ಫಲಾನುಭವಿಗಳಿಗೆ ಸಬ್ಸಿಡಿ ಸಾಲ ನೀಡಿ ಸರ್ಕಾರಿ ಯೋಜನೆ ಸಾಕಾರಗೊಳಿಸಿ
ಮೈಸೂರು

ಫಲಾನುಭವಿಗಳಿಗೆ ಸಬ್ಸಿಡಿ ಸಾಲ ನೀಡಿ ಸರ್ಕಾರಿ ಯೋಜನೆ ಸಾಕಾರಗೊಳಿಸಿ

June 28, 2018
  • ಬ್ಯಾಂಕ್ ಅಧಿಕಾರಿಗಳಿಗೆ ಮೈಸೂರು-ಕೊಡಗು, ಚಾಮರಾಜನಗರ ಸಂಸದರ ಸೂಚನೆ

ಮೈಸೂರು:  ಆಯ್ಕೆಯಾದ ಅರ್ಹ ಫಲಾನುಭವಿಗಳಿಗೆ ಸಬ್ಸಿಡಿ ಸಾಲ ನೀಡುವ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಹಲವು ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಸಹಕರಿಸಿ ಎಂದು ಮೈಸೂರು ಹಾಗೂ ಚಾಮರಾಜನಗರ ಸಂಸದರಾದ ಪ್ರತಾಪ್ ಸಿಂಹ ಮತ್ತು ಆರ್. ಧ್ರುವನಾರಾಯಣ ಅವರು ಬ್ಯಾಂಕ್ ಅಧಿಕಾರಿಗಳಿಗೆ ಇಂದಿಲ್ಲಿ ಸೂಚನೆ ನೀಡಿದ್ದಾರೆ.

ಎಸ್‍ಬಿಐ, ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಹಾಗೂ ಜಿಲ್ಲಾ ಪಂಚಾಯ್ತಿ ಆಶ್ರಯದಲ್ಲಿ ಮೈಸೂರಿನ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಜಿಲ್ಲಾ ಸಮಾಲೋಚನಾ ಮತ್ತು ಪ್ರಗತಿ ಪರಿಶೀಲನಾ ಹಾಗೂ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಪ್ರತಾಪ್ ಸಿಂಹ, ಕೇಂದ್ರ ಸರ್ಕಾರದ ಫಸಲ್ ಭೀಮಾ ಮತ್ತಿತರ ಯೋಜನೆ ಅನುಷ್ಠಾನದಲ್ಲಿ ಮೈಸೂರು ಜಿಲ್ಲೆ ಹಿಂದೆ ಬಿದ್ದಿರುವುದೇಕೆ? ಎಂದು ಪ್ರಶ್ನಿಸಿದರು.

ಸರ್ಕಾರ ರೈತರು, ನಿರುದ್ಯೋಗಿಗಳು ಹಾಗೂ ಜನಸಾಮಾನ್ಯರಿಗೆ ಅನುಕೂಲವಾಗಲೆಂದು ಹಲವು ಯೋಜನೆಗಳನ್ನು ಜಾರಿಗೆ ತಂದು ಆರ್ಥಿಕ ನೆರವಿಗೂ ಸಬ್ಸಿಡಿ ರೂಪದ ಸಾಲ ಸೌಲಭ್ಯ ಒದಗಿಸುತ್ತಿವೆ. ಆದರೆ ಆಯ್ಕೆಯಾದ ಅರ್ಹ ಫಲಾನುಭವಿಗಳಿಗೆ ಸಾಲ ನೀಡದೆ ತಿರಸ್ಕರಿಸುವುದಲ್ಲದೆ, ಬ್ಯಾಂಕ್ ಮ್ಯಾನೇಜರ್‍ಗಳು ಹಾಗೂ ಸಿಬ್ಬಂದಿ, ಅವರನ್ನು ತುಚ್ಛವಾಗಿ ಕಾಣುತ್ತಾರೆಂಬ ದೂರುಗಳು ಕೇಳಿಬರುತ್ತಿವೆ ಎಂದರು.

