ಪಾದಚಾರಿ ಮಾರ್ಗ, ಮಾಂಸಹಾರಿ ಫಾಸ್ಟ್‍ಫುಡ್ ತೆರವಿಗೆ ಪಾಲಿಕೆ ಅಧಿಕಾರಿಗಳಿಗೆ ಸೂಚನೆ
ಮೈಸೂರು

ಪಾದಚಾರಿ ಮಾರ್ಗ, ಮಾಂಸಹಾರಿ ಫಾಸ್ಟ್‍ಫುಡ್ ತೆರವಿಗೆ ಪಾಲಿಕೆ ಅಧಿಕಾರಿಗಳಿಗೆ ಸೂಚನೆ

June 28, 2018
  • ಶಾಸಕ ರಾಮದಾಸರ ಮುಂದುವರೆದ ಪಾದಯಾತ್ರೆ

ಮೈಸೂರು: ಕೆ.ಆರ್.ಕ್ಷೇತ್ರದಲ್ಲಿ ಒತ್ತುವರಿಯಾಗಿರುವ ಪಾದಚಾರಿ ಮಾರ್ಗವನ್ನು ತೆರವುಗೊಳಿಸುವುದರೊಂದಿಗೆ ರಸ್ತೆ ಬದಿಗಳಲ್ಲಿ ಮಾಂಸಹಾರಿ ಫಾಸ್ಟ್‍ಫುಡ್‍ಗಳಿಗೆ ಅನುಮತಿ ನೀಡಬಾರದೆಂದು ಶಾಸಕ ಎಸ್.ಎ.ರಾಮದಾಸ್ ಸೂಚನೆ ನೀಡಿದ್ದಾರೆ.

ಮೈಸೂರು ನಗರ ಪಾಲಿಕೆಯ 3ನೇ ವಾರ್ಡ್‍ನಲ್ಲಿ (ಪುನರ್ ವಿಂಗಡಣೆ ಬಳಿಕ 49ನೇ ವಾರ್ಡ್) ಬುಧವಾರ ಬೆಳಿಗ್ಗೆ 6.30ರಿಂದ ನ್ಯಾಯಾಲಯದ ಮುಂಭಾಗವಿರುವ ಮನುವನ ಪಾರ್ಕ್‍ನಿಂದ ಪಾದಯಾತ್ರೆ ಆರಂಭಿಸಿದ ಅವರು, ವಾಯುವಿಹಾರಿಗಳು, ಯೋಗಪಟುಗಳು, ದೈಹಿಕ ಕಸರತ್ತು ಮಾಡುವವರ ಸಮಸ್ಯೆಗಳನ್ನು ಆಲಿಸಿದರು. ಬಳಿಕ ಗೀತಾ ರಸ್ತೆ, ಆರ್‍ಟಿಓ ವೃತ್ತ, ಲಕ್ಷ್ಮೀಪುರಂ, ಮದ್ವಾಚಾರ್ ರಸ್ತೆ, ಬಸವೇಶ್ವರ ರಸ್ತೆ ಸೇರಿದಂತೆ ವಿವಿಧೆಡೆ ಪಾದಯಾತ್ರೆ ನಡೆಸಿ ಸ್ಥಳೀಯರಿಂದ ಸಮಸ್ಯೆ ಆಲಿಸಿ ಸ್ಥಳದಲ್ಲಿಯೇ ಪಾಲಿಕೆ ಅಧಿಕಾರಿಗಳಿಗೆ ನಾನಾ ಸಮಸ್ಯೆಗಳನ್ನು ಬಗೆಹರಿಸುವಂತೆ ಆದೇಶಿಸಿದರು.

