ಇಂದಿರಾ ಕ್ಯಾಂಟೀನ್‍ಗೆ ಆರ್ಥಿಕ ಸಂಕಷ್ಟ
Uncategorized

ಇಂದಿರಾ ಕ್ಯಾಂಟೀನ್‍ಗೆ ಆರ್ಥಿಕ ಸಂಕಷ್ಟ

March 22, 2021

ಮೈಸೂರು, ಮಾ.21(ವೈಡಿಎಸ್)- ಸಾಮಾನ್ಯ ಜನರಿಗೆ ಕಡಿಮೆ ದರದಲ್ಲಿ ಉಪಾಹಾರ ಒದಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಆರಂಭಿಸಿದ ಮಹತ್ವದ ಯೋಜನೆ `ಇಂದಿರಾ ಕ್ಯಾಂಟೀನ್’ ನಿರ್ವ ಹಣೆಗೆ ಆರ್ಥಿಕ ಸಂಕಷ್ಟ ಎದುರಾಗಿದೆ.

ಹಸಿವು ಮುಕ್ತ ರಾಜ್ಯ ಮಾಡಬೇಕೆಂಬ ಉದ್ದೇಶದಿಂದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಇಂದಿರಾ ಕ್ಯಾಂಟೀನ್ ಯೋಜನೆಯನ್ನು 2017ರಲ್ಲಿ ಬೆಂಗಳೂರಿನಲ್ಲಿ ಆರಂಭಿಸಿ, ನಂತರ ರಾಜ್ಯದ ಇತರೆಡೆಗೂ ವಿಸ್ತರಿಸಿದರು.

ಅತ್ಯಂತ ಕಡಿಮೆ ದರದಲ್ಲಿ ತಿಂಡಿ, ಊಟ ಸಿಗುತ್ತಿದ್ದುದರಿಂದ ನಿರ್ಗತಿಕರು, ಬಡವ ರಿಗೆ ಅನುಕೂಲವಾಗಿತ್ತು. ಆದರೆ, ಪ್ರಸ್ತುತ ಸನ್ನಿವೇಶಗಳನ್ನು ಗಮನಿಸಿದರೆ ಕ್ಯಾಂಟೀನ್ ಪೂರ್ಣ ಬಂದ್ ಆಗುತ್ತವೆಯೋ ಎಂಬ ಸಂಶಯ ಶುರುವಾಗಿದೆ.

3.50 ಕೋಟಿ ರೂ. ಬಾಕಿ: ಮೈಸೂರಿ ನಲ್ಲಿ 2020ರ ಮಾರ್ಚ್‍ನಿಂದ ಇಲ್ಲಿಯ ವರೆಗೂ 3.50 ಕೋಟಿ ರೂ.ಗಳನ್ನು ಸರ್ಕಾರ ಬಾಕಿ ಉಳಿಸಿಕೊಂಡಿದೆ. ಸದ್ಯದಲ್ಲೇ ಅನುದಾನ ಬಿಡುಗಡೆಯಾಗುತ್ತದೆ ಎಂಬ ನಂಬಿಕೆಯಿಂದ ಗುತ್ತಿಗೆದಾರರು ಇಂದಿರಾ ಕ್ಯಾಂಟೀನ್ ನಡೆಸುತ್ತಿದ್ದಾರೆ.
11 ಕಡೆ ಇಂದಿರಾ ಕ್ಯಾಂಟೀನ್: ಕುಂಬಾರ ಕೊಪ್ಪಲು, ಜೋಡಿ ತೆಂಗಿನಮರ ರಸ್ತೆ, ಕೆ.ಆರ್.ಆಸ್ಪತ್ರೆ, ಸಬರ್ಬನ್ ಬಸ್ ನಿಲ್ದಾಣ, ಆಲನಹಳ್ಳಿ, ಅಜೀಜ್ ಸೇಠ್ ರಸ್ತೆ, ಸಿಲ್ಕ್ ಫ್ಯಾಕ್ಟರಿ, ಶಾರದಾದೇವಿನಗರ ಸೇರಿದಂತೆ ಮೈಸೂರಿನಲ್ಲಿ 11 ಕಡೆಗಳಲ್ಲಿ ಇಂದಿರಾ ಕ್ಯಾಂಟೀನ್‍ಗಳಿವೆ. ಆರಂಭದಲ್ಲಿ ಬೆಳಗ್ಗೆ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ 18 ಸಾವಿರ ಟೋಕನ್ ನೀಡಲಾಗುತ್ತಿತ್ತು. ಆದರೆ, ಕಳೆದ 1 ವರ್ಷದಿಂದ ರಾಜ್ಯ ಸರ್ಕಾರ ಟೋಕನ್ ಪ್ರಮಾಣ ಕಡಿಮೆ ಮಾಡಿದ್ದು, ಬೆಳಗ್ಗಿನ ಉಪಾಹಾರಕ್ಕೆ 4,300, ಮಧ್ಯಾಹ್ನ ಊಟಕ್ಕೆ 2,300 ಹಾಗೂ ಸಂಜೆ ಊಟಕ್ಕೆ 2,100 ಟೋಕನ್ ನೀಡಲಾಗುತ್ತಿದೆ. ಅಂದರೆ ಅರ್ಧದಷ್ಟು ಟೋಕನ್‍ಗಳನ್ನು ಕಡಿತ ಮಾಡಿದೆ.

