ರಾಜಕೀಯ ಬೇಡವೆಂದು ಕಣ್ಣೀರಿಟ್ಟ ಸಿದ್ದರಾಮಯ್ಯಗೆ ಆತ್ಮಸ್ಥೈರ್ಯ ತುಂಬಿದ್ದು ಹೆಚ್.ಡಿ.ದೇವೇಗೌಡರು
ಮೈಸೂರು

ರಾಜಕೀಯ ಬೇಡವೆಂದು ಕಣ್ಣೀರಿಟ್ಟ ಸಿದ್ದರಾಮಯ್ಯಗೆ ಆತ್ಮಸ್ಥೈರ್ಯ ತುಂಬಿದ್ದು ಹೆಚ್.ಡಿ.ದೇವೇಗೌಡರು

October 25, 2021

ಮೈಸೂರು,ಅ.24(ಪಿಎಂ)-ರಾಜಕೀಯ ಸಾಕಾಗಿದೆ ಎಂದು ಕಣ್ಣೀರಿಟ್ಟ ಸಿದ್ದರಾಮಯ್ಯನವರಿಗೆ ಆತ್ಮಸ್ಥೈರ್ಯ ತುಂಬಿ ರಾಜಕಾರಣದಲ್ಲಿ ಮುಂದುವರೆಯುವಂತೆ ಮಾಡಿದ್ದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಭಾನು ವಾರ ನಡೆದ ಸಂವಾದ ಕಾರ್ಯ ಕ್ರಮದಲ್ಲಿ ಮಾತ ನಾಡಿದ ಅವರು, ಈಗ ಪಕ್ಷ ಕಟ್ಟಿದೆ ಎಂದು ಹೇಳು ತ್ತಿರುವ ಸಿದ್ದರಾಮಯ್ಯನವರು 1999ರಲ್ಲಿ ಸೋತಾಗ ದೇವೇಗೌಡರ `ಅನುಗ್ರಹ’ ಮನೆಗೆ ಬಂದು `ನನಗೆ ರಾಜಕೀಯ ಸಾಕಾಗಿದೆ. ಅದರ ಸಹವಾಸವೇ ಬೇಡ. ಕರೀ ಕೋಟು ಹಾಕಿಕೊಂಡು ವಕೀಲಗಿರಿ ಮಾಡುತ್ತೇನೆ’ ಎಂದು ಕಣ್ಣೀರಿಟ್ಟರು. ಆ ವೇಳೆ ದೇವೇಗೌಡರು ಆತ್ಮಸ್ಥೈರ್ಯ ತುಂಬಿ ಮನೆಯಲ್ಲಿ ಇಬ್ಬರು ಅಡುಗೆಯವರನ್ನು ಇಟ್ಟುಕೋ. ಬರುವವರಿಗೆ ಊಟ-ತಿಂಡಿ-ಕಾಫಿ ಕೊಡಲಿ. ಪಕ್ಷ ಕಟ್ಟೋಣ. ನಾನು ನಿನ್ನ ಜೊತೆ ಬರುತ್ತೇನೆ ಎಂದು ಸಮಾ ಧಾನಪಡಿಸಿ ಸಿದ್ದರಾಮಯ್ಯ ಅವರನ್ನು ರಾಜಕಾರಣದಲ್ಲಿ ಮುಂದುವರೆಯುವಂತೆ ಮಾಡಿದರು. ಆಗ ಹೆಚ್.ಸಿ. ಮಹದೇವಪ್ಪ ಕೂಡ ಜೊತೆಯಲ್ಲಿದ್ದರು. ನಾವೆಲ್ಲಾ ಕೈಕಟ್ಟಿಕೊಂಡು ನೋಡುತ್ತಿದ್ದೆವು ಎಂದರು.

ಜೆಡಿಎಸ್ ಕಟ್ಟಲು ನಮ್ಮ ದುಡಿಮೆಯೂ ಇದೆ. ನಾವು ಬ್ಯಾನರ್‍ಗಳಲ್ಲಿ, ಪೋಸ್ಟರ್‍ಗಳಲ್ಲಿ ಫೋಟೋ ಹಾಕಿಸಿ ಕೊಂಡಿಲ್ಲ. ಜನ ಸಂಘಟನೆ ಮಾಡಿ ಸಭೆಗಳನ್ನು ನಡೆಸಿ ದಾಗ ನಾನು ವೇದಿಕೆಗೆ ಹೋಗುತ್ತಿರಲಿಲ್ಲ. ಸಿದ್ದರಾಮಯ್ಯ ಬ್ಯಾನರ್ ಮತ್ತು ಪೋಸ್ಟರ್‍ಗಳಲ್ಲಿ ಫೋಟೋ ಹಾಕಿಸಿಕೊಂಡು ಹೆಚ್.ಡಿ.ದೇವೇಗೌಡರ ಪಕ್ಕ ಕಾಲಿನ ಮೇಲೆ ಕಾಲು ಹಾಕಿ ಕೊಂಡು ಅವರನ್ನು ಒದೆಯುತ್ತಾ ಕುಳಿತ್ತಿದ್ದರು. ಅದನ್ನೂ ಕೂಡ ನಾನು ನೋಡಿದ್ದೇನೆ ಎಂದರು. 2004ರಲ್ಲಿ ಹಲ ವರು ಜೆಡಿಎಸ್ ಬಿಟ್ಟು ಬಿಜೆಪಿ ಹಾಗೂ ಕಾಂಗ್ರೆಸ್‍ಗೆ ಹೋದರು. ಸಿದ್ದರಾಮಯ್ಯ ನಮ್ಮ ಜೊತೆಯಲ್ಲೇ ಇದ್ದು, ಉಪಮುಖ್ಯ ಮಂತ್ರಿ ಆದರು. ಅಹಿಂದ ಸಂಘಟನೆ ಮಾಡಿಕೊಂಡು ಅವರೇ ಪಕ್ಷ ಬಿಡುವ ಪರಿಸ್ಥಿತಿ ತಂದುಕೊಂಡರು. ಆಗ ಪಕ್ಷವನ್ನು ಕಟ್ಟಿ ಬೆಳೆಸುವ ಜವಾಬ್ದಾರಿ ನನಗೆ ಬಂತು ಎಂದರು. 2018ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಜೆಡಿಎಸ್ ಅನ್ನು ಬಿಜೆಪಿಯ ಬಿ-ಟೀಮ್ ಎಂದು ಅಪಪ್ರಚಾರ ನಡೆಸಿದರು. ಅದರ ಫಲವಾಗಿ ಬಿಜೆಪಿ ಹೆಚ್ಚು ಸ್ಥಾನ ಗಳಿಸಿತು. ಆನಂತರ ಕಾಂಗ್ರೆಸ್‍ನವರೇ ನಮ್ಮ ಬಳಿಗೆ ಬಂದು ಮೈತ್ರಿ ಸರ್ಕಾರ ರಚಿಸಿ ನನ್ನನ್ನು ಮುಖ್ಯಮಂತ್ರಿ ಮಾಡಿ, ಜೆಡಿಎಸ್ ಅನ್ನು ನೆಲ ಕಚ್ಚಿಸಿದರು ಎಂದು ಕುಮಾರಸ್ವಾಮಿ ಆರೋಪಿಸಿದರು.