ಇದೇ ವೇಳೆ ಮಾತನಾಡಿದ ಶಾಸಕ ಎಸ್.ಎ.ರಾಮದಾಸ್ ಅವರು, ಮನುವನ ಪಾರ್ಕ್‍ನಲ್ಲಿ ಪ್ರತಿದಿನ ಹಲವಾರು ಮಂದಿ ವಾಯುವಿಹಾರಕ್ಕೆ, ಯೋಗ ಹಾಗೂ ಇನ್ನಿತರೆ ದೈಹಿಕ ಕಸರತ್ತು ಮಾಡುವುದಕ್ಕೆ ಆಗಮಿಸುತ್ತಾರೆ. ಇದರಿಂದ ಈ ಉದ್ಯಾನವನದ ಸಮೀಪ ಶೌಚಾಲಯ ನಿರ್ಮಿಸುವಂತೆ, ಜೊತೆಗೆ ಪಾರ್ಕ್‍ನಲ್ಲಿ ಹುಟ್ಟು ಹಬ್ಬ ಆಚರಿಸಿಕೊಳ್ಳುವುದಕ್ಕೆ ಬರುವವರು ಪಟಾಕಿ ಸಿಡಿಸಿ ನೈರ್ಮಲ್ಯವನ್ನು ಹದಗೆಡಿಸುತ್ತಿದ್ದಾರೆ ಎಂಬ ದೂರುಗಳು ಕೇಳಿ ಬಂದಿವೆ. ಈ ಹಿನ್ನೆಲೆಯಲ್ಲಿ ಪಟಾಕಿ ಸಿಡಿಸುವುದನ್ನು ನಿರ್ಬಂಧಿಸಲು ಆದೇಶಿಸಲಾಗಿದೆ. ಒಡೆದು ಹೋಗಿರುವ ಬೀದಿ ದೀಪವನ್ನು ದುರಸ್ಥಿ ಮಾಡುವಂತೆ ಸೂಚಿಸಿರುವುದಾಗಿ ಹೇಳಿದರು.

ನ್ಯಾಯಾಲಯದ ರಸ್ತೆಯಲ್ಲಿ ಯುಜಿಡಿ ಸಮಸ್ಯೆ ಇದೆ. ದೊಡ್ಡ ಮೋರಿಗೆ ಯುಜಿಡಿ ನೀರು ಹರಿಯುತ್ತಿತ್ತು. ವಸತಿ ನಿಲಯಗಳು, ವಾಣಿಜ್ಯ ಸಂಕಿರ್ಣದಿಂದ ಅಕ್ರಮವಾಗಿ ಒಳಚರಂಡಿ ನೀರನ್ನು ಚರಂಡಿಗೆ ಬಿಡುತ್ತಿರುವುದು ಗಮನಕ್ಕೆ ಬಂದಿದೆ. ಗೀತಾ ರಸ್ತೆ ಸೇರಿದಂತೆ ವಿವಿಧ ರಸ್ತೆಗಳಲ್ಲಿ ಡಾಂಬರ್ ಕಿತ್ತು ಹೋಗಿದೆ. ಪಾಲಿಕೆ ಆಸ್ತಿಯಲ್ಲಿ ಈ ಹಿಂದೆ ಗ್ರಂಥಾಲಯ ಕಟ್ಟಿಸಲಾಗಿತ್ತು. ಸಣ್ಣದಾದ ಕಟ್ಟಡದಲ್ಲಿರುವ ಗ್ರಂಥಾಲಯವನ್ನು ದೊಡ್ಡದಾಗಿ ಪರಿವರ್ತಿಸುವುದಕ್ಕಾಗಿ ಅದರ ಪಕ್ಕದಲ್ಲಿದ್ದ ಪಾಲಿಕೆ ಸ್ಥಳವನ್ನು ವ್ಯಕ್ತಿಯೊಬ್ಬರು ಒತ್ತುವರಿ ಮಾಡಿಕೊಂಡಿರುವುದನ್ನು ತೆರವುಗೊಳಿಸುವುದಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲದೆ ಕ್ಷೇತ್ರದಲ್ಲಿ ಯಾವುದೇ ಭಾಗದಲ್ಲಿ ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿಕೊಂಡಿದ್ದರೆ, ನಿರ್ಧಾಕ್ಷಿಣ್ಯವಾಗಿ ತೆರವು ಮಾಡುವಂತೆ ಸೂಚಿಸಲಾಗಿದೆ ಎಂದರು.

ತೊಪ್ಪೆ ಸಂಗ್ರಹಕ್ಕೆ ಕಂಟೇನರ್: 3ನೇ ವಾರ್ಡ್‍ನಲ್ಲಿ ಹಸು ಸಾಕಿರುವವರು ಸಗಣಿ ಯನ್ನು ಎಲ್ಲೆಂದರಲ್ಲಿ ಬೀಸಾಡಿ ಹೋಗುತ್ತಿರುವ ದೂರುಗಳು ಕೇಳಿ ಬಂದಿವೆ. ಮನೆಯಿಂದ ಸಗಣೆ ತಂದು ಯಾವುದಾದರೂ ರಸ್ತೆಯ ಬದಿಯಲ್ಲಿ ಸುರಿದು ಹೋಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹಸು ಸಾಕಿರುವವರ ಮನೆಗೆ ಒಂದು ಚಿಕ್ಕ ಕಂಟೇನರ್ ನೀಡಲಾಗುತ್ತದೆ. ಅದರಲ್ಲಿ ಸಗಣಿ ತುಂಬಿ ಮನೆಯ ಹೊರಗೆ ಇಟ್ಟರೆ ಪಾಲಿಕೆ ಸಿಬ್ಬಂದಿ ತೆಗೆದುಕೊಂಡು ಹೋಗುವ ವ್ಯವಸ್ಥೆ ಜಾರಿಗೆ ತರಲು ತೀರ್ಮಾನಿಸಲಾಯಿತು ಎಂದು ಹೇಳಿದರು.