ಬೆಳೆ ನಷ್ಟವಾದ ರೈತರಿಗೆ ಇನ್ಶೂರೆನ್ಸ್ ಕಂಪೆನಿಗಳು ನಷ್ಟ ಪರಿಹಾರದ ಹಣ ಬಿಡುಗಡೆ ಮಾಡುತ್ತಿಲ್ಲ. ನಷ್ಟ ಸಂಭವಿಸಿದಾಗ ನೆರವಾಗಲಿ ಎಂಬ ಕಾರಣಕ್ಕಾಗಿ ಬೆಳೆ ವಿಮೆ ಮಾಡಿಸಲಾಗುತ್ತದೆ ಅಂತಹ ರೈತರಿಗೆ ನಷ್ಟ ಪರಿಹಾರ ಕೊಡದ ವಿಮಾ ಕಂಪೆನಿ ವಿರುದ್ಧ ಕ್ರಮ ಜರುಗಿಸಬೇಕೆಂದು ಪ್ರತಾಪ್ ಸಿಂಹ ಅವರು ಕೃಷಿ ಜಂಟಿ ನಿರ್ದೇಶಕರಿಗೆ ತಿಳಿಸಿದರು.

ಅದೇ ವೇಳೆ ಮಾತನಾಡಿದ ಸಂಸದ ಧ್ರುವನಾರಾಯಣ ಅವರು, ಪಶುಭಾಗ್ಯ, ಉದ್ಯೋಗಿನಿಯಂತಹ ಹಲವು ಯೋಜನೆಗಳಿಗೆ ಸರ್ಕಾರಿ ಸಬ್ಸಿಡಿ ಹಣ ನೀಡುತ್ತದೆ. ಅಂತಹ ಫಲಾನುಭವಿಗಳು ಸಾಲ ಕೇಳಿಕೊಂಡು ಬ್ಯಾಂಕಿಗೆ ಬಂದರೆ ಮ್ಯಾನೇಜರ್‍ಗಳು ಉದಾಸೀನ ಹಾಗೂ ಆಲಸ್ಯ ತೋರುತ್ತಿದ್ದಾರೆ. ಸರಗೂರಿನ ಎಸ್‍ಬಿಐ ಶಾಖೆ ಹಾಗೂ ಕೌಲಂದೆಯ ಐಓಬಿ ಬ್ಯಾಂಕ್ ಮ್ಯಾನೇಜರ್‍ಗಳು ಫಲಾನುಭವಿಗಳನ್ನು ಕೀಳಾಗಿ ಕಾಣುತ್ತಾರೆಂಬ ದೂರುಗಳಿವೆ ಎಂದರು.

ಬ್ಯಾಂಕ್ ಮ್ಯಾನೇಜರ್‍ಗಳು ಮನಸು ಮಾಡಿದರೆ ಸಮಾಜದ ಅಸಮರ್ಥ ಜನರಿಗೆ ಸಹಾಯ ಮಾಡಬಹುದು. ಮಾನವೀಯತೆಯಿಂದಲೂ ಕೆಲಸ ನಿರ್ವಹಿಸಿ ಸರ್ಕಾರದ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸಲು ಮುಂದಾಗಿ ಎಂದು ಧ್ರುವನಾರಾಯಣ ಸಲಹೆ ನೀಡಿದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ. ಶಿವಶಂಕರ್, ಲೀಡ್ ಬ್ಯಾಂಕ್ ಮ್ಯಾನೇಜರ್ ಡಿ. ಶಿವಲಿಂಗಯ್ಯ, ಎಸ್‍ಬಿಐ ಉಪ ಪ್ರಧಾನ ವ್ಯವಸ್ಥಾಪಕ ಮಹದೇವಕುಮಾರ್, ಕಾವೇರಿ ಗ್ರಾಮೀಣ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಪಾರ್ಥಸಾರಥಿ, ಆರ್‍ಬಿಐನ ನಟರಾಜ್, ಎಸ್‍ಬಿಐನ ವೆಂಕಟಾಚಲ ಸೇರಿದಂತೆ ಹಲವರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಜೂನ್ 30 ರಂದು ಸೇವೆಯಿಂದ ನಿವೃತ್ತರಾಗಲಿರುವ ಲೀಡ್ ಬ್ಯಾಂಕ್ ಮ್ಯಾನೇಜರ್ ಡಿ. ಶಿವಲಿಂಗಯ್ಯ ಅವರನ್ನು ಸಂಸದರು ಹಾಗೂ ಅಧಿಕಾರಿಗಳು ಇದೇ ಸಂದರ್ಭ ಅಭಿನಂದಿಸಿ, ಶುಭ ಕೋರಿದರು.

