ಯಾವುದೇ ಅಕ್ರಮ ನೇಮಕಾತಿ ಆಗಿಲ್ಲ: ಸರ್ಕಾರಕ್ಕೆ ಮೈಸೂರು ವಿವಿ ಕುಲಸಚಿವರ ವರದಿ
ಮೈಸೂರು

ಯಾವುದೇ ಅಕ್ರಮ ನೇಮಕಾತಿ ಆಗಿಲ್ಲ: ಸರ್ಕಾರಕ್ಕೆ ಮೈಸೂರು ವಿವಿ ಕುಲಸಚಿವರ ವರದಿ

June 28, 2018

ಮೈಸೂರು: ಮೈಸೂರು ವಿಶ್ವವಿದ್ಯಾಲಯದಲ್ಲಿ 124 ಬೋಧಕೇತರ ಸಿಬ್ಬಂದಿಯನ್ನು ತಾತ್ಕಾಲಿಕವಾಗಿ ನೇಮಕ ಮಾಡಿರುವುದರಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ವಿವಿ ರಿಜಿಸ್ಟ್ರಾರ್ ರಾಜಣ್ಣ ಅವರು ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ವರದಿ ಸಲ್ಲಿಸಿದ್ದಾರೆ.

124 ಬೋಧಕೇತರ ಸಿಬ್ಬಂದಿಯನ್ನು ತಕ್ಷಣ ವಜಾ ಮಾಡಿ ಅನುಪಾಲನಾ ವರದಿ ಸಲ್ಲಿಸುವಂತೆ ಮೈಸೂರು ವಿವಿಗೆ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ನೀಡಿದ್ದ ಆದೇಶಕ್ಕೆ ಸಂಬಂಧಿಸಿದಂತೆ ರಾಜಣ್ಣ ಅವರು ವರದಿ ಸಲ್ಲಿಸಿದ್ದಾರೆ.
ಮೈಸೂರು ವಿವಿಯಲ್ಲಿ 2007ರಿಂದ ಈಚೆಗೆ ಯಾವುದೇ ಸಿಬ್ಬಂದಿ ನೇಮಕ ಮಾಡಿಲ್ಲ. ನಿಯಮಾವಳಿ ಪ್ರಕಾರ ತಾತ್ಕಾಲಿಕ ಸಿಬ್ಬಂದಿಯನ್ನು 11 ತಿಂಗಳ ಅವಧಿಗೆ ನೇಮಕ ಮಾಡಿಕೊಳ್ಳಲು ಸರ್ಕಾರ ಅಥವಾ ಸಿಂಡಿಕೇಟ್ ಅನುಮತಿ ಬೇಕಾಗಿಲ್ಲ. ತುರ್ತು ಅಗತ್ಯಕ್ಕೆ ಅನುಸಾರ ನೇಮಕಾತಿಗೆ ಸಮಾಜ ಕಲ್ಯಾಣ ಇಲಾಖೆಯ ಅನುಮತಿಯೂ ಬೇಕಾಗಿಲ್ಲ. ಮೈಸೂರು ವಿಶ್ವವಿದ್ಯಾನಿಲಯ ಅತ್ಯಂತ ಹಳೆಯ ವಿವಿಯಾಗಿದ್ದು, ಇಲ್ಲಿ ಆಡಳಿತ ನಿರ್ವಹಿಸಿರುವ ಘಟಾನುಘಟಿ ಕುಲಪತಿಗಳು ಕಾನೂನಾನುಸಾರ ವಿವಿಯ ಘನತೆ, ಗೌರವ ಕಾಪಾಡಿಕೊಂಡು ಸುಗಮ ರೀತಿ ಆಡಳಿತ ನಿರ್ವಹಣೆ ದೃಷ್ಟಿಯಿಂದ ಸ್ವಾಯತ್ತ ಸಂಸ್ಥೆ ಅನುಸಾರ ಆಡಳಿತ ನಿರ್ವಹಣೆ ಮತ್ತು ಸಿಬ್ಬಂದಿ ನೇಮಕ ಮಾಡಿಕೊಂಡು ಹೋಗಿದ್ದಾರೆ. ಅದೇ ಸಂಪ್ರದಾಯ ಹಾಗೂ ನಡಾವಳಿ ಅನುಸಾರ ನೇಮಕಾತಿ ಹಾಗೂ ಆಡಳಿತ ವಿಷಯ ಸಂಬಂಧ ತೀರ್ಮಾನ ಕೈಗೊಳ್ಳಲಾಗಿದೆ. ಎಲ್ಲೂ ಸರ್ಕಾರದ ಆದೇಶವನ್ನಾಗಲೀ, ನಿಯಮಾವಳಿಗಳನ್ನಾಗಲೀ ಉಲ್ಲಂಘಿಸಿಲ್ಲ. ಈ ಮಧ್ಯೆ 124 ಬೋಧಕೇತರ ಸಿಬ್ಬಂದಿ ನೇಮಕಾತಿ ಸಂಬಂಧ ವಿವಿಯ ಹಿಂದಿನ ಕುಲಸಚಿವೆ ಭಾರತಿ ಅವರು ಸಿಂಡಿಕೇಟ್ ಗಮನಕ್ಕೂ ತಂದಿದ್ದಾರೆ ಎಂದು ರಾಜಣ್ಣ ತಮ್ಮ ವರದಿಯಲ್ಲಿ ತಿಳಿಸಿದ್ದಾರೆನ್ನಲಾಗಿದೆ.

ಅಲ್ಲದೇ ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಆದೇಶದಲ್ಲಿ ಉಲ್ಲೇಖಿಸಿರುವಂತೆ 2016ರ ಡಿಸೆಂಬರ್‍ನಲ್ಲಿ 124 ಬೋಧಕೇತರ ಸಿಬ್ಬಂದಿ ನೇಮಕವಾಗಿಲ್ಲ. ಹೀಗೆ ನೇಮಕವೇ ಆಗದಿರುವ ಸಿಬ್ಬಂದಿಯನ್ನು ವಜಾ ಮಾಡುವುದು ಹೇಗೆ? ಎಂದು ಅವರು ಪ್ರಶ್ನಿಸಿದ್ದಾರೆ ಎನ್ನಲಾಗಿದೆ. 2017ರ ಜನವರಿಯಲ್ಲಿ ಬೋಧಕೇತರ ಸಿಬ್ಬಂದಿಯನ್ನು 11 ತಿಂಗಳ ಅವಧಿಗೆ ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲಾಗಿದೆ. 11 ತಿಂಗಳ ನಂತರ ಸಹಜವಾಗಿಯೇ ಅವರ ಉದ್ಯೋಗದ ಅವಧಿ ಮುಗಿಯುತ್ತದೆ. ಹೀಗಿರುವಾಗ ಅವರನ್ನು ವಜಾ ಮಾಡುವ ಪ್ರಮೇಯವೇ ಉದ್ಭವಿಸುವುದಿಲ್ಲ ಎಂದು ರಾಜಣ್ಣ ತಮ್ಮ ವರದಿಯಲ್ಲಿ ಹೇಳಿದ್ದಾರೆನ್ನಲಾಗಿದೆ.

Translate »