ಆರು ತಿಂಗಳಿಂದ ಬಿಡುಗಡೆಯಾಗದ ಅನುದಾನ :ಇಂದಿರಾ ಕ್ಯಾಂಟೀನ್ ಗುತ್ತಿಗೆದಾರರ ಸಂಕಷ್ಟ ವಾರದಲ್ಲಿ ಹಣ ಬಿಡುಗಡೆ ಆಶಯ
ಮೈಸೂರು

ಆರು ತಿಂಗಳಿಂದ ಬಿಡುಗಡೆಯಾಗದ ಅನುದಾನ :ಇಂದಿರಾ ಕ್ಯಾಂಟೀನ್ ಗುತ್ತಿಗೆದಾರರ ಸಂಕಷ್ಟ ವಾರದಲ್ಲಿ ಹಣ ಬಿಡುಗಡೆ ಆಶಯ

June 28, 2018

ಮೈಸೂರು: ಹಸಿವು ಮುಕ್ತ ಕರ್ನಾಟಕ ಮಾಡುವ ನಿಟ್ಟಿನಲ್ಲಿ ಈ ಹಿಂದಿನ ಸರ್ಕಾರ ಜಾರಿಗೆ ತಂದಿದ್ದ ‘ಇಂದಿರಾ ಕ್ಯಾಂಟೀನ್’ ಸಂಕಷ್ಟದ ಸುಳಿಯಲ್ಲಿ ಸಿಲುಕಿದ್ದು, ರಾಜ್ಯ ಸರ್ಕಾರ ಕಳೆದ ಆರು ತಿಂಗಳಿಂದ ಅನುದಾನ ಬಿಡುಗಡೆ ಮಾಡದೆ ಇರುವುದು ಗುತ್ತಿಗೆದಾರರು ಹಾಗೂ ಈ ಕ್ಯಾಂಟೀನ್ ಅವಲಂಭಿತ ಬಡ ಜನರನ್ನು ಸಂಕಷ್ಟಕ್ಕೆ ದೂಡಿದೆ.

ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರ ಕನಸಿನ ಯೋಜನೆ `ಇಂದಿರಾ ಕ್ಯಾಂಟೀನ್’ ಅನ್ನು ಆರಂಭದಲ್ಲಿ ರಾಜಧಾನಿ ಬೆಂಗಳೂರು ಸೇರಿದಂತೆ ನಂತರ ರಾಜ್ಯಾದ್ಯಂತ ಆರಂಭಿಸಲಾಗಿತ್ತು. ಬಡವರು, ಕೂಲಿ ಕಾರ್ಮಿಕರು ಹಾಗೂ ಅಸಂಘಟಿತ ವರ್ಗದವರಿಗಾಗಿ ಕಡಿಮೆ ದರದಲ್ಲಿ ಊಟ ಮತ್ತು ಉಪಹಾರ ನೀಡುವ ನಿಟ್ಟಿನಲ್ಲಿ ಜಾರಿಗೆ ತಂದ ಇಂದಿರಾ ಕ್ಯಾಂಟೀನ್ ಅನ್ನು ಬೆಂಗಳೂರಿನಲ್ಲಿ 100 ಕಡೆ ಸ್ಥಾಪಿಸಲಾಗಿತ್ತು. ಈ ಯೋಜನೆಯಡಿ ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ 2018ರ ಜನವರಿ 13ರಂದು 11 ಇಂದಿರಾ ಕ್ಯಾಂಟೀನ್‍ಗೆ ಸಿದ್ದರಾಮಯ್ಯ ಚಾಲನೆ ನೀಡಿದ್ದರು. ಅಂದಿನಿಂದ ಇಂದಿನವರೆಗೂ ಮೈಸೂರಿನ 11 ಇಂದಿರಾ ಕ್ಯಾಂಟೀನ್‍ಗಳಲ್ಲಿ 5 ರೂ.ಗೆ ಉಪಹಾರ, 10 ರೂ.ಗೆ ಊಟವನ್ನು ಗುತ್ತಿಗೆದಾರರೇ ತಮ್ಮ ಸ್ವಂತ ಖರ್ಚಿನಲ್ಲಿ ಪೂರೈಸುತ್ತಿದ್ದರಾದರೂ ಸರ್ಕಾರದಿಂದ ಒಂದೇ ಒಂದು ರೂ. ಬಿಡುಗಡೆಯಾಗದೇ ಇರುವುದು ಗುತ್ತಿಗೆದಾರರಿಗೆ ತಲೆ ನೋವಾಗಿ ಪರಿಣಮಿಸಿದೆ.