ಖಾಸಗಿ ಬ್ಯಾಂಕ್‍ಗಳಿರೋದು ಸರ್ಕಾರಿ ಡೆಪಾಸಿಟ್‍ನಲ್ಲಿ ಮಜಾ ಮಾಡೋಕಾ?: ಸಾಲ ನೀಡದ ಖಾಸಗಿ ಬ್ಯಾಂಕ್ ಮ್ಯಾನೇಜರ್‍ಗಳ ಕಾರ್ಯವೈಖರಿಗೆ ಸಂಸತ್ ಸದಸ್ಯರ ಅಸಮಾಧಾನ

ಮೈಸೂರು: ಸರ್ಕಾರಿ ಇಲಾಖೆಗಳ ಠೇವಣಿ ಹಣ ಇಟ್ಕೊಂಡು ಮಜಾ ಮಾಡೋಕಾ ಖಾಸಗಿ ಬ್ಯಾಂಕ್‍ಗಳಿರೋದು ಎಂದು ಮೈಸೂರು ಮತ್ತು ಚಾಮರಾಜನಗರ ಸಂಸದ ಪ್ರತಾಪ್ ಸಿಂಹ ಇಂದಿಲ್ಲಿ ಕಿಡಿಕಾರಿದರು.
ಮೈಸೂರಿನ ಜಿಲ್ಲಾ ಪಂಚಾಯ್ತಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಸಮಾಲೋಚನಾ ಮತ್ತು ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡಿದ್ದ ಪ್ರತಾಪ್ ಸಿಂಹ ಹಾಗೂ ಆರ್.ಧ್ರುವನಾರಾಯಣ ಅವರು, ಸರ್ಕಾರಿ ಇಲಾಖೆಗಳ ಠೇವಣಿ ಹಣ ಇರಿಸಿಕೊಂಡು ಬಡ್ಡಿ ಹಣ ವೃದ್ಧಿಸಿಕೊಂಡು ಮಜಾ ಮಾಡೋಕಾ ಖಾಸಗಿ ಬ್ಯಾಂಕ್‍ಗಳಿರೋದು ಎಂದು ತರಾಟೆಗೆ ತೆಗೆದುಕೊಂಡರು.

ಸರ್ಕಾರಿ ಯೋಜನೆಗಳಿಗೆ ಸಬ್ಸಿಡಿ ಸಾಲ ಕೊಡಲು ಕೋಟಕ್ ಮಹೀಂದ್ರ ಸೇರಿದಂತೆ ಹಲವು ಖಾಸಗಿ ಬ್ಯಾಂಕ್ ಮ್ಯಾನೇಜರ್‍ಗಳು ಹಿಂದೇಟು ಹಾಕುತ್ತಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ಅಂತಹ ಬ್ಯಾಂಕುಗಳ ಸೇವಾ ಪ್ರದೇಶಗಳನ್ನು ಕೊಡಬೇಡಿ (Bank Sevice Area) ಹಾಗೂ ಸರ್ಕಾರಿ ಇಲಾಖೆಗಳು ಅಂತಹ ಖಾಸಗಿ ಬ್ಯಾಂಕ್‍ಗಳಲ್ಲಿ ಖಾತೆ ತೆರೆದು ವ್ಯವಹರಿಸುವುದನ್ನು ಸ್ಥಗಿತಗೊಳಿಸಿ ಎಂದು ಹೇಳಿದರು.

