ಸರ್ಕಾರಿ ಕಿವುಡ ಮಕ್ಕಳ ಶಾಲೆಯಿಂದ ನಾಲ್ವರು ಬಾಲಕರ ನಾಪತ್ತೆ
ಮೈಸೂರು

ಸರ್ಕಾರಿ ಕಿವುಡ ಮಕ್ಕಳ ಶಾಲೆಯಿಂದ ನಾಲ್ವರು ಬಾಲಕರ ನಾಪತ್ತೆ

June 28, 2018
  • ಶೌಚಾಲಯದ ಕಿಟಕಿ ಸರಳು ಮುರಿದು ಜೂ.23ರ ರಾತ್ರಿ ಪರಾರಿ

ಮೈಸೂರು: ಮೈಸೂರಿನ ತಿಲಕನಗರದಲ್ಲಿರುವ ಕಿವುಡ ಮಕ್ಕಳ ಸರ್ಕಾರಿ ಪಾಠ ಶಾಲೆಯಿಂದ ನಾಲ್ವರು ಬಾಲಕರು ಪರಾರಿಯಾಗಿರುವ ಘಟನೆ ಜೂನ್ 23ರಂದು ನಡೆದಿದೆ.

ಸೋನು ಕುಮಾರ್ (16), ರಾಜ್ ಮಜೀದ್ (15), ಧಾಮು (17) ಹಾಗೂ ಮೋಹನ್ (15) ನಾಪತ್ತೆಯಾಗಿರುವ ಬಾಲಕರು. ಈ ಕುರಿತು ಶಾಲೆಯ ಅಧೀಕ್ಷಕ ಹೆಚ್.ಆರ್.ಶ್ರೀನಿವಾಸ್ ಅವರು ಜೂನ್ 25ರಂದು ಮಂಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಶಾಲೆಯ ನಿವಾಸಿಗಳಾದ ಸೋನುಕುಮಾರ್, ರಾಜ್ ಮಜೀದ್, ಧಾಮು ಹಾಗೂ ಮೋಹನ್ ಎಂಬುವರು ಜೂನ್ 23ರಂದು ರಾತ್ರಿ 11.45 ಗಂಟೆಗೆ ಊಟ ಮಾಡಿ ಕೋಣೆಯಲ್ಲಿ ಮಲಗಿದ್ದರು. ನಂತರ ತಡರಾತ್ರಿ ಶೌಚಾಲಯದ ಕಿಟಕಿ ಸರಳು ಮುರಿದು ನಾಪತ್ತೆಯಾಗಿದ್ದಾರೆ. ಅನಾಥ ಮಕ್ಕಳಾದ ಅವರು ಕಣ್ಮರೆಯಾಗಿದ್ದ ವಿಷಯ ತಿಳಿಯುತ್ತಿದ್ದಂತೆಯೇ ಶಾಲೆಯ ಸಿಬ್ಬಂದಿ ವರ್ಗ ಮೈಸೂರು ನಗರದಾದ್ಯಂತ ಸಾರ್ವಜನಿಕ ಸ್ಥಳದಲ್ಲಿ ಹುಡುಕಾಡಿದರೂ ಪತ್ತೆಯಾಗಿಲ್ಲ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ನಾಲ್ವರೂ ಕಿವುಡ-ಮೂಗ ಮಕ್ಕಳಾಗಿದ್ದು, ಸೋನುಕುಮಾರ್ ದುಂಡು ಮುಖ, ಕಪ್ಪನೆ ಮೈ ಬಣ್ಣ ಹಾಗೂ ಎಡಗೈನಲ್ಲಿ 6 ಬೆರಳು ಹೊಂದಿದ್ದಾನೆ. ರಾಜ್ ಮಜೀದ್ ಎಡ ಕೆನ್ನೆ ಮೇಲೆ ಕಪ್ಪು ಮಚ್ಚೆ ಇದೆ. ಧಾಮುಗೆ ಎಡ ಭಾಗದಲ್ಲಿ ಮಚ್ಚೆ ಇದೆ. ಹಾಗೆಯೇ ಮೋಹನ್‍ಗೆ ಕುತ್ತಿಗೆ ಕೆಳಭಾಗದಲ್ಲಿ ಮಚ್ಚೆ ಇದೆ.

ಈ ಬಾಲಕರ ಬಗ್ಗೆ ಸುಳಿವು ದೊರೆತಲ್ಲಿ ಮಂಡಿ ಪೊಲೀಸ್ ಠಾಣೆ (0821-2418313) ಅಥವಾ ನಗರ ಪೊಲೀಸ್ ಕಂಟ್ರೋಲ್ ರೂಂ (0821-2418339)ಗೆ ಮಾಹಿತಿ ನೀಡುವಂತೆ ಪ್ರಕರಣ ದಾಖಲಿಸಿಕೊಂಡಿರುವ ಮಂಡಿ ಠಾಣೆ ಇನ್ಸ್‍ಪೆಕ್ಟರ್ ಅನ್ಸರ್ ಅಲಿ ತಿಳಿಸಿದ್ದಾರೆ.

Translate »