಮಂಟಪ ಹುಡ್ಕೋ, ಗಿರಿದರ್ಶಿನಿ ಬಡಾವಣೆ, ಆಲನಹಳ್ಳಿ ಸೇರಿದಂತೆ ಹಲವೆಡೆ ಮನೆಗಳಿಗೆ ನೀರು ನುಗ್ಗಿರುವ ಬಗ್ಗೆ ವರದಿಯಾಗಿದೆ. ರಿಂಗ್ ರಸ್ತೆಯ ಕೊಲಂಬಿಯಾ ಏಷಿಯಾ ಆಸ್ಪತ್ರೆಯಿಂದ ದೇವೇಗೌಡ ಸರ್ಕಲ್ ನಡುವೆ ಒಂದು ಪ್ರದೇಶದಲ್ಲಿ ಕಾರುಗಳು ನೀರಿನಲ್ಲಿ ತೇಲಾಡಿರುವ ಬಗ್ಗೆ ವರದಿಯಾಗಿದೆ.

ಆ ರಸ್ತೆಯಲ್ಲಿ ಬರುತ್ತಿದ್ದ ಕುಟುಂಬವೊಂದರ ಕಾರು ಕೂಡ ನೀರಿನಲ್ಲಿ ತೇಲಾಡಿದ್ದು, ಅದರೊಳಗಿದ್ದವರು ರಕ್ಷಣೆಗಾಗಿ ಕೂಗಾಡುತ್ತಿದ್ದರು ಎಂದು `ಮೈಸೂರು ಮಿತ್ರ’ನಿಗೆ ಕರೆ ಮಾಡಿದ ಓದುಗರೊಬ್ಬರು ತಿಳಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ದೌಡಾಯಿಸಿದ ಬನ್ನಿಮಂಟಪ ಅಗ್ನಿಶಾಮಕ ದಳದ ಸಿಬ್ಬಂದಿ ಕಾರಿನಲ್ಲಿದ್ದ ಕುಟುಂಬದವರನ್ನು ರಕ್ಷಿಸಿದ್ದಾರೆ. ಅಲ್ಲದೆ, ನೀರಿನಲ್ಲಿ ತೇಲಾಡುತ್ತಿದ್ದ ಹಲವು ಕಾರುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ. ಆಲನಹಳ್ಳಿ ಬಡಾವಣೆಯ ತಗ್ಗು ಪ್ರದೇಶವೊಂದರಲ್ಲಿ ಕೆಲ ಕಾರುಗಳು ನೀರಿನಲ್ಲಿ ತೇಲಾಡುತ್ತಿದ್ದ ಬಗ್ಗೆ ಮಾಹಿತಿಗಳು ತಿಳಿಸಿವೆ.
ಧಾರಾಕಾರವಾಗಿ ಮಳೆ ಸುರಿಯುತ್ತಿದ್ದ ಪರಿಣಾಮ ಮುನ್ನೆಚ್ಚರಿಕಾ ಕ್ರಮವಾಗಿ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿರುವ ಬಗ್ಗೆ ವರದಿಯಾಗಿದ್ದು, ರಸ್ತೆಗಳಲ್ಲಿ ನೀರು ತುಂಬಿ ಹರಿಯುತ್ತಿದ್ದ ಪರಿಣಾಮ ವಾಹನ ಸವಾರರು ಪರದಾ ಡುವಂತಾಯಿತು. ವಿದ್ಯುತ್ ದೀಪಾಲಂಕಾರ ನೋಡಲು ದ್ವಿಚಕ್ರ ವಾಹನದಲ್ಲಿ ಬಂದವರ ಪಾಡಂತೂ ಹೇಳತೀರದು. ಕಾರುಗಳಲ್ಲಿ ಬಂದವರು ಕೂಡ ಪ್ರಯಾಸದಿಂದಲೇ ವಿದ್ಯುತ್ ದೀಪಾಲಂಕಾರ ಕಣ್ತುಂಬಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿತ್ತು.

Translate »