ಮೈಸೂರಿನ ಇಂದಿರಾ ಕ್ಯಾಂಟೀನ್ ಗುತ್ತಿಗೆದಾರ ಎಂ.ವಿ.ಮಧು, ಸರ್ಕಾರಕ್ಕೆ, ಜಿಲ್ಲಾಧಿಕಾರಗಳಿಗೆ ಹಾಗೂ ಪಾಲಿಕೆ ಆಯುಕ್ತರಿಗೆ ಪತ್ರ ಬರೆದು ಹಣ ಬಿಡುಗಡೆ ಮಾಡುವಂತೆಯೂ, ಈಗ ಸ್ವಂತ ಖರ್ಚಿನಲ್ಲಿ ನಡೆಸುತ್ತಿರುವ ಬಗ್ಗೆ ವಿವರಣೆ ನೀಡಿದ್ದಾರೆ. ಮೈಸೂರಿನಂತೆ ಬೆಂಗಳೂರಿನಲ್ಲಿಯೂ ಇಂದಿರಾ ಕ್ಯಾಂಟೀನ್‍ಗೆ ಹಣ ಬಿಡುಗಡೆಯಾಗದೆ ಕಳೆದ ಸರ್ಕಾರದ ಮಹತ್ವದ ಯೋಜನೆ ಸ್ಥಗಿತಗೊಳ್ಳುವ ಹಂತಕ್ಕೆ ಬಂದಿದೆ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಅಲ್ಲದೆ ರಾಜ್ಯದಲ್ಲಿರುವ ಸಮ್ಮಿಶ್ರ ಸರ್ಕಾರದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಜಮೀರ್ ಅಹ್ಮದ್ ಅವರಿಗೂ ಇಂದಿರಾ ಕ್ಯಾಂಟೀನ್‍ಗೆ ಅನುದಾನ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಲಾಗಿದೆ.

ವಿಳಂಬಕ್ಕೆ ಕಾರಣ: ಕಳೆದ ಸರ್ಕಾರ ಹಸಿವು ಮುಕ್ತ ಕರ್ನಾಟಕ ಮಾಡುವ ನಿಟ್ಟಿನಲ್ಲಿ ಅನ್ನಭಾಗ್ಯ ಯೋಜನೆಯೊಂದಿಗೆ ಕಡಿಮೆ ದರದಲ್ಲಿ ಆಹಾರ ಪೂರೈಸುವುದಕ್ಕಾಗಿ ಇಂದಿರಾ ಕ್ಯಾಂಟೀನ್ ಸ್ಥಾಪಿಸಿತ್ತು. ಇಲ್ಲಿನ ಸ್ವಚ್ಛತೆ ಹಾಗೂ ಗುಣಮಟ್ಟದ ಬಗ್ಗೆ ಬಿಬಿಸಿ ವಾಹಿನಿಯಲ್ಲಿಯೂ ಇಂದಿರಾ ಕ್ಯಾಂಟೀನ್ ಬಗ್ಗೆ ಮೆಚ್ಚುಗೆಯ ವರದಿಗಳು ಪ್ರಸಾರವಾಗಿ ದೇಶದಲ್ಲಿಯೇ ಸರ್ಕಾರಿ ಸ್ವಾಮ್ಯದ ವತಿಯಿಂದ ನಡೆಯುತ್ತಿರುವ ಉತ್ತಮ ಕ್ಯಾಂಟೀನ್ ಎಂಬ ಪ್ರಶಂಸೆಗೂ ಪಾತ್ರವಾಗಿತ್ತು. ಆದರೆ ಇದೀಗ ಮುಚ್ಚುವ ಹಂತಕ್ಕೆ ಬಂದು ತಲುಪಿದೆ. ಇದಕ್ಕೆ ಕಾರಣ ಮೀಸಲಿಟ್ಟಿರುವ ಅನುದಾನ ನೀಡದೆ ಇರುವುದು. ಹಿಂದಿನ ಸರ್ಕಾರ ಇಂದಿರಾ ಕ್ಯಾಂಟೀನ್ ನಿರ್ವಹಣೆಗೆ ಅನುದಾನ ಮೀಸಟ್ಟಿತ್ತು. ಆದರೆ, ಚುನಾವಣೆ ದಿನಾಂಕ ಘೋಷಣೆಯಾಗಿ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಅನುದಾನವನ್ನು ಗುತ್ತಿಗೆದಾರರಿಗೆ ನೀಡುವುದಕ್ಕೆ ಸಾಧ್ಯವಾಗಲಿಲ್ಲ. ಹೊಸ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆಯಾದರೂ ಇಂದಿರಾ ಕ್ಯಾಂಟೀನ್‍ಗೆ ಅನುದಾನ ಬಿಡುಗಡೆ ಮಾಡುವುದಕ್ಕೆ ಇನ್ನು ಕ್ರಮ ಕೈಗೊಳ್ಳದೆ ಇರುವುದರಿಂದ ಇದೀಗ ಉಸಿರುಗಟ್ಟುವ ವಾತಾವರಣದಲ್ಲಿ ಇಂದಿರಾ ಕ್ಯಾಂಟೀನ್ ನಡೆಯುತ್ತಿದೆ.