ರಸ್ತೆ ಬದಿಯಲ್ಲಿ ಮಾಂಸಹಾರ ನಿರ್ಬಂಧ: ಆರ್‌ಟಿಓ ಕಚೇರಿ ಹಿಂಭಾಗದ ರಸ್ತೆಯಲ್ಲಿ ಎಲ್ಲೆಂದರಲ್ಲಿ ಕಸ ಸುರಿಯಲಾಗುತ್ತಿದೆ. ಅಲ್ಲದೆ ಫಾಸ್ಟ್‍ಫುಡ್‍ಗಳಲ್ಲಿನ ಮಾಂಸಾಹಾರದ ತ್ಯಾಜ್ಯವನ್ನು ಸುರಿಯಲಾಗುತ್ತಿದೆ. ಇದರಿಂದ ದುರ್ನಾತ ಬೀರುತ್ತಿದ್ದು, ಸ್ಥಳೀಯರು ಯಾತನೆ ಅನುಭವಿಸುತ್ತಿದ್ದಾರೆ. ರಸ್ತೆ ಬದಿಯಲ್ಲಿರುವ ಮಾಂಸಹಾರದ ಫಾಸ್ಟ್‍ಫುಡ್‍ಗಳನ್ನು ವಿಚಾರಿಸಿದಾಗ ಪಾಲಿಕೆಯಿಂದಲೇ ಅನುಮತಿ ಪಡೆದಿರುವುದಾಗಿ ಲೈಸನ್ಸ್ ಅನ್ನು ತೋರಿಸುತ್ತಾರೆ. ಇದನ್ನು ಮನಗಂಡು ರಸ್ತೆ ಬದಿಯಲ್ಲಿ ಮಾಂಸಹಾರದ ಫಾಸ್ಟ್‍ಫುಡ್‍ಗಳಿಗೆ ಅನುಮತಿ ನೀಡದೆ, ಅಂತಹ ಫಾಸ್ಟ್‍ಫುಡ್‍ಗೆ ಅವಕಾಶ ನೀಡದಂತೆ ಎಚ್ಚರಿಸಿದರು.
ಲಕ್ಷ್ಮೀಪುರಂ ಬಳಿ ರಸ್ತೆಯ ಬದಿಯಲ್ಲಿರುವ ಡಬಲ್ ಟ್ಯಾಂಕ್‍ಗೆ ನೀರು ತುಂಬಿಸುವುದಕ್ಕೆ ಕಳೆದ ಏಳು ವರ್ಷದ ಹಿಂದೆ ಕ್ರಮ ಕೈಗೊಳ್ಳಲಾಗಿತ್ತು. ಇದೀಗ ಅವುಗಳನ್ನು ಪುನಶ್ಚೇತನಗೊಳಿಸಿ ನೀರು ತುಂಬಿಸುವುದಕ್ಕೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಟಾಂಕ್‍ಗಳನ್ನು ತೆರವು ಮಾಡುವುದಕ್ಕೆ ಸಾಧ್ಯವೇ ಎಂದು ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಿದರಲ್ಲದೆ, ಲಕ್ಷ್ಮೀಪುರಂನಲ್ಲಿ ಪೌರಕಾರ್ಮಿಕರಿರಲಿಲ್ಲ. ಬೇರೆ ಬಡಾವಣೆಯಿಂದ ಪೌರಕಾರ್ಮಿಕರನ್ನು ಕರೆತಂದು ಬೆಳಗ್ಗೆ 10ರ ನಂತರ ಸ್ವಚ್ಛ ಮಾಡಿಸುವ ವ್ಯವಸ್ಥೆಯಿತ್ತು. ಇದರಿಂದ ಕೂಡಲೇ ಲಕ್ಷ್ಮೀಪುರಂಗೆ ಪ್ರತ್ಯೇಕವಾಗಿ ಪೌರಕಾರ್ಮಿಕರನ್ನು ನಿಯೋಜಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ಆದೇಶಿಸಿದರು.

Translate »