ಬ್ಯಾಂಕ್ ಅಧಿಕಾರಿಗಳು, ಸಿಬ್ಬಂದಿಗೆ ಕನ್ನಡ ಕಲಿಸಿ

ಮೈಸೂರು: ಸ್ಥಳೀಯ ಬ್ಯಾಂಕುಗಳಲ್ಲಿ ಕೆಲಸ ಮಾಡುವ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಡ್ಡಾಯವಾಗಿ ಕನ್ನಡ ಭಾಷೆ ಕಲಿತು ಗ್ರಾಹಕರೊಂದಿಗೆ ವ್ಯವಹರಿಸುವಂತೆ ಸಂಸತ್ ಸದಸ್ಯರು ತಾಕೀತು ಮಾಡಿದ್ದಾರೆ.

ರೈತರು, ಕೂಲಿ ಕಾರ್ಮಿಕರು, ಜನಸಾಮಾನ್ಯರು ಬ್ಯಾಂಕುಗಳಲ್ಲಿ ಗ್ರಾಹಕರಾಗಿರುತ್ತಾರೆ. ಅವರು ಬ್ಯಾಂಕುಗಳಿಗೆ ಬಂದಾಗ ನೀವು ಇಂಗ್ಲಿಷ್ ಅಥವಾ ಹಿಂದಿ ಭಾಷೆಯಲ್ಲಿ ಮಾತನಾಡಿದರೆ ಅವರಿಗೆ ಹೇಗೆ ಅರ್ಥವಾಗುತ್ತದೆ ಎಂದ ಅವರು, ಐಎಎಸ್, ಐಪಿಎಸ್, ಐಎಫ್‍ಎಸ್ ಅಧಿಕಾರಿಗಳೇ ಒಂದು ತಿಂಗಳೊಳಗಾಗಿ ಕಡ್ಡಾಯವಾಗಿ ಸ್ಥಳೀಯ ಭಾಷೆ ಕಲಿಯಲು ತರಬೇತಿ ನೀಡಲಾಗುತ್ತದೆ. ಅದೇ ರೀತಿ ಬ್ಯಾಂಕ್ ಅಧಿಕಾರಿಗಳಿಗೂ ಕನ್ನಡ ಕಲಿಯುವಂತೆ ಹೇಳಬೇಕೆಂದು ತಿಳಿಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಸಿದ್ದರಾಮಯ್ಯ ನೇತೃತ್ವದ ಸದಸ್ಯರು ಇತ್ತೀಚೆಗಷ್ಟೇ ಕೆಲ ಬ್ಯಾಂಕ್‍ಗಳಿಗೆ ಭೇಟಿ ನೀಡಿ ಕನ್ನಡ ಅನುಷ್ಠಾನದ ಬಗ್ಗೆ ಪರಿಶೀಲನೆ ನಡೆಸಿದ್ದು, ಕನ್ನಡವನ್ನು ಕಲಿತು ಅನುಷ್ಠಾನಗೊಳಿಸುವಂತೆ ಸುತ್ತೋಲೆಯನ್ನು ಹೊರಡಿಸಿದ್ದಾರೆ ಎಂದು ಲೀಡ್ ಬ್ಯಾಂಕ್ ಮ್ಯಾನೇಜರ್ ಡಿ.ಶಿವಲಿಂಗಯ್ಯ ನುಡಿದರು.

ಆಗಿಂದಾಗ್ಗೆ ಬ್ಯಾಂಕ್‍ಗಳು ಜನ ಸಂಪರ್ಕ ಸಭೆ ನಡೆಸಿ ಗ್ರಾಹಕರ ಕುಂದು-ಕೊರತೆ ಆಲಿಸಿ ಪರಿಹರಿಸಬೇಕೆಂದು ಸಂಸದ ಆರ್.ಧ್ರುವನಾರಾಯಣ್ ಸಲಹೆ ನೀಡಿದರೆ, ಬ್ಯಾಂಕ್ ಮೇಳ ಏರ್ಪಡಿಸುವ ಜತೆಗೆ ‘ಸಹಾಯವಾಣಿ’ ಯನ್ನು ಆರಂಭಿಸಿ ಸಮಸ್ಯೆ ಆಲಿಸುವಂತೆ ಪ್ರತಾಪ್ ಸಿಂಹ ತಿಳಿಸಿದರು.

Translate »