ಅನುದಾನ ನೀಡಿ ಕಾಪಾಡಬೇಕು

ಮೈಸೂರಿನಲ್ಲಿ ಇಂದಿರಾ ಕ್ಯಾಂಟೀನ್ ನೆಚ್ಚಿಕೊಂಡಿರುವ ಆಟೋ ಚಾಲಕರು, ಕೂಲಿ ಕಾರ್ಮಿಕರು `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ಕ್ಯಾಂಟೀನ್‍ನಿಂದ ಬಡವರು, ಕೂಲಿ ಕಾರ್ಮಿಕರು ಸೇರಿದಂತೆ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಕೊಂಡು ಜೀವನ ನಡೆಸುತ್ತಿರುವ ಸಾವಿರಾರು ಮಂದಿಗೆ ನೆರವಾಗಿದೆ. ದೂರದ ಊರುಗಳಿಂದ ಕೆಲಸಕ್ಕೆ ಬರುವವರಿಗಾಗಿ 5 ಹಾಗೂ 10 ರೂ.ಗೆ ಉಪಹಾರ ಮತ್ತು ಬೋಜನ ನೀಡುವ ಇಂದಿರಾ ಕ್ಯಾಂಟೀನ್ ವರದಾನವಾಗಿದೆ. ಹಣವಿಲ್ಲ ಎಂದು ಈ ಕ್ಯಾಂಟೀನ್ ಅನ್ನು ಬಂದ್ ಮಾಡಬಾರದು. ಸಾವಿರಾರು ಮಂದಿ ಇವುಗಳನ್ನು ಅವಲಂಬಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಇಂದಿರಾ ಕ್ಯಾಂಟೀನ್‍ಗೆ ನೀಡಬೇಕಾದ ಅನುದಾನ ನೀಡಿ, ಬಡವರಿಗೆ ಆಹಾರ ಸರಬರಾಜು ಮಾಡುವುದಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಎರಡು ದಿನದಲ್ಲಿ ಬಿಡುಗಡೆಯಾಗುವ ಆಶಯವಿದೆ

ಕಳೆದ ಆರು ತಿಂಗಳಿಂದ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿರಲಿಲ್ಲ. ಈ ಸಂಬಂಧ ಸರ್ಕಾರಕ್ಕೆ ಪತ್ರ ಬರೆಯಲಾಗಿತ್ತು. ನಮ್ಮ ಸೇವೆಯನ್ನು ಗಮನಿಸಿರುವ ಜಿಲ್ಲಾಧಿಕಾರಿಗಳು ಹಾಗೂ ಪಾಲಿಕೆ ಆಯುಕ್ತರು ಎರಡು ದಿನದಲ್ಲಿ ಹಣ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ನಮಗೆ ಹಣ ದೊರೆಯುವ ಆಶಯವಿದೆ. ಮೈಸೂರಿನಲ್ಲಿರುವ ಎಲ್ಲಾ 11 ಕ್ಯಾಂಟೀನ್‍ಗಳಲ್ಲಿಯೂ ಗ್ರಾಹಕರಿಗೆ ಉತ್ತಮ ಸೇವೆ ನೀಡಲಾಗುತ್ತಿದೆ. ಅನುದಾನ ಬಿಡುಗಡೆಯಾಗಿಲ್ಲ ಎಂಬ ಕಾರಣದಿಂದ ಇದುವರೆಗೂ ಆಹಾರ ಸರಬರಾಜು ನಿಲ್ಲಿಸಿಲ್ಲ. ಸಂಕಷ್ಟದ ಪರಿಸ್ಥಿತಿಯಲ್ಲಿಯೂ ಕ್ಯಾಂಟೀನ್ ಅನ್ನು ಮುಂದುವರೆಸಿಕೊಂಡು ಬರುತ್ತಿದ್ದೇವೆ. – ಎಂ.ವಿ.ಮಧು, ಇಂದಿರಾ ಕ್ಯಾಂಟೀನ್ ಗುತ್ತಿಗೆದಾರ.

Translate »