ಕಗ್ಗತ್ತಲಲ್ಲಿ ಕ್ಯಾಂಟೀನ್‍ಗಳು: ಕಳೆದ 6 ತಿಂಗಳಿಂದ 11 ಕ್ಯಾಂಟೀನ್‍ಗಳಿಂದ 4 ಲಕ್ಷ ರೂ. ವಿದ್ಯುತ್ ಬಿಲ್ ಪಾವತಿಸಬೇಕಿದೆ. ಆದರೆ, ಬಿಲ್ ಪಾವತಿಸದ ಹಿನ್ನೆಲೆಯಲ್ಲಿ ಕಾಡಾ ಕಚೇರಿ, ಕುಂಬಾರಕೊಪ್ಪಲು, ಸಿಲ್ಕ್ ಫ್ಯಾಕ್ಟರಿ, ಜೋಡಿ ತೆಂಗಿನಮರ ರಸ್ತೆ, ಶಾರದಾ ದೇವಿ ನಗರದಲ್ಲಿನ ಇಂದಿರಾ ಕ್ಯಾಂಟೀನ್ ಗಳ ಸಂಪರ್ಕ ಕಡಿತಗೊಳಿಸಲಾಗಿದೆ. ಕೆಲಸ ಗಾರರು ಕ್ಯಾಂಡಲ್‍ಗಳನ್ನು ಹಚ್ಚಿ ಊಟ ವಿತರಿಸುತ್ತಿದ್ದು, ಸಾರ್ವಜನಿಕರು ಕತ್ತಲೆ ಯಲ್ಲೇ ನಿಂತು ಊಟ ಮಾಡಬೇಕಾದ ಪರಿಸ್ಥಿತಿ ಬಂದೊದಗಿದೆ.

ಸಂಬಳವಿಲ್ಲ: ಇಂದಿರಾ ಕ್ಯಾಂಟಿನ್ ಗಳಲ್ಲಿ ಇಬ್ಬರು ಅಡುಗೆ ಭಟ್ಟರು ಸೇರಿದಂತೆ 60ಕ್ಕೂ ಹೆಚ್ಚು ಮಂದಿ ಕೆಲಸ ಮಾಡು ತ್ತಿದ್ದು, 6 ತಿಂಗಳಿಂದ ಸಂಬಳ ನೀಡಿಲ್ಲ. ಇದನ್ನೇ ನಂಬಿ ಜೀವನ ನಡೆಸುತ್ತಿರುವ ಕೆಲಸಗಾರರು ಮನೆ ಬಾಡಿಗೆ, ವಿದ್ಯುತ್ ಬಿಲ್, ನೀರಿನ ಬಿಲ್ ಕಟ್ಟಲು ಹಣವಿಲ್ಲದೆ ಪರದಾಡುವಂತಾಗಿದೆ.

ಇಂದಿರಾ ಕ್ಯಾಂಟೀನ್‍ನ ವ್ಯವಸ್ಥಾಪಕಿ ವಿಜಯಲಕ್ಷ್ಮಿ `ಮೈಸೂರು ಮಿತ್ರ’ದೊಂ ದಿಗೆ ಮಾತನಾಡಿ, ಸರ್ಕಾರವು ವರ್ಷದಿಂದ ಹಣ ಬಿಡುಗಡೆ ಮಾಡಿಲ್ಲ. ಹಾಗಾಗಿ ಕ್ಯಾಂಟೀನ್ ನಿರ್ವಹಣೆ ಕಷ್ಟವಾಗುತ್ತಿದೆ. ಕರೆಂಟ್ ಬಿಲ್ ಪಾವತಿಸಿಲ್ಲ. ಕ್ಯಾಂಟೀನ್‍ನಲ್ಲಿ 65ಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದು, 6 ತಿಂಗಳಿಂದ ಸಂಬಳವನ್ನೂ ನೀಡಿಲ್ಲ. ಇದನ್ನೇ ನಂಬಿ ಕೊಂಡಿದ್ದ ನಮಗೆ ಜೀವನ ನಡೆಸಲು ಕಷ್ಟ ವಾಗುತ್ತಿದೆ. ಕೂಡಲೇ ಸರ್ಕಾರ ಹಣ ಬಿಡುಗಡೆ ಮಾಡಿದರೆ ಅನುಕೂಲವಾಗಲಿದೆ ಎಂದರು.

Translate »