ದೀಪಾಲಂಕಾರಕ್ಕೆ ತೆರೆ
ಮೈಸೂರು

ದೀಪಾಲಂಕಾರಕ್ಕೆ ತೆರೆ

October 25, 2021

ಮೈಸೂರು, ಅ.24(ಎಂಕೆ)- ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ವಿದ್ಯುತ್ ದೀಪಾಲಂ ಕಾರಕ್ಕೆ ಭಾನುವಾರ ತೆರೆಬಿದ್ದಿತು. ಆದರೆ ಕೊನೆ ದಿನದ ದೀಪಾಲಂಕಾರ ವೀಕ್ಷಿಸಲು ಮಳೆ ಅಡ್ಡಿಯನ್ನುಂಟುಮಾಡಿತು.

ಅ.7ರಿಂದ ಆರಂಭವಾಗಿದ್ದ ದಸರಾ ದೀಪಾಲಂಕಾರವು ಅ.15ರ ಜಂಬೂಸವಾರಿ ದಿನದಂದು ಮುಕ್ತಾಯಗೊಳ್ಳಬೇಕಿತ್ತು. ಪ್ರವಾಸಿಗರ ಒತ್ತಾಯದ ಮೇರೆಗೆ ಅ.24 ರವರೆಗೂ ವಿಸ್ತರಣೆಗೊಂಡು ಸತತ 18 ದಿನಗಳ ಕಾಲ ಮೈಸೂರಿನೆಲ್ಲೆಡೆ ಬೆಳಗಿತು. ನಗರದ ಪ್ರಮುಖ ವೃತ್ತಗಳು, ರಸ್ತೆಗಳು ಸೇರಿದಂತೆ 105 ಕಿ.ಮೀ ವಿಸ್ತೀರ್ಣದವರೆಗೆ ಸಿಂಗರಿಸಿದ್ದ ವರ್ಣರಂಜಿತ ದೀಪಾಲಂ ಕಾರ ಲಕ್ಷಾಂತರ ಪ್ರವಾಸಿಗರ ಕಣ್ಮನ ಸೆಳೆ ಯಿತು. ಮೊದಲ ಬಾರಿಗೆ ಎಲ್‍ಐಸಿ ವೃತ್ತ ದಲ್ಲಿ ರೂಪಿಸಿದ್ದ ವಿವಿಧ ಬಗೆಯ ಪ್ರಾಣಿ ಗಳ ವಿನ್ಯಾಸ, ಹಾರ್ಡಿಂಜ್ ವೃತ್ತದಿಂದ ನಗರ ಪೊಲೀಸ್ ಆಯುಕ್ತರ ಕಚೇರಿ ಮಾರ್ಗದ ರಸ್ತೆಗೆ ಮಾಡಿದ ವಿಶೇಷ ದೀಪಾ ಲಂಕಾರ, ಮಹರ್ಷಿ ವಾಲ್ಮೀಕಿ, ಶಿವರಾತ್ರಿ ರಾಜೇಂದ್ರ ಸ್ವಾಮೀಜಿ, ಶ್ರೀಕೃಷ್ಣಾರ್ಜುನರ ರಥ, ಒಲಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಇನ್ನಿತರ ಮಹನೀಯರ ಮಾದರಿಯ ದೀಪಾಲಂಕಾರ ವಿಶೇಷ ಆಕರ್ಷಣೆಯಾಗಿತ್ತು.

ಖಾಸಗಿ ಸಂಸ್ಥೆಗಳ ಸಾಥ್: ದಸರಾ ದೀಪಾಲಂಕಾರಕ್ಕೆ ಮತ್ತಷ್ಟು ಮೆರಗು ನೀಡಲು ಮೈಸೂರಿನ ‘ಟಿವಿಎಸ್ ಕಂಪನಿ’, ‘ಸೋನಾ ಮೋಟಾರ್ಸ್’, ‘ಐಡಿಯಾ ಇನ್ಫಿನಿಟಿ’, ‘ಎಸ್‍ಬಿಐ’, ‘ಕೆಎನ್‍ಎಸ್ ಇನ್ಫ್ರಾ’ ‘ಕೆಎಂಎಫ್’, ‘ಪ್ಯಾಲೆಸ್ ಟೊಯೋಟಾ’, ‘ಥಾಟ್ ಫೋಕಸ್’, ‘ಡಿಆರ್‍ಎಂ ಆಸ್ಪತ್ರೆ’, ‘ಕಿಯಾ’, ‘ಇನ್‍ಫೋಸಿಸ್’, ‘ಲಾಯಲ್ ವಲ್ರ್ಡ್’, ‘ಮುರುಗನ್ ಮೆಡಿಕಲ್ಸ್’, ‘ಅಪೋಲೋ ಆಸ್ಪತ್ರೆ’ ಸೇರಿದಂತೆ 20ಕ್ಕೂ ಹೆಚ್ಚು ಖಾಸಗಿ ಸಂಸ್ಥೆಗಳು ಚೆಸ್ಕಾಂನೊಂದಿಗೆ ಸಹಕರಿಸಿದವು.

