ಸಿದ್ದಾಪುರ, ಆ.18- ಕಳೆದ ಕೆಲ ದಿನಗಳಿಂದ ಕಾಡಾನೆಗಳ ಹಿಂಡು ನಿರಂತರವಾಗಿ ಕಾಫಿ ತೋಟಗಳಲ್ಲಿ ಬೀಡು ಬಿಟ್ಟು ಅಪಾರ ಪ್ರಮಾಣದ ಕೃಷಿ ಫಸಲು ನಾಶ ಮಾಡುವ ಮೂಲಕ ಕಾರ್ಮಿಕರು ಮತ್ತು ಬೆಳೆಗಾರರಲ್ಲಿ ಆತಂಕ ಸೃಷ್ಟಿ ಮಾಡಿದೆ.
15ಕ್ಕೊ ಹೆಚ್ಚು ಕಾಡಾನೆಗಳ ಹಿಂಡು 2 ಗುಂಪುಗಳಾಗಿ ಬೇರ್ಪಟ್ಟು ಗುಹ್ಯ ಭಾಗದ ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿವೆ. ಕಾಫಿ, ಅಡಿಕೆ, ತೆಂಗು, ಬಾಳೆ, ಶುಂಠಿ ಸೇರಿದಂತೆ ಭತ್ತದ ಪೈರುಗಳ ಮೇಲೆ ದಾಳಿ ಮಾಡಿ ಅಪಾರ ಪ್ರಮಾಣದ ಕೃಷಿ ಫಸಲು ನಾಶ ಮಾಡಿದೆ.
ಹಾಡಹಗಲೇ ರಾಜಾರೋಷವಾಗಿ ಕಾಫಿ ತೋಟಗಳಲ್ಲಿ ಕಾಣಿಸಿಕೊಳ್ಳು ತ್ತಿರುವ ಕಾಡಾನೆಗಳಿಂದ ಕಾರ್ಮಿಕರು ತೋಟಗಳಿಗೆ ಕೆಲಸಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಕೋವಿಡ್ ಸಂಕಷ್ಟದಿಂದ ಕೆಲಸವಿಲ್ಲದೆ ದಿನ ಕಳೆಯುತ್ತಿರುವ ಕಾರ್ಮಿಕರಿಗೆ ಇದೀಗ ತೋಟದ ಕೆಲಸಕ್ಕೆ ತೆರಳಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಕಾರ್ಯಪ್ಪ ಎಂಬುವರ ಕಾಫಿ ತೋಟದ ಸುತ್ತಮುತ್ತಲಿನಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳ ಹಿಂಡು ರವೂಫ್ ಎಂಬುವರು ಗುತ್ತಿಗೆ ಪಡೆದು ಶುಂಠಿ ಕೃಷಿ ಮಾಡಿದ 3 ಎಕರೆಯಲ್ಲಿ ಒಂದೂ ವರೆ ಎಕರೆ ಶುಂಠಿ ಫಸಲನ್ನು ತುಳಿದು ನಾಶ ಮಾಡಿವೆ. ಇದರಿಂದ ಅಂದಾಜು ಒಂದೂವರೆ ಲಕ್ಷವರೆಗೂ ನಷ್ಟ ಉಂಟಾಗಿದ್ದು ಕೃಷಿಕರು ಕಂಗಾಲಾಗಿದ್ದಾರೆ.
ಶುಂಠಿ ಕೆಲಸಕ್ಕೆ ತೆರಳಿದ ಕಾರ್ಮಿಕರ ಮೇಲೂ ಕಾಡಾನೆ ದಾಳಿ ಮಾಡಲು ಮುಂದಾಗಿದೆ. ಭಯಭೀತರಾದ ಕಾರ್ಮಿಕರು ಕೆಲಸ ಸ್ಥಗಿತಗೊಳಿಸಿ ಮನೆ ಸೇರಿದ್ದಾರೆ.
ಸುತ್ತಮುತ್ತಲ ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿರುವ ಕಾಡಾನೆಯಿಂದ ಅಪಾರ ಪ್ರಮಾಣದ ಕೃಷಿ ಫಸಲು ನಷ್ಟ ಉಂಟಾಗಿದ್ದು ಕಾಡಾನೆ ಹಾವಳಿಯನ್ನ ಶಾಶ್ವತವಾಗಿ ತಡೆಗಟ್ಟಿ ಪರಿಹಾರ ನೀಡಬೇಕೆಂದು ರೈತ ಸಂಘದ ಸಿದ್ದಾಪುರ ವಲಯ ಅಧ್ಯಕ್ಷ ದೇವಣಿರ ವಜ್ರು ಬೋಪಣ್ಣ ಒತ್ತಾಯಿಸಿದ್ದಾರೆ.
ಕಾಡಾನೆ ಹಾವಳಿಯಿಂದ ಕೃಷಿ ಫಸಲು ನಷ್ಟ ಆಗಿರುವ ಸ್ಥಳಕ್ಕೆ ಅರಣ್ಯ ಇಲಾಖೆ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.