ಮಾದಕ ವಸ್ತುಗಳ ಬಗ್ಗೆ ಮೈಸೂರಲ್ಲಿ ಜಾಗೃತಿ ಜಾಥಾ
ಮೈಸೂರು

ಮಾದಕ ವಸ್ತುಗಳ ಬಗ್ಗೆ ಮೈಸೂರಲ್ಲಿ ಜಾಗೃತಿ ಜಾಥಾ

June 28, 2018
  • ಇವುಗಳ ಸೇವನೆಯಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮದ ಬಗ್ಗೆ ಮನವರಿಕೆ

ಮೈಸೂರು: ಅಂತರ ರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳ ಸಾಗಾಣಿಕೆ ವಿರೋಧಿ ದಿನದ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಬುಧವಾರ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಜಾಥ ನಡೆಸಿ ಮಾದಕ ವಸ್ತುಗಳ ಸೇವನೆಯಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಿದರು.

ಮೈಸೂರಿನ ನಜರ್‍ಬಾದ್‍ನಲ್ಲಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿಯ ಆವರಣದಲ್ಲಿ ಇಂದು ಬೆಳಿಗ್ಗೆ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗವು ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಕೈಗಾರಿಕಾ ತರಬೇತಿ ಸಂಸ್ಥೆಯ ನೆರವಿನೊಂದಿಗೆ ಆಯೋಜಿಸಿದ್ದ ಜಾಗೃತಿ ಜಾಥವನ್ನು ಜಿಲ್ಲಾ ಸಾಂಕ್ರಾಮಿಕ ರೋಗಗಳ ನಿಯಂತ್ರಣಾಧಿಕಾರಿ ಡಾ.ಚಿದಂಬರ ಅವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

ಧೂಮಪಾನ ಮಾಡುವುದು ಆರೋಗ್ಯಕ್ಕೆ ಹಾನಿಕಾರಕ, ಧೂಮಪಾನ ತ್ಯಜಿಸಿ, ಇನ್ನಿತರೆ ದುಶ್ಚಟ ಹಾಗೂ ದುರಾಭ್ಯಾಸದಿಂದ ದೂರವಿರಿ, ಸುಖ ಜೀವನದತ್ತ ಮನಸ್ಸು ಕೊಡಿ ಎಂಬ ಘೋಷ ಫಲಕಗಳನ್ನಿಡಿದು ಜಾಥದಲ್ಲಿ ಸಾಗಿದ ಜಿಲ್ಲಾ ಕೈಗಾರಿಕಾ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳು ನಜರ್‍ಬಾದ್‍ನ ವಿವಿಧ ರಸ್ತೆಗಳಲ್ಲಿ ಸಂಚರಿಸಿ ಗಮನ ಸೆಳೆದರು.

ಇದಕ್ಕೂ ಮುನ್ನ ಜಾಗೃತಿ ಜಾಥಕ್ಕೆ ಚಾಲನೆ ನೀಡಿದ ಜಿಲ್ಲಾ ಸಾಂಕ್ರಾಮಿಕ ರೋಗಗಳ ನಿಯಂತ್ರಾಣಧಿಕಾರಿ ಡಾ.ಚಿದಂಬರ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಯುವಕರು ಧೂಮಪಾನ, ಮದ್ಯಪಾನ ಹಾಗೂ ಮಾದಕ ವಸ್ತುಗಳ ದುಶ್ಚಟಕ್ಕೆ ತುತ್ತಾಗುತ್ತಿದ್ದಾರೆ. ಸಹವಾಸ ದೋಷದಿಂದ ಹಾಗೂ ಕೆಲವೊಮ್ಮೆ ಶೋಕಿಗಾಗಿ ಮಾದಕ ವಸ್ತುಗಳಿಗೆ ದಾಸರಾಗುತ್ತಿದ್ದಾರೆ. ಅವುಗಳ ಸೇವನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ವಿಷಯ ತಿಳಿದಿದ್ದರೂ ಮಾದಕ ವಸ್ತುಗಳ ಸೇವನೆ ಮಾಡುತ್ತಿರುವುದು ವಿಷಾಧದ ಸಂಗತಿಯಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಇಲಾಖೆಗಳು ಸೇರಿದಂತೆ ಸಾರ್ವಜನಿಕರು ಸಹಕರಿಸಿದಾಗ ಮಾತ್ರ ಮಾದಕ ವ್ಯಸನಿಗಳ ಕಡಿಮೆ ಮಾಡಬಹುದು ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಮಾನಸಿಕ ರೋಗಗಳ ನಿಯಂತ್ರಣಾಧಿಕಾರಿ ಡಾ.ಮಂಜುಪ್ರಸಾದ್ ಮಾತನಾಡಿ, ಮಾದಕ ವಸ್ತುಗಳು ಎರಡು ಬಗೆಯಲ್ಲಿ ಸಿಗುತ್ತವೆ. ಅಂಗಡಿಗಳಲ್ಲಿ ಸಿಗುವ ಸಿಗರೇಟು, ತಂಬಾಕು, ಮದ್ಯಗಳು ಕಾನೂನು ಬದ್ದವಾಗಿ ಸಿಗುವ ಮಾದಕ ವಸ್ತುಗಳಾಗಿದ್ದರೆ, ಅಕ್ರಮವಾಗಿ ಸಿಗುವ ಮಾದಕ ವಸ್ತುಗಳು, ಮತ್ತು ಬರುವ ಔಷಧಿಗಳು, ವೈದ್ಯರು ಶಿಫಾರಸ್ಸು ಮಾಡದೆ ಇರುವ ಕೆಲವು ಔಷಧಗಳು ಎರಡನೇ ವರ್ಗಕ್ಕೆ ಸೇರುತ್ತವೆ. ಇವುಗಳನ್ನು ಬಳಸಿ ತಮ್ಮ ಜೀವವನ್ನೇ ಬಲಿಕೊಡುತ್ತಿದ್ದಾರೆ. ಕೆಲವು ಬಡಾವಣೆಗಳಲ್ಲಿ ಮಾದಕ ವಸ್ತುಗಳನ್ನು ಸಾಗಾಟ ಮಾಡುತ್ತಿದ್ದಾರೆ ಎಂಬ ಅನುಮಾನವಿದೆ. ಈ ಹಿನ್ನೆಲೆಯಲ್ಲಿ ಪೋಷಕರು ತಮ್ಮ ಮಕ್ಕಳ ಬಗ್ಗೆ ಗಮನ ಹರಿಸಬೇಕು. ಪೊಲೀಸರು ಸಹ ಮಾದಕ ವಸ್ತುಗಳ ಮಾರಾಟ ಹಾಗೂ ಸಾಗಾಣಿಕೆಯನ್ನು ತಡೆಗಟ್ಟುವುದಕ್ಕೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕುಟುಂಬ ಯೋಜನಾಧಿಕಾರಿ ಡಾ.ಸಿರಾಜ್ ಅಹಮದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Translate »