ಪ್ರವಾಸಿಗರಿಂದ ಬಾರೀ ಮೆಚ್ಚುಗೆ: ಕೊರೊನಾ ಕರಿನೆರಳಿನ ನಡುವೆಯೂ ದಸರಾ ದೀಪಾಲಂಕಾರ ಪ್ರವಾಸಿಗರು, ನಗರ ನಿವಾಸಿಗಳ ಮನಗೆದ್ದಿತು. ಜಯಚಾಮರಾಜ ವೃತ್ತದಲ್ಲಿ ಪ್ರತ್ಯೇಕವಾಗಿ ಫೋಟೊ ಶೂಟ್ ನಡೆಸಲು ಅವಕಾಶ ಕಲ್ಪಿಸಿದ್ದು, ಅಪಾರ ಮೆಚ್ಚುಗೆಗೆ ಪಾತ್ರವಾಯಿತು. ಆಹಾರ ಮೇಳ, ದಸರಾ ಕುಸ್ತಿ, ಜಟ್ಟಿ ಕಾಳಗ, ಬನ್ನಿ ಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ನಡೆಯುತ್ತಿದ್ದ ಸಾಹಮಯ ಕ್ರೀಡೆ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳು ಸೇರಿದಂತೆ ಹತ್ತು-ಹಲವು ದಸರಾ ವಿಶೇಷ ಕಾರ್ಯ ಕ್ರಮ ಕೊರತೆಯನ್ನು ದೀಪಾಲಂಕಾರ ನೀಗಿದೆ ಎಂಬುದು ಪ್ರವಾಸಿಗರ ಅನಿಸಿಕೆಯಾಗಿದೆ.

ದಸರಾ ಉತ್ಸವ ಆರಂಭದಿಂದ ದೀಪಾಲಂಕಾರದ ಕಡೆ ದಿನದವರೆಗೂ ಮೈಸೂರಿನತ್ತ ತಂಡೋಪತಂಡವಾಗಿ ಧಾವಿಸಿದ ಪ್ರವಾಸಿಗರು ದೀಪಾಲಂಕಾರ ವೀಕ್ಷಣೆಯಿಂದ ಕೊರೊನಾ ಸಂಕಷ್ಟವನ್ನು ಮರೆತರು. ಅಲ್ಲದೆ ಮನೆ-ಮಂದಿಯೊಂದಿಗೆ ವಿದ್ಯುತ್ ದೀಪದ ಬೆಳಕಿನ ನಡುವೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಸಂಭ್ರಮಿಸಿದರು. ಭಾನುವಾರ ಸಂಜೆಯಿಂದ ತಡರಾತ್ರಿವರೆಗೂ ಮಳೆ ಸುರಿದ ಪರಿಣಾಮ ಕಡೆ ದಿನವೂ ದೀಪಾಲಂಕಾರ ವೀಕ್ಷಿಸಲಾಗದೆ ಪ್ರವಾಸಿಗರಿಗೆ ತೀವ್ರ ನಿರಾಶೆ ಉಂಟಾಯಿತು. ಕೆಲವರು ದೀಪಾಲಂಕಾರ ಕಣ್ತುಂಬಿಕೊಳ್ಳಲು ಪ್ರಯತ್ನಿಸಿ ದರೂ ಜೋರು ಮಳೆಯಿಂದ ಸಾಧ್ಯವಾಗದೆ ನಿರಾಶೆಯಿಂದ ಮನೆಯತ್ತಾ ಸಾಗಿದರು.

Translate »