ಈಗ ಜೆಡಿಎಸ್‍ನಲ್ಲಿ ದೊಡ್ಡ ದೊಡ್ಡ ನಾಯಕರಿಲ್ಲ. ಕಾರ್ಯಕರ್ತರೇ ನಮ್ಮ ಬಲ. ಜೆಡಿಎಸ್ ನೆಲ ಕಚ್ಚಿದ್ದರೂ 2023ರ ಚುನಾವಣೆಯಲ್ಲಿ ಪಕ್ಷವನ್ನು ಸ್ವತಂತ್ರವಾಗಿ ಅಧಿಕಾರಕ್ಕೆ ತರಲು ಯೋಜನೆ ರೂಪಿಸಿದ್ದೇವೆ. ನಮ್ಮ ಪಕ್ಷ ಗೆಲ್ಲಲು ಪ್ರಶಾಂತ್ ಕಿಶೋರ್ ಅವರನ್ನು ತರುತ್ತಿಲ್ಲ. ನಮ್ಮ ಜೊತೆ ಇರುವ ಯುವಕರೇ ಸ್ವಯಂ ಪ್ರೇರಣೆಯಿಂದ ಕೆಲಸ ಮಾಡುತ್ತಿ ದ್ದಾರೆ. ಕಳೆದ 12 ವರ್ಷದಲ್ಲಿ ಪಕ್ಷ ಕಟ್ಟುವುದರಲ್ಲಿ ಎಡವಿದ್ದೇವೆ ಎಂಬುದನ್ನು ಅರಿತ್ತಿದ್ದೇವೆ. ಚುನಾವಣೆ ನಡೆಸುವುದರಲ್ಲಿ ನಾವು ಲೋಪವೆಸಗಿರುವುದೂ ಕೂಡ ಪಕ್ಷದ ಹಿನ್ನಡೆಗೆ ಒಂದು ಕಾರಣವಾಗಿದೆ. ಆನಂತರ ಕಾಂಗ್ರೆಸ್ ಸಹವಾಸ ಮಾಡಿದ್ದರಿಂದ ಪಕ್ಷ ನೆಲ ಕಚ್ಚಿದೆ. ಕಾಂಗ್ರೆಸ್ ಸಹವಾಸ ಮಾಡಿ ಪಕ್ಷಕ್ಕೆ ಧಕ್ಕೆಯಾದರೂ, ರೈತರ ಸಾಲ ಮನ್ನಾ ಮಾಡಲು ಅನುಕೂಲವಾಯಿತು. ಆದರೆ ಅವರ ಸಹವಾಸದಿಂದ ನಮ್ಮ ಪಕ್ಷಕ್ಕೆ ದೊಡ್ಡ ಮಟ್ಟದ ಪೆಟ್ಟು ಬಿದ್ದಿರುವುದು ನಿಜ. ಶಕ್ತಿ ಇದ್ದ ಕ್ಷೇತ್ರಗಳಲ್ಲೆಲ್ಲಾ ಸೋತಿದ್ದೇವೆ. ಉಪ ಚುನಾವಣೆಗಳಲ್ಲೂ ಸೋಲನುಭವಿಸಿದ್ದೇವೆ. ಈಗ ಪಕ್ಷವನ್ನು ತಳಮಟ್ಟದಿಂದ ಕಟ್ಟಬೇಕಾಗಿದೆ. ಮುಂದಿನ ವಿಧಾನಸಭಾ ಚುನಾವಣೆಯನ್ನು ಗುರಿಯಾಗಿಟ್ಟುಕೊಂಡು ಪಕ್ಷ ಸಂಘಟನೆ ಮಾಡುತ್ತಿದ್ದೇವೆ. ಈಗಾಗಲೇ 126 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಗುರುತಿಸಿದ್ದೇವೆ ಎಂದು ಹೇಳಿದರು.

Translate »