ಪ್ರೊ.ರಂಗಪ್ಪರ ಸವಾಲು ಸ್ವೀಕರಿಸಿದ ಗೋ.ಮಧುಸೂದನ್
ಮೈಸೂರು

ಪ್ರೊ.ರಂಗಪ್ಪರ ಸವಾಲು ಸ್ವೀಕರಿಸಿದ ಗೋ.ಮಧುಸೂದನ್

June 28, 2018
  • ತಾವು ಮಾಡಿರುವ ಆರೋಪದ ಬಗ್ಗೆ ಬಹಿರಂಗ ಚರ್ಚೆಗೆ ಆಹ್ವಾನ
  • ವೇದಿಕೆ ಸಿದ್ಧಪಡಿಸಲು ಉನ್ನತ ಶಿಕ್ಷಣ ಸಚಿವರಿಗೆ ಪತ್ರ

ಮೈಸೂರು:  ತಾವು ಪ್ರಾಮಾಣ ಕರೆಂದು ಯಾವ ವೇದಿಕೆಯಲ್ಲಿ ಬೇಕಿದ್ದರೂ ಸಾಬೀತುಪಡಿಸುತ್ತೇನೆ ಎಂದು ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಸವಾಲೊಡ್ಡಿದ್ದು, ಅವರ ಸವಾಲನ್ನು ಸ್ವೀಕರಿಸುತ್ತೇನೆ ಎಂದಿರುವ ವಿಧಾನ ಪರಿಷತ್ ಮಾಜಿ ಸದಸ್ಯ ಗೋ.ಮಧುಸೂದನ್, ಈ ಸಂಬಂಧ ವೇದಿಕೆ ಸಿದ್ಧಗೊಳಿಸಿ, ದಿನಾಂಕ ಗೊತ್ತುಪಡಿಸಿ, ತಾವೂ ಉಪಸ್ಥಿತರಿರುವಂತೆ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡರಿಗೆ ಪತ್ರ ಬರೆದಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗೋ.ಮಧುಸೂದನ್, ವಿಶ್ವವಿದ್ಯಾನಿಲಯದ ಕಾನೂನಿನ ಬಗ್ಗೆ ಗೋ.ಮಧುಸೂದನ್‍ಗೆ ಏನೂ ಗೊತ್ತಿಲ್ಲ. ಅವರೊಬ್ಬ ಅವಿವೇಕಿ, ಗೋಮುಖ ವ್ಯಾಘ್ರ ಎಂದು ಪ್ರೊ.ರಂಗಪ್ಪ ಜರಿದು ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದಾರೆ. ಅವರ ಸವಾಲನ್ನು ನಾನು ಸ್ವೀಕರಿಸಿದ್ದೇನೆ. ಈ ಸಂಬಂಧ ದಿನಾಂಕ ಗೊತ್ತುಪಡಿಸಿ ತಮ್ಮ ಅಧ್ಯಕ್ಷತೆಯಲ್ಲಿ ಬಹಿರಂಗ ಚರ್ಚೆ ನಡೆಸಿಕೊಡಬೇಕೆಂದು ಉನ್ನತ ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದೇನೆ ಎಂದು ವಿವರ ನೀಡಿದರು.

ಮುಕ್ತ ವಿವಿ ಮಾನ್ಯತೆ ಕಳೆದುಕೊಳ್ಳಲು ಪ್ರೊ.ರಂಗಪ್ಪ ಕಾರಣ. ಇವರ ಹಗರಣಗಳಿಗೆ ಸಂಬಂಧಿಸಿದಂತೆ ರಾಜ್ಯಪಾಲರ ಆದೇಶದ ಮೇರೆಗೆ ಮೈಸೂರಿನ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಾಗಿದ್ದು, ಇದೀಗ ಜಾಮೀನಿನ ಮೇಲೆ ಹೊರಗಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಚಾಮರಾಜ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಮತದಾರರಿಂದ ತಿರಸ್ಕøತಗೊಂಡರೂ ಉನ್ನತ ಶಿಕ್ಷಣ ಇಲಾಖೆಯ ಸಲಹೆಗಾರರಾಗಲು ಪ್ರಯತ್ನಿಸಿ, ವಿಫಲರಾಗಿದ್ದಾರೆ. ಯಾವುದೇ ಕಾರಣಕ್ಕೂ ಇಂತಹ ಕಳಂಕಿತ ವ್ಯಕ್ತಿಯನ್ನು ಸಲಹೆಗಾರರಾಗಿ ನೇಮಕ ಮಾಡಬಾರದೆಂದು ಒತ್ತಾಯಕ್ಕೆ ಸ್ಪಂದಿಸಿದ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಅಂತಹ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಸ್ಪಷ್ಟಪಡಿಸಿದ್ದು, ಇದು ಸ್ವಾಗತಾರ್ಹ ಎಂದು ನುಡಿದರು.

ಪ್ರೊ.ರಂಗಪ್ಪ ನನ್ನನ್ನು ಗೋಮುಖ ವ್ಯಾಘ್ರ ಎಂದು ಟೀಕಿಸಿದ್ದು, ನಾನು ಗೋಮುಖ ಅಲ್ಲ, ಬದಲಾಗಿ ವ್ಯಾಘ್ರ. 10 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ಹಾಳು ಮಾಡಿದ ನೀವು (ರಂಗಪ್ಪ) ಗುಳ್ಳೆನರಿ ಎಂದು ಗೋ.ಮಧುಸೂದನ್ ಹರಿಹಾಯ್ದರು. ಈ ಹಿಂದೆ ಕರ್ನಾಟಕ ವಿಧಾನಪರಿಷತ್‍ನ ಹಕ್ಕು ಬಾಧ್ಯತಾ ಸಮಿತಿಯು ಪ್ರೊ.ರಂಗಪ್ಪರ ಹೇಳಿಕೆ ದಾಖಲಿಸಿಕೊಳ್ಳಲು ಸಮಿತಿ ಮುಂದೆ ಹಾಜರಿರುವಂತೆ ನೋಟೀಸ್ ನೀಡಿತ್ತು. ಆದರೆ ಪ್ರೊ.ರಂಗಪ್ಪ ಇಲ್ಲಸಲ್ಲದ ಸಬೂಬು ಹೇಳಿಕೊಂಡು ನೋಟೀಸ್ ವಿರುದ್ಧ ಉಚ್ಛ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಈ ಎರಡೂ ಸಂಗತಿಗಳ ಕಡತಗಳು ಉನ್ನತ ಶಿಕ್ಷಣ ಇಲಾಖೆಯಲ್ಲಿ ಲಭ್ಯವಿದ್ದು, ಸಚಿವ ಜಿ.ಟಿ.ದೇವೇಗೌಡರು ಈ ಕಡತಗಳನ್ನು ಪರಾಮರ್ಶಿಸಬೇಕು ಎಂದು ಕೋರಿದರು.

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರೇ ನಿಮ್ಮ ಸಂಬಂಧಿಕರನ್ನು ಉಳಿಸಿಕೊಳ್ಳುವ ಸಲುವಾಗಿ ರಾಜ್ಯ, ವಿವಿಗಳು ಹಾಗೂ ವಿದ್ಯಾರ್ಥಿಗಳ ಹಿತವನ್ನು ಬಲಿಕೊಟ್ಟು ಎಲ್ಲವನ್ನೂ ನುಂಗಿಕೊಳ್ಳಬೇಡಿ. ಉನ್ನತ ಶಿಕ್ಷಣ ಸಚಿವರಾದ ಜಿ.ಟಿ.ದೇವೇಗೌಡರೇ ದಯಮಾಡಿ ಇಂತಹವರನ್ನು ರಕ್ಷಣೆ ಮಾಡಬೇಡಿ. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರೇ ನೀವು ಪ್ರೊ.ರಂಗಪ್ಪ ಹಂಗಿನಲ್ಲಿ ಇಲ್ಲ. ಅವರ ಕೆಲಸಗಳನ್ನು ನೀವು ಮಾಡಿಕೊಡಬೇಡಿ. –ಗೋ.ಮಧುಸೂದನ್

ಎಲ್ಲಾ ರಂಗಪ್ಪದೇ ಕರಾಮತ್ತು: ಪ್ರೊ.ಕೆ.ಎಸ್.ರಂಗಪ್ಪ ಕುಲಪತಿ ಹಾಗೂ ಪ್ರೊ.ರಾಜಣ್ಣ ಕುಲಸಚಿವರಾಗಿದ್ದ (ಈಗಿನ ಕುಲಸಚಿವ) ಅವಧಿಯಲ್ಲೇ ಮೈಸೂರು ವಿವಿಯಲ್ಲಿ ಬೋಧಕೇತರ ಸಿಬ್ಬಂದಿ ನೇಮಕಾತಿಯಲ್ಲಿ ಅಕ್ರಮ ನಡೆದಿದ್ದು, ಪ್ರೊ.ರಂಗಪ್ಪ ಹಾಗೂ ಪ್ರೊ.ರಾಜಣ್ಣ ಅವರೇ ಈ ಅಕ್ರಮದ ಕಾರಣಕರ್ತರು. ಪ್ರೊ.ರಾಜಣ್ಣ ಅವರಿಗೆ ಏನು ತಿಳಿದಿಲ್ಲ. ಏನಿದ್ದರು ರಂಗಪ್ಪಾದ್ದೇ ಎಲ್ಲಾ ಕರಾಮತ್ತು ಎಂದು ವ್ಯಂಗ್ಯವಾಡಿದ ಅವರು, ಪ್ರೊ.ರಂಗಪ್ಪ ಹಾಗೂ ಪ್ರೊ.ರಾಜಣ್ಣ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಜೊತೆಗೆ ಪ್ರೊ.ರಾಜಣ್ಣರನ್ನು 24 ಗಂಟೆಯೊಳಗೆ ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಇಂದು ನಿನ್ನೆಯದಲ್ಲ: ಮುಕ್ತ ವಿವಿಯ ಹಗರಣಗಳ ಸಂಬಂಧ ನ್ಯಾ.ಕೆ.ಭಕ್ತವತ್ಸಲ ಸಮಿತಿ ನೀಡಿದ್ದ ವರದಿಗೆ ಸಿಓಡಿ ಈಗಾಗಲೇ `ಬಿ’ ರಿಪೋರ್ಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಈ ವೇಳೆಯಲ್ಲೇ ಕಾಂಗ್ರೆಸ್-ಜೆಡಿಎಸ್ ಮೈತ್ರಿ ನಡೆದಿತ್ತು. ಸದ್ಯ ಈ `ಬಿ’ ರಿಪೋರ್ಟ್ ಅನ್ನು ನ್ಯಾಯಾಲಯ ಪುರಸ್ಕರಿಸಿಲ್ಲ ಎಂದು ಗೋ.ಮಧುಸೂದನ್ ತಿಳಿಸಿದರು.

Translate »