ದೇವಸ್ಥಾನಕ್ಕೆ ಭಿಕ್ಷೆ ಬೇಡಿ ಬಂದ 2.5 ಲಕ್ಷ ರೂ. ದೇಣಿಗೆ ನೀಡಿದ್ದ ಸಾರ್ಥಕ ಜೀವಿ ಸೀತಾಲಕ್ಷ್ಮಿ ನಿಧನ
ಮೈಸೂರು

ದೇವಸ್ಥಾನಕ್ಕೆ ಭಿಕ್ಷೆ ಬೇಡಿ ಬಂದ 2.5 ಲಕ್ಷ ರೂ. ದೇಣಿಗೆ ನೀಡಿದ್ದ ಸಾರ್ಥಕ ಜೀವಿ ಸೀತಾಲಕ್ಷ್ಮಿ ನಿಧನ

June 28, 2018

ಮೈಸೂರು; ಮಕ್ಕಳು, ಸಂಬಂಧಿಕರ ನಿರ್ಲಕ್ಷ್ಯಕ್ಕೆ ಒಳಗಾಗಿ ತಮಿಳುನಾಡಿನಿಂದ ಮೈಸೂರಿಗೆ ಬಂದು ಭಿಕ್ಷೆ ಬೇಡಿ, ಸಾರ್ಥಕ ಜೀವನ ದೂಡುತ್ತಿದ್ದ ಆ ಹಿರಿಯ ಜೀವ ಇನ್ನಿಲ್ಲವಾಗಿದೆ. ಭಿಕ್ಷೆ ಬೇಡು ತ್ತಲೇ 2.5 ಲಕ್ಷ ರೂ. ಹಣವನ್ನು ಕೂಡಿಟ್ಟು ಒಂಟಿಕೊಪ್ಪಲಿನ ಶ್ರೀಪ್ರಸನ್ನ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ದೇಣಿಗೆ ನೀಡಿದ್ದ ಶತಮಾನದಂಚಿನಲ್ಲಿದ್ದ ಸೀತಾ ಲಕ್ಷ್ಮೀ (92) ವಯೋ ಸಹಜ ಅನಾರೋಗ್ಯದಿಂದ ಸೋಮ ವಾರ ರಾತ್ರಿ ನಿಧನರಾದರು.

ಪ್ರಸನ್ನ ಆಂಜನೇಯಸ್ವಾಮಿ ದೇವಸ್ಥಾನದ ಮುಖ್ಯದ್ವಾರದಲ್ಲಿ ಕುಳಿತು ಭಿಕ್ಷೆ ಬೇಡಿ ಕಾಲದೂಡುತ್ತಿದ್ದ ಸೀತಾಲಕ್ಷ್ಮೀ ಭಿಕ್ಷೆ ಹಣವನ್ನು ಕೂಡಿಟ್ಟು ದೇವಸ್ಥಾನಕ್ಕೆ ದೇಣಿಗೆ ನೀಡಿ, ಉದಾರತೆ ಮೆರೆದಿದ್ದರು.

ಆ ಹಿರಿಯ ಜೀವ ಒಂದು ಕಾಲದಲ್ಲಿ ಚೆನ್ನಾಗಿ ಬಾಳಿ ಬದುಕಿದಂತಾವರು. ಆದರೆ ಮಕ್ಕಳು ಮತ್ತು ಸಂಬಂಧಿಕರ ನಿರ್ಲಕ್ಷ್ಯಕ್ಕೆ ಒಳಗಾಗಿ ದೂರದ ತಮಿಳುನಾಡಿನಿಂದ ಮೈಸೂರಿಗೆ ಬರಬೇಕಾದ ಸನ್ನಿವೇಶ ನಿರ್ಮಾಣವಾಯಿತು. ಹೀಗೆ ಬಂದ ಇವರಿಗೆ ಇರುವಷ್ಟು ದಿನ ಬದುಕಲು ಭಿಕ್ಷೆಯೊಂದೇ ದಾರಿಯಾಯಿತು. ಯಾದವಗಿರಿಯ ರೈಲ್ವೆ ಕ್ವಾರ್ಟರ್ಸ್‍ನ ಮನೆಯೊಂದರಲ್ಲಿ ಆಶ್ರಯವೂ ದೊರಕಿತ್ತು. ಈ ಭಿಕ್ಷಾ ವೃತ್ತಿಗೆ ಇವರ ಆಯ್ಕೆ ಮಾಡಿಕೊಂಡ ಜಾಗವೇ ಪ್ರಸನ್ನ ಆಂಜನೇಯಸ್ವಾಮಿ ದೇವಸ್ಥಾನದ ಮುಖ್ಯದ್ವಾರ. ದೇವಸ್ಥಾನಕ್ಕೆ ಬರುತ್ತಿದ್ದ ಭಕ್ತರು ನೀಡುತ್ತಿದ್ದ ಭಿಕ್ಷೆಯಲ್ಲಿ ಜೀವನ ಸಾಗಿಸುತ್ತಿದ್ದ ಇವರು ಒಂದಿಷ್ಟು ಉಳಿಸುವ ಹವ್ಯಾಸ ಬೆಳೆಸಿಕೊಂಡಿದ್ದರು. ಹೀಗೆ 2.5 ಲಕ್ಷ ರೂ. ಉಳಿತಾಯ ಮಾಡಿದ್ದ ಈ ಹಿರಿಯ ಜೀವ 2017ರ ನವೆಂಬರ್‍ನಲ್ಲಿ ಆ ಹಣವನ್ನು ಶ್ರೀ ಪ್ರಸನ್ನ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ದೇಣಿಗೆಯಾಗಿ ನೀಡಿದ್ದರು.

ಇಂತಹ ಸಾರ್ಥಕ ಜೀವಿ ಸೀತಾಲಕ್ಷ್ಮೀ ಸೋಮವಾರ ನಿಧನರಾಗಿದ್ದು, ಪಾಲಿಕೆ ಸದಸ್ಯ ನಾಗಭೂಷಣ್ ಹಾಗೂ ಸಾರ್ವಜನಿಕರು ಸೀತಾಲಕ್ಷ್ಮೀ ಅವರಿಗೆ ಅಂತಿಮ ನಮನ ಸಲ್ಲಿಸಿದರು. ಗೋಕುಲಂ ಚಿರಶಾಂತಿಧಾಮದಲ್ಲಿ ಅಂತ್ಯಕ್ರಿಯೆ ನೆರವೇರಿತು